ಯುರೋಪ್ ದೇಶಗಳಲ್ಲಿ ಬಿಸಿಗಾಳಿಯ ಆರ್ಭಟ: 40 ಡಿಗ್ರಿ ತಾಪಮಾನಕ್ಕೆ ತತ್ತರಿಸಿದ ಜನ, 1300ಕ್ಕೂ ಹೆಚ್ಚು ಮಂದಿ ಬಲಿ
ಯುರೋಪ್ ಖಂಡದ ದೇಶಗಳಲ್ಲಿ ಈ ವರ್ಷದ ಬೇಸಿಗೆ ಕಾಲವು ಹಿಂದೆಂದೂ ಕಂಡರಿಯದಂತಹ ಭೀಕರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಸಾಮಾನ್ಯವಾಗಿ 20 ರಿಂದ 25 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಹೊಂದಿರುವ ಐರೋಪ್ಯ ರಾಷ್ಟ್ರಗಳಲ್ಲಿ ಇದೀಗ ಉಷ್ಣಾಂಶ ದಿಢೀರನೆ 40 ರಿಂದ 44 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ.
ಕಳೆದ ಎರಡು ವಾರಗಳಿಂದ ಬೀಸುತ್ತಿರುವ ಬಿಸಿ ಗಾಳಿಯ ಆರ್ಭಟಕ್ಕೆ ಯುರೋಪ್ ಜನತೆ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಬಿಸಿಲಿನ ತೀವ್ರತೆ ತಾಳಲಾರದೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದ್ದು, ಸಾವು ನೋವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.

ಫ್ರಾನ್ಸ್ ಸೇರಿ ಯುರೋಪ್‌ನಾದ್ಯಂತ 1300ಕ್ಕೂ ಹೆಚ್ಚು ಸಾವು
ತಾಪಮಾನದ ಏರಿಕೆಯು ಐರೋಪ್ಯ ದೇಶಗಳಲ್ಲಿ ದೊಡ್ಡ ಮಟ್ಟದ ಪ್ರಾಣಹಾನಿಗೆ ಕಾರಣವಾಗಿದೆ. ಜೂನ್ 21ರ ನಂತರ ಕೇವಲ ಫ್ರಾನ್ಸ್ ದೇಶವೊಂದರಲ್ಲೇ 1,000ಕ್ಕೂ ಹೆಚ್ಚು ಜನರು ಬಿಸಿಲಿನ ಬೇಗೆಗೆ ಬಲಿಯಾಗಿದ್ದಾರೆ. ಫ್ರಾನ್ಸ್ ಜೊತೆಗೆ ಯುರೋಪ್‌ನ ಇತರೆ ದೇಶಗಳ ಅಂಕಿ-ಅಂಶಗಳನ್ನು ಸೇರಿಸಿದರೆ ಒಟ್ಟು ಸಾವಿನ ಸಂಖ್ಯೆ 1,300 ದಾಟಿದೆ.
ಮೃತಪಟ್ಟವರಲ್ಲಿ ಬಹುಪಾಲು ಜನರು 65 ವರ್ಷ ಮೇಲ್ಪಟ್ಟ ವೃದ್ಧರಾಗಿದ್ದಾರೆ. ಸಾಮಾನ್ಯ ದಿನಗಳಿಗಿಂತ ಪ್ರಸ್ತುತ ವರದಿಯಾಗುತ್ತಿರುವ ಸಾವಿನ ಪ್ರಮಾಣವು ಬಹು ಅಧಿಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಇತಿಹಾಸದಲ್ಲಿಯೇ ಕಂಡುಕೇಳರಿಯದ ವಿಪತ್ತು ಎನ್ನಲಾಗುತ್ತಿದೆ.
ಕರಗುತ್ತಿರುವ ಹಿಮನದಿಗಳು
ಸ್ಕ್ಯಾಂಡಿನೇವಿಯಾ ಹಾಗೂ ಆಲ್ಪ್ಸ್ ಪರ್ವತ ಪ್ರದೇಶಗಳಲ್ಲೂ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಡಿ ದಾಟಿದೆ. ಡೆನ್ಮಾರ್ಕ್‌ನಲ್ಲಿ ಶನಿವಾರದಂದು ತನ್ನ ಇತಿಹಾಸದಲ್ಲೇ ಅತಿ ಹೆಚ್ಚು ಉಷ್ಣಾಂಶದ ದಿನವನ್ನು ದಾಖಲಿಸಿದೆ. ಇನ್ನೊಂದೆಡೆ, ವಿಪರೀತ ಬಿಸಿಲಿನಿಂದಾಗಿ ಸ್ವಿಟ್ಜರ್ಲೆಂಡ್‌ನ ಹಿಮನದಿಗಳು ಅತ್ಯಂತ ವೇಗವಾಗಿ ಕರಗಲು ಆರಂಭಿಸಿವೆ.
ಇದರಿಂದ ಮುಂಬರುವ ದಿನಗಳಲ್ಲಿ ಸಮುದ್ರದ ನೀರಿನ ಮಟ್ಟ ಏರಿಕೆಯಾಗುವ ಮತ್ತು ಪ್ರವಾಹಗಳು ಸೃಷ್ಟಿಯಾಗುವ ಭೀತಿ ಎದುರಾಗಿದೆ. ಇಟಲಿ ದೇಶದ ಪರಿಸ್ಥಿತಿ ಕೂಡ ಗಂಭೀರವಾಗಿದ್ದು, ಅಲ್ಲಿನ 18 ಪ್ರಮುಖ ನಗರಗಳಲ್ಲಿ ಈಗಾಗಲೇ 'ರೆಡ್ ಅಲರ್ಟ್' ಘೋಷಣೆ ಮಾಡಲಾಗಿದೆ.
ಪ್ಯಾರಿಸ್‌ನಲ್ಲಿ ಜನ ಬಿಸಿಲಿನಿಂದ ರಕ್ಷಣೆ ಪಡೆಯಲು ಫ್ಯಾನ್‌ಗಳ ಮೊರೆ ಹೋಗಿದ್ದು, ಮಾರುಕಟ್ಟೆಯಲ್ಲಿ ಫ್ಯಾನ್‌ಗಳ ಬೇಡಿಕೆಯಲ್ಲಿ ಭಾರಿ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಆಸ್ಪತ್ರೆಗಳಿಗೆ ಬರುತ್ತಿರುವ ತುರ್ತು ಕರೆಗಳ ಸಂಖ್ಯೆ ಶೇ. 80ರಷ್ಟು ಹೆಚ್ಚಾಗಿದೆ.
ಬರ್ಲಿನ್‌ನಲ್ಲಿ ಜಲಫಿರಂಗಿ ಬಳಕೆ ಹಾಗೂ ಅಣು ಸ್ಥಾವರ ಸ್ಥಗಿತ
ಬಿಸಿಲಿನ ವಿರುದ್ಧ ಹೋರಾಡಲು ಆಡಳಿತ ವ್ಯವಸ್ಥೆಗಳು ನಾನಾ ಕಸರತ್ತು ನಡೆಸುತ್ತಿವೆ. ಜರ್ಮನಿಯ ರಾಜಧಾನಿ ಬರ್ಲಿನ್‌ನಲ್ಲಿ ವಾತಾವರಣವನ್ನು ತಂಪುಗೊಳಿಸಲು ಜಲಫಿರಂಗಿಗಳನ್ನು ಬಳಸಲಾಗುತ್ತಿದೆ. ಸಾಮಾನ್ಯವಾಗಿ ಪ್ರತಿಭಟನೆ ವೇಳೆ ಜನರನ್ನು ಚದುರಿಸಲು ಬಳಸುವ ಈ ಜಲಫಿರಂಗಿಗಳಿಂದ ರಸ್ತೆಗಳಿಗೆ ನೀರು ಸಿಂಪಡಿಸಲಾಗುತ್ತಿದೆ.
ಮತ್ತೊಂದೆಡೆ, ವಿದ್ಯುತ್ ಉತ್ಪಾದನೆಯ ಮೇಲೂ ಬಿಸಿಲು ನೇರ ಪರಿಣಾಮ ಬೀರಿದೆ. ಅಣು ವಿದ್ಯುತ್ ಸ್ಥಾವರಗಳ ರಿಯಾಕ್ಟರ್‌ಗಳನ್ನು ತಣ್ಣಗಾಗಿಸಲು ನದಿ ನೀರನ್ನು ಬಳಸಲಾಗುತ್ತದೆ. ಆದರೆ ಸ್ವಿಟ್ಜರ್ಲೆಂಡ್‌ನ ಆರೆ ನದಿಯ ನೀರು ಬಿಸಿಲಿಗೆ ವಿಪರೀತ ಬಿಸಿಯಾಗಿದೆ. ಹೀಗಾಗಿ ಯುರೋಪಿನ ಅತ್ಯಂತ ಹಳೆಯ ಅಣು ವಿದ್ಯುತ್ ಸ್ಥಾವರದ ಕಾರ್ಯಾಚರಣೆಯನ್ನು ಶುಕ್ರವಾರದಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಕೇವಲ 33 ಡಿಗ್ರಿಗೆ ಕಂಗಾಲಾದ ಜನ: ಭಾರತೀಯ ಯುವತಿಯ ಹೇಳಿಕೆ
ಯುರೋಪ್ ಜನತೆ ವಿಪರೀತ ಬಿಸಿಲು ಎಂದು ಒದ್ದಾಡುತ್ತಿರುವ ಬಗ್ಗೆ ಜರ್ಮನಿಯಲ್ಲಿರುವ ಭಾರತೀಯ ಯುವತಿಯೊಬ್ಬರು ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ. "ನಾನು ಪ್ರಸ್ತುತ ಜರ್ಮನಿಯಲ್ಲಿದ್ದೇನೆ. ಇಲ್ಲಿ ಕೇವಲ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಆದರೆ ಬಿಸಿಲಿನ ಶಖೆಯನ್ನು ತಡೆಯಲಾಗುತ್ತಿಲ್ಲ. ಈ ಬಿಸಿಲಿಗೆ ಜನ ಹೊರಗೇ ಬರುತ್ತಿಲ್ಲ. ಅವರಿಗೂ ಈ ತಾಪಮಾನವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ನಮ್ಮ ಭಾರತದಲ್ಲಿ ನಾವು 40 ರಿಂದ 45 ಡಿಗ್ರಿ ಸೆಲ್ಸಿಯಸ್ ಬಿಸಿಲನ್ನು ಅತ್ಯಂತ ಸುಲಭವಾಗಿ ಎದುರಿಸುತ್ತೇವೆ," ಎಂದು ಆಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications