Kannada: ಕನ್ನಡ ಭಾಷೆ ಬಳಕೆಯಲ್ಲಿ ತಪ್ಪು ಮಾಡಿದ ಬೆಂಗಳೂರು ಪೊಲೀಸರು, ಕನ್ನಡಿಗರ ಅಸಮಾಧಾನ!
Kannada: ಬೆಂಗಳೂರು ಪೊಲೀಸರು ಬೆಂಗಳೂರಿನಲ್ಲಿ ಇರುವವರ ಸುರಕ್ಷತೆಗೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮವೊಂದು ಕನ್ನಡಿಗರಿಂದ ಆಕ್ರೋಶಕ್ಕೆ ಕಾರಣವಾದರೆ, ಹಲವರಿಂದ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
ಬೆಂಗಳೂರು ಪೊಲೀಸರು ಭಾಷೆ ಎಂದೂ ನಿಮಗೂ ಮತ್ತು ಪೊಲೀಸ್ ನೆರವಿಗೂ ಮಧ್ಯೆ ಅಡ್ಡಿಯಾಗಬಾರದು. ಕೃತಕ ಬುದ್ಧಿಮತ್ತೆ (AI) ಆಧಾರಿತ ಬಹುಭಾಷಾ ಬೆಂಬಲದೊಂದಿಗೆ, 'ನಮ್ಮ 112' ಭಾಷೆಯ ಅಡೆತಡೆಗಳನ್ನು ನಿವಾರಿಸಿ, ಅತ್ಯಂತ ವೇಗವಾದ, ಸ್ಪಷ್ಟವಾದ ಮತ್ತು ಎಲ್ಲರನ್ನೂ ಒಳಗೊಳ್ಳುವ ತುರ್ತು ಸಹಾಯವನ್ನು ಒದಗಿಸುತ್ತದೆ - ಅತೀ ಅವಶ್ಯಕತೆಯಿರುವ ಸಂದರ್ಭದಲ್ಲಿ ಪ್ರತಿಯೊಂದು ಕರೆಯನ್ನು ಸರಿಯಾಗಿ ಗ್ರಹಿಸುವುದನ್ನು ಇದು ಖಚಿತಪಡಿಸುತ್ತದೆ. ಯಾವುದೇ ತುರ್ತು ಸಂದರ್ಭದಲ್ಲಿ 112 ಗೆ ಕರೆ ಮಾಡಿ. ಪೊಲೀಸ್ ಸಹಾಯವು ನಿಮ್ಮದೇ ಭಾಷೆಯಲ್ಲಿ ಕೇವಲ ಒಂದು ಕರೆಯ ಅಂತರದಲ್ಲಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಅಭಿಯಾನದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಿಮ್ಮ ಭಾಷೆಯಲ್ಲೇ ಮಾತನಾಡಿ ನಾವು ನಿಮ್ಮ ಸಹಾಯಕ್ಕೆ ಸಿದ್ಧರಾಗಿದ್ದೇವೆ. ಭಾಷೆ ಎಂದಿಗೂ ಸಹ ಅಡೆತಡೆಯಾಗಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ. ಕನ್ನಡವೂ ಸೇರಿದಂತೆ 10ಕ್ಕೂ ಹೆಚ್ಚು ಭಾಷೆಗಳಲ್ಲಿ ಸೇವೆ ನೀಡುವುದಾಗಿ ಬೆಂಗಳೂರು ಪೊಲೀಸರು ಹೇಳಿದ್ದಾರೆ. ಆದರೆ ಇದಕ್ಕೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು, ಎಲ್ಲಾ ಭಾಷಿಕರು ಓಡಾಡುವ ಕೇಂದ್ರಾಡಳಿತ ಪ್ರದೇಶ ಡೆಲ್ಲಿಯು ಸೇರಿದಂತೆ ಎಲ್ಲಿಯೂ ಇಲ್ಲದ ಈ ನಡೆ ಬೆಂಗಳೂರಲ್ಲಿ ಯಾಕೆ? ಇವತ್ತು ಆಯಾಯ ಭಾಷೆಯಲ್ಲಿ ಸೇವೆ ಅಂತೇಳಿ ಕಡೆಗೆ ಆಯಾಯ ಭಾಷೆ ಮಾತಾಡೋ ವಲಸಿಗರನ್ನು ಇಲಾಖೆಯಲ್ಲಿ ಉದ್ಯೋಗ ಕೊಡಿ ಅಲ್ಲಿಗೆ ಉದಯವಾಯಿತು ಕನ್ನಡ ನಾಡು ಎಂದು ಕಿಡಿ ಕಾರಿದ್ದಾರೆ.
ಗೋಪಾಲ್ ಕೃಷ್ಣ ಎನ್ನುವವರು, ಇದು ವಲಸಿಗರ ಓಲೈಕೆಗೆ ಸರಕಾರ ಮಾಡಿರುವ ಸ್ಕೀಂ!! ದೇಶದ ಯಾವ ಬೇರೆ ರಾಜ್ಯಗಳಲ್ಲಿ ಕನ್ನಡದಲ್ಲಿ ಈ ರೀತಿ ಸೇವೆ ಕೊಡ್ತಾರೆ? ಈ ಓಲೈಕೆಯ ಉದ್ದೇಶ ಏನು? AI ಇರ ಬೇಕಾದರೆ ಪರಬಾಶಿಕರು ಕನ್ನಡ ಕಲಿಯಬೇಕು ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಪ್ರಖ್ಯಾತ ಪೈ ಪುತ್ತೂರು ಎನ್ನುವವರು ಕರ್ನಾಟಕದ ನೆಲದ ನುಡಿಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದಿದ್ದಾರೆ. ಮೋಹನ್ ಕುಮಾರ್ ಬಿ ಎನ್ನುವವರು, ಭಾರತ ದೇಶದ ಒಕ್ಕೂಟದ ವ್ಯವಸ್ಥೆಗಳಲ್ಲಿ,
ಪೊಲೀಸ್ ಇಲಾಖೆಯ ಕೂಡ ಒಂದು ವ್ಯವಸ್ಥೆಯ ಅಡಿಯಲ್ಲಿ ಬರುವಂತಹ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತಹ ಸಂಸ್ಥೆ ಭಾರತ ದೇಶದಲ್ಲಿ ಎಲ್ಲೂ ಇಲ್ಲದ ಈ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಮಾತ್ರ ಯಾಕೆ. ಎಲ್ಲ ಭಾಷೆ ಯಾವ ರಾಜ್ಯದಲ್ಲಿಯೂ ಇಲ್ಲದ್ದು ಈ ರಾಜ್ಯದಲ್ಲಿ ಹೇರಿಕೆಗೆ ಕಾರಣವಾಗುತ್ತಿದೆ ಎಂದಿದ್ದಾರೆ.
ಬೇರೆ ರಾಜ್ಯಗಳಲ್ಲಿ ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಬೇರೆ ಭಾಷೆಗಳ ಬಳಕೆ ಇದೆಯೇ. ಕನ್ನಡ, ಇಂಗ್ಲೀಷ್ ಸಾಕಲ್ಲವೇ ಎಂದು ಹಲವು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ. ಬಿ ಬಸವರಾಜು ಎನ್ನುವವರು, ನಿಮ್ಮ ಪ್ರಕಾರ ಎಲ್ಲ ಭಾಷೆ ಆಯ್ತು. ಅದೇ ಬೇರೆ ಬೇರೆ ರಾಜ್ಯಗಳಲ್ಲಿ ಕನ್ನಡ ಬಳಸಲ್ಲ, ಅಲ್ಲಿ ಎರಡೇ ಭಾಷೆ ಒಂದು ಅವರ ರಾಜ್ಯ ಭಾಷೆ ಮತ್ತು ಇಂಗ್ಲಿಷ್. ಆದರೆ ಅನ್ಯ ಭಾಷೆಯಾಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಈ ದೇಶದಲ್ಲಿ ಕನ್ನಡದಲ್ಲಿ ಸಮಾನ ಅವಕಾಶ - ಸೇವೆ ಕೊಡುವ ಕೆಲಸವನ್ನು ಒಕ್ಕೂಟ ಸರ್ಕಾರ ಮಾಡುತ್ತಿಲ್ಲ. ಆದರೆ ಇಲ್ಲಿ ವಲಸೆ ಬರೋರಿಗೆ ರಾಜ್ಯ ಸರ್ಕಾರ ಪಾದಪೂಜೆ ಮಾಡೋದೊಂದು ಬಾಕಿ ಎಂದೂ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.
ಕನ್ನಡ ಭಾಷೆ ಬಳಕೆಯಲ್ಲೇ ತಪ್ಪು; ಕನ್ನಡಿಗರ ಅಸಮಾಧಾನ
ಇನ್ನು ಈ ಪೋಸ್ಟ್‌ನಲ್ಲಿ ಕನ್ನಡ ಭಾಷೆಯ ಬಳಕೆ ತಪ್ಪಾಗಿರುವುದಕ್ಕೂ ಅಸಮಾಧಾನ ಕಾರಣವಾಗಿದೆ. ಪೋಸ್ಟರಿನಲ್ಲಿ ನಮಸ್ಕಾರ ಎನ್ನುವುದು ನಮಸ್ಪಾರ ಎಂದಿದೆ ಇದಕ್ಕೆ ಹಲವು ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬರಹಗಾರ ಅನಂತ ಕುಣಿಗಲ್ ಅವರು ಮೊದಲು 'ನಮ್ಮ' 'ನಮಸ್ಕಾರ' ಎನ್ನುವ ಪದಗಳನ್ನು ಸರಿಪಡಿಸಿ.. ಆನಂತರ ಇತರ ಭಾಷೆಗಳಲ್ಲೂ ಸೇವೆ ಕೊಡುವಿರಂತೆ! ಕನ್ನಡಕ್ಕೆ ಶತೃಗಳು ಬೇರೆಲ್ಲೋ ಇಲ್ಲ ಎಂಬುದು ನಿಮ್ಮಿಂದ ಸಾಬೀತು 🤦 ಎಂದು ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications
