Lok Sabha Election 2024: ಕೋಲಾರದಲ್ಲಿ ಕಾಂಗ್ರೆಸ್ ಕಹಳೆ: ನಾಳೆ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಪ್ರಚಾರ
ಕೋಲಾರ ಏಪ್ರಿಲ್ 5: ಕೋಲಾರದಲ್ಲಿ ನಾಳೆಯಿಂದ ಕಾಂಗ್ರೆಸ್ ಕಹಳೆ ಮೊಳಗಲಿದೆ. ಲೋಕಸಭಾ ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಪ್ರಚಾರದ ಸಿದ್ಧತೆ ಭರದಿಂದ ಸಾಗಿವೆ. ಏಪ್ರಿಲ್ 6ರಿಂದ ಕೋಲಾರದ ಕುರುಡುಮಲೆಯಿಂದ ಚುನಾವಣಾ ಪ್ರಚಾರ ಆರಂಭಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಕುರುಡುಮಲೆಯಿಂದ ಚುನಾವಣಾ ಪ್ರಚಾರ ಆರಂಭಿಸಿತ್ತು. ಈ ಬಾರಿಯೂ ಅದೇ ಮಾದರಿಯಲ್ಲಿ ಪ್ರಚಾರ ಆರಂಭಿಸಲಿದೆ. ಲೋಕಸಭಾ ತಿಂಗಳಾಂತ್ಯದಲ್ಲಿ ಬೀದರ್‌ನ ಬಸವ ಕಲ್ಯಾಣದಿಂದ ಜನಶಕ್ತಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಕೋಲಾರ ಟಿಕೆಟ್ ಕುರಿತು ತೀವ್ರ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಮುಂದೂಡಲಾಗಿತ್ತು.

ಆದರೆ ಈಗ ಕಾಂಗ್ರೆಸ್ ನಾಯಕರು ಏಪ್ರಿಲ್ 6ರಿಂದ ಕೋಲಾರದ ಕುರುಡುಮಲೆಯಿಂದ ಹಳೆ ಮೈಸೂರು ಭಾಗದ ಕ್ಷೇತ್ರಗಳ ಚುನಾವಣಾ ಪ್ರಚಾರ ಯಾತ್ರೆ ಆರಂಭಿಸಲು ನಿರ್ಧರಿಸಿದ್ದಾರೆ. ಬಳಿಕ ಮೊದಲ ಹಂತದ ಚುನಾವಣೆ ನಡೆಯುವ 14 ಕ್ಷೇತ್ರಗಳಲ್ಲಿ ಪ್ರತ್ಯೇಕ ಪ್ರಚಾರ ನಡೆಸಲಿದ್ದಾರೆ.
ಅಗತ್ಯವಿರುವ ಕ್ಷೇತ್ರಗಳಿಗೆ ಮಾತ್ರ ಸಿದ್ದು ಡಿಕೆಶಿ ಪ್ರಚಾರ
ಅಗತ್ಯವಿರುವ ಕ್ಷೇತ್ರಗಳಿಗೆ ಮಾತ್ರ ಇಬ್ಬರೂ ಒಟ್ಟಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 6ರಂದು ಶನಿವಾರ ಬೆಳಗ್ಗೆ 10.30 ಗಂಟೆಗೆ ಕುರುಡು ಮಲೆ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಇನ್ನು ಬಸವಣ್ಣನ ನಾಡು ಬಸವ ಕಲ್ಯಾಣದಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರಚಾರ ಕಾರ್ಯಕ್ರಮ ನಡೆಸುವ ಬಗ್ಗೆ ಚಿಂತನೆಯಿದ್ದು ಇನ್ನೂ ದಿನಾಂಕ ನಿಗದಿಯಾಗಿಲ್ಲ. ಅಂತಿಮವಾಗಿ ರಾಷ್ಟ್ರಕವಿ ಕುವೆಂಪು ಅವರ ಶಿವಮೊಗ್ಗದಲ್ಲಿ ಪ್ರಚಾರ ಕಾರ್ಯಕ್ರಮ ಮುಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಬಸವಣ್ಣನ ನಾಡಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸುವ ಮೂಲಕ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಲಾಭವನ್ನು ಪಡೆಯಲು ತಂತ್ರ ರೂಪಿಸಲಾಗಿದೆ. ಜತೆಗೆ ಕಳೆದ ವಿಧಾನಸಭೆಯಲ್ಲಿ ಕೈ ಹಿಡಿದಿದ್ದ ಲಿಂಗಾಯತ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವುದು ಸಹ ಕಾಂಗ್ರೆಸ್ ಉದ್ದೇಶ ಎನ್ನಲಾಗಿದೆ. ಆದರೆ ಈ ಬಗೆಗಿನ ದಿನಾಂಕಗಳು ಇನ್ನಷ್ಟೇ ಅಂತಿಮವಾಗಬೇಕಿದೆ ಎಂದು ಹೇಲಲಾಗಿದೆ.
ಕೋಲಾರ ಲೋಕಸಭಾ ಚುನಾವಣೆಗೆ ಮತದಾನ ಯಾವಾಗ?
ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಹಾಗೂ ಬಿಜೆಪಿ ಅಭ್ಯರ್ಥಿ ಮಲ್ಲೇಶ್ ಬಾಬು ವಿರುದ್ಧ ಸ್ಪರ್ಧೆ ನಡೆಯಲಿದೆ. ಏಪ್ರಿಲ್ 26ರಂದು ರಾಜ್ಯದ 14 ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಇನ್ನುಳಿದ 14 ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದೆ. ಮೊದಲ ಹಂತದ ಚುನಾವಣೆ ಅಧಿಸೂಚನೆ ಮಾರ್ಚ್ 28ರಂದು ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಏಪ್ರಿಲ್ 4 ಆಗಿದ್ದು, ಪರಿಶೀಲನೆ ಏಪ್ರಿಲ್ 5ರಂದು ನಡೆಯಲಿದೆ. ಏಪ್ರಿಲ್ 8 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ದೇಶದ 543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಸುಮಾರು 97 ಕೋಟಿ ಮತದಾರರು ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ.












Click it and Unblock the Notifications