ಬೆಂಗಳೂರಲ್ಲಿ ರಸ್ತೆ ಅಪಘಾತಗಳಲ್ಲಿ ಶೇ.30 ಪಾದಚಾರಿಗಳ ಸಾವು: ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು ನಗರದಲ್ಲಿ ಪ್ರತಿ ವರ್ಷ ಸಂಭವಿಸುತ್ತಿರುವ ಅಪಘಾತಗಳಲ್ಲಿ ಶೇ.30 ಪಾದಚಾರಿಗಳು ಸಾವನ್ನಪ್ಪುತ್ತಿದ್ದಾರೆ ಎನ್ನುವ ವಿಚಾರವು ಇದೀಗ ಬಹಿರಂಗವಾಗಿದೆ. ನಗರದಲ್ಲಿ ಪ್ರತಿವರ್ಷ ಸುಮಾರು 1,000 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದು, ಅವರಲ್ಲಿ ಸುಮಾರು ಶೇ.30ರಷ್ಟು ಪಾದಚಾರಿಗಳೇ ಆಗಿದ್ದಾರೆ. ಸುರಕ್ಷಿತ ಹಾಗೂ ಸುಗಮ ಪಾದಚಾರಿ ಮಾರ್ಗಗಳು ಲಭ್ಯವಿದ್ದರೆ ಇಂತಹ ಅನೇಕ ಅಪಘಾತಗಳನ್ನು ತಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ ಉಂಟಾಗಿರುವ ಒತ್ತುವರಿಗಳನ್ನು ಅಂಗಡಿ ಮಾಲೀಕರು ಸ್ವಯಂಪ್ರೇರಿತವಾಗಿ ತೆರವುಗೊಳಿಸಿಕೊಳ್ಳಲು ಜುಲೈ 1 ರವರೆಗೆ ಅವಕಾಶ ನೀಡಲಾಗುವುದು. ಜುಲೈ 1ರ ನಂತರ "ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ"ವನ್ನು ಆರಂಭಿಸಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದಲ್ಲಿ ಸುಮಾರು 13 ಸಾವಿರ ಕಿ.ಮೀ ರಸ್ತೆ ಜಾಲವಿದ್ದು, ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಂತಹ ಆದ್ಯತಾ ರಸ್ತೆಗಳಾದ ಸುಮಾರು 2,000 ಕಿ.ಮೀ ವ್ಯಾಪ್ತಿಯಲ್ಲಿ ಪಾದಚಾರಿಗಳ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಎಲ್ಲಾ ಅಡೆತಡೆಗಳನ್ನು ತೆರವುಗೊಳಿಸಲು ಆಂದೋಲನ ಮಾದರಿಯಲ್ಲಿ "ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ" ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
ಪಾದಚಾರಿ ಮಾರ್ಗಗಳು ನಗರದ ಸುಮಾರು 1.5 ಕೋಟಿ ಜನರ ಆಸ್ತಿಯಾಗಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ವ್ಯಾಪಾರ ಚಟುವಟಿಕೆಗಳನ್ನು ತಮ್ಮ ಜಾಗದ ಮಿತಿಯಲ್ಲಿಯೇ ನಡೆಸಬೇಕು. ಸುರಕ್ಷಿತ ಪಾದಚಾರಿ ಮಾರ್ಗಗಳ ನಿರ್ಮಾಣ ಜನರ ಬಹುದಿನಗಳ ಬೇಡಿಕೆಯಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸಿ ಎಲ್ಲರೂ ಒತ್ತುವರಿಗಳನ್ನು ತೆರವುಗೊಳಿಸಲು ಸಹಕರಿಸಬೇಕು ಎಂದಿದ್ದಾರೆ. ಮುಂದುವರಿದು ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸಂಚಾರಕ್ಕಾಗಿ ನಿರ್ಮಿಸಲಾಗಿದ್ದು, ವಾಹನ ನಿಲುಗಡೆಗಾಗಿ ಅಲ್ಲ ಎಂದು ಹೇಳಿದ್ದಾರೆ.
Bengaluru: ವಾರಸುದಾರರಿಲ್ಲದ ವಾಹನಗಳ ತೆರವಿಗೆ ಕ್ರಮ
ಜುಲೈ 1 ರಿಂದ ನಗರದಾದ್ಯಂತ ವಾರಸುದಾರರಿಲ್ಲದೆ ರಸ್ತೆ ಬದಿಯಲ್ಲಿ ನಿಂತಿರುವ ವಾಹನಗಳಿಗೆ ನೋಟಿಸ್ ಸ್ಟಿಕ್ಕರ್ ಅಂಟಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಟಿಕ್ಕರ್ ಅಂಟಿಸಿದ ಬಳಿಕ 7 ದಿನಗಳ ಕಾಲಾವಕಾಶ ನೀಡಲಾಗುವುದು. ನಂತರವೂ ವಾಹನಗಳನ್ನು ತೆರವುಗೊಳಿಸದಿದ್ದಲ್ಲಿ ಜುಲೈ 10ರಿಂದ ಟೋಯಿಂಗ್ ಮೂಲಕ ತೆರವುಗೊಳಿಸಿ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದಿದ್ದಾರೆ.
ಪಾದಚಾರಿ ಮಾರ್ಗಗಳ ದುರಸ್ತಿಗೆ 70 ಕೋಟಿ ರೂ.
ನಗರದ ಐದು ಪಾಲಿಕೆಗಳ ವ್ಯಾಪ್ತಿಯ ಸುಮಾರು 2,000 ಕಿ.ಮೀ ಪಾದಚಾರಿ ಮಾರ್ಗಗಳಲ್ಲಿ ಕಂಡುಬರುವ ನ್ಯೂನತೆಗಳನ್ನು ಸರಿಪಡಿಸಲು 70 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಸ್ಲ್ಯಾಬ್‌ಗಳು, ಕರ್ಬ್ ಸ್ಟೋನ್‌ಗಳು, ಲೆವೆಲ್ ವ್ಯತ್ಯಾಸಗಳು ಸೇರಿದಂತೆ ಅಗತ್ಯ ದುರಸ್ತಿ ಕಾಮಗಾರಿಗಳನ್ನು ತ್ವರಿತವಾಗಿ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಬಾಕ್ಸ್ ಕಟಿಂಗ್ ಮೂಲಕ ರಸ್ತೆ ಗುಂಡಿ ಮುಚ್ಚಲು ನಿರ್ದೇಶನ
ನಗರದ ರಸ್ತೆ ಗುಂಡಿಗಳನ್ನು ವೈಜ್ಞಾನಿಕ ವಿಧಾನದಲ್ಲಿ ಬಾಕ್ಸ್ ಕಟಿಂಗ್ ಮಾಡಿ, ಜೆಲ್ಲಿ ತುಂಬಿ, ಡಾಂಬರೀಕರಣ ನಡೆಸಿ ರಸ್ತೆ ಮಟ್ಟಕ್ಕೆ ಸಮನಾಗಿ ದುರಸ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ರಸ್ತೆ ಗುಂಡಿ ಮುಚ್ಚುವ ಕಾರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಲು ಮುಂದಿನ ದಿನಗಳಲ್ಲಿ ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದು ಕೃಷ್ಣಬೈರೇಗೌಡ ಅವರು ಹೇಳಿದ್ದಾರೆ.












Click it and Unblock the Notifications