Karnataka Drought: ಜಿಲ್ಲಾಧಿಕಾರಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ: ಕರ್ನಾಟಕ ಸರ್ಕಾರದಲ್ಲಿ ಹಣದ ಕೊರತೆಯೇ ಇಲ್ಲ

Karnataka Drought: ಕರ್ನಾಟಕದಲ್ಲಿ ಮಳೆ ಕೊರತೆ ಎದುರಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿರುವಾಗಲೇ ಕರ್ನಾಟಕದ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಖಡಕ್ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಕರ್ನಾಟಕದ "ಬರ ಪರಿಸ್ಥಿತಿ, ಕುಡಿಯುವ ನೀರು, ಜಾನುವಾರು ಮೇವು, ಕೃಷಿ ಚಟುವಟಿಕೆ ಹಾಗೂ ಉದ್ಯೋಗ" ವಿಷಯಗಳ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಜುಲೈ 19ರ ಭಾನುವಾರ ವಿಡಿಯೋ ಸಂವಾದ ನಡೆಸಿದರು.

ನಿಮ್ಮ ಜಿಲ್ಲೆಗಳ ವ್ಯಾಪ್ತಿಯಲ್ಲಿ ಯಾವುದೇ ಲೋಪದೋಷಗಳಾದರೆ ಅದಕ್ಕೆ ನೇರವಾಗಿ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ತುರ್ತು ಬರ ಪರಿಹಾರ ಕಾರ್ಯಗಳಿಗೆ ಕರ್ನಾಟಕ ಸರ್ಕಾರದಲ್ಲಿ ಹಣದ ಕೊರತೆಯೇ ಇಲ್ಲ. ನಿಮ್ಮ ಜಿಲ್ಲೆಗಳಿಗೆ ಅಗತ್ಯವಿರುವ ಹಣವನ್ನೂ ಕೊಟ್ಟಿದ್ದೇವೆ ಮತ್ತು ನಿರ್ಣಯ ಕೈಗೊಳ್ಳುವ ಅಧಿಕಾರವನ್ನೂ ನೀಡಿದ್ದೇವೆ. ಹಾಗಾಗಿ ಯಾವುದೇ ನೆಪವಿಲ್ಲದೇ, ತಳಮಟ್ಟದಲ್ಲಿ ಕೆಲಸದ ಪ್ರತ್ಯಕ್ಷ ರಿಸಲ್ಟ್‌ಗಳು ಮಾತ್ರ ಬೇಕು. ಎಲ್ಲಾ ಪರಿಹಾರ ಕ್ರಮಗಳಲ್ಲಿ ಶೇ. 100 ರಷ್ಟು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಬರ ಪರಿಸ್ಥಿತಿಯ ವೈಜ್ಞಾನಿಕ ಅಧ್ಯಯನಕ್ಕಾಗಿ ಕೇಂದ್ರದ ತಂಡವನ್ನು ತಕ್ಷಣವೇ ಕಳುಹಿಸುವಂತೆ ಮತ್ತು ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಈಗಾಗಲೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.

Karnataka Drought

ಸಣ್ಣ ಮತ್ತು ಅತಿ ಸಣ್ಣ ರೈತರ ಸಂಪೂರ್ಣ ವಿವರಗಳನ್ನು 'ಫ್ರೂಟ್ಸ್‌' (FRUITS) ತಂತ್ರಾಂಶದ ಮೂಲಕ ಸಿದ್ಧವಾಗಿಟ್ಟುಕೊಂಡು, ಪ್ರತಿಯೊಂದು ಪರಿಹಾರವೂ ತಳಮಟ್ಟದ ಅರ್ಹ ಫಲಾನುಭವಿಗೆ ತಲುಪುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಥವಾ ತಾಂತ್ರಿಕ ಲೋಪದಿಂದ ಯಾವುದೇ ಒಬ್ಬ ರೈತನಿಗೆ ಬೆಳೆವಿಮೆ ಸಿಗದೆ ಇರುವುದು ಅಥವಾ ಪರಿಹಾರ ವಂಚಿತವಾಗುವ ಸ್ಥಿತಿ ಉದ್ಭವಿಸಲೇಬಾರದು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆವಿಮೆ ಮಾಡಿಸುವಂತೆ ಪ್ರೇರೇಪಿಸಿ ಹಾಗೂ ಬೆಳೆಹಾನಿ ಸಮೀಕ್ಷೆಯನ್ನು ನಿಯಮಾನುಸಾರ ತಕ್ಷಣವೇ ಪೂರ್ಣಗೊಳಿಸಿ.

ನಮ್ಮ ಮೊದಲ ಮತ್ತು ಪ್ರಧಾನ ಆದ್ಯತೆ ಕುಡಿಯುವ ನೀರು. ಕರ್ನಾಟಕದ ಯಾವುದೇ ಹಳ್ಳಿ ಅಥವಾ ನಗರದ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಳ್ಳಬಾರದು. ಸ್ಥಳೀಯ ನೀರಿನ ಮೂಲಗಳಿಲ್ಲದಿದ್ದರೆ, ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆದು ಅಥವಾ ಟ್ಯಾಂಕರ್‌ಗಳ ಮೂಲಕ ತಕ್ಷಣವೇ ನೀರು ಸರಬರಾಜು ಮಾಡಲು ಕ್ರಮಕೈಗೊಳ್ಳಿ. ಆದರೆ, ನೀರು ವಿತರಿಸುವ ಮುನ್ನ ಕಡ್ಡಾಯವಾಗಿ ಅದರ ಗುಣಮಟ್ಟ ತಪಾಸಣೆ ನಡೆಸಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಪೂರೈಕೆಯಾಗಿ ಸಾಂಕ್ರಾಮಿಕ ರೋಗಗಳು ಹರಡದಂತೆ ತೀವ್ರ ಮುನ್ನೆಚ್ಚರಿಕೆ ವಹಿಸಿ. ಅಸ್ತಿತ್ವದಲ್ಲಿರುವ ಜಲಮೂಲಗಳು ಕಲುಷಿತವಾಗದಂತೆ ರಕ್ಷಿಸಿ ಮತ್ತು ಮಳೆನೀರು ಎಲ್ಲೂ ಪೋಲಾಗದಂತೆ ತಡೆಯಲು ಸಾರ್ವಜನಿಕರಲ್ಲಿ ಮಳೆನೀರು ಕೊಯ್ಲಿನ ಕುರಿತು ಜಾಗೃತಿ ಮೂಡಿಸಿ.

ಮಾನವರಷ್ಟೇ ಅಲ್ಲದೆ, ಜಾನುವಾರುಗಳ ಸಂರಕ್ಷಣೆಯೂ ಅಷ್ಟೇ ಮುಖ್ಯ. ಅಗತ್ಯವಿರುವ ಕಡೆಗಳಲ್ಲೆಲ್ಲ ತಕ್ಷಣವೇ ಮೇವಿನ ಬ್ಯಾಂಕ್‌ಗಳು ಹಾಗೂ ಗೋಶಾಲೆಗಳನ್ನು ತೆರೆಯಿರಿ. ಹಸಿವು ಮತ್ತು ನೀರಡಿಕೆಯಿಂದ ರಾಜ್ಯದಲ್ಲಿ ಒಂದೇ ಒಂದು ಜಾನುವಾರು ಕೂಡ ಸಾಯಬಾರದು. ಸರ್ಕಾರದ ಎಲ್ಲಾ ಪರಿಹಾರ ಕ್ರಮಗಳು ಜನರನ್ನು ನೇರವಾಗಿ ತಲುಪಬೇಕು. ಬರದ ತೀವ್ರತೆಯ ಬಿಸಿ ಸಾಮಾನ್ಯ ಜನರಿಗೆ ತಟ್ಟದ ಹಾಗೆ ಅವರನ್ನು ಆಡಳಿತ ಯಂತ್ರವು ಕೈಹಿಡಿಯಬೇಕು. ತಳಮಟ್ಟದಲ್ಲಿ ಆಡಳಿತ ಕಾರ್ಯವೈಖರಿ ಚುರುಕಾಗಬೇಕು ಎಂದೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+