3500 ಮಂದಿಗೆ ಉಚಿತ ಆರೋಗ್ಯ ವಿಮೆ ಗಿಫ್ಟ್ ಕೊಟ್ಟ ವರನ ಕುಟುಂಬ: ದೇಶವೇ ಅಚ್ಚರಿ
ಮುಂಬೈ: ಇಂದಿನ ದಿನಗಳಲ್ಲಿ ಅದ್ಧೂರಿ ಮದುವೆಗಳು ನಡೆಯುತ್ತವೆ. ಭಾರಿ ವೆಚ್ಚದ, ಸಾಲದ ಹೊರೆಯ ಮದುವೆಗಳು ಸರ್ವೇಸಾಮಾನ್ಯ ಎಂಬಂತಾಗಿದೆ. ಮದುವೆ ಆಗಮಿಸುವವರಿಗೆ ತೆಂಗಿನ ಕಾಯಿ, ಪಾತ್ರೆ, ಹಣ್ಣು-ಕಾಯಿಗಳು, ಕೆಲವೆಡೆ ಪುಸ್ತಕಗಳನ್ನು, ಬಟ್ಟೆಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಆದರೆ ಮಹಾರಾಷ್ಟ್ರದ ಒಂದು ಕುಟುಂಬ ಮದುವೆ ಸಮಯದಲ್ಲಿ ನೀಡಿದ ಉಡುಗೊರೆ ದೇಶವನ್ನೆ ಅಚ್ಚರಿಗೀಡು ಮಾಡಿದೆ.
ಮದುವೆಗೆ ಬರುವವರಿಗೆ ನೀಡುವ ಸಾಂಪ್ರದಾಯಿಕ ಕೊಡುಗೆ ನಿಯಮ ಮೀರಿ ಗ್ರಾಮದ ಎಲ್ಲಿರಗೂ ವರನ ಕುಟುಂಬವು ಸ್ವಂತ ಹಣದಲ್ಲಿಎಲ್ಲರಿಗೂ ವಿಮಾ ರಕ್ಷಣೆ ಒದಗಿಸುವ ಮೂಲಕ ಮಾದರಿಯಾಗಿದೆ. ಈ ಮೂಲಕ ವಿಶೇಷ ರೀತಿಯಲ್ಲಿ ಮದುವೆ ಮಾಡಿಕೊಂಡು ಸುದ್ದಿಯಾಗಿದೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಂಧಾರ್ ತಹಸೀಲ್‌ನಲ್ಲಿರುವ ಬಹದ್ದೂರ್‌ಪುರ ಗ್ರಾಮದಲ್ಲಿ ಈ ಘಟನೆ ವಿಶೇಷ ವಿವಾಹ ಸಂಭ್ರಮಕ್ಕೆ ಊರ ಜನ ಸಾಕ್ಷಿಯಾಗಿದ್ದಾರೆ.

3,500 ನಿವಾಸಿಗಳಿಗೆ ಉಚಿತ ಅಪಘಾತ ವಿಮೆ
ಇಲ್ಲಿನ ಸಿದ್ದೇಶ್ವರ್ ಪೆತ್ಕರ್ ಮತ್ತು ಮಂಜುಷಾ ಪೆತ್ಕರ್ ಅವರ ವಿವಾಹವು ನಡೆಯಿತು ಈ ವೇಳೆ ಮದುವೆ ಬಂದವರಿಗೆ, ಬಂಧು ಮಿತ್ರರಿಗೆ, ಅತಿಥಿಗಳಿಗೆ ಸಿಹಿ ತಿಂಡಿಗಳು, ಹಣ್ಣು, ತೆಂಗಿನಕಾಯಿ, ಅಥವಾ ಸಣ್ಣಪುಟ್ಟ ಪಾತ್ರೆಗಳನ್ನು 'ರಿಟರ್ನ್ ಗಿಫ್ಟ್' ಆಗಿ ನೀಡುವ ಸಂಪ್ರದಾಯ ಇದೆ. ಆದರೆ ಈ ಪೆತ್ಕರ್ ಅವರ ಮದುವೆಯಲ್ಲಿ ಇಡೀ ಗ್ರಾಮದ ಸುಮಾರು 3,500 ನಿವಾಸಿಗಳಿಗೆ ಉಚಿತ ಅಪಘಾತ ವಿಮೆ ಮಾಡಿಸಿ ಕೊಟ್ಟಿದೆ. ಈ ಮೂಲಕ ವಿಮೆಯ ಅಗತ್ಯತೆ ಕುರಿತು ಜಾಗೃತಿ ಮೂಡಿಸಿದೆ.
ಬಹದ್ದೂರ್‌ಪುರ ಗ್ರಾಮದ ಒಟ್ಟು ಮತದಾರರ ಪಟ್ಟಿಯಲ್ಲಿ ಸುಮಾರು 3,600 ಹೆಸರುಗಳಿವೆ. ಈ ಜನಸಂಖ್ಯೆ ಬಹುತೇಕ ಮಂದಿಗೆ ವರನ ಕುಟುಂಬದಿಂದಲೇ ಹಣ ಪಾವತಿಸಿ ಈ ವಿಮಾ ಸೌಲಭ್ಯ ಮಾಡಿಸಿಕೊಡಲಾಗಿದೆ. ಈ ಮೂಲಕ ಗ್ರಾಮದ ಜನರಿಗೆ ದೊಡ್ಡ ರಕ್ಷಣೆಯೊಂದನ್ನು ನೀಡಿದ್ದು, ಭವಿಷ್ಯದಲ್ಲಿ ಸಹ ಇವರ ಮದುವೆ ಸಮಾರಂಭ ಅಚ್ಚಳಿಯದಂತೆ ಉಳಿಯಲಿದೆ ಎಂದು ಗ್ರಾಮದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ನೈಜ ಸಮಸ್ಯೆಗಳ ಆಧಾರದಲ್ಲಿ ವಿಮೆ
ವರನ ಕುಟುಂಬವು ತಮ್ಮ ಗ್ರಾಮದಲ್ಲಿನ ಜನರು ನಿತ್ಯ ಎದುರಿಸುವ ನೈಜ ಕಷ್ಟಗಳು ಮತ್ತು ಪ್ರಾಣಾಪಾಯಗಳನ್ನು ಗಮನಿಸಿದೆ. ಅದರ ಆಧಾರದಲ್ಲಿ ವಿಮೆ ಮಾಡಿಸಲು ತೀರ್ಮಾನಿಸಿದೆ. ರಸ್ತೆ ಅಪಘಾತಗಳು, ಹಾವಿನ ಕಡಿತ, ಸಿಡಿಲು ಬಡಿತ, ವನ್ಯಜೀವಿಗಳೊಂದಿಗಿನ ಸಂಘರ್ಷ, ಕೃಷಿ ಅಥವಾ ಕೂಲಿ ಕೆಲಸದ ವೇಳೆ ಸಂಭವಿಸುವ ಅನಿರೀಕ್ಷಿತ ಅಪಾಯಗಳ ಮೇಲೆ ವಿಮೆ ಮಾಡಿಸುವ ಮೂಲಕ ಸಾರ್ವಜನಿಕ ಕಾಳಜಿ ಮೆರೆದಿದ್ದಾರೆ. ಈ ಕಾರಣದಿಂದಲೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಶ್ರೀಮಂತಿಕೆ ತೋರಿಸುವ ಅನೇಕ ಅದ್ಧೂರಿ ವಿವಾಹಗಳ ನಡುವೆ ಈ ವಧು-ವರರ ವಿವಾಹವು ಮಹಾರಾಷ್ಟ್ರದಲ್ಲೇ ವಿಶೇಷವಾಗಿದೆ. ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.
ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಅನೂಪ್
ಮದುವೆ ಆದ ವರನ ಹಿರಿಯ ಸಹೋದರ ಅನೂಪ್ ಪೆತ್ಕರ್ ಮೂಲತಃ ಸಮಾಜಸೇವೆಯಲ್ಲಿ ಮೊದಲಿನಿಂದಲೂ ಗುರುತಿಸಿಕೊಂಡವರು. ಅವರು ಈ ಮೊದಲು ವಿಮಾ ಮತ್ತು ಹೆಲ್ತ್ ಕ್ಯಾಂಪ್‌ಗಳನ್ನು ಆಯೋಜಿಸಿದ್ದರು. ಒಂದೇ ದಿನದಲ್ಲಿ ಸುಮಾರು 900 ಜನರಿಗೆ ವಿಮೆ ಮಾಡಿಸಿದ್ದ ಅನುಭವ ಅವರಿಗಿತ್ತು. ಜೀವ ರಕ್ಷಣೆಗೆ ಇರುವ ವಿಮೆಗಳ ಬಗ್ಗೆ ಜನರಿಗೆ ಅರಿವಿರುವುದಿಲ್ಲ. ಅದೆಷ್ಟೋ ಜನರಿಗೆ ಆರ್ಥಿಕ ಸಮಸ್ಯೆಯಿಂದ ವಿಮೆ ಮಾಡಿಸಲು ಆಗಿರುವುದಿಲ್ಲ. ಇದೆಲ್ಲ ಗಮನಿಸಿದ್ದ ಅನೂಪ್ ಅವರು ತಮ್ಮ ಸಹೋದರನ ಮದುವೆಯಲ್ಲಿ ಗ್ರಾಮಸ್ಥರಿಗೆ ಈ ಕೊಡುಗೆ ನೀಡಿದ್ದಾರೆ ಎಂದು ವರದಿ ಆಗಿದೆ.













Click it and Unblock the Notifications