ಕೋಲಾರ ಕಾಂಗ್ರೆಸ್‌ನಲ್ಲಿ ಭಿನ್ನಮತ: ಉರಿಯೋ ಬೆಂಕಿಗೆ ತುಪ್ಪ ಸುರಿದ ಪ್ರಲ್ಹಾದ್ ಜೋಶಿ
ಕೋಲಾರದಲ್ಲಿ ಬಂಡಾಯದ ಕಿಚ್ಚು ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್ ಕೊಟ್ಟಿದೆ. ಕೋಲಾರ ಕಾಂಗ್ರೆಸ್‌ನಲ್ಲಿ ಭಿನ್ನಮತ ಶುರುವಾಗುತ್ತಿದ್ದಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉರಿಯೋ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಕೋಲಾರದಲ್ಲಿ ಸಚಿವ ಮುನಿಯಪ್ಪ ಅವರ ಅಳಿಯನಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ರಾಜೀನಾಮೆ ನೀಡುವುದಾಗಿ ಐವರು ಶಾಸಕರು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಧಾರವಾಡದಲ್ಲಿ ಪ್ರತಿಕ್ರಿಯೆ ನೀಡಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಒಳಗೆ ಎಲ್ಲವೂ ಸರಿ ಇಲ್ಲ ಎಂಬುದು ಶಾಸಕ ಹೇಳಿಕೆಯಿಂದ ತಿಳಿಯುತ್ತದೆ ಎಂದಿದ್ದಾರೆ.

ಅಲ್ಲದೆ 'ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇತರರ ನಡುವೆ ಮನಸ್ತಾಪವಿದೆ. ಅವರಿಂದ ಸರಿಯಾಗಿ ಸರ್ಕಾರ ನಡೆಸಲು ಆಗುತ್ತಿಲ್ಲ. ಹೀಗಿರುವಾಗಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕರಿಗೇ ಅವರ ಸರ್ಕಾದ ಬಗ್ಗೆ ರೋಸಿ ಹೋಗಿದೆ' ಎಂದು ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿ ಜನರ ಕಣ್ಣಿಗೆ ಮಣ್ಣೆರೆಚುತ್ತಿದೆ. ಶೇ.75ರಷ್ಟು ಎಸ್‌ಡಿಆರ್‌ಎಫ್ ಹಣವನ್ನು ಭಾರತ ಸರ್ಕಾರ ಕೊಟ್ಟು ಹಂಚಿಯಾದರೂ ಅದು ಬಿಡುಗಡೆಯಾಗಿಲ್ಲ. ಅದನ್ನು ಬಿಟ್ಟು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಯುಪಿಎ ಸರ್ಕಾರಕ್ಕಿಂತ ಹೆಚ್ಚು ಅನುದಾನ ನಾವು ಕೊಡುತ್ತಿದ್ದೇವೆ. ಇಂಥಹ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಭಾವನೆ ಜನರಲ್ಲಿ ಬಂದಿದೆ ಎಂದು ಜೋಶಿ ಹೇಳಿದರು.
ಕಾಂಗ್ರೆಸ್ ಲೋಕಸಭಾ ಚುನಾವಣೆಗೆ 28 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಆದರೆ ಇನ್ನೂ ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಬಾಕಿ ಉಳಿದುಕೊಂಡಿದೆ. ಆದರೆ ಕೋಲಾರದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿದೆ.
ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ಕೈ ನಾಯಕರಿಗೆ ದೊಡ್ಡ ತಲೆನೋವಾಗಿದೆ. ಒಂದೆಡೆ ಸಚಿವ ಕೆ.ಹೆಚ್.ಮುನಿಯಪ್ಪ ತಮ್ಮ ಅಳಿಯನಿಗೆ ಟಿಕೆಟ್ ನೀಡುವಂತೆ, ಮತ್ತೊಂದರೆಡೆ ರಮೇಶ್ ಕುಮಾರ್ ಬಣ ತಾವು ಬೆಂಬಲಿಸುವ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದರೆ, ಇನ್ನೊಂದೆಡೆ ಮುನಿಯಪ್ಪ ಕುಟುಂಬಕ್ಕೆ ಟಿಕೆಟ್ ಕೊಟ್ಟರೆ ರಾಜೀನಾಮೆ ನೀಡುವುದಾಗಿ ಐವರು ಶಾಸಕರು ಬೆದರಿಕೆ ಹಾಕಿದ್ದಾರೆ.
ಭಿನ್ನಮತ ತಣ್ಣಗಾಗಿಸಲು ಡಿಸಿಎಂ ಡಿಕೆ ಶಿವಕುಮಾರ್ ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಟಿಕೆಟ್ ಆಕಾಂಕ್ಷಿ ಎಲ್.ಹನುಮಂತಯ್ಯ ಜೊತೆ ಮಾತುಕತೆ ನಡೆಸಿದರೂ ಭಿನ್ನಮತ ಶಮನಗೊಳಿಸಲು ಆಗಲಿಲ್ಲ. ಜೊತೆಗೆ ಸಿಎಂ ರಾಜಕೀಯ ಕಾರ್ಯದರ್ಶಿ ಆಗಿರುವ ನಜೀರ್ ಅಹ್ಮದ್ ರಾಜೀನಾಮೆಗೆ ಮುಂದಾಗಿದ್ದಾರೆ.
ಇದು ಸದ್ಯ ವಿರೋಧ ಪಕ್ಷಗಳ ವಾಗ್ದಾಳಿಗೆ ಕಾರಣವಾಗಿದೆ. ಇದೇ ಸಂದರ್ಭವನ್ನು ಗುರಿಯಾಗಿಸಿಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದ್ದಾರೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಮಾತುಗಳನ್ನು ಆಡಿದ್ದಾರೆ. ಈ ಅಸಮಾಧಾನದ ಲಾಭವನ್ನು ಬಿಜೆಪಿ ಪಡೆದುಕೊಂಡರೂ ಆಶ್ಚರ್ಯವಿಲ್ಲ.












Click it and Unblock the Notifications