ಹೃದಯ ಒಡೆದಿದೆ, ಆದ್ರೆ ಕನಸು ಕಾಣುವುದನ್ನು ನಿಲ್ಲಿಸುವುದಿಲ್ಲ: ಆರ್‌ಸಿಬಿ ಟಗರುಪುಟ್ಟಿ, ಕನ್ನಡತಿ ಶ್ರೇಯಾಂಕಾ ಪಾಟೀಲ್
Shreyanka Patil: ಇತ್ತೀಚೆಗಷ್ಟೇ ನೆದರ್‌ಲ್ಯಾಂಡ್ ವಿರುದ್ಧ ನಡೆದ ಮಹಿಳಾ ಟಿ20 ವಿಶ್ವಕಪ್ 2026 ಪಂದ್ಯದ ವೇಳೆ ಟೀಮ್ ಇಂಡಿಯಾ ಸ್ಟಾರ್ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಅವರು ತೀವ್ರವಾಗಿ ಗಾಯಗೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಇಡೀ ಟೂರ್ನಿಯಿಂದ ಹೊರಗಿಡಲಾಗಿದೆ. ಇದರ ಬೆನ್ನಲ್ಲೇ ಶ್ರೇಯಾಂಕಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿಕೊಂಡಿದ್ದು, ಇದು ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಭಾರತ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಅವರು ಕಾಲಿನ ಗಾಯದ ಸಮಸ್ಯೆಯಿಂದಾಗಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಅವರು ಗಾಯಗೊಂಡಿದ್ದು, ಈ ಹಿನ್ನಡೆಯಿಂದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಬೇಸರ ವ್ಯಕ್ತಪಡಿಸಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.

ಭಾರತ ತಂಡದಿಂದ ಹೊರಗುಳಿದ ಶ್ರೇಯಾಂಕಾ
ಹೆಡಿಂಗ್ಲಿಯಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದ ವೇಳೆ ಈ ದುರದೃಷ್ಟಕರ ಘಟನೆ ನಡೆದಿದೆ. ಇನ್ನಿಂಗ್ಸ್‌ನ 6ನೇ ಓವರ್‌ನ ಮೊದಲ ಎಸೆತದಲ್ಲಿ ಮಿಡ್-ಆನ್ ಕಡೆಗೆ ಹೋಗುತ್ತಿದ್ದ ಚೆಂಡನ್ನು ತಡೆಯಲು ಓಡುವಾಗ ಶ್ರೇಯಾಂಕಾ ಅವರ ಬಲಗಾಲಿನ ಹಿಮ್ಮಡಿ ಮಡಚಿಕೊಂಡಿತು. ಆಗ ಅವರು ತೀವ್ರ ನೋವಿನಿಂದ ಮೈದಾನದಲ್ಲೇ ಕುಸಿದುಬಿದ್ದರು. ಭಾರತ ತಂಡದ ವೈದ್ಯಕೀಯ ಸಿಬ್ಬಂದಿ ಹಾಗೂ ಸಹ ಆಟಗಾರ್ತಿಯರು ತಕ್ಷಣವೇ ಅವರ ನೆರವಿಗೆ ಧಾವಿಸಿದರು. ಅಂತಿಮವಾಗಿ ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಹೊರಗೆ ಕರೆದೊಯ್ಯಬೇಕಾಯಿತು. ತಪಾಸಣೆಯ ಬಳಿಕ ಅವರು ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಆಡಲು ಸಾಧ್ಯವಿಲ್ಲ ಎಂಬುದನ್ನ ಮ್ಯಾನೇಜ್‌ಮೆಂಟ್ ಖಚಿತಪಡಿಸಿತು.
ಶ್ರೇಯಾಂಕಾ ಪಾಟೀಲ್ ವಿಶೇಷ ಪೋಸ್ಟ್‌ನಲ್ಲೇನಿದೆ?
ದೀರ್ಘಕಾಲದ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದ ಶ್ರೇಯಾಂಕಾ ಅವರಿಗೆ ಈ ಹೊಸ ಗಾಯ ಮತ್ತಷ್ಟು ಆಘಾತ ನೀಡಿದೆ. ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಟ್ವಿಟರ್ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಎಲ್ಲಾ ಕನಸುಗಳೂ ನನಸಾಗುವುದಿಲ್ಲ. ಯಾವುದೇ ಗಾಯದ ಸಮಸ್ಯೆಯೂ ಸುಲಭವಲ್ಲ. ಆದರೆ ಈ ಗಾಯ ನನಗೆ ತುಂಬಾ ತೀವ್ರವಾಗಿ ನೋವುಂಟು ಮಾಡಿದೆ,' ಎಂದು ಬರೆದುಕೊಂಡಿದ್ದಾರೆ.
'ಕನಸು ಕಾಣುವುದನ್ನು ನಿಲ್ಲಿಸುವುದಿಲ್ಲ'
ಅಲ್ಲದೆ, 'ಕಳೆದ ಕೆಲವು ದಿನಗಳಿಂದ ಅಭಿಮಾನಿಗಳು ನನ್ನ ಮೇಲೆ ತೋರುತ್ತಿರುವ ಪ್ರೀತಿಗೆ ನಾನು ಚಿರಋಣಿ. ನಾನು ಸಾಕಷ್ಟು ಸಂದೇಶಗಳು, ರೀಲ್ಸ್‌ಗಳನ್ನು ನೋಡಿದ್ದೇನೆ. ಅವೆಲ್ಲವನ್ನೂ ನಾನು ನಿಜವಾಗಿಯೂ ಪ್ರೀತಿಸುತ್ತೇನೆ. ಈ ಕಷ್ಟದ ಪರಿಸ್ಥಿತಿಯಿಂದ ಹೊರಬರಲು ನನ್ನನ್ನು ಹಾರೈಸುವ ಸಾಕಷ್ಟು ಜನರು ನನ್ನೊಂದಿಗಿದ್ದಾರೆ ಎಂಬುದು ನನಗೆ ಗೊತ್ತು. ಪ್ರತಿ ಕನಸೂ ನನಸಾಗದೇ ಇರಬಹುದು, ಆದರೆ ನಾನು ಕನಸು ಕಾಣುವುದನ್ನು ನಿಲ್ಲಿಸುವುದಿಲ್ಲ. ಕಳೆದ ವರ್ಷ ನಾನು ಹೇಳಿದಂತೆಯೇ ಸದ್ಯಕ್ಕೆ ಹೃದಯ ಒಡೆದಿದೆ. ಆದರೆ ನಾನು ಮತ್ತೆ ಎತ್ತರಕ್ಕೆ ಹಾರುತ್ತೇನೆ,' ಎಂದು ಭರವಸೆ ನೀಡಿದ್ದಾರೆ.
ಆರಂಭಿಕ ಪಂದ್ಯದಲ್ಲಿ ಮಿಂಚಿದ್ದ ಶ್ರೇಯಾಂಕಾ
ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಗಳಿಸುವಲ್ಲಿ ಶ್ರೇಯಾಂಕಾ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದರು. ಡೆತ್ ಓವರ್‌ಗಳಲ್ಲಿ ಮಾರಕ ಬೌಲಿಂಗ್ ದಾಳಿ ಮಾಡುವ ಮತ್ತು ಎದುರಾಳಿ ತಂಡದ ಎಡಗೈ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಅವರ ಸಾಮರ್ಥ್ಯವು ಭಾರತ ತಂಡಕ್ಕೆ ದೊಡ್ಡ ಶಕ್ತಿಯಾಗಿತ್ತು. ಇದಕ್ಕೂ ಮುಂಚೆ ನಡೆದ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿಯೂ ಅವರು ಅದ್ಭುತ ಪ್ರದರ್ಶನ ನೀಡಿದ್ದರು.
ಶ್ರೇಯಾಂಕಾ ಬದಲಿಗೆ ಹೊಸ ಆಟಗಾರ್ತಿಯ ಆಯ್ಕೆ
ಶ್ರೇಯಾಂಕಾ ಪಾಟೀಲ್ ಅವರ ಅನುಪಸ್ಥಿತಿಯನ್ನು ತುಂಬಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಲೆಗ್-ಸ್ಪಿನ್ ಆಲ್‌ರೌಂಡರ್ ಪ್ರೇಮಾ ರಾವತ್ ಅವರನ್ನು ಬದಲಿ ಆಟಗಾರ್ತಿಯಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಆದರೂ ಮುಂದಿನ ಮಹತ್ವದ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ರಾಧಾ ಯಾದವ್ ಅವರಿಗೆ ತಂಡದಲ್ಲಿ ಸ್ಥಾನ ನೀಡುವ ಸಾಧ್ಯತೆಯೂ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಇದೀಗ ಶ್ರೇಯಾಂಕಾ ಪಾಟೀಲ್ ಹಂಚಿಕೊಂಡ ಈ ವಿಶೇಷ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿರುವುದಂತೂ ನಿಜ.












Click it and Unblock the Notifications