ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್‌ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು
ನವದೆಹಲಿ; ಪರಿಸರ ಸ್ನೇಹಿ ಸಾರಿಗೆ ಉತ್ತೇಜನ, ಇ-ಚಲನಶೀಲತೆ ಹೆಚ್ಚಿಸುವ ಕಾರಣಕ್ಕೆ ಮೂರು ವರ್ಷಗಳ ಹಿಂದೆ ಜಾರಿಗೆ ತಂದ 'ಪಿಎಂ ಇ-ಬಸ್ ಯೋಜನೆ' (PM-eBus Scheme) ಭಾಗವಾಗಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ನೂರಾರು ಎಲೆಕ್ಟ್ರಿಕಲ್ ಬಸ್‌ಗಳನ್ನು ಮಂಜೂರು ಮಾಡಿದೆ. ಇದರಲ್ಲಿ ಕರ್ನಾಟಕ ಸೇರಿ ಬೇರೆ ಬೇರೆ ರಾಜ್ಯಗಳಿಗೆ ಎಷ್ಟು ಇ-ಬಸ್‌ಗಳು ಸಿಗಲಿವೆ? ಪೂರ್ಣ ಮಾಹಿತಿ ಇಲ್ಲಿದೆ.
'ಪಿಎಂ ಇ-ಬಸ್ ಯೋಜನೆ'ಯನ್ನು 2023ರಲ್ಲಿ ಸಾರ್ವಜನಿಕ ಸಹಭಾಗಿತ್ವ ಮಾದರಿ (ಪಿಪಿಪಿ) ಅಡಿ ಜಾರಿಗೊಳಿಸಲಾಗಿದೆ. ನಗರ ಪ್ರದೇಶಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಸಂಚಾರ ಉತ್ತೇಜನ, ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಜಾರಿ ಮಾಡುವ ಉದ್ದೇಶದಿಂದ ಒಟ್ಟು 10,000 ಬಸ್‌ಗಳನ್ನು ನೀಡಲು ತೀರ್ಮಾನಿಸಲಾಯಿತು. ಗುರಿಯಂತೆ ಇದೀಗ ಕೇಂದ್ರವು ಕರ್ನಾಟಕಕ್ಕೆ 750 ಇ-ಬಸ್‌ಗಳನ್ನು ಮಂಜೂರು ಮಾಡಿದೆ. ಇದರಲ್ಲಿ ಮಹಾರಾಷ್ಟ್ರ ಸಿಂಹಪಾಲು ಹೊಂದಿದೆ.

ಮಹಾರಾಷ್ಟ್ರ ರಾಜ್ಯಕ್ಕೆ ಅತ್ಯಧಿಕ ಇ-ಬಸ್
ಉಳಿದಂತೆ ಕೇರಳ ರಾಜ್ಯಕ್ಕೆ 293, ಮಧ್ಯ ಪ್ರದೇಶ- 972, ಮಹಾರಾಷ್ಟ್ರ- 1609, ಅಸ್ಸಾಂ - 100,
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (UT) -45, ಆಂಧ್ರ ಪ್ರದೇಶ-1,050, ಅರುಣಾಚಲ ಪ್ರದೇಶ - 50, ಬಿಹಾರ -400, ಛತ್ತೀಸ್‌ಗಢ -240, ಗುಜರಾತ್ -750, ಗೋವಾ -50, ಹರಿಯಾಣ -450, ಹಿಮಾಚಲ ಪ್ರದೇಶ - 50, ಮಣಿಪುರ - 50, ಮೇಘಾಲಯ - 55, ಒಡಿಶಾ - 400, ಪಂಜಾಬ್ - 447, ರಾಜಸ್ಥಾನ - 1150, ಉತ್ತರಾಖಂಡ -137, ತೆಲಂಗಾಣ- 151, ಚಂಡೀಗಢ - 428, ಜಮ್ಮು ಮತ್ತು ಕಾಶ್ಮೀರ-200, ಲಡಾಖ್ - 48, ಪುದುಚೇರಿ- 75 ಹಾಗೂ ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು- 50 ಇ-ಬಸ್‌ಗಳ ವಿತರಣೆ ಮಾಡಲಾಗಿದೆ.
20,000 ಕೋಟಿ ರೂ. ಯೋಜನೆ
ಯೋಜನೆಯ ಪ್ರಕಾರ, ಯಾವೆಲ್ಲ ನಗರದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುತ್ತದೆಯೋ ಅಂತಹ ನಗರ, ಗುಡ್ಡಗಾಡು ಪ್ರದೇಶಗಳಲ್ಲಿ ಇ-ಬಸ್ ವಿತರಣೆಗೆ ಯೋಜಿಸಲಾಗಿದೆ. ಒಟ್ಟು 116 ನಗರಗಳು ಈ ಯೋಜನೆಯಡಿ ಇ-ಬಸ್‌ಗಳನ್ನು ಪಡೆದುಕೊಳ್ಳಲಿವೆ. ಒಟ್ಟು 10,000 ಬಸ್‌ಗಳ ವಿತರಣೆಗೆ ಪ್ಲ್ಯಾನ್ ಮಾಡಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರ 20,000 ಕೋಟಿ ರೂಪಾಯಿ ವ್ಯಯಿಸುತ್ತಿದೆ. ಸದ್ಯ ಹಲವು ಬಸ್‌ಗಳು ಮಂಜೂರು ಆಗಿದ್ದು, ಶೀಘ್ರವೇ ಆಯಾ ನಗರಗಳನ್ನು ತಲುಪಿ ಭರ್ಜರಿ ಚಾಲನೆ ಪಡೆಯಲಿವೆ. ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (CESL) ಸಂಸ್ಥೆ ಯೋಜನೆಯ ಅನುಷ್ಠಾನದ ಜವಾಬ್ದಾರಿ ವಹಿಸಿಕೊಂಡಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.












Click it and Unblock the Notifications