Jagapathi Babu: ಬೆಂಗಳೂರು ಜನ ಈ ಎರಡು ಕಾರಣಕ್ಕೆ ನನಗೆ ತುಂಬಾ ಇಷ್ಟ: ನಟ ಜಗಪತಿ ಬಾಬು
ಟಾಲಿವುಡ್‌ನ ಬಹುಮುಖ ಪ್ರತಿಭೆ ಹಾಗೂ ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳ ಮೂಲಕ ಕನ್ನಡಿಗರಿಗೂ ಹತ್ತಿರವಾಗಿರುವ ಹಿರಿಯ ನಟ ಜಗಪತಿ ಬಾಬು ಅವರು ಬೆಂಗಳೂರು ಮತ್ತು ಕನ್ನಡಿಗರ ಮೇಲಿನ ತಮ್ಮ ಅಪಾರ ಪ್ರೀತಿಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ರಾಜಧಾನಿಯಲ್ಲಿ ನಡೆದ ಪ್ರತಿಷ್ಠಿತ 'ಚಿತ್ತಾರ ಸ್ಟಾರ್ ಅವಾರ್ಡ್ಸ್ 2026' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ವೇದಿಕೆಯ ಮೇಲೆ ಬೆಂಗಳೂರು ಮಂದಿಯ ಒಳ್ಳೆಯತನವನ್ನು ಕೊಂಡಾಡಿದ್ದಾರೆ.
ಚಿಕ್ಕಂದಿನಿಂದಲೇ ಬೆಂಗಳೂರಿನ ಜೊತೆಗಿದೆ ನಂಟು
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರ ಆಪ್ತ ನುಡಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರ ಮನ ಗೆದ್ದಿದೆ. ಕಾರ್ಯಕ್ರಮದಲ್ಲಿ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಜಗಪತಿ ಬಾಬು ಅವರು ಮೊದಲು ತೆಲುಗಿನಲ್ಲೇ ತಮ್ಮ ಮಾತುಗಳನ್ನು ಆರಂಭಿಸಿದರು. ಭಾಷೆಯ ವಿಚಾರವಾಗಿ ಸೌಜನ್ಯದಿಂದಲೇ ಸಾರ್ವಜನಿಕರ ಕ್ಷಮೆ ಕೇಳಿದ ಅವರು, "ನಾನು ತೆಲುಗಿನಲ್ಲಿ ಮಾತನಾಡುತ್ತಿರುವುದಕ್ಕೆ ದಯವಿಟ್ಟು ಕ್ಷಮಿಸಿ. ಆದರೆ, ಬೆಂಗಳೂರು ನಗರ ನನಗೇನೂ ಹೊಸದಲ್ಲ. ನನ್ನ ಬಾಲ್ಯದಿಂದಲೂ ಈ ನಗರದ ಜೊತೆ ನನಗೆ ಅವಿನಾಭಾವ ನಂಟಿದೆ ಎಂದಿದ್ದಾರೆ.

ನನ್ನ ಅಂಕಲ್ ಮತ್ತು ಆಂಟಿ ಬೆಂಗಳೂರಿನಲ್ಲೇ ವಾಸವಾಗಿದ್ದರು. ಹಾಗಾಗಿ ನನ್ನ ಬಾಲ್ಯದ ಹಲವು ದಿನಗಳನ್ನು ನಾನು ಇಲ್ಲೇ ಕಳೆದಿದ್ದೇನೆ. ಇಂದಿಗೂ ನಮ್ಮ ಕುಟುಂಬದ ಆತ್ಮೀಯರು ಇಲ್ಲೇ ಇದ್ದಾರೆ" ಎಂದು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಬೆಂಗಳೂರಿನ ಸಾರ್ವಜನಿಕರ ನಡೆ-ನುಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಜಗಪತಿ ಬಾಬು, "ಇಲ್ಲಿನ ಜನರ ಸರಳತೆ (Simplicity) ಮತ್ತು ಅವರಲ್ಲಿರುವ ಒಳ್ಳೆಯತನ ನನಗೆ ಅತಿಯಾಗಿ ಇಷ್ಟವಾಗುತ್ತದೆ. ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಳ್ಳುವ ಗುಣ ಕನ್ನಡಿಗರಲ್ಲಿದೆ. ಇದೇ ಕಾರಣಕ್ಕಾಗಿ ನನಗೆ ಬೆಂಗಳೂರು ಅಂದರಾಗಲಿ, ಇಲ್ಲಿನ ಜನರ ಮೇಲಾಗಲಿ ವಿಶೇಷವಾದ ಗೌರವ ಮತ್ತು ಪ್ರೀತಿ ಇದೆ. ನಿಜ ಹೇಳಬೇಕೆಂದರೆ ಬೆಂಗಳೂರಿನ ಜನ ತುಂಬಾ ಸ್ವೀಟ್" ಎಂದು ಮನಸಾರೆ ಹೊಗಳಿದ್ದಾರೆ.
At Chittara Star Awards 2026, veteran actor Jagapathi Babu expressed his love for Bengaluru, praising the simplicity and kindness of Kannadigas. His heartfelt speech has won the admiration of fans.15 ವರ್ಷಗಳ ಬಳಿಕವೂ ಇಲ್ಲೇ ಪ್ರಶಸ್ತಿ ಪಡೆಯುವಾಸೆ
ಸಿನಿಮಾ ರಂಗಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಚಿತ್ತಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಈ ಸಂದರ್ಭದಲ್ಲಿ ಪ್ರಶಸ್ತಿ ಹಿಡಿದು ಭಾವುಕರಾದ ಅವರು, "ಈ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದಾಗ ನಾನು ಚಿತ್ರರಂಗದಲ್ಲಿ ಅಂತದ್ದೇನು ಸಾಧನೆ ಮಾಡಿದ್ದೇನೆ ಎಂದು ನನಗೇ ಅನಿಸಿತು. ಆದರೆ ಕನ್ನಡಿಗರು ನನ್ನನ್ನು ಗುರುತಿಸಿ ಈ ಗೌರವ ನೀಡಿದ್ದಾರೆ. ನಿಮ್ಮ ಈ ಪ್ರೀತಿ ಹೀಗೆ ಇರಲಿ, ಮುಂದಿನ 15 ವರ್ಷಗಳ ಬಳಿಕವೂ ನಾನು ಇದೇ ವೇದಿಕೆಯಲ್ಲಿ, ಇದೇ ರೀತಿ ನಿಮ್ಮ ಕೈಯಿಂದ ಪ್ರಶಸ್ತಿ ಪಡೆಯುವಂತಾಗಲಿ" ಎಂದು ತಮ್ಮ ಆಸೆ ಬಿಚ್ಚಿಟ್ಟಿದ್ದಾರೆ.
ಕನ್ನಡದ ಸೂಪರ್ ಸ್ಟಾರ್ ಚಿತ್ರಗಳಾದ 'ಸುದೀಪ್' ನಟನೆಯ ಬಚ್ಚನ್, 'ಶ್ರೀಮುರಳಿ' ಅಭಿನಯದ ಮದಗಜ ಸೇರಿದಂತೆ ಹಲವು ಚಿತ್ರಗಳಲ್ಲಿ ಪ್ರಮುಖ ಪಾತ್ರ ಪೋಷಿಸಿರುವ ಜಗಪತಿ ಬಾಬು, ಸದ್ಯ ಕನ್ನಡ ಚಿತ್ರರಂಗದ ಸ್ಟಾರ್ ನಟರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತೆಲುಗಿನಲ್ಲಿ ದಶಕಗಳ ಕಾಲ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದ ಇವರು, ಬಳಿಕ ಖಡಕ್ ವಿಲನ್ ಪಾತ್ರಗಳ ಮೂಲಕ ಹೊಸ ಶೇಡ್‌ನಲ್ಲಿ ಮತ್ತಷ್ಟು ಜನಪ್ರಿಯತೆ ಪಡೆದರು. ಸದ್ಯ ಟಾಲಿವುಡ್‌ನ ಸ್ಟಾರ್ ನಟರ ಸಿನಿಮಾಗಳಲ್ಲಿ ಇವರೇ ಖಡಕ್ ವಿಲನ್ ಆಗಿ ಮಿಂಚುತ್ತಿದ್ದಾರೆ.












Click it and Unblock the Notifications