ನಮ್ಮ ಭೂಮಿ ನಮ್ಮ ಹಕ್ಕು: ಬಿಡದಿ ಟೌನ್‌ಶಿಪ್ ಭೂಸ್ವಾಧೀನದ ವಿರುದ್ಧ ಇಂದು ಬೀದಿಗಿಳಿಯಲಿದ್ದಾರೆ ಸಾವಿರಾರು ರೈತರು
ಬೆಂಗಳೂರು: ರಾಜ್ಯ ಸರ್ಕಾರ ಉದ್ದೇಶಿಸಿರುವ ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ಹಾಗೂ ಸಂತ್ರಸ್ತ ರೈತರ ಹಕ್ಕುಗಳ ರಕ್ಷಣೆಗಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೂನ್ 21ರ ಭಾನುವಾರ (ಇಂದು) ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. "ನಮ್ಮ ಭೂಮಿ ನಮ್ಮ ಹಕ್ಕು" ಎಂಬ ಘೋಷಣೆಯೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಹೋರಾಟದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ರೈತರು ಹಾಗೂ ವಿವಿಧ ರೈತ ಸಂಘಟನೆಗಳು ಪಾಲ್ಗೊಳ್ಳಲಿವೆ.
8 ಗ್ರಾಮಗಳ ಮೂಲಕ ಸಾಗಲಿರುವ ಪಾದಯಾತ್ರೆ
ರೈತರ ಕೃಷಿ ಭೂಮಿಯನ್ನು ಉಳಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಪಾದಯಾತ್ರೆಯು ಅಂಚಿಪುರ ಗ್ರಾಮದಿಂದ ಆರಂಭವಾಗಿ ಹೊಸೂರಿನವರೆಗೆ ಒಟ್ಟು 8 ಪ್ರಮುಖ ಗ್ರಾಮಗಳ ಮೂಲಕ ಹಾದುಹೋಗಲಿದೆ. ಭಾನುವಾರ ಬೆಳಗ್ಗೆ 9 ಗಂಟೆಗೆ ಅಂಚಿಪುರದಿಂದ ಪಾದಯಾತ್ರೆಗೆ ಚಾಲನೆ ಸಿಗಲಿದೆ. ಅಲ್ಲಿಂದ ಅಂಚಿಪುರ ಕಾಲೊನಿ, ಬನ್ನಿಗಿರಿ, ಮರೇವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ ಮತ್ತು ಕೋಡಿಪಾಳ್ಯ ಗ್ರಾಮಗಳ ಮಾರ್ಗವಾಗಿ ಹೊಸೂರು ತಲುಪಲಿದೆ. ಹೊಸೂರು ಗ್ರಾಮದಲ್ಲಿ ಎಲ್ಲ ರೈತರು ಸಮಾವೇಶಗೊಳ್ಳಲಿದ್ದು, ಅಲ್ಲಿ ಬೃಹತ್ ಬಹಿರಂಗ ಸಭೆಯೊಂದಿಗೆ ಪಾದಯಾತ್ರೆ ಸಮಾರೋಪಗೊಳ್ಳಲಿದೆ.

750ಕ್ಕೂ ಹೆಚ್ಚು ರೈತ ಕುಟುಂಬಗಳ ಬದುಕು ಅಯೋಮಯ
ಈ ಯೋಜನೆಯಿಂದ ಗ್ರಾಮೀಣ ಭಾಗದ ಆರ್ಥಿಕತೆ ಹಾಗೂ ಪರಿಸರಕ್ಕೆ ಆಗಲಿರುವ ಹಾನಿಯ ಕುರಿತು ನಿಖಿಲ್ ಕುಮಾರಸ್ವಾಮಿ ಆತಂಕಕಾರಿ ಅಂಕಿ-ಅಂಶಗಳನ್ನು ಹಂಚಿಕೊಂಡಿದ್ದಾರೆ. ಬಿಡದಿ ಟೌನ್‌ಶಿಪ್‌ಗಾಗಿ ಈಗಾಗಲೇ ಅಂಚಿಪುರ, ಬನ್ನಿಗಿರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 518 ಎಕರೆ ಕೃಷಿ ಭೂಮಿಗೆ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರ ಬೆನ್ನಲ್ಲೇ ಮತ್ತೊಂದು ಹಂತದಲ್ಲಿ ಹೆಚ್ಚುವರಿಯಾಗಿ 7,481 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ.
ಈ ಬೃಹತ್ ಭೂಸ್ವಾಧೀನ ಪ್ರಕ್ರಿಯೆಯಿಂದಾಗಿ ಸುಮಾರು 755 ರೈತ ಕುಟುಂಬಗಳು ತಮ್ಮ ಜೀವನೋಪಾಯ ಕಳೆದುಕೊಳ್ಳಲಿವೆ. ಅಷ್ಟೇ ಅಲ್ಲದೆ, ಮಾಸಿಕ 6 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಹೈನುಗಾರಿಕೆ ಕ್ಷೇತ್ರ, ರೇಷ್ಮೆ ಮತ್ತು ತೋಟಗಾರಿಕೆ ಬೆಳೆಗಳು ಸಂಪೂರ್ಣ ನಾಶವಾಗಲಿವೆ. ಅಂದಾಜು 10 ಲಕ್ಷ ಹಸಿರು ಮರಗಳು ಈ ಯೋಜನೆಯಿಂದಾಗಿ ಧರೆಗುರುಳಲಿವೆ ಎಂದು ಅವರು ದೂರಿದ್ದಾರೆ.
450 ದಿನಗಳ ನಿರಂತರ ಹೋರಾಟ
ಈ ಯೋಜನೆಯ ವಿರುದ್ಧ ಸ್ಥಳೀಯ ರೈತರು ಕಳೆದ 450 ದಿನಗಳಿಂದ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಲೇ ಬಂದಿದ್ದಾರೆ. "ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ಪಕ್ಷಾತೀತವಾಗಿ ರೈತರ ಬದುಕು ಮತ್ತು ಕೃಷಿಯನ್ನು ಉಳಿಸಲು ಮಾಡುತ್ತಿರುವ ಹೋರಾಟವಾಗಿದೆ. ಸರ್ಕಾರ ತಕ್ಷಣವೇ ಈ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಟ್ಟು, ಹೊರಡಿಸಿರುವ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಬೇಕು" ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಇಂದು ನಡೆಯಲಿರುವ ಈ ಬೃಹತ್ ಪಾದಯಾತ್ರೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪ್ರಮುಖ ರೈತ ಮುಖಂಡರು ಮುಕ್ತ ಬೆಂಬಲ ಘೋಷಿಸಿದ್ದು, ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.













Click it and Unblock the Notifications