Congress 4 Candidate list: ಕಾಂಗ್ರೆಸ್ ಪಾಲಿಗೆ ಕಗ್ಗಂಟಾದ ನಾಲ್ಕು ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿ ಅಂತಿಮಕ್ಕೆ ಸಿದ್ದು, ಡಿಕೆ
ಬೆಂಗಳೂರು ಮಾರ್ಚ್ 22: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು ಕಾಂಗ್ರೆಸ್ ತನ್ನ 24 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಆದರೆ ಕಾಂಗ್ರೆಸ್ ಪಾಲಿಗೆ ಕಗ್ಗಂಟಾಗಿರುವ ನಾಲ್ಕು ಕ್ಷೇತ್ರಗಳಿಗೆ ಮಾತ್ರ ಇನ್ನೂ ಅಭ್ಯರ್ಥಿಗಳ ಆಯ್ಕೆ ಮಾಡಿಲ್ಲ. ಇದಕ್ಕಾಗಿ ರಾಜ್ಯ ಉಸ್ತುವಾರಿ ಸಚಿವ ರಣದೀಪ್ ಸಿಂಗ್ ಸುರ್ಜೆವಾಲಾ ನಗರಕ್ಕೆ ಆಗಮಿಸಲಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಇಂದು ಚರ್ಚೆ ನಡೆಸುವ ಸಾಧ್ಯತೆ ಇದೆ.
ಕೋಲಾರ, ಚಾಮರಾಜನಗರ, ಬಳ್ಳಾರಿ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಕಾಂಗ್ರೆಸ್ ಪಕ್ಷ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಗುರುವಾರವೂ ಈ ಕ್ಷೇತ್ರಗಳ ಆಕಾಂಕ್ಷಿಗಳನ್ನು ಕರೆಸಿ ಮಾತುಕತೆ ನಡೆಸಿದ್ದು, ಹೈಕಮಾಂಡ್‌ನ ಅಭಿಪ್ರಾಯವನ್ನು ಸದರಿ ಆಕಾಂಕ್ಷಿಗಳಿಗೆ ತಿಳಿಸಿದೆ.

ನಾಲ್ಕು ಕ್ಷೇತ್ರಗಳಿಗೆ ಸಂಭಾವ್ಯರು:
ಬಳ್ಳಾರಿ ಕ್ಷೇತ್ರದಿಂದ ಗುರುವಾರ ಶಾಸಕ ತುಕಾರಾಂ ಅವರನ್ನು ಕರೆಸಿಕೊಂಡು ಕಣಕ್ಕೆ ಇಳಿಯುವಂತೆ ಮನವೊಲಿಸಲು ಯತ್ನಿಸಿದರು. ಮೂಲಗಳ ಪ್ರಕಾರ ತುಕಾರಾಂ ಸ್ಪರ್ಧೆಗೆ ಬಹುತೇಕ ಒಪ್ಪಿದ್ದಾರೆ. ಒಂದು ವೇಳೆ ಅವರು ಕೊನೆ ಕ್ಷಣದಲ್ಲಿ ಹಿಂಜರಿದರೆ ಮಾಜಿ ಸಂಸದ ವಿಎಸ್ ಉಗ್ರಪ್ಪ ಹಾಗೂ ಸಚಿವ ನಾಗೇಂದ್ರ ಅವರ ಸಹೋದರ ವೆಂಕಟೇಶ್ ಪ್ರಸಾದ್ ಅವರ ಹೆಸರು ಪರಿಗಣನೆಯಲ್ಲಿದೆ.
ಚಾಮರಾಜನಗರ ಕ್ಷೇತ್ರಕ್ಕೆ ಹೈಕಮಾಂಡ್ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಕಣಕ್ಕೆ ಇಳಿಸುವುದು ಸೂಕ್ತ ಎಂಬ ಅಭಿಪ್ರಾಯ ಹೊಂದಿದೆ. ಆದರೆ, ಮಹದೇವಪ್ಪ ಸ್ಪರ್ಧೆಗೆ ಬಿಲ್‌ಕುಲ್ ಒಪ್ಪುತ್ತಿಲ್ಲ. ತಮ್ಮ ಬದಲಾಗಿ ಪುತ್ರ ಸುನೀಲ್ ಬೋಸ್‌ಗೆ ಟಿಕೆಟ್ ನೀಡಿ ಎಂಬುದು ಅವರ ಒತ್ತಾಯ. ಆದರೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸುನೀಲ್ ಬೋಸ್ ಪರನಿಲ್ಲುತ್ತಿಲ್ಲ. ಒಂದೋ ಮಹದೇವಪ್ಪ ಅವರೇ ಸ್ಪರ್ಧಿಸಲಿ ಇಲ್ಲವೇ ಮಾಜಿ ಶಾಸಕ ನಂಜುಡಸ್ವಾಮಿ ಅವರಿಗೆ ಟಿಕೆಟ್ ನೀಡುವಂತೆ ಶಾಸಕರು ನಾಯಕತ್ವಕ್ಕೆ ಸೂಚಿಸುತ್ತಿದ್ದಾರೆ ಎನ್ನಲಾಗಿದೆ.

ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹದೇವಪ್ಪ ಅವರನ್ನು ಕರೆಸಿಕೊಂಡು ಸುದೀರ್ಘ ಚರ್ಚೆ ನಡೆಸಿದ್ದು, ಶಾಸಕರ ಮನವೊಲಿಸುವ ಪ್ರಯತ್ನ ನಡೆಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಮಹದೇವಪ್ಪ ಅವರು ಶಾಸಕರ ಮನವೊಲಿಸಲು ಯಶಸ್ವಿಯಾದರೆ ಈ ಕ್ಷೇತ್ರ ಟಿಕೆಟ್ ಅವರ ಪುತ್ರ ಸುನೀಲ್ ಬೋಸ್‌ಗೆ ದೊರೆಯುವ ಸಾಧ್ಯತೆಯಿದೆ.
ಚಿಕ್ಕಬಳ್ಳಾಪುರದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಆಕಾಂಕ್ಷಿಯಾಗಿದ್ದರೂ ಸಹ ರಾಜ್ಯ ನಾಯಕತ್ವ ರಕ್ಷಾ ರಾಮಯ್ಯ ಪರ ನಿಂತಿದ್ದು, ಅವರಿಗೆ ಟಿಕೆಟ್ ದೊರೆಯುವ ಸಾಧ್ಯತೆ ಇದೆ. ಇನ್ನೂ ಕೋಲಾರದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಯ್ಯಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಬಳ್ಳಾರಿಯಲ್ಲಿ ಮೇ 7ರಂದು ಲೋಕಸಭಾ ಚುನಾವಣೆ ನಡೆಯಲಿದೆ. ಇನ್ನೂ ಕೋಲಾರ, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಚುನಾವಣೆ ನಡೆಯಲಿದ್ದು ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications