ದೊಡ್ಡ ಕಂಪನಿಯಲ್ಲಿ ಕಡಿಮೆ ಸಂಬಳವೇ ಉತ್ತಮ ಎಂದ ಬೆಂಗಳೂರು ಟೆಕ್ಕಿ! ಕಾರಣವೇನು ಗೊತ್ತಾ..
ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ಹಾಗೂ ಮಾಡಲು ಬಯಸುತ್ತಿರುವವರಿಗೆ ಬಹಳ ಮುಖ್ಯವಾದ ಸಲಹೆಯೊಂದನ್ನು ನೀಡಿದ್ದಾರೆ. ದೊಡ್ಡ ಎಮ್‌ಎನ್‌ಸಿ ಕಂಪನಿಗಳಲ್ಲಿ ಕಡಿಮೆ ಸಂಬಳವಿದ್ದರೂ ಚಿಕ್ಕ ಕಂಪನಿಗಳಿಗಿಂತ ಅದೇ ಉತ್ತಮ, ಎಷ್ಟೇ ದೊಡ್ಡ ಮಟ್ಟದ ಹೈಕ್ ಸಿಕ್ಕರೂ ಸಣ್ಣ ಕಂಪನಿಗಳಿಗೆ ಸೇರುವ ಮುನ್ನ ಯೋಚಿಸಿ ಎಂದು ಅವರು ಎಚ್ಚರಿಸಿದ್ದಾರೆ.
ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿನ ಅನಿಶ್ಚಿತತೆಯನ್ನು ಉಲ್ಲೇಖಿಸಿ ಸನ್ನಿ ಕುಮಾರ್ ಎಂಬುವವರು ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಈ ಸಲಹೆ ಹಂಚಿಕೊಂಡಿದ್ದಾರೆ.

ಶೇಕಡಾ 60ರಷ್ಟು ಹೈಕ್ ಆಸೆಗೆ ಕೆಲಸ ಕಳೆದುಕೊಂಡ ಸ್ನೇಹಿತ
ತಮ್ಮ ವಿಡಿಯೋದಲ್ಲಿ ಸನ್ನಿ ಕುಮಾರ್ ಅವರು ತಮ್ಮ ಸ್ನೇಹಿತನೊಬ್ಬನ ಉದಾಹರಣೆಯನ್ನು ನೀಡಿದ್ದಾರೆ. ಆ ಸ್ನೇಹಿತ ಪುಣೆಯ ಮಾಸ್ಟರ್‌ಕಾರ್ಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಉತ್ತಮ ಸಂಬಳ ಹಾಗೂ ಒಳ್ಳೆಯ ವರ್ಕ್ ಪ್ರೊಫೈಲ್ ಇತ್ತು. ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು. ಆದರೆ ಒಂದು ದಿನ, ಸಣ್ಣ ಕನ್ಸಲ್ಟೆನ್ಸಿ ಕಂಪನಿಯೊಂದರಿಂದ ಆತನಿಗೆ ಆಫರ್ ಲೆಟರ್ ಬಂತು. ಅವರು ಆತನ ಪ್ರಸ್ತುತ ಸಿಟಿಸಿಗಿಂತ ಶೇಕಡಾ 60 ರಷ್ಟು ಹೆಚ್ಚಿನ ವೇತನವನ್ನು ನೀಡಲು ಮುಂದಾದರು. ಶೇಕಡಾ 60ರಷ್ಟು ಹೈಕ್ ಅನ್ನು ನಿರಾಕರಿಸುವುದು ಕಷ್ಟ. ಹೀಗಾಗಿ ಆತ ಮಾಸ್ಟರ್‌ಕಾರ್ಡ್ ಕಂಪನಿಗೆ ರಾಜೀನಾಮೆ ನೀಡಿ ಆ ಸಣ್ಣ ಕನ್ಸಲ್ಟೆನ್ಸಿಗೆ ಸೇರಿದ.
ಐಟಿ ಉದ್ಯೋಗ ಕಡಿತದ ಭೀತಿ
ಹೊಸ ಕಂಪನಿಗೆ ಸೇರಿ ಕೇವಲ ಆರು ತಿಂಗಳಷ್ಟೇ ಕಳೆದಿತ್ತು. ಅಷ್ಟರಲ್ಲೇ, ಆತನನ್ನು ನೇಮಿಸಿಕೊಂಡಿದ್ದ ಪ್ರಾಜೆಕ್ಟ್ ಅನ್ನು ಆ ಸಣ್ಣ ಕನ್ಸಲ್ಟೆನ್ಸಿ ಕಳೆದುಕೊಂಡಿತು. ಪರಿಣಾಮವಾಗಿ, ತಕ್ಷಣವೇ ರಾಜೀನಾಮೆ ನೀಡುವಂತೆ ಅಥವಾ ಕೆಲಸದಿಂದ ವಜಾಗೊಳಿಸುವ ಎಚ್ಚರಿಕೆಯನ್ನು ಆತನಿಗೆ ನೀಡಲಾಯಿತು. ಅಂತಿಮವಾಗಿ ಶೇ.60ರಷ್ಟು ಹೈಕ್ ನೀಡಿ ನೇಮಿಸಿಕೊಂಡಿದ್ದ ಆ ಸಣ್ಣ ಕಂಪನಿಯಿಂದ ಆತನನ್ನು ವಜಾಗೊಳಿಸಲಾಯಿತು.
ಇದೇ ಉದಾಹರಣೆಯನ್ನು ಮುಂದಿಟ್ಟುಕೊಂಡು ಸನ್ನಿ ಕುಮಾರ್ ಅವರು, ಐಟಿ ಉದ್ಯೋಗಿಗಳು ಸಂಬಳದ ಆಸೆಗೆ ಬಿದ್ದು ತಮ್ಮ ಸ್ಥಿರವಾದ ದೊಡ್ಡ ಕಂಪನಿಗಳನ್ನು ಬಿಡಬಾರದು ಎಂದು ಸಲಹೆ ನೀಡಿದ್ದಾರೆ. "ನೀವು ಸ್ಥಿರವಾದ ಉದ್ಯೋಗ, ಉತ್ತಮ ಸಂಬಳ ಹಾಗೂ ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮಗೆ ಶೇ. 60-70 ಅಥವಾ ಶೇ. 100ರಷ್ಟು ಹೈಕ್ ಸಿಕ್ಕರೂ ಕನಿಷ್ಠ ಆರು ತಿಂಗಳಿಂದ ಒಂದು ವರ್ಷದವರೆಗೆ ಕೆಲಸ ಬದಲಾಯಿಸಬೇಡಿ. ಐಟಿ ವಲಯವು ಪ್ರಸ್ತುತ ಬಹಳ ಅನಿಶ್ಚಿತತೆಯಿಂದ ಕೂಡಿದೆ" ಎಂದು ಅವರು ಹೇಳಿದ್ದಾರೆ.
ದೊಡ್ಡ ಎಂಎನ್‌ಸಿ ಕಂಪನಿ ಮತ್ತು ಸಣ್ಣ ಸಂಸ್ಥೆಗಳ ನಡುವಿನ ಚರ್ಚೆ
ಸನ್ನಿ ಕುಮಾರ್ ಅವರ "ದೊಡ್ಡ ಕಂಪನಿಯಲ್ಲಿ ಕಡಿಮೆ ಸಂಬಳ, ಸಣ್ಣ ಕಂಪನಿಯಲ್ಲಿ ಹೆಚ್ಚಿನ ಸಂಬಳಕ್ಕಿಂತ ಉತ್ತಮ" ಎಂಬ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದ್ದು, ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಆದರೆ ಇದು ನೆಟ್ಟಿಗರ ನಡುವೆ ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ. ದೊಡ್ಡ ಕಂಪನಿಯಲ್ಲಿದ್ದರೆ ಉದ್ಯೋಗ ಕಡಿತದಿಂದ ಪಾರಾಗಬಹುದು ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಕಾಮೆಂಟ್ ವಿಭಾಗದಲ್ಲಿ ಬಳಕೆದಾರರೊಬ್ಬರು, "ಯಾವುದೇ ಕಂಪನಿ ಸುರಕ್ಷಿತವಲ್ಲ.. ಜೂನ್ 15 ರಂದು ನನ್ನನ್ನು ಎಚ್‌ಎಸ್‌ಬಿಸಿಯಿಂದ ವಜಾಗೊಳಿಸಲಾಯಿತು" ಎಂದು ಬರೆದಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯಿಸಿ, "ಒಂದು ವೇಳೆ ಆತ ಮಾಸ್ಟರ್‌ಕಾರ್ಡ್‌ನಿಂದಲೇ ವಜಾಗೊಂಡಿದ್ದರೆ ಏನು ಗತಿ? ಏಕೆಂದರೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಕಂಪನಿಗಳು ಸಹ ದೊಡ್ಡ ಮಟ್ಟದಲ್ಲಿ ಪುನರ್‌ರಚನೆ ಲೇಆಫ್ ಮಾಡುತ್ತಿವೆ" ಎಂದಿದ್ದಾರೆ.
ಟೆಕ್ ಉದ್ಯೋಗಿಗಳಿಗೆ ತಜ್ಞರ ಸಲಹೆ
"ನೀವು ದೊಡ್ಡ ಕಂಪನಿ ಹಾಗೂ ಸಣ್ಣ ಕಂಪನಿ ಎರಡರಲ್ಲೂ ಕೆಲಸದಿಂದ ವಜಾಗೊಳ್ಳಬಹುದು. ಆದರೆ ಸಣ್ಣ ಕಂಪನಿಯಲ್ಲಿರುವಾಗ ನಿಮಗೆ ಶೇ. 60ರಷ್ಟು ಹೆಚ್ಚು ಸಂಬಳ ಸಿಕ್ಕಿರುತ್ತದೆ ಅಷ್ಟೇ" ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ಸುದೀರ್ಘವಾದ ಸಲಹೆ ನೀಡಿದ್ದು, "ಇದು ಸಣ್ಣ ಅಥವಾ ದೊಡ್ಡ ಕಂಪನಿಗಳ ಪ್ರಶ್ನೆಯಲ್ಲ. ಕೆಲವು ಅತಿದೊಡ್ಡ ಕಂಪನಿಗಳು ಸಹ ಉದ್ಯೋಗ ಕಡಿತ ಮಾಡುತ್ತಿವೆ. ಸದ್ಯಕ್ಕೆ ಸಾಸ್ ಕಂಪನಿಗಳನ್ನು ತಪ್ಪಿಸಿ. ಎರಡನೆಯದಾಗಿ, ಯಾವುದೇ ಕಂಪನಿಗೆ ಸೇರುವ ಮುನ್ನ ಆ ಕಂಪನಿಯ ಜಾಗತಿಕ ಉದ್ಯೋಗಿಗಳ ಸಂಖ್ಯೆ, ಭಾರತದ ಉದ್ಯೋಗಿಗಳ ಸಂಖ್ಯೆ, ಒಟ್ಟು ಆದಾಯ, ನಿವ್ವಳ ಲಾಭ, ಭವಿಷ್ಯದ ಯೋಜನೆಗಳು, ಎಐ ಹೂಡಿಕೆ ಹೀಗೆ ಹಲವಾರು ವಿಷಯಗಳನ್ನು ಕೂಲಂಕಷವಾಗಿ ವಿಶ್ಲೇಷಣೆ ಮಾಡುವುದು ಇಂದಿನ ದಿನಗಳಲ್ಲಿ ಅತ್ಯಗತ್ಯ" ಎಂದು ತಿಳಿಸಿದ್ದಾರೆ.












Click it and Unblock the Notifications