ಪ್ರತಿ ದಿನ ಭಾರತದಲ್ಲಿ ಮೊದಲ ಬೆಳಕು ಬೀಳುವುದು ಈ ಹಳ್ಳಿಯಲ್ಲೇ; ಇಲ್ಲಿನ ದೃಶ್ಯ ಸ್ವರ್ಗದಂತಿದೆ
ಭಾರತದ ಬಹುತೇಕ ನಗರಗಳು ಇನ್ನೂ ನಿದ್ರೆಯಲ್ಲಿರುವಾಗಲೇ ಈಶಾನ್ಯ ಭಾರತದ ಒಂದು ಪುಟ್ಟ ಹಳ್ಳಿ ಹೊಸ ದಿನವನ್ನು ಸ್ವಾಗತಿಸುತ್ತದೆ. ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ, ಭಾರತ-ಚೀನಾ-ಮ್ಯಾನ್ಮಾರ್ ಗಡಿಗಳು ಸೇರುವ ಪ್ರದೇಶದ ಸಮೀಪ ಇರುವ ಡಾಂಗ್ (Dong) ಹಳ್ಳಿ ದೇಶದಲ್ಲಿ ಮೊದಲ ಸೂರ್ಯಕಿರಣ ಬೀಳುವ ಜನವಸತಿ ಪ್ರದೇಶವೆಂದು ಪ್ರಸಿದ್ಧವಾಗಿದೆ.
ಭಾರತವು ಸುಮಾರು 30 ಡಿಗ್ರಿ ರೇಖಾಂಶಗಳಷ್ಟು ವಿಸ್ತಾರ ಹೊಂದಿರುವುದರಿಂದ, ಮುಂಬೈ ಅಥವಾ ದೆಹಲಿಯಲ್ಲಿ ಸೂರ್ಯೋದಯವಾಗುವ ವೇಳೆಗೆ ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಸುಮಾರು ಎರಡು ಗಂಟೆಗಳ ಮುಂಚೆಯೇ ಬೆಳಕು ಹರಡಿರುತ್ತದೆ. ಈ ಕಾರಣದಿಂದ ಅರುಣಾಚಲ ಪ್ರದೇಶದ ಡಾಂಗ್ ಹಳ್ಳಿ ದೇಶದ ಮೊದಲ ಸೂರ್ಯೋದಯದ ತಾಣವಾಗಿ ಗುರುತಿಸಿಕೊಂಡಿದೆ.

ಈ ಹಳ್ಳಿಯ ವಿಶೇಷತೆ
ಲೋಹಿತ್ ನದಿಯ ಎಡ ದಂಡೆಯಲ್ಲಿರುವ ಡಾಂಗ್ ಹಳ್ಳಿ ಅರುಣಾಚಲ ಪ್ರದೇಶದ ಅತ್ಯಂತ ದೂರದ ಭಾಗಗಳಲ್ಲಿ ಒಂದಾಗಿದೆ. 2004ರಲ್ಲಿ ಲೋಹಿತ್ ಜಿಲ್ಲೆಯಿಂದ ವಿಭಜನೆಗೊಂಡು ರೂಪುಗೊಂಡ ಈ ಜಿಲ್ಲೆಯ ಕೇಂದ್ರಸ್ಥಳ ಹವಾಯಿ (Hawai) ಆಗಿದೆ. ಇಲ್ಲಿಗೆ ತಲುಪಲು ಸಮೀಪದ ಪಟ್ಟಣವಾದ ವಾಲಾಂಗ್‌ನಿಂದ ಸುಮಾರು 8 ರಿಂದ 10 ಕಿಲೋಮೀಟರ್ ಕಾಲ್ನಡಿಗೆಯ ಟ್ರೆಕ್ಕಿಂಗ್ ಮಾಡಬೇಕು. ಸಾಮಾನ್ಯವಾಗಿ ಪ್ರವಾಸಿಗರು ಬೆಳಗಿನ ಜಾವ 3 ಗಂಟೆಗೆ ಪ್ರಯಾಣ ಆರಂಭಿಸಿ ಸೂರ್ಯೋದಯ ಸಮಯಕ್ಕೆ ಸೂರ್ಯೋದಯ ವೀಕ್ಷಣಾ ಸ್ಥಳಕ್ಕೆ ತಲುಪುತ್ತಾರೆ.
ಬೇಸಿಗೆ ಕಾಲದಲ್ಲಿ ಇಲ್ಲಿ ಬೆಳಗ್ಗೆ 4 ಗಂಟೆಯ ವೇಳೆಗೆ ಸೂರ್ಯೋದಯವಾಗುತ್ತದೆ. ಪರ್ವತಗಳ ನಡುವೆ ಹರಡಿರುವ ಪ್ರಕೃತಿ ಸೌಂದರ್ಯ, ಕೆಳಗೆ ಮಿನುಗುವ ಲೋಹಿತ್ ನದಿ ಮತ್ತು ಮೂರು ದೇಶಗಳ ಗಡಿಯ ನೋಟ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ತವಾಂಗ್‌ನಲ್ಲೂ ಅದ್ಭುತ ಸೂರ್ಯೋದಯ
ಭಾರತದ ಅರುಣಾಚಲ ಪ್ರದೇಶವನ್ನು "ಉದಯಿಸುವ ಸೂರ್ಯನ ಪರ್ವತಗಳ ನಾಡು" ಎಂದು ಕರೆಯಲಾಗುತ್ತದೆ. ಸಮುದ್ರಮಟ್ಟದಿಂದ ಸುಮಾರು 3,048 ಮೀಟರ್ ಎತ್ತರದಲ್ಲಿರುವ ತವಾಂಗ್ ಕೂಡ ಸೂರ್ಯೋದಯ ವೀಕ್ಷಣೆಗೆ ಪ್ರಸಿದ್ಧ ತಾಣವಾಗಿದೆ. ಅರುಣಾಚಲ ಸಂಸ್ಕೃತದಲ್ಲಿ 'ಅರುಣ' ಎಂದರೆ ಉದಯಿಸುವ ಸೂರ್ಯ ಮತ್ತು 'ಅಚಲ' ಎಂದರೆ ಪರ್ವತ.
ಇಲ್ಲಿನ ವೀಕ್ಷಣಾ ಸ್ಥಳಗಳಲ್ಲಿ ಬೆಳಗಿನ ಜಾವ ಬೌದ್ಧ ಸನ್ಯಾಸಿಗಳ ಪ್ರಾರ್ಥನೆಗಳ ನಡುವೆ ಸೂರ್ಯನ ಕಿರಣಗಳು ಹಿಮಾವೃತ ಪರ್ವತಗಳ ಮೇಲೆ ಹರಡುವ ದೃಶ್ಯ ಅಪರೂಪದ ಅನುಭವ ನೀಡುತ್ತದೆ. ಮಾರ್ಚ್‌ನಿಂದ ಜೂನ್‌ವರೆಗೆ ತವಾಂಗ್ ಭೇಟಿ ನೀಡಲು ಸೂಕ್ತ ಸಮಯವೆಂದು ಪರಿಗಣಿಸಲಾಗಿದೆ.
ನಾಗಾಲ್ಯಾಂಡ್‌ನ ಜಪ್ಫು ಶಿಖರದ
ನಾಗಾಲ್ಯಾಂಡ್‌ನ ಎರಡನೇ ಅತಿ ಎತ್ತರದ ಶಿಖರವಾದ ಜಪ್ಫು ಪೀಕ್ ಈಶಾನ್ಯ ಭಾರತದ ಅತ್ಯಂತ ಸುಂದರ ಸೂರ್ಯೋದಯ ತಾಣಗಳಲ್ಲಿ ಒಂದಾಗಿದೆ. ಕೊಹಿಮಾದಿಂದ ಸುಮಾರು 16 ಕಿ.ಮೀ ದೂರದಲ್ಲಿರುವ ಕಿಗ್ವೆಮಾ ಗ್ರಾಮದಿಂದ ಟ್ರೆಕ್ ಆರಂಭಿಸಬೇಕು. ಶಿಖರ ತಲುಪಿದ ಬಳಿಕ ನಾಗಾಲ್ಯಾಂಡ್‌ನ ವಿಶಾಲ ಕಣಿವೆಗಳು, ಅರುಣಾಚಲ ಪ್ರದೇಶದ ಪರ್ವತಗಳು ಹಾಗೂ ಅಸ್ಸಾಂನ ಕೆಲವು ಭಾಗಗಳನ್ನು ಕೂಡ ವೀಕ್ಷಿಸಬಹುದು.
ಮೇಘಾಲಯದ ನೊಂಗ್‌ಜ್ರಾಂಗ್
ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿರುವ ನೊಂಗ್‌ಜ್ರಾಂಗ್, ಶಿಲ್ಲಾಂಗ್‌ನಿಂದ ಸುಮಾರು 49 ಕಿ.ಮೀ ದೂರದಲ್ಲಿರುವ ನೊಂಗ್‌ಜ್ರಾಂಗ್ ಗ್ರಾಮ ಸೂರ್ಯೋದಯ ಪ್ರಿಯರಿಗಾಗಿ ಮತ್ತೊಂದು ಅಪರೂಪದ ತಾಣವಾಗಿದೆ. ಇಲ್ಲಿ ಕಣಿವೆಯು ಇನ್ನೂ ಕತ್ತಲೆಯಲ್ಲಿರುವಾಗ ಮೇಲಿನ ಆಕಾಶವು ಬಂಗಾರದ ಬಣ್ಣಕ್ಕೆ ತಿರುಗುವ ದೃಶ್ಯ ವಿಶೇಷ ಆಕರ್ಷಣೆಯಾಗಿದೆ.
ಲೈಟ್ಲುಮ್ ಕಣಿವೆ
ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಲ್ಲಿರುವ ಅದ್ಭುತವಾದ ಮತ್ತು ಪ್ರಶಾಂತವಾದ ಪ್ರವಾಸಿ ತಾಣವಾಗಿದೆ. ಶಿಲ್ಲಾಂಗ್ ಸಮೀಪದ ಲೈಟ್ಲುಮ್ ಕಣಿವೆ (Laitlum Canyon) ಕೂಡ ಸೂರ್ಯೋದಯ ವೀಕ್ಷಣೆಗೆ ಹೆಸರುವಾಸಿಯಾಗಿದೆ. "ಬೆಟ್ಟಗಳ ಅಂತ್ಯ" ಎಂಬ ಅರ್ಥ ಹೊಂದಿರುವ ಲೈಟ್ಲುಮ್‌ನಲ್ಲಿ ಮಂಜಿನಿಂದ ಆವೃತವಾದ ಕಣಿವೆಗಳ ಮೇಲೆ ಬೆಳಗಿನ ಕಿರಣಗಳು ಹರಡುವ ದೃಶ್ಯ ಮನಸೂರೆಗೊಳ್ಳುತ್ತದೆ.
ಪ್ರವಾಸಕ್ಕೆ ಸೂಕ್ತ ಸಮಯ
ಏಪ್ರಿಲ್‌ನಿಂದ ಜೂನ್‌ವರೆಗೆ ಈಶಾನ್ಯ ಭಾರತದಲ್ಲಿ ಸೂರ್ಯೋದಯ ವೀಕ್ಷಣೆಗೆ ಅತ್ಯುತ್ತಮ ಸಮಯವಾಗಿದೆ. ಮಳೆಗಾಲ ಆರಂಭವಾದ ನಂತರ ಅನೇಕ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಸಮಸ್ಯೆಗಳು ಎದುರಾಗುವ ಕಾರಣ, ಬೇಸಿಗೆಯ ಕೊನೆಯ ವಾರಗಳೇ ಈ ಅಪರೂಪದ ಅನುಭವವನ್ನು ಪಡೆಯಲು ಉತ್ತಮ ಅವಕಾಶವೆಂದು ಪ್ರವಾಸ ತಜ್ಞರು ಹೇಳುತ್ತಾರೆ.














Click it and Unblock the Notifications