ದುಬೈಯಲ್ಲಿ ಕನ್ನಡದ ಕಣ್ಮಣಿಗಳ ಅದ್ದೂರಿ ರಾಜ್ಯೋತ್ಸವ

Posted By: ಅನುಪಮಾ ಮಹೇಶ್, ಮಸ್ಕತ್
Subscribe to Oneindia Kannada

ಕನ್ನಡಿಗರು ದುಬೈ ಬಳಗದ ವತಿಯಿಂದ 62ನೇ ಕನ್ನಡ ರಾಜ್ಯೋತ್ಸವವನ್ನು ದುಬೈಯಲ್ಲಿ ನವೆಂಬರ್ 24 ಶುಕ್ರವಾರದಂದು, ಜೆಎಸ್ಎಸ್ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಪ್ರೇಕ್ಷಕರಿಂದ ತುಂಬಿ ತುಳುಕುತಿದ್ದ ಸಭಾಂಗಣದಲ್ಲಿ ಕನ್ನಡದ ಕಲರವ ಕೇಳಲು ಕಿವಿಗೆ ಇಂಪಾಗಿತ್ತು.

ಸುಂದರವಾಗಿ ಅಲಂಕೃತಗೊಂಡ ವೇದಿಕೆಯಲ್ಲಿ ನೆರೆದ ಯುಎಇಯ 'ಕನ್ನಡ ಕಣ್ಮಣಿ' ಪದ್ಮಶ್ರಿ ಪ್ರಶಸ್ತಿ ಪುರಸ್ಕೃತರಾದ ಡಾ. ಬಿ ಅರ್ ಶೆಟ್ಟಿ, ಕನ್ನಡಿಗರು ದುಬೈ ಸದಸ್ಯರು ಹಾಗು ತಾಯಿನಾಡಿನಿಂದ ಈ ಕಾರ್ಯಕ್ರಮಕ್ಕಾಗಿ ಆಗಮಿಸಿದ ವಿಶೇಷ ಅತಿಥಿಗಳು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕತಾರ್ ರಾಜ್ಯೋತ್ಸವದಲ್ಲಿ ಬಿ ಜಯಶ್ರೀ, ದುಂಡಿರಾಜ್

ಮಾಧವಿ ಪ್ರಸಾದ ಅವರ ತಂಡದ ಮಕ್ಕಳು, ನಮ್ಮ ಕನ್ನಡ ನಾಡು, ನುಡಿಯ ಹಿರಿಮೆಯನ್ನು ಸಾರುವ, ನಮ್ಮ ಸುಂದರ ನಾಡಗೀತೆ 'ಜಯ ಭಾರತ ಜನನಿಯ ತನುಜಾತೆ'ಯನ್ನು ಸುಂದರವಾಗಿ ಪ್ರಸ್ತುತ ಪಡಿಸಿದರು. ಗೌರವ ಸೂಚಕವಾಗಿ ಹಾಗು ಅಭಿಮಾನಪೂರ್ವಕವಾಗಿ ಮಕ್ಕಳ ದನಿಯೊಂದಿಗೆ ಪ್ರೇಕ್ಷಕರೂ ದನಿಗೂಡಿಸಿದರು.

Kannadigaru Dubai Balaga celebrates Kannada Rajyotsava

ಈ ಕಾರ್ಯಕ್ರಮಕ್ಕೆ ನಮ್ಮ ತಾಯಿನಾಡಿನಿಂದ ಗೌರವಾನ್ವಿತ ಅತಿಥಿಗಳಾಗಿ ಎಸ್ಎಸ್ ಗಣೇಶ್ ಹಾಗು ರೇಖಾ ದಂಪತಿಗಳು, ತಮ್ಮ ನಟನಾ ಚಾತುರ್ಯದಿಂದ ಬಾಲ್ಯದಿಂದಲೆ ಪ್ರಸಿದ್ದಿಯಾದ ಜನಪ್ರಿಯ ನಟ ಮಾಸ್ಟರ್ ಆನಂದ್, ಹಿಂದೂಸ್ತಾನಿ ಶಾಸ್ತ್ರೀಯ ಗಾಯನದ ಸಾಮ್ರಾಜ್ಞಿ ಗಂಗೂಬಾಯಿ ಹಾನಗಲ್ ಅವರ ಮೊಮ್ಮಗಳು ವೀಣಾ ಹಾನಗಲ್, ಹಾಗು ಬೆಂಗಳೂರಿನಿಂದ ಮಧುರ ಕಂಠದ ಗಾಯಕಿ ಅಂಜಲಿ ಹಳಿಯಾಳ್ ಆಗಮಿಸಿದ್ದರು.

ಅರಬ್ ಸಂಯುಕ್ತ ಸಂಸ್ತಾನದಲ್ಲಿ ಕನ್ನಡದ ಶೇಖ್ ಎಂದೆ ಪರಿಚಿತರಾದ ಪ್ರಸಿದ್ದ ಉದ್ಯಮಿ ಬಿಅರ್ ಶೆಟ್ಟಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹೊರ ದೇಶದಲ್ಲಿ ಕನ್ನಡಿಗರಿಗಾಗಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಹಾಗು ಈ ಮೂಲಕ ಅನೇಕ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿರುವ ಬಿಅರ್ ಶೆಟ್ಟಿಯವರು, ಕನ್ನಡಿಗರು ಹೊರ ದೇಶದಲ್ಲಿ ಒಗ್ಗಟ್ಟಿನಿಂದ ಬಾಳಬೇಕು‌. ಕನ್ನಡದ ಭಾಷಾಭಿಮಾನ ಮುಂದಿನ ಪೀಳಿಗೆಯವರು ಉಳಿಸಿಕೊಳ್ಳುವಂತಾಗಬೇಕು ಎಂಬ ಕಳಕಳಿಯ ಕರೆ ನೀಡಿದರು.

ಶಾರ್ಜಾ ಮಣ್ಣಿನಲ್ಲಿ ಕನ್ನಡ ಕಲರವ: ಅದ್ದೂರಿ ರಾಜ್ಯೋತ್ಸವ ವೈಭವ

ಈಗಾಗಲೆ ಅನೇಕ ಪ್ರಶಸ್ತಿಗಳ ಜೊತೆಗೆ ಭಾರತದ ಸರ್ಕಾರದಿಂದ ಪದ್ಮಶ್ರಿ ಪ್ರಶಸ್ತಿಗೂ ಭಾಜನರಾಗಿರುವ ಬಿಅರ್ ಶೆಟ್ಟಿಯವರಿಗೆ, ಕನ್ನಡಿಗರು ದುಬೈ ಬಳಗವು "ಯು ಎ ಇ ಕರ್ನಾಟಕದ ಕಣ್ಮಣಿ" ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.

Kannadigaru Dubai Balaga celebrates Kannada Rajyotsava

ದಾವಣಗೆರೆ ಜಿಲ್ಲೆಯಲ್ಲಿ ಸಾಮಾಜಿಕ ಹಾಗು ಸಾಂಸ್ಕೃತಿಕ ಕಾರ್ಯಕಲಾಪದಲ್ಲಿ ತೊಡಗಿಸಿಕೊಂಡ, ನೆಚ್ಚಿನ ಜನನಾಯಕ ಮಾಜಿ ಸಂಸದರಾದ ಶ್ಯಾಮನೂರು ಶಿವಶಂಕರಪ್ಪ ಅವರಿಗೆ "ಕರ್ನಾಟಕ ರತ್ನ" ಎಂಬ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಕಾರಣಾಂತರಗಳಿಂದ ಅವರು ಸಮಾರಂಭದಲ್ಲಿ ಉಪಸ್ಥಿತರಾಗದ ಕಾರಣ ಅವರ ದ್ವಿತೀಯ ಪುತ್ರ ಎಸ್ಎಸ್ ಗಣೇಶ್ ಹಾಗು ರೇಖಾ ದಂಪತಿಗಳು ತಂದೆಯವರ ಪರವಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ಎಸ್ಎಸ್ ಗಣೇಶ್ ಸಭೆಯನ್ನು ಉದ್ದೇಶಿಸಿ, ಕನ್ನಡ ನಾಡು ನುಡಿಗಳ ಹಿರಿಮೆಯ ಕುರಿತು ಮಾತನಾಡುತ್ತಾ, ರಾಜ್ಯೋತ್ಸವ ನಿತ್ಯೋತ್ಸವವಾಗಬೇಕು, ಅನಿವಾಸಿ ಕನ್ನಡಿಗರು ದುಬೈನಂಥ ಶ್ರೀಮಂತ ದೇಶದಲ್ಲೂ ಕನ್ನಡದ ತೇರನ್ನು ಎಳೆಯಬೇಕು ಎಂದು ಪ್ರೇಕ್ಷಕರಲ್ಲಿ ಉತ್ಸಾಹ ತುಂಬುವ ಸಂದೇಶ ನೀಡಿದರು‌.

ಕುವೈತಿನಲ್ಲಿ ಬಂಟರ ಸಂಘದಿಂದ ದೀಪಾವಳಿ ಸಂಭ್ರಮ

ತಾಯಿನಾಡಿನಿಂದ ಆಗಮಿಸಿದ ಜನಪ್ರಿಯ ಚಲನಚಿತ್ರ ಚಿತ್ರನಟ, ಬಾಲ ಕಲಾವಿದನಾಗಿಯೂ ಜನ ಮನ್ನಣೆ ಗಳಿಸಿದ ಮಾಸ್ಟರ್ ಅನಂದ್ ಅವರಿಗೆ ಅವರ ಕಲಾ ಸೇವೆಯನ್ನು ಗುರುತಿಸಿ ಕನ್ನಡಿಗರು ದುಬೈ ಬಳಗದ ವತಿಯಂದ "ಸಕಲಕಲಾವಲ್ಲಭ ಮಾಸ್ಟರ್ ಆನಂದ್" ಗೌರವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತು.

Kannadigaru Dubai Balaga celebrates Kannada Rajyotsava

ಗೌರವಾನ್ವಿತ ಗಣ್ಯರಿಗೆ ಶಾಲು ಹೊದೆಸಿ ಹೂಗುಚ್ಛಗಳು, ಸ್ಮರಣಿಕೆಗಳು, ಕರ್ನಾಟಕದ ಹೆಮ್ಮೆಯ ಕಿರೀಟವಾದ ಮೈಸೂರು ಪೇಟವನ್ನು ತೊಡಿಸಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. ದುಬೈ ನಗರದ ವಿವಿಧ ಕಲಾ ಕೇಂದ್ರದ ಮಕ್ಕಳಿಂದ ಸಮೂಹ ಗಾಯನ, ವಾದ್ಯಗೋಷ್ಠಿ ಹಾಗು ಮನಸೂರೆಗೊಳ್ಳುವ ಸಾಮೂಹಿಕ ನೃತ್ಯ ಪ್ರದರ್ಶನಗಳು ಪ್ರೇಕ್ಷಕರನ್ನು ಮನರಂಜಿಸಿದರು.

ಹುಬ್ಬಳ್ಳಿಯಿಂದ ಆಗಮಿಸಿದ ಶಾಸ್ರೀಯ ಸಂಗೀತ ಗಾಯಕಿ ವೀಣಾ ಹಾನಗಲ್ ಅವರಿಂದ ಸುಶ್ರಾವ್ಯ ಶಾಸ್ತ್ರೀಯ ಗಾಯನವಿತ್ತು. ಸಭಾ ಕಾರ್ಯಕ್ರಮದಲ್ಲಿ ವೀಣಾ ಹಾನಗಲ್ ಅವರ ಗಾಯನ ಸಿ.ಡಿ.ಯನ್ನು ಮಾಸ್ಟರ್ ಆನಂದ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ್ ಶೆಟ್ಟಿಯವರ ಹಸ್ತದಿಂದ ಬಿಡುಗಡೆ ಮಾಡಲಾಯಿತು‌.

ಅಬುಧಾಬಿಯಲ್ಲಿ ವಿಜೃಂಭಿಸಿದ ಕನ್ನಡ ರಾಜ್ಯೋತ್ಸವ

ತಾಯಿನಾಡಿನಿಂದ ಎಷ್ಟೇ ದೂರದಲ್ಲಿದ್ದರೂ ಚಿಣ್ಣರ ತಂಡ ಕನ್ನಡದ ಕಂಪನ್ನು ಸಾರುವ ಸಾಂಸ್ಕೃತಿಕ ನೃತ್ಯ ರೂಪಕಗಳನ್ನು ಅಮೋಘವಾಗಿ ಪ್ರದರ್ಶಿಸಿ ಪ್ರೇಕ್ಷಕರ ಮೈ ರೋಮಾಂಚನಗೊಳಿಸಿದವು. ಮಾಸ್ಟರ್ ಆನಂದ್ ಅವರು ಹಾಸ್ಯ ಚಟಾಕಿಗಳನ್ನು ಹೇಳುತ್ತಾ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು‌. ಅಷ್ಟೆ ಅಲ್ಲದೆ ಜನಪ್ರಿಯ ಕನ್ನಡ ಚಲನಚಿತ್ರಗಳ ಹಾಡಿನ ತುಣುಕುಗಳಿಗೆ ಅಮೋಘವಾಗಿ ಅಭಿನಯಿಸಿ ಜನರನ್ನು ರಂಜಿಸಿದರು.

Kannadigaru Dubai Balaga celebrates Kannada Rajyotsava

ಬೆಂಗಳೂರಿನಿಂದ ಆಗಮಿಸಿದ್ದ ಖ್ಯಾತ ಗಾಯಕಿ ಅಂಜಲಿ ಹಳಿಯಾಳ್ ಅವರು ಮೊದಲಿಗೆ ಹಾಡಿದ ಹಳೆ ಜನಪ್ರಿಯ ಗೀತೆ 'ಘಿಲ್ ಘಿಲ್ ಘಿಲಕ್ ಕಾಲು ಗೆಜ್ಜೆ ಝಣಕ್' ಹಾಡು ಸಭಿಕರನ್ನು ಕುಣಿಯುವಂತೆ ಮಾಡಿತು‌. ದುಬೈನಲ್ಲಿ ನೆಲೆಸಿರವ ಸುಮಧುರ ಕಂಠದ ಗಾಯಕ ಉದಯ್ ನಂಜಪ್ಪ ಹಾಗು ಅಂಜಲಿ ಹಳಿಯಾಳ್ ಅವರ ದನಿಯಲ್ಲಿ ಇಂಪಾಗಿ ಮೂಡಿ ಬಂದ 'ಎಲ್ಲಲ್ಲಿ ನೋಡಲಿ, ಮೆಲ್ಲುಸಿರೆ ಸವಿಗಾನ ಹಾಗು ಒಂದೆ ಒಂದು ಆಸೆಯೂ' ಹಾಡುಗಳು ನಿಜಕ್ಕೂ ಪ್ರೇಕ್ಷಕರನ್ನು ಸಂಗೀತ ಲೋಕಕ್ಕೆ ಕರೆದೊಯ್ದು ತೇಲಾಡುವಂತೆ ಮಾಡಿದವು.

ಅರ್ಜುನ್ ಜನ್ಯ ಜೊತೆ ಸಿಂಗನ್ನಡಿಗರ ರಾಜ್ಯೋತ್ಸವ

ಅಂಜಲಿ ಹಳಿಯಾಳ್ ಹಾಗು ಉದಯ್ ನಂಜಪ್ಪ ಅವರಿಗೆ ಕನ್ನಡಿಗರು ದುಬೈ ಸದಸ್ಯರು, ಮಾಸ್ಟರ್ ಆನಂದ್ ಹಾಗು ಅಬುಧಾಬಿ ಕರ್ನಾಟಕ ಸಂಘದ ಅದ್ಯಕ್ಷರಾದ ಸರ್ವೊತ್ತಮ್ ಶಟ್ಟಿ ಅವರು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.

ಈ ಸುಂದರವಾದ ಸಾಂಸೃತಿಕ ಕಲಾಮೇಳಕ್ಕೆ ಜೆ ಎಸ್ ಎಸ್ ಶಾಲೆಯ ಸಭಾಂಗಣ ಸಾಕ್ಷಿಯಾಯಿತು‌. ಕಾರ್ಯಕ್ರಮಕ್ಕೆ ತೆರೆ ಎಳೆಯುತ್ತಾ, ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷ ಮಲ್ಲಿ ಕಾರ್ಜುನ್ ಗೌಡ ಅವರು ವಂದನಾರ್ಪಣೆ ಮಾಡಿದರು.

Kannadigaru Dubai Balaga celebrates Kannada Rajyotsava

ಮರುದಿನ, ನವೆಂಬರ್ 25 ಶನಿವಾರದಂದು ಸಮಾರಂಭವನ್ನು ಯಶಸ್ವಿಯಾಗಿಸಲು ತೆರೆಮರೆಯಲ್ಲಿ ದುಡಿದ ಕಾರ್ಯಕರ್ತರನ್ನು ಅಭಿನಂದಿಸಲು ಹಾಗು ಬೆಂಗಳೂರಿನಿಂದ ಆಗಮಿಸಿದ ಕಲಾವಿದರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ನಿಟ್ಟಿನಲ್ಲಿ ದುಬೈನಲ್ಲಿರುವ ಪೊರ್ಚುನ್ ಗ್ರಾಂಡ್ ಹೋಟಲ್ ನಲ್ಲಿ ಸಂತೋಷಕೂಟವನ್ನು ಏರ್ಪಡಿಸಲಾಗಿತ್ತು.

ಅಂಜಲಿ ಹಳಿಯಾಳ್ ಹಾಗು ಉದಯ್ ನಂಜಪ್ಪ ಅವರ ಇಂಪಾದ ಗಾನ ಲಹರಿ ನೆರೆದ ಜನರನ್ನು ಮತ್ತೆ ಮೋಡಿಗೊಳಿಸುವಲ್ಲಿ ಯಶಸ್ವಿಯಾಯಿತು‌‌‌. ದುಬೈನಲ್ಲಿ ನೆಲೆಸಿರುವ ಅನಿವಾಸಿ ಕನ್ನಡತಿ, ಹಾಸ್ಯ ಲೇಖಕಿ ಹಾಗು ಬರಹಗಾರ್ತಿ ಆರತಿ ಘಟಿಕಾರ್ ಅವರು ಹಾಸ್ಯದ ಚುಟುಕು ವಾಚನವನ್ನು ಮಾಡಿ ಸಭಿಕರನ್ನು ರಂಜಿಸಿದರು‌. ದುಬೈನ ಕಾರ್ಯಕಾರಿ ಮಂಡಲಿ ಹಾಗು ಕುಟುಂಬದವರು ಈ ಸಂತೋಷ ಕೂಟದಲ್ಲಿ ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannadigaru Dubai Balaga celebrated Kannada Rajyotsava on 24th November at JSS International School in a grand fashion. BR Shetty was awarded Kannada Kanmani. Kannada Actor Master Anand, Veena Hanagal, Anjali Haliyal enthralled the audience.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ