ಅಮೆರಿಕಾದಲ್ಲಿ ಭಾರತದ ಮಗುವಿನ ದಾಖಲೆ: ಯುಎಸ್‌ನ 63 ನ್ಯಾಷನಲ್ ಪಾರ್ಕ್‌ಗಳಿಗೆ ಭೇಟಿ ನೀಡಿದ ಕಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆ
ಭೂಮಿಯ ಮೇಲಿನ ಅತ್ಯಂತ ಆರ್ಥಿಕವಾಗಿ ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕವು ತನ್ನ ಜೀವವೈವಿಧ್ಯಕ್ಕೂ ಹೆಸರುವಾಸಿಯಾಗಿದೆ. ಒಟ್ಟು 63 ರಾಷ್ಟ್ರೀಯ ಉದ್ಯಾನವನಗಳನ್ನು ಹೊಂದಿರುವ ದೇಶ ಇದು. ಇಲ್ಲಿನ ಎಲ್ಲಾ ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡುವುದು, ಅಲ್ಲಿನ ಬಗ್ಗೆ ತಿಳಿದುಕೊಳ್ಳುವ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. ಈ ದೇಶಕ್ಕೆ ಭೇಟಿ ನೀಡುವವರಾಗಲೀ ಅಥವಾ ಇಲ್ಲಿನ ನಿವಾಸಿಗಳಾಗಲೀ ಅನೇಕರು ಈ ನ್ಯಾಷನಲ್ ಪಾರ್ಕ್‌ಗಳಿಗೆ ಹೋಗುತ್ತಾರೆ.
ಅಮೆರಿಕದ ಎಲ್ಲಾ ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡುವ ಮೂಲಕ ಅನೇಕ ವಯಸ್ಕರು ದಾಖಲೆ ನಿರ್ಮಿಸಿದ್ದಾರೆ. ಆದರೆ ಇಲ್ಲಿವರೆಗೂ ಯಾವ ಮಗು ಕೂಡಾ ಈ ದಾಖಲೆ ಬರೆದಿಲ್ಲ. ಇದೀಗ ಭಾರತೀಯ ಮೂಲದ ಮಗುವೊಂದು ಈ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.

ಕನಸಿನ ಆರಂಭ:
16 ತಿಂಗಳ ವಯಸ್ಸಿನಲ್ಲಿ, ಹೆಚ್ಚಿನ ಮಕ್ಕಳಿಗೆ ಅವರ ಟಾಯ್ಸ್‌ಗಳೇ ಪ್ರಪಂಚ. ಅದರಲ್ಲಿಯೇ ಆಟವಾಡುವುದು ಗಲೀಜು ಮಾಡುವುದಲ್ಲಿಯೇ ಕಾಲ ಕಳೆಯುತ್ತಾರೆ. ಆದರೆ ಈ ಪುಟ್ಟ ಪೋರಿ ಆರ್ಯ ಈ ವಯಸ್ಸಿನಲ್ಲಿ ದೊಡ್ಡ ಸಾಧನೆಗೆ ಮುಂದಾಗಿದ್ದಾಳೆ. ಇಲಿನಾಯ್ಸ್ ನಿವಾಸಿಯಾದ ಈಕೆ ತನ್ನ ಪೋಷಕರಾದ ಅಕ್ಷಯ್ ಶರ್ಮಾ ಮತ್ತು ಅಪರಾಜಿತಾ ರೈ ಅವರೊಂದಿಗೆ ಅಮೆರಿಕದ 63 ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಿದ ಅತ್ಯಂತ ಕಿರಿಯ ವ್ಯಕ್ತಿ ಎನ್ನುವ ದಾಖಲೆಯ ಸನಿಹದಲ್ಲಿದ್ದಾಳೆ.
ಆಕೆಯ ಪೋಷಕರು, ತಮ್ಮ "eternalvoyager1001" ಪುಟದಲ್ಲಿ ಮಗುವಿನ ಪ್ರಯಾಣದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಅವರು ಮಗುವಿನೊಂದಿಗೆ 15 ಉದ್ಯಾನವನಗಳಿಗೆ ಭೇಟಿ ನೀಡಿದಾಗ ಪಾರ್ಕ್ ರೇಂಜರ್ ಒಬ್ಬರು ಅವರಿಗೆ ಈ ಕಲ್ಪನೆಯನ್ನು ನೀಡಿದರಂತೆ.
ನ್ಯಾಷನಲ್ ಪಾರ್ಕ್‌ಗೆ ಕರೆದುಕೊಂಡು ಹೋಗುವ ಮೂಲಕ ಪ್ರಕೃತಿ ಮತ್ತು ಎಲ್ಲಾ ರಾಷ್ಟ್ರೀಯ ಉದ್ಯಾನವನಗಳನ್ನು ಪರಿಚಯಿಸಬಹುದು ಎನ್ನುವ ಉದ್ದೇಶ ಮಾತ್ರ ತಂದೆ ತಾಯಿಯವರದ್ದಾಗಿತ್ತು. ಈ ಮೂಲಕ ದಾಖಲೆ ಮಾಡಬಹುದು ಎನ್ನುವ ಕಲ್ಪನೆ ಅವರಲ್ಲಿ ಇರಲಿಲ್ಲ. ರೇಂಜರ್ ನೀಡಿದ ಸಲಹೆಯ ನಂತರ ಈ ಪ್ರಯತ್ನವೂ ಯಾಕಾಗಬಾರದು ಎಂದು ಮಗುವಿನ ಹೆತ್ತವರಿಗೆ ಅನ್ನಿಸಿದೆ.
ತಾಯಿಯ ಪ್ರಕಾರ, ಆರ್ಯಳಿಗೆ ಮನೆಯಿಂದ ಹೊರಗೆ ಇರುವುದೇ ಇಷ್ಟ. ಒಮ್ಮೆ ಯೊಸೆಮೈಟ್ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಿದ್ದ ವೇಳೆ ಅಲ್ಲಿನ ಜಲಪಾತದ ಸೌಂದರ್ಯವನ್ನು ನೋಡುವುದರಲ್ಲೇ ಮಗು ಆರ್ಯ ಮಗ್ನಳಾಗಿದ್ದಳಂತೆ. ಜಲಪಾತದ ಮುಂದೆ ಕೂತು ಅದರಲ್ಲಿ ಸಂಪೂರ್ಣವಾಗಿ ಮುಳುಗಿ ಆ ಕ್ಷಣವನ್ನು ಆನಂದಿಸುತ್ತಿದ್ದಳಂತೆ.
ದಾಖಲೆ ನಿರ್ಮಿಸುವ ಹಾದಿಯಲ್ಲಿ ಆರ್ಯ ಈಗಾಗಲೇ ಅರ್ಧದಾರಿಯನ್ನು ಕ್ರಮಿಸಿದ್ದಾಳೆ. ದೇಶದಲ್ಲಿರುವ 63 ಉದ್ಯಾನವನಗಳಲ್ಲಿ 34 ಉದ್ಯಾನವನಗಳಿಗೆ ಅವರು ಇಲ್ಲಿಯವರೆಗೆ ಭೇಟಿ ನೀಡಿದ್ದಾರೆ. ಉಳಿದವುಗಳಿಗೆ ಮುಂದಿನ ಎರಡು ವರ್ಷಗಳಲ್ಲಿ ಭೇಟಿ ನೀಡುವ ಯೋಜನೆ ಇದೆ ಎಂದು ಅವರ ಪೋಷಕರು ತಿಳಿಸಿದ್ದಾರೆ.
ವಿಭಿನ್ನ ಭೂದೃಶ್ಯಗಳನ್ನು ಅವಳು ಅರ್ಥಮಾಡಿಕೊಳ್ಳಬೇಕು ಎನ್ನುವ ಆಸೆ ಆರ್ಯಳ ಪೋಷಕರದ್ದು. ಇವು ಭವಿಷ್ಯದ ಪೀಳಿಗೆಗೆ ನೀವು ಉಳಿಸಬೇಕಾದ ನಿಧಿಗಳು ಎಂಬ ಅಂಶವನ್ನು ಅವಳು ಅರಿತುಕೊಳ್ಳಬೇಕು ಎನ್ನುವ ಆಸೆಯೊಂದಿಗೆ ಈ ದಾರಿಯಲ್ಲಿ ಮುನ್ನಡೆಯುತ್ತಿರುವುದಾಗಿ ಆರ್ಯ ತಾಯಿ ಅಪರಾಜಿತಾ ಹೇಳಿದ್ದಾರೆ.
ಆದರೆ, ಸಮಯ ಸಂದರ್ಭ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಮಗುವಿಗಾಗಿ ಯೋಜನೆಗಳನ್ನು ಮಾಡುವಾಗ ಹೊಂದಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಮಗು ಟ್ರಿಪ್ ಅನ್ನು ಎಂಜಾಯ್ ಮಾಡದಿದ್ದರೆ ಆ ಪ್ರಯಾಣ ಮಾಡಿಯೂ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿ ಇದಕ್ಕೆ ತುಂಬಾ ಪ್ಲಾನಿಂಗ್ ಬೇಕಾಗುತ್ತದೆ.
ಈ ಕುಟುಂಬವು ವಾರಾಂತ್ಯದಲ್ಲಿ ಉದ್ಯಾನವನಗಳ ಭೇಟಿಗೆ ಪ್ಲಾನ್ ಮಾಡಿಕೊಳ್ಳುತ್ತದೆ. ಇಬ್ಬರೂ ಪೋಷಕರು ಸಾಫ್ಟ್‌ವೇರ್ ವೃತ್ತಿಪರರಾಗಿರುವುದರಿಂದ, ಅವರು ಸಾಮಾನ್ಯವಾಗಿ ತಮ್ಮ ಪ್ರವಾಸಗಳನ್ನು ದೀರ್ಘ ವಾರಾಂತ್ಯಗಳಲ್ಲಿ ಪ್ಲಾನ್ ಮಾಡಿಕೊಳ್ಳುತ್ತಾರೆ.
ದಾಖಲೆ ನಿರ್ಮಿಸುವ ವಿಷಯದಲ್ಲಿ, ಪೋಷಕರು ಈಗಾಗಲೇ ಗಿನ್ನೆಸ್ ವಿಶ್ವ ದಾಖಲೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications