Video: ಬೆಂಗಳೂರು ಆಟೋ ಡ್ರೈವರ್ "ಅಂಕಲ್' AI ಜ್ಞಾನಕ್ಕೆ ನೆಟ್ಟಿಗರು ಫಿದಾ: ಕನ್ನಡದಲ್ಲೇ ಪ್ರತಿಕ್ರಿಯಿಸಿದ OpenAI
ಬೆಂಗಳೂರು: ಚಾಟ್ ಜಿಪಿಜಿ, ಗೂಗಲ್ ಜಿಮಿನೈ ಸೇರಿದಂತೆ ಅನೇಕ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನಗಳ ಪ್ರಭಾವದ ಯುಗದಲ್ಲಿದ್ದೇವೆ. ಈ ಎಐ ಟೂಲ್‌ಗಳು ಕೇವಲ ಐಟಿ ನೌಕರರಿಗೆ, ದೊಡ್ಡ ದೊಡ್ಡ ಕಂಪನಿಗಳು, ವಲಯಕ್ಕೆ ಮಾತ್ರವೇ ಸೀಮಿತವಲ್ಲ. ಜನಸಾಮಾನ್ಯರು ನಿತ್ಯದ ಜೀವನದಲ್ಲಿ ಬಳಸಬಹುದು ಎಂಬುದಕ್ಕೆ ಬೆಂಗಳೂರಿನ ಆಟೋ ರಿಕ್ಷಾ ಚಾಲಕರೊಬ್ಬರು (ಡ್ರೈವರ್ ಅಂಕಲ್) ಸಾಕ್ಷಿಯಾಗಿದ್ದಾರೆ. ಇವರ ಎಐ ಬಳಕೆ ನೋಡಿ ಆಶ್ಚರ್ಯಗೊಂಡ OpenAi ಸಹಿತ ಕನ್ನಡದಲ್ಲೇ ಪ್ರತಿಕ್ರಿಯಿಸಿದ್ದು ಮತ್ತೊಂದು ವಿಶೇಷ.
ಜನರ ದಿನನಿತ್ಯದ ಬದುಕಿನಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಪ್ರಮುಖ ಭಾಗವೇ ಆಗಲಿದೆ ಎಂಬ ಮಾತಿದೆ. ಅಷ್ಟರ ಮಟ್ಟಿಗಿನ ತಂತ್ರಜ್ಞಾನ ಅಳವಡಿಕೆ, ಒಗ್ಗಿಕೊಳ್ಳುವ ಪ್ರವೃತ್ತಿ ದಿನೇ ದಿನೇ ಹೆಚ್ಚಾಗುತ್ತಿದೆ. ಜನಸಾಮಾನ್ಯ ಜನರ ಜೀವನದಲ್ಲೂ ಎಐ ಎಷ್ಟು ಸುಲಭವಾಗಿ ಹಾಸುಹೊಕ್ಕಾಗಬಲ್ಲದು ಎಂಬುದಕ್ಕೆ ಬೆಂಗಳೂರಿನ ಆಟೋ ಚಾಲಕರೊಬ್ಬರ ವೈರಲ್ ವಿಡಿಯೋ ಸಾಕ್ಷಿಯಾಗಿದೆ.

ಆಟೋ ಚಾಲಕನ ಎಐ ಬಳಕೆ, ವಿಶ್ಲೇಷಣೆ ವಿಡಿಯೋ ವೈರಲ್
ಸುಮಾರು 50 ವರ್ಷ ದಾಟಿದ ಆಟೋ ಚಾಲಕ ಚಾಟ್‌ಜಿಪಿಟಿ (ChatGPT) ಸಹಾಯದಿಂದ ಕನ್ನಡದಲ್ಲೇ ಜ್ಞಾನಾರ್ಜನೆ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ತಾವು ಹೇಗೆಲ್ಲ ಈ ಎಐ ಟೂಲ್ ಬಳಸುತ್ತೇನೆ ಎಂದು ಹೇಳಿರುವ ವಿಡಿಯೋವನ್ನು ಕಂಟೆಂಟ್ ಕ್ರಿಯೇಟರ್ ಗಗನ್ ಸಾಯಿಪ್ರಸಾದ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಎಐ ಟೂಲ್ ಕುರಿತು ಆಟೋ ಚಾಲಕ ಹೇಳುವ ವಿಶ್ಲೇಷಣಾತ್ಮಕ ವಿಡಿಯೋ ನೋಡಿದ ಓಪನ್‌ಎಐ (OpenAI) ಸಂಸ್ಥೆಯು ಆಶ್ಚರ್ಯಗೊಂಡು ಕನ್ನಡದಲ್ಲೇ ವಿಡಿಯೋಗೆ ಪ್ರತಿಕ್ರಿಯಿಸಿದೆ.
ನಿತ್ಯ ಎಐ ಜೊತೆ ಕನ್ನಡದಲ್ಲಿ ಸಂಭಾಷಣೆ: ಚಾಲಕ
ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಚಾಟ್ ಜಿಪಿಟಿಯನ್ನು ಆಟೋ ಚಾಲಕರು ಪ್ರತಿದಿನವೂ ಹೇಗೆ ಬಳಸಿಕೊಳ್ಳುತ್ತಾರೆ. ನಿತ್ಯ ಏನೆಲ್ಲ ಕಲಿಯುತ್ತಾರೆ. ಜೀವನದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಚಾಟ್ ಜಿಪಿಟಿಯನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಸೊಗಸಾಗಿ ವಿವರಿಸಿದ್ದಾರೆ. 'ನನಗೆ ಬೇಕಾದ ಪ್ರಶ್ನೆಗಳನ್ನು ಮೊಬೈಲ್‌ನಲ್ಲಿ ಇಂಗ್ಲಿಷ್‌ನಲ್ಲಿ ಟೈಪ್ ಮಾಡುತ್ತೇನೆ. ಅದಕ್ಕೆ ಮುಂದೆ ಕನ್ನಡ ಅಂತ ಸೇರಿಸುತ್ತದೆ. ಆದರೆ ಚಾಜ್ ಜಿಪಿಟಿ ಕನ್ನಡದಲ್ಲೇ ಉತ್ತರಿಸುತ್ತದೆ. ನಾನು ನಾಲ್ಕು ತಿಂಗಳ ಹಿಂದೆ ಮಾತನಾಡಿದ ಸಂಭಾಷಣೆಗಳನ್ನು ನೆನಪಿಟ್ಟುಕೊಂಡು ಉತ್ತರಿಸುತ್ತದೆ. ಅದು ತಮಗೆ ಇಷ್ಟವಾಗಿದೆ ಎಂದು ಚಾಲಕ ಚಾಜ್‌ಜಿಪಿಟಿ ಸಾಮರ್ಥ್ಯ ಶ್ಲಾಘಿಸುತ್ತಾರೆ.
ಇನ್ನೂ ಗಗನ್ ಅವರು ಇದರಲ್ಲಿ ವಾಯ್ಸ್ ವೈಶಿಷ್ಟ್ಯವಿದೆ. ಅದನ್ನು ನೀವು ಬಳಸಿಯೂ ಸಂಭಾಷಣೆ ನಡೆಸಬಹುದೆಂದು ಕೇಳಿದಾಗ ಚಾಲಕ ಹೌದಾ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾನು ಟೈಪ್ ಮಾಡುತ್ತೇನೆ. ನನ್ನೊಂದಿಗೆ ಕನ್ನಡದಲ್ಲಿ ಎಐ ಮಾತನಾಡುತ್ತದೆ ಎಂದಿರುವ ಅವರು ಈವರೆಗೂ ವಾಯ್ಸ್ ಬಳಸಿಲ್ಲ ಎನ್ನುತ್ತಾರೆ. ಪ್ರಯಾಣಿಕ ಗಗನ್ ಮತ್ತು ಎಐ ಬಳಸುವ ಆಟೋ ರಿಕ್ಷಾ ಚಾಲಕರ ನಡುವಿನ ವಿಡಿಯೋ ಸಖರ್ ವೈರಲ್ ಆಗಿದೆ.
ತಂತ್ರಜ್ಞಾನದ ಮಿತಿಗಳ ವಿಶ್ಲೇಷಣೆ ಮತ್ತು ಪ್ರಶಂಸೆ
ಎಐ ಕುರಿತು ಇವರಿಬ್ಬರ ನಡುವಿನ ಸಂಭಾಷಣೆ ಇಲ್ಲಿಗೆ ನಿಲ್ಲುವುದಿಲ್ಲ. ಚಾಟ್ ಜಿಪಿಟಿ ಹೊಂದಿರುವ ತಾಂತ್ರಿಕ ಮಿತಿಗಳನ್ನು ಸಹ ಚಾಲಕ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಜ್ಯೋತಿಷ್ಯ ಹಾಗೂ ರಾಶಿ ಭವಿಷ್ಯದಂತಹ ಕ್ಲಿಷ್ಟಕರ ವಿಷಯಗಳ ಬಗ್ಗೆ ಚಾಟ್‌ಜಿಪಿಟಿ ಮಾಹಿತಿ ನೀಡುತ್ತದೆ. ಕೆಲವೊಮ್ಮೆ ಅದು ಅಪೂರ್ಣವಾಗಿರುತ್ತದೆ. ಪೂರ್ತಿ ಮಾಹಿತಿ ಇರುವುದಿಲ್ಲ. ನಾನು ಕೆಪಿ ಅಸ್ಟ್ರಾಲಜಿ ಕಲಿತಿದ್ದು, ಅದಕ್ಕೆ ಈ ಬಗ್ಗೆ ಗೊತ್ತಿಲ್ಲ ಎಂದು ತಿಳಿಸುತ್ತಾರೆ. ನಾವು ನೀಡಿದ್ದನ್ನು (ಡೇಟಾ) ಅದು ನಮಗೆ ಪ್ರಶ್ನೆ ಕೇಳಿದಾಗ ನೀಡುತ್ತದೆ. ಕೃತಕ ಬುದ್ಧಿಮತ್ತೆ ಇನ್ನಷ್ಟು ಸುಧಾರಣೆ ಆಗಬೇಕು ಎಂದು ಅವರು ಹೇಳುವುದು ನೆಟ್ಟಿಗರ ಮೆಚ್ಚುಗೆ ಪಾತ್ರವಾಗಿದೆ.
ವಿಡಿಯೋಗೆ ಕನ್ನಡದಲ್ಲೇ 'ಓಪನ್ ಎಐ' ಪ್ರತಿಕ್ರಿಯೆ
ಇಂದಿನ ಎಐ ಕಾಲದಲ್ಲಿ ಆಟೋ ಚಾಲಕರೊಬ್ಬರಿಗೆ ತಂತ್ರಜ್ಞಾನ ಬಗ್ಗೆ ಇರುವ ಆಸಕ್ತಿ, ಆಳ ಜ್ಞಾನ ಕಂಡು ನೆಟ್ಟಿಗರು ಶ್ಲಾಘಿಸಿದ್ದಾರೆ. 'ತಂತ್ರಜ್ಞಾನ ಅಳವಡಿಸಿಕೊಳ್ಳಲು ಯಾವುದೇ ನಿರ್ದಿಷ್ಟ ವೃತ್ತಿ ಅಥವಾ ಸಾಮಾಜಿಕ ಹಿನ್ನೆಲೆ ಬೇಕಾಗಿಲ್ಲ. ಎಂಬುದನ್ನು ಈ ವಿಡಿಯೋ ಸಾಬೀತುಪಡಿಸಿದೆ ಎಂದಿದ್ದಾರೆ. ಇದೆಲ್ಲ ವೀಕ್ಷಿಸಿರುವ ಒಪನ್‌ಎಐ ಸಂಸ್ಥೆಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದಲೇ ಪ್ರತಿಕ್ರಿಯೆ ಬಂದಿದೆ. 'ಆಟೋ ಚಾಲಕರ ಈ ಅಮೂಲ್ಯ ಅನುಭವಕ್ಕೆ ಕೃತಜ್ಞತೆ ಸಲ್ಲಿಸಿದೆ.' ಜೊತೆಗೆ ಕನ್ನಡದಲ್ಲೇ ಆಪ್ತವಾಗಿ ಕಾಮೆಂಟ್ ಮಾಡಿದೆ.
ಯಾವ ತರಬೇತಿ ಇಲ್ಲದೆ ಕೇವಲ ಸ್ವಯಂ ಆಸಕ್ತಿ ವಹಿಸಿ ಚಾಲಕರು ಆಧುನಿಕ ತಂತ್ರಜ್ಞಾನ ಬಳಸಿಕೊಂಡಿದ್ದಾರೆ. ಈ ಮೂಲಕ ಪ್ರತಿಯೊಬ್ಬರು ಹೇಗೆ ತಂತ್ರಜ್ಞಾನ ಬಳಸಿಕೊಳ್ಳಬಹುದು ಎಂಬುದಕ್ಕೆ ಈ ಆಟೋ ಚಾಲಕ ಅತ್ಯುತ್ತಮ ಉದಾಹರಣೆ ಆಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.














Click it and Unblock the Notifications