FIFA ವಿಶ್ವಕಪ್ 2026 ಫೈನಲ್: ಕೋಟ್ಯಾಧಿಪತಿಗಳನ್ನೇ ದಂಗಾಗಿಸಿದ 22 ಕೋಟಿ ರೂಪಾಯಿಯ ಆಸನ
FIFA 2026 Final: ಫಿಫಾ ವಿಶ್ವಕಪ್ 2026 ಫೈನಲ್ ಪಂದ್ಯಕ್ಕೆ ಇನ್ನೂ ಕೆಲವೇ ಕ್ಷಣಗಳು ಮಾತ್ರ ಬಾಕಿ ಉಳಿದಿವೆ. ಇದಕ್ಕೂ ಮುನ್ನ ಈ ಹೈವೋಲ್ಟೇಜ್ ಸಮರದ ಟಿಕೆಟ್‌ಗಳ ಬೆಲೆ ಕೋಟ್ಯಾಧಿಪತಿಗಳನ್ನು ಅಚ್ಚರಿಗೆ ಒಳಗಾಗುವಂತೆ ಮಾಡಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಫುಟ್‌ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ಆದರೂ ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರಗಳು ಮಾತ್ರ ಸಾಮಾನ್ಯರಷ್ಟೇ ಅಲ್ಲ, ಕೋಟ್ಯಧಿಪತಿಗಳೂ ದಂಗಾಗುವಂತೆ ಮಾಡಿದೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಈ ರೋಚಕ ಸಮರದ ಟಿಕೆಟ್ ಬೆಲೆ ಬರೋಬ್ಬರಿ 22 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಮೂಲಕ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ದುಬಾರಿ ಕ್ರೀಡಾಕೂಟವಾಗಿ ದಾಖಲೆ ಬರೆದಿದೆ.

ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಫುಟ್‌ಬಾಲ್ ಜಗತ್ತಿನ ಇಬ್ಬರು ದಿಗ್ಗಜರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಮತ್ತು ಸ್ಪೇನ್‌ನ ಯುವ ತಾರೆ ಲ್ಯಾಮಿನ್ ಯಮಲ್ ಮುಖಾಮುಖಿ ಆಗುತ್ತಿದ್ದಾರೆ. ಈ ಇಬ್ಬರು ಸ್ಟಾರ್‌ಗಳ ಕದನವನ್ನು ವೀಕ್ಷಣೆ ಮಾಡಲು ಇಡೀ ಜಗತ್ತೇ ಕಾತರದಿಂದ ಕಾಯುತ್ತಿದೆ. ಇದೇ ಟಿಕೆಟ್ ದರ ಗಗನಕ್ಕೇರಲು ಮುಖ್ಯ ಕಾರಣವಾಗಿದೆ.
ದಾಖಲೆ ಬೆಲೆಗೆ ಟಿಕೆಟ್ ಮಾರಾಟ
ಫಿಫಾ ಜಾರಿಗೆ ತಂದಿರುವ 'ಡೈನಾಮಿಕ್ ಪ್ರೈಸಿಂಗ್' (ಬೇಡಿಕೆಗೆ ತಕ್ಕಂತೆ ಬೆಲೆ ಏರಿಕೆ) ನೀತಿಯಿಂದಾಗಿ ಮೈದಾನದ ಪ್ರೀಮಿಯಂ ಸೀಟುಗಳ ಸರಾಸರಿ ದರ 32,970 ಡಾಲರ್ (ಅಂದಾಜು 31.74 ಲಕ್ಷ ರೂಪಾಯಿ) ತಲುಪಿದೆ. ಸರಾಸರಿ ಖರೀದಿ ದರದ ಆಧಾರದ ಮೇಲೆ ಇದು ಅಮೆರಿಕದ ಪ್ರಸಿದ್ಧ ಎನ್‌ಎಫ್‌ಎಲ್ ಸೂಪರ್ ಬೌಲ್ ಮತ್ತು ಎನ್‌ಬಿಎ ಫೈನಲ್ಸ್ ಪಂದ್ಯಗಳ ದಾಖಲೆಯನ್ನೂ ಮುರಿದಿದೆ.
ಮರುಮಾರಾಟ ಟಿಕೆಟ್‌ಗಳ ಬೆಲೆ ಹೀಗಿದೆ
* ಸಾಮಾನ್ಯ ಆಸನಗಳು (ಕ್ಯಾಟಗರಿ 3): ಆರಂಭಿಕ ಬೆಲೆ 8,000 ಡಾಲರ್ (ಅಂದಾಜು 7.70 ಲಕ್ಷ ರೂಪಾಯಿ)
* ಕ್ಯಾಟಗರಿ 1 ಆಸನಗಳು: ಆರಂಭಿಕ ಬೆಲೆ 11,700 ಡಾಲರ್ (ಅಂದಾಜು 11.26 ಲಕ್ಷ ರೂಪಾಯಿ)
* ಸೆಕೆಂಡರಿ ಮಾರುಕಟ್ಟೆ (ಕ್ಯಾಟಗರಿ 1): ಗರಿಷ್ಠ ಬೆಲೆ 5,75,000 ಡಾಲರ್ (ಅಂದಾಜು 5.53 ಕೋಟಿ ರೂಪಾಯಿ) ಇಂದ 5,95,000 ಡಾಲರ್ (ಅಂದಾಜು 5.72 ಕೋಟಿ ರೂಪಾಯಿ) ವರೆಗೆ ತಲುಪಿದೆ.
22 ಕೋಟಿ ರೂಪಾಯಿ ಸೀಟ್ ಯಾವುದು?
ಮೈದಾನದ ಗೋಲ್ ಪೋಸ್ಟ್‌ನ ಹಿಂಭಾಗದ ಲೋಯರ್ ಡೆಕ್‌ನಲ್ಲಿರುವ 'ಬ್ಲಾಕ್ 124, ರೋ 45 (ಸೀಟ್ ಸಂಖ್ಯೆ 33-36)' ರ ನಿರ್ದಿಷ್ಟ ಆಸನಗಳಿಗೆ ಬರೋಬ್ಬರಿ $2.3 ಮಿಲಿಯನ್ (ಅಂದಾಜು 22.14 ಕೋಟಿ ರೂಪಾಯಿ) ಬೆಲೆ ನಿಗದಿಪಡಿಸಲಾಗಿದೆ. ಇದು ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಒಂದೇ ಒಂದು ಟಿಕೆಟ್‌ಗೆ ನಿಗದಿಯಾದ ಅತ್ಯಂತ ಗರಿಷ್ಠ ಮೊತ್ತವಾಗಿದೆ ಎನ್ನಲಾಗಿದೆ.
ಕತಾರ್‌ನಲ್ಲಿ ನಡೆದ ವಿಶ್ವಕಪ್‌ಗಿಂತ ಹತ್ತು ಪಟ್ಟು ದುಬಾರಿ
2022ರಲ್ಲಿ ಕತಾರ್‌ನಲ್ಲಿ ನಡೆದ ಕಳೆದ ವಿಶ್ವಕಪ್ ಫೈನಲ್ ಪಂದ್ಯದ ಟಿಕೆಟ್ ದರಗಳಿಗೆ ಹೋಲಿಸಿದರೆ ಈ ಬಾರಿಯ ದರಗಳು ಗಗನಕ್ಕೇರಿವೆ. ಕತಾರ್‌ನಲ್ಲಿ ಫೈನಲ್ ಪಂದ್ಯದ ಮೂಲ ಟಿಕೆಟ್ ದರ ಕೇವಲ 750 ಡಾಲರ್ (ಮರುಮಾರಾಟದಲ್ಲಿ ಸುಮಾರು 4,000 ರೂಪಾಯಿ) ಆಗಿತ್ತು. ಅಲ್ಲದೆ ಅಲ್ಲಿನ ಅತ್ಯಂತ ಐಷಾರಾಮಿ ಹಾಸ್ಪಿಟಾಲಿಟಿ ಟಿಕೆಟ್ ಬೆಲೆಯೂ ಸಹ 5,850 ಡಾಲರ್‌ಗೆ ಸೀಮಿತವಾಗಿತ್ತು. ಆದರೆ ಈ ಬಾರಿ ಅಮೆರಿಕದಲ್ಲಿ ನಡೆಯುತ್ತಿರುವ ಪಂದ್ಯವು ಟಿಕೆಟ್ ದರದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರದ್ದೇ ಚರ್ಚೆ ಜೋರಾಗಿದ್ದು, ಈ ವಿಚಾರ ಕೋಟಿ ಕುಳಗಳನ್ನೇ ದಂಗಾಗಿಸಿದೆ.


Click it and Unblock the Notifications
