ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮಕ್ಕೆ ಭಾನುವಾರ ಪ್ರವಾಸಿಗರಿಗೆ ನೋ ಎಂಟ್ರಿ:ಭರ್ಜರಿ ಆದಾಯವಿದ್ದರೂ ನಿಷೇಧ ಹೇರುವುದಕ್ಕೆ ಕಾರಣ?
ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಮೇಘಾಲಯದ 'ಮಾವ್ಲಿನ್ನಾಂಗ್' ಗ್ರಾಮ. ಈ ಗ್ರಾಮ ಕಾಪಾಡಿಕೊಳ್ಳುವ ಸ್ವಚ್ಛತೆಯ ಕಾರಣದಿಂದಲೇ ಇದು ಜಗತ್ಪಸಿದ್ದಿ ಪಡೆದಿದೆ. ಇದೀಗ ಈ ಗ್ರಾಮ ತೆಗೆದುಕೊಂಡ ಕಠಿಣ ನಿರ್ಧಾರದಿಂದಾಗಿ ಮತ್ತೆ ಸುದ್ದಿಯಲ್ಲಿದೆ. ಈಗ ಪ್ರತೀ ಭಾನುವಾರ ಪ್ರವಾಸಿಗರಿಗೆ ಈ ಗ್ರಾಮಕ್ಕೆ ಪ್ರವೇಶ ಇಲ್ಲ. ಕಳೆದ ಜನವರಿ 2026ರಿಂದ ಭಾನುವಾರದದಂದು ಹೊರಗಿನವರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಚಿಕ್ಕ ಮಕ್ಕಳಿಎ ಸ್ವಚ್ಛತೆಯ ಪಾಠ:
ಭಾರತದ ಮೇಘಾಲಯ ರಾಜ್ಯದ ಬಾಂಗ್ಲಾದೇಶದ ಗಡಿಯಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಮಾವ್ಲಿನ್ನಾಂಗನ್ನು 2003 ರಲ್ಲಿ ಡಿಸ್ಕವರ್ ಇಂಡಿಯಾ ಏಷ್ಯಾದ ಅತ್ಯಂತ ಸ್ವಚ್ಛವಾದ ಗ್ರಾಮ ಎಂದು ಘೋಷಿಸಿತು. ನಂತರ ಈ ಗ್ರಾಮದ ಜನಪ್ರಿಯತೆ ಹೆಚ್ಚಾಯಿತು. ಮಾವ್ಲಿನ್ನಾಂಗ್‌ನಲ್ಲಿ, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಅಚ್ಚುಕಟ್ಟಾಗಿರಲು ಕಲಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ಶಾಲೆಗೆ ತೆರಲುವ ಮುನ್ನ ಅಲ್ಲಲ್ಲಿ ಬಿದ್ದಿರುವ ಎಲೆಗಳನು ತೆಗೆಯುತ್ತಾರೆ. ಬೀದಿ ಬೀದಿಗಳನ್ನು ಗುಡಿಸಿ ಸ್ವಚ್ಛ ಮಾಡುತ್ತಾರೆ.

ಹೆಚ್ಚಾದ ಪ್ರವಾಸೋದ್ಯಮ:
2014 ರಲ್ಲಿ ಭಾರತ ರಾಷ್ಟ್ರೀಯ ಸ್ವಚ್ಛ ಭಾರತ ಮಿಷನ್ ಅಭಿಯಾನವನ್ನು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ರೇಡಿಯೋ ಭಾಷಣದ ಮೂಲಕ ಈ ಹಳ್ಳಿಯತ್ತ ಹೆಚ್ಚಿನ ಗಮನ ಸೆಳೆದರು. ಇದು ಈ ಗ್ರಾಮದ ಬಗ್ಗೆ ಜನರಿಗೆ ಹೆಚ್ಚು ಹೆಚ್ಚು ಆಸಕ್ತಿ ಮೂಡಲು ಕಾರಣವಾಯಿತು. ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚಾಯಿತು. ಇಲ್ಲಿನ ನಿವಾಸಿಗಳು ಕೃಷಿ ಕೆಲಸದಿಂದ ಪ್ರವಾಸೋದ್ಯಮಕ್ಕೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅತಿಥಿಗೃಹಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆದರು. ಸ್ಮಾರಕಗಳು ಮತ್ತು ಚಹಾ ಅಂಗಡಿಗಳಿಂದ ಸುತ್ತುವರೆದಿರುವ ಕಾರ್ ಪಾರ್ಕ್ ಅನ್ನು ನಿರ್ಮಿಸಿದರು.
ಹರಿದು ಬಂತು ಭಾರೀ ಆದಾಯ:
ಪ್ರವಾಸೋದ್ಯಮದಿಂದ ಈ ಹಳ್ಳಿಯ ಅದೃಷ್ಟವೇ ಬದಲಾಗಿದೆ. ಆದರೂ ಈಗ ವಾರಕ್ಕೊಮ್ಮೆ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಪ್ರವಾಸಿಗರಿಂದ ಇಲ್ಲಿಗೆ ಬರುವ ಆದಾಯಕ್ಕೆ ಪೆಟ್ಟು ಬೀಳುತ್ತದೆ. ಆದರೂ ಇಲ್ಲಿನ ನಿವಾಸಿಗಳು ಈ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
ನಿರ್ಬಂಧದ ಹಿಂದಿನ ಕಾರಣ ?:
ಸುಮಾರು 600 ಜನಸಂಖ್ಯೆ ಹೊಂದಿರುವ ಈ ಪುಟ್ಟ ಗ್ರಾಮಕ್ಕೆ, ಪ್ರತಿ ಶನಿವಾರ ಸುಮಾರು 1,000ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಗ್ರಾಮದ ಸಾಂಸ್ಕೃತಿಕ ಗುರುತನ್ನು ಉಳಿಸಿಕೊಳ್ಳಲು ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಸಮಯ ಮೀಸಲಿಡಲು ಗ್ರಾಮ ಸಮಿತಿಯು ಈ ಕಠಿಣ ಕ್ರಮ ಕೈಗೊಂಡಿದೆ. ವಾರದ ಒಂದು ದಿನವಾದರೂ ನಿಜವಾದ ಹಳ್ಳಿ ಜೀವನವನ್ನು ಆನಂದಿಸುವ ಸಲುವಾಗಿ ಈ ದೃಢ ನಿರ್ಧಾರಕ್ಕೆ ಬಂದಿದ್ದಾರೆ.
ಧಾರ್ಮಿಕ ಬದ್ಧತೆ:
ಗ್ರಾಮದ ಬಹುತೇಕ ಜನರು ಕ್ರಿಶ್ಚಿಯನ್ ಧರ್ಮೀಯರು. ಪ್ರವಾಸಿಗರಿಂದಾಗಿ ಭಾನುವಾರದ ಪ್ರಾರ್ಥನೆಗೆ ಅಡಚಣೆಯಾಗುತ್ತಿತ್ತು. ಹಾಗಾಗಿ ಭಾನುವಾರದ ದಿನ ಪ್ರವಾಸಿಗರ ಭೇಟಿಯನ್ನು ತಡೆಯುವ ಮೂಲಕ ಗ್ರಾಮಸ್ಥರು ತಮ್ಮ ನಂಬಿಕೆಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ.
ಸ್ವಚ್ಛತೆಯ ಸಂಸ್ಕೃತಿ:
2003ರಲ್ಲಿ 'ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ' ಎಂದು ಗುರುತಿಸಲ್ಪಟ್ಟಾಗಿನಿಂದಲೂ ಇಲ್ಲಿನ ಜನರು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಆದರೆ ಪ್ರವಾಸಿಗರ ಸಂಖ್ಯೆ ಮಿತಿಮೀರಿದಾಗ, ಕೆಲವರು ಕಸ ಎಸೆಯುವ ಮೂಲಕ ಸ್ವಚ್ಛತೆಗೆ ಧಕ್ಕೆ ತರುತ್ತಿದ್ದರು. ಅಲ್ಲಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಬಿದ್ದಿರುವ ವಿಡಿಯೋ ಕೂಡಾ ಹಿಂದೊಮ್ಮೆ ವೈರಲ್ ಆಗಿತ್ತು. ಈ ಸಮಸ್ಯೆಗೆ ಕಡಿವಾಣ ಹಾಕಲು ವಾರದ ಒಂದು ದಿನದ ವಿರಾಮ ಸಹಕಾರಿಯಾಗಲಿದೆ.
ನೆಮ್ಮದಿಯೇ ಆಯ್ಕೆ:
ಪ್ರವಾಸೋದ್ಯಮದಿಂದ ಇಲ್ಲಿನ ಜನರಿಗೆ ಆರ್ಥಿಕವಾಗಿ ಲಾಭವಾಗಿದೆ ನಿಜ. ಆದರೆ ಇವರು ಆದಾಯದ ಜೊತೆಗೆ ಜೀವನದ ನೆಮ್ಮದಿಗೂ ಆದ್ಯತೆ ನೀಡಿದ್ದಾರೆ. ಅದೇ ನೆಮ್ಮದಿಗಾಗಿ ಒಂದು ದಿನ ವಿರಾಮದ ನಿರ್ಧಾರಕ್ಕೆ ಬಂದಿದ್ದಾರೆ. ಭಾನುವಾರ ಹೊರಗಿನ ಪ್ರವಾಸಿಗರಿಗೆ ಪ್ರವೇಶವಿಲ್ಲವಾದರೂ, ಮೊದಲೇ ರೂಮ್ ಬುಕ್ ಮಾಡಿಕೊಂಡಿರುವ ಪ್ರವಾಸಿಗರಿಗೆ ವಿನಾಯಿತಿ ನೀಡಲಾಗಿದೆ.
ಪ್ರವಾಸಿಗರು ಹೇಳಿದ್ದೇನು?:
ಕೆಲವು ಪ್ರವಾಸಿಗರು ಈ ನಿರ್ಬಂಧದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೂ, ಹೆಚ್ಚಿನವರು ಗ್ರಾಮಸ್ಥರ ಶಿಸ್ತು ಮತ್ತು ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತಿದ್ದಾರೆ. ಈ ಗ್ರಾಮದ ಸ್ವಚ್ಛತೆ ಮತ್ತು ಶಿಸ್ತು ಭಾರತದ ಇತರ ಭಾಗಗಳಿಗೆ ಮಾದರಿಯಾಗಿದೆ. ಹೀಗಾಗಿ ಅವರ ಸಂಪ್ರದಾಯವನ್ನು ನಾವು ಗೌರವಿಸಬೇಕು ಎನ್ನುವುದು ಪ್ರವಾಸಿಗರು ಅಭಿಪ್ರಾಯ.
ಒಟ್ಟಾರೆಯಾಗಿ, ವಾರದ ಆರು ದಿನ ಪ್ರವಾಸಿಗರಿಗೆ ಆತಿಥ್ಯ ನೀಡುವ ಮಾವ್ಲಿನ್ನಾಂಗ್, ಏಳನೇ ದಿನ ತನ್ನದೇ ಆದ ನೆಮ್ಮದಿಯ ಜೀವನವನ್ನು ನಡೆಸಲು ನಿರ್ಧರಿಸುವ ಮೂಲಕ ಪ್ರವಾಸೋದ್ಯಮ ಮತ್ತು ಸಂಸ್ಕೃತಿಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುತ್ತಿದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications