ಪ್ರಿಯಕರನ ಜೀವ ಉಳಿಸಲು ತನ್ನದೇ ಕಿಡ್ನಿ ದಾನ ಮಾಡಿದ ಯುವತಿ; ಪ್ರಾಣ ಬಂದ ಮೇಲೆ ಕೈಕೊಟ್ಟು ಬ್ಲಾಕ್ ಮಾಡಿದ ಪಾಪಿ
ಪ್ರೀತಿಗಾಗಿ ಪ್ರಾಣ ಕೊಡೋಕು ಸಿದ್ಧ ಎನ್ನುವವರನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವತಿ ತನ್ನ ಪ್ರಿಯಕರನ ಜೀವ ಉಳಿಸಲು ತನ್ನದೇ ಒಂದು ಕಿಡ್ನಿಯನ್ನು ದಾನ ಮಾಡಿದ್ದಾಳೆ. ದುರಂತವೆಂದರೆ, ಆಕೆಯ ಕಿಡ್ನಿ ಪಡೆದು ಮರುಜೀವ ಪಡೆದ ಪ್ರಿಯಕರ, ಆಕೆಗೇ ನಂಬಿಕೆ ದ್ರೋಹ ಎಸಗಿ, ಕೊನೆಗೆ ಫೋನ್‌ನಲ್ಲೇ ಬ್ರೇಕ್ ಅಪ್ ಮಾಡಿಕೊಂಡು ಎಲ್ಲೂ ಸಿಗದಂತೆ ಓಡಿಹೋಗಿದ್ದಾನೆ. ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿರುವ ಈ ಶಾಕಿಂಗ್ ಕಥೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಅಮೆರಿಕ ಮೂಲದ ಕೊಲೀನ್ ಲೆ (Colleen Le) ಎಂಬ 30 ವರ್ಷದ ಯುವತಿ ಈ ರೀತಿ ಮೋಸ ಹೋಗಿದ್ದಾಳೆ. ಈಕೆಗೆ ಒಬ್ಬ ಪ್ರಿಯಕರನಿದ್ದ. ಆತ ಮೂತ್ರಪಿಂಡದ ಕಾಯಿಲೆಯಿಂದ (Chronic Kidney Disease) ಬಳಲುತ್ತಿದ್ದ ಹಾಗೂ ಆತನಿಗೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಒಂದು ದಿನ ಆತನ ಕಿಡ್ನಿ ಕಾರ್ಯಕ್ಷಮತೆ ಕಡಿಮೆ ಇರುವುದಾಗಿ ಆತ ಕೊಲೀನ್ ಬಳಿ ಹೇಳಿಕೊಂಡಿದ್ದ. ತನ್ನ ಕಣ್ಣೆದುರೇ ಪ್ರಿಯಕರ ಪ್ರಾಣ ಬಿಡುವುದನ್ನು ನೋಡಲು ಇಷ್ಟಪಡದ ಕೊಲೀನ್, ಆತನ ಜೀವ ಉಳಿಸಲು ತಾನೇ ಕಿಡ್ನಿ ದಾನ ಮಾಡಲು ನಿರ್ಧರಿಸಿದಳು. ಅದೃಷ್ಟವಶಾತ್ ಇಬ್ಬರ ಕಿಡ್ನಿ ಮ್ಯಾಚ್ ಆಯಿತು. ತಕ್ಷಣವೇ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಕೊಲೀನ್ ತನ್ನ ಒಂದು ಕಿಡ್ನಿಯನ್ನು ಆತನಿಗೆ ನೀಡಿ ಆತನಿಗೆ ಮರುಜೀವ ನೀಡಿದಳು.

ಕಿಡ್ನಿ ಪಡೆದ 7 ತಿಂಗಳಲ್ಲೇ ಅಕ್ರಮ ಸಂಬಂಧ
ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಮುಗಿದು ಕೇವಲ ಏಳು ತಿಂಗಳಷ್ಟೇ ಆಗಿತ್ತು. ಕೊಲೀನ್ ತನ್ನ ಅಂತಿಮ ಪರೀಕ್ಷೆಗಳಿಗಾಗಿ ಓದುತ್ತಿದ್ದ ಸಮಯದಲ್ಲಿ, ಆಕೆಯ ಪ್ರಿಯಕರ ಲಾಸ್ ವೇಗಾಸ್‌ನಲ್ಲಿ ನಡೆದ ಬ್ಯಾಚುಲರ್ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ. ಅಲ್ಲಿ ಆತ ಕೊಲೀನ್‌ಗೆ ದ್ರೋಹ ಬಗೆದು ಮತ್ತೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಗಿ ಸ್ವತಃ ಒಪ್ಪಿಕೊಂಡನು. ಇದರಿಂದ ಕೊಲೀನ್ ಮನಸ್ಸಿಗೆ ಭಾರಿ ಆಘಾತವಾದರೂ, ಆತನ ಮೇಲಿನ ಪ್ರೀತಿಯಿಂದಾಗಿ ಆ ತಪ್ಪುಗಳನ್ನು ಕ್ಷಮಿಸಿ, ಎರಡನೇ ಅವಕಾಶ ನೀಡಿದಳು. ಆದರೆ ಇಷ್ಟಾದರೂ ಇಬ್ಬರ ನಡುವಿನ ಸಂಬಂಧ ಮೊದಲಿನಂತಾಗದೆ ದಿನದಿಂದ ದಿನಕ್ಕೆ ಹಳಸುತ್ತಾ ಹೋಯಿತು.
ಮೂರೇ ತಿಂಗಳಲ್ಲಿ ಫೋನ್‌ನಲ್ಲೇ ಬ್ರೇಕ್ ಅಪ್
ಇಷ್ಟೆಲ್ಲಾ ಆದರೂ ಆತನಿಗೆ ಬುದ್ಧಿ ಬರಲಿಲ್ಲ. ತಪ್ಪು ಒಪ್ಪಿಕೊಂಡ ಕೇವಲ ಮೂರೇ ತಿಂಗಳಲ್ಲಿ ಆತ ಇದ್ದಕ್ಕಿದ್ದಂತೆ ಕೊಲೀನ್‌ಗೆ ಫೋನ್ ಮಾಡಿ ಬ್ರೇಕ್ ಅಪ್ ಮಾಡಿಕೊಂಡಿದ್ದಾನೆ. "ನಾವು ನಿಜವಾಗಿಯೂ ಒಬ್ಬರಿಗೊಬ್ಬರು ಬರೆದಿದ್ದರೆ, ದೇವರು ನಮ್ಮನ್ನು ಮುಂದೆಂದಾದರೂ ಒಂದಾಗಿಸುತ್ತಾನೆ" ಎಂಬ ಫಿಲಾಸಫಿ ಡೈಲಾಗ್ ಹೊಡೆದು ಸಂಬಂಧ ಕಡಿದುಕೊಂಡಿದ್ದಾನೆ. ಅಷ್ಟಕ್ಕೇ ನಿಲ್ಲದ ಆತ, ಕೊಲೀನ್ ತನ್ನನ್ನು ಸಂಪರ್ಕಿಸಬಾರದು ಎಂಬ ಕಾರಣಕ್ಕೆ ಸೋಷಿಯಲ್ ಮೀಡಿಯಾದ ಎಲ್ಲ ಖಾತೆಗಳಲ್ಲೂ ಆಕೆಯನ್ನು ಬ್ಲಾಕ್ ಮಾಡಿದ್ದಾನೆ ಹಾಗೂ ಆಕೆಯ ಕರೆ ಮತ್ತು ಸಂದೇಶಗಳಿಗೆ ಉತ್ತರಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಕಣ್ಮರೆಯಾಗಿದ್ದಾನೆ.
ಟಿಕ್‌ಟಾಕ್‌ನಲ್ಲಿ ವೈರಲ್ ಆದ ಕಣ್ಣೀರಿನ ಕಥೆ
ಹಲವು ವರ್ಷಗಳ ಹಿಂದೆ ನಡೆದ ಈ ಹೃದಯವಿದ್ರಾವಕ ಘಟನೆಯನ್ನು ಕೊಲೀನ್ ಇತ್ತೀಚೆಗೆ ಟಿಕ್‌ಟಾಕ್ ವಿಡಿಯೋಗಳ ಮೂಲಕ ಹಂಚಿಕೊಂಡಿದ್ದಾಳೆ. ಈ ವಿಡಿಯೋಗಳನ್ನು ಬರೋಬ್ಬರಿ 15 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದು, ನೆಟ್ಟಿಗರು ಆತನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. "ಕೊಲೀನ್, ನೀನು ನಿಜಕ್ಕೂ ಶ್ರೇಷ್ಠ ವ್ಯಕ್ತಿ, ಆತನಿಗೆ ಕೃತಜ್ಞತೆ ಇಲ್ಲ" ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ಪ್ರಸ್ತುತ ಕೊಲೀನ್ ಬೇರೊಂದು ಸಂತೋಷದಾಯಕ ಸಂಬಂಧದಲ್ಲಿದ್ದು, "ಪರಿಸ್ಥಿತಿ ಏನೇ ಇರಲಿ, ಒಬ್ಬರ ಜೀವ ಉಳಿಸಲು ನನಗೆ ಸಾಧ್ಯವಾಯಿತಲ್ಲ ಎಂಬ ಹೆಮ್ಮೆ ನನಗಿದೆ. ಈಗ ಇದರ ಬಗ್ಗೆ ಹಾಸ್ಯ ಮಾಡಲು ನನಗೆ ಮಜಾ ಎನಿಸುತ್ತದೆ" ಎಂದು ಧೈರ್ಯವಾಗಿ ಹೇಳಿಕೊಂಡಿದ್ದಾಳೆ.













Click it and Unblock the Notifications