ಅಯೋಧ್ಯೆ ರಾಮ ಮಂದಿರ ಕೋಟ್ಯಾಂತರ ದೇಣಿಗೆ ಹಣ ದುರ್ಬಳಕೆ?: ಬಿಜೆಪಿಯ ಪ್ರಭು ಚೌಹಾಣ್‌ಗೆ SIT ಸಂಕಷ್ಟ
ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ವೇಳೆ ದೇವರ ಹೆಸರಿನಲ್ಲಿ ಸಂಗ್ರಹಿಸಲಾದ ಕೋಟ್ಯಂತರ ರೂಪಾಯಿ ದೇಣಿಗೆ ಹಣವನ್ನು ಬಿಜೆಪಿ ಹಿರಿಯ ನಾಯಕ, ಮಾಜಿ ಸಚಿವ ಪ್ರಭು ಚೌಹಾಣ್ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅವರ ವಿರುದ್ಧ ತನಿಖೆಗೆ ಆಗ್ರಹಿಸಿ ಯುಪಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಅಧಿಕೃತವಾಗಿ ದೂರು ಸಲ್ಲಿಕೆಯಾಗಿದ್ದು, ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಬೀದರ್ ಜಿಲ್ಲೆಯ ಔರಾದ್ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಪ್ರಭು ಚೌಹಾಣ್ ಗೆ ಹೊಸ ಸಂಕಷ್ಟ ಎದುರಾಗಿದೆ. ಜಿಲ್ಲೆಯ ಔರಾದ್ ತಾಲೂಕಿನ ನಿವಾಸಿಯಾದ ದೀಪಕ್ ಅವರು ಎಸ್‌ಐಟಿ ತನಿಖೆಗಾಗಿ ದೂರು ನೀಡಿದ್ದಾರೆ. ಎಸ್‌ಐಟಿ ಮುಖ್ಯಸ್ಥರಾಗಿರುವ ಹಿರಿಯ ಅಧಿಕಾರಿ ವಿಜಯ್ ವಿಶ್ವಾಸ್ ಪಂತ್ ಲಿಖಿತ ದೂರು ಸಲ್ಲಿಕೆ ಆಗಿದೆ. ಶೀಘ್ರವೇ ಉತ್ತರ ಪ್ರದೇಶದ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆ ನಡೆಸಲಿದೆ. ಈ ವಿಚಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಹೊಸ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ.

ಅಪಾರ ನಗದು ಸಂಗ್ರಹಣೆ
ದೂರಿನಲ್ಲಿ ಬಿಜೆಪಿ ಶಾಸಕ ಪ್ರಭು ಚೌಹಾಣ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸ್ಥಳೀಯ ಪ್ರಮುಖ ನಾಯಕ ಗೋಪಾಲ್ ಅವರು ರಾಮಮಂದಿರದ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದರು. ಗುತ್ತಿಗೆದಾರರು ಹಾಗೂ ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಭಾರಿ ಪ್ರಮಾಣದ ನಗದು ಹಣ ಸಂಗ್ರಹಿಸಿದ್ದಾಗಿ ಅವರು ವಿವರಿಸಿದ್ದಾರೆ. ಸಂಗ್ರಹಿಸಿದ ಆ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಅವರು ರೋಪಿಸಿದ್ದಾರೆ.
ರಿಯಲ್ ಎಸ್ಟೇಟ್ ಹೂಡಿಕೆ ಆರೋಪ
ಪ್ರಭು ಚೌಹಾಣ್ ಸೇರಿ ಇಬ್ಬರ ವಿರುದ್ಧ ಸಲ್ಲಿಕೆಯಾದ ದೂರಿನ ಪ್ರಕಾರ, ಆರೋಪಿಗಳು ಸ್ಥಳೀಯ ಗುತ್ತಿಗೆದಾರರಿಂದ ಯಾವುದೇ ಅಧಿಕೃತ ರಸೀದಿ ನೀಡದೆ 5 ಲಕ್ಷ ರೂ. ನಗದು ರೂಪದಲ್ಲಿ ನೇರವಾಗಿ ಸಂಗ್ರಹಿಸಿದ್ದರು. ನಂತರ ಹಲವು ಮೂಲಗಳಿಂದ, ಪ್ರಭಾವ ಬಳಸಿ ಕೋಟ್ಯಾಂತರ ರೂಪಾಯಿ ದೇಣಿಗೆ ಪಡೆದಿದ್ದರು. ಈ ಎಲ್ಲ ನಿಧಿಯನ್ನು ಉತ್ತರ ಪ್ರದೇಶದ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಖಾತೆಗೆ ಜಮಾ ಮಾಡಿಲ್ಲ. ಬದಲಾಗಿ ಸ್ವಂತ ಲಾಭಕೋಸ್ಕರ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.
ಎಸ್‌ಐಟಿ ಮುಂದೆ ಸಾಕ್ಷಿ, ಆಧಾರ ಸಲ್ಲಿಕೆ ಶೀಘ್ರ
ಇದಷ್ಟೇ ಅಲ್ಲದೇ ದೇಣಿಗೆ ಹಣದ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದ ಸೂಕ್ತ ಸಾಕ್ಷ್ಯಾಧಾರಗಳು ಹಾಗೂ ಪ್ರಮುಖ ಬ್ಯಾಂಕ್ ವಹಿವಾಟಿನ ದಾಖಲೆಗಳು ತಮ್ಮ ಬಳಿ ಸುರಕ್ಷಿತ ಇವೆ ಎಂದು ದೀಪಕ್ ತಿಳಿಸಿದ್ದಾರೆ. ಎಸ್‌ಐಟಿ ತನಿಖೆಗೆ ಕರೆದಾಗ ಎಲ್ಲ ದಾಖಲೆಗಳನ್ನು ನೀಡುವುದಾಗಿ ಅವರು ತಿಳಿಸಿದ್ದಾರೆ. ರಾಮಮಂದಿರ ಹೆಸರಿನಲ್ಲಿ ನಡೆದ ಈ ಬೃಹತ್ ನಿಧಿ ಸಂಗ್ರಹಣೆ ಹಾಗೂ ಅದರ ದುರ್ಬಳಕೆಯ ಬಗ್ಗೆ ಪಾರದರ್ಶಕವಾದ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇನ್ನೂ ತಮ್ಮ ಮೇಲಿನ ಆರೋಪಗಳು, ಸತ್ಯಾಸತ್ಯತೆ ಕುರಿತು ಮಾಜಿ ಸಚಿವ ಪ್ರಭು ಚೌಹಾಣ್ ಅಥವಾ ಆರ್‌ಎಸ್‌ಎಸ್ ಮುಖಂಡ ಗೋಪಾಲ್ ಅವರು ಯಾವುದೇ ಅಧಿಕೃತ ಸ್ಪಷ್ಟನೆ, ಹೇಳಿಕೆ ನೀಡಲು ಮುಂದಾಗಿಲ್ಲ. ತನಿಖೆಗೂ ಮುನ್ನ ಉತ್ತರ ಪ್ರದೇಶದ ವಿಶೇಷ ತನಿಖಾ ತಂಡವು ದೂರಿನ ಕುರಿತು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ಪ್ರಾಥಮಿಕ ತನಿಖೆಯ ವರದಿ ಬಂದ ಬಳಿಕವೇ ತನಿಖೆಗೆ ನಡೆಸುವ ಸಾಧ್ಯತೆ ಇದೆ. ಶೀಘ್ರವೇ ಆರೋಪ ಪ್ರಕರಣ ಸ್ಪಷ್ಟ ಚಿತ್ರಣ ಸಿಗಲಿದೆ.













Click it and Unblock the Notifications