ಮಗಳ ಶಿಕ್ಷಣಕ್ಕಾಗಿ ಚಿನ್ನದ ಬಳೆ ಅಡವಿಟ್ಟ ತಾಯಿ: ಫ್ಲಿಪ್‌ಕಾರ್ಟ್ ಉದ್ಯೋಗಿಯ ಭಾವುಕ ಪೋಸ್ಟ್ ವೈರಲ್
ಬೆಂಗಳೂರಿನಲ್ಲಿರುವ ಫ್ಲಿಪ್‌ಕಾರ್ಟ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು ತಮ್ಮ ತಾಯಿಯ ತ್ಯಾಗ ಮತ್ತು ಹೋರಾಟದ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಶಿಕ್ಷಣಕ್ಕಾಗಿ ತಾಯಿ ಮಾಡಿದ ತ್ಯಾಗವು ಇಂದು ತಮ್ಮ ವೃತ್ತಿಜೀವನಕ್ಕೆ ಹೇಗೆ ಸ್ಪೂರ್ತಿಯಾಗಿದೆ ಎಂಬುದನ್ನು ಅವರು ಭಾವುಕವಾಗಿ ವಿವರಿಸಿದ್ದಾರೆ.
ಅನುಸ್ಮಿತಾ ಮೊಹಾಪಾತ್ರ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ತಮ್ಮ ಕಾಲೇಜು ಪ್ರವೇಶ ಶುಲ್ಕವನ್ನು ಪಾವತಿಸಲು ತಾಯಿ ತಮ್ಮ ಬಳೆಗಳನ್ನೇ ಅಡವಿಟ್ಟಿದ್ದ ಕಥೆಯನ್ನು ಹೇಳಿಕೊಂಡಿದ್ದಾರೆ. ಇವರ ನಿಜ ಜೀವನದ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಹೃದಯ ಗೆದ್ದಿದೆ.

ವೈರಲ್ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಏನಿದೆ?
ಅನುಸ್ಮಿತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಾಯಿಯೊಂದಿಗಿನ ಭಾವುಕ ಕ್ಷಣದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. "ಮಗಳ ಅಡ್ಮಿಷನ್ ಶುಲ್ಕ ಕಟ್ಟಲು ಚಿನ್ನದ ಬಳೆಗಳನ್ನು ಅಡವಿಟ್ಟ ತಾಯಿಯ ಮಗಳು, ಇಂದು ತನ್ನ ತಾಯಿಗೆ ಎಲ್ಲವನ್ನೂ ಕೊಡಿಸುವ ಸಾಮರ್ಥ್ಯವಿರುವ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾಳೆ" ಎಂದು ಅವರು ವಿಡಿಯೋದ ಮೇಲೆ ಬರೆದುಕೊಂಡಿದ್ದಾರೆ.
"ನನ್ನ ತಾಯಿ ಕಾಲೇಜು ಶುಲ್ಕಕ್ಕಾಗಿ ಸ್ವಲ್ಪವೂ ಯೋಚಿಸದೆ ತಮ್ಮ ಬಳೆಗಳನ್ನು ಅಡವಿಟ್ಟರು. ಇಂದದು ಪ್ರತಿದಿನ ನಾನು ಫ್ಲಿಪ್‌ಕಾರ್ಟ್ ಕಚೇರಿಗೆ ಹೋಗುತ್ತಿದ್ದೇನೆಂದರೆ ಅದು ಅವರಿಂದಲೇ ಮತ್ತು ಅವರಿಗಾಗಿಯೇ. ಈ ಕೆಲಸ ಕೇವಲ ಒಂದು ಉದ್ಯೋಗವಲ್ಲ, ಅದು ಅವಳ ತ್ಯಾಗಕ್ಕೆ ಸಿಕ್ಕ ಪ್ರತಿಫಲ" ಎಂದು ಅವರು ಬರೆದುಕೊಂಡಿದ್ದಾರೆ.
ಮಾಧ್ಯಮವೊಂದರ ಜೊತೆ ಮಾತನಾಡಿದ ಅನುಸ್ಮಿತಾ, ತಮ್ಮ ಕುಟುಂಬ ಎದುರಿಸಿದ ಆರ್ಥಿಕ ಸಂಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ. ಅವರ ತಾಯಿ ಅಮಿತಾ ಮೊಹಾಪಾತ್ರ ವೃತ್ತಿಯಲ್ಲಿ ಶಿಕ್ಷಕಿ. ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದಾಗ, ಮಕ್ಕಳ ಓದಿಗಾಗಿ ಅವರು ಕೇವಲ 3,000 ರೂ. ವೇತನದ ಸರ್ಕಾರಿ ಗುತ್ತಿಗೆ ಶಿಕ್ಷಕಿ ಕೆಲಸಕ್ಕೆ ಸೇರಿದ್ದರು.
ಭುವನೇಶ್ವರದಿಂದ 12 ಗಂಟೆಗಳ ಪ್ರಯಾಣದ ದೂರದಲ್ಲಿರುವ ಒಡಿಶಾದ ರಾಯಗಡ ಜಿಲ್ಲೆಯ ಅಂಬೊಡಾಲದಲ್ಲಿ ಅವರಿಗೆ ಪೋಸ್ಟಿಂಗ್ ಸಿಕ್ಕಿತ್ತು. "ಆಗ ನಾನು 5ನೇ ತರಗತಿಯಲ್ಲಿದ್ದೆ, ನನ್ನ ತಮ್ಮ 3ನೇ ತರಗತಿಯಲ್ಲಿದ್ದ. ಮಕ್ಕಳನ್ನು ಬಿಟ್ಟು ಹೋಗಲು ಯಾವ ತಾಯಿಗೂ ಇಷ್ಟವಿರುವುದಿಲ್ಲ, ಆದರೆ ಅವರು ನಮ್ಮ ಭವಿಷ್ಯಕ್ಕಾಗಿ ಒಂಟಿಯಾಗಿ ಅಲ್ಲಿಗೆ ಹೋಗಿ ಕೆಲಸ ಮಾಡಿದರು. ಪ್ರತಿ ಬಾರಿ ನಮ್ಮನ್ನು ಬಿಟ್ಟು ಹೋಗುವಾಗಲೂ ಅವರು ಕಣ್ಣೀರು ಹಾಕುತ್ತಿದ್ದರು" ಎಂದು ಅನುಸ್ಮಿತಾ ನೆನಪಿಸಿಕೊಂಡಿದ್ದಾರೆ.
ಎನ್‌ಐಟಿ ತಿರುಚ್ಚಿ ಪ್ರವೇಶಕ್ಕೆ ಚಿನ್ನದ ಬಳೆ ಅಡವು
ಅನುಸ್ಮಿತಾ ಅವರಿಗೆ ಎನ್‌ಐಟಿ ತಿರುಚ್ಚಿಯಲ್ಲಿ ಸೀಟು ಸಿಕ್ಕಾಗ, ಪ್ರವೇಶ ಮತ್ತು ಹಾಸ್ಟೆಲ್ ಶುಲ್ಕ ಸೇರಿ ಸುಮಾರು 1.25 ಲಕ್ಷ ರೂ. ಬೇಕಾಗಿತ್ತು. ಆ ಸಮಯದಲ್ಲಿ ಅಷ್ಟೊಂದು ಹಣ ಅವರ ಬಳಿ ಇರಲಿಲ್ಲ. ಆಗ ಅವರ ತಾಯಿ ಕ್ಷಣವೂ ಯೋಚಿಸದೆ ತಮ್ಮ ಚಿನ್ನದ ಬಳೆಗಳನ್ನು ಅಡವಿಟ್ಟು ಹಣ ಹೊಂದಿಸಿ ಕೊಟ್ಟಿದ್ದರು. ಅನುಸ್ಮಿತಾ ಅವರಿಗೆ ಇಂಟರ್ನ್‌ಶಿಪ್ ಸಿಗುವವರೆಗೂ ಪ್ರತಿ ಸೆಮಿಸ್ಟರ್ ಫೀಸ್ ಅನ್ನು ಅವರ ತಾಯಿಯೇ ಕಟ್ಟುತ್ತಿದ್ದರು. ಅಷ್ಟೇ ಅಲ್ಲದೆ, ಇಬ್ಬರು ಮಕ್ಕಳಿಗೂ ತಲಾ 60-70 ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್‌ಗಳನ್ನು ಸಹ ಯಾವುದೇ ಹಿಂಜರಿಕೆಯಿಲ್ಲದೆ ಕೊಡಿಸಿದ್ದರು.
ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾದ ಈ ಕಥೆ
"ಆಕೆಯ ಆದಾಯದಲ್ಲಿ ತನಗಾಗಿ ಏನನ್ನೂ ಉಳಿಸಲು ಸಾಧ್ಯವಿರಲಿಲ್ಲ. ಅವರು ತಮ್ಮ ಸರ್ವಸ್ವವನ್ನೂ ನಮಗಾಗಿಯೇ ಮುಡಿಪಾಗಿಟ್ಟರು. ಇಂದು ನಾನು ಏನೇ ಮಾಡುತ್ತಿದ್ದರೂ ಅದು ಅವರಿಗೆ ಅರ್ಪಿತ. ಅವರು ನಮಗೆ ನೀಡಿದ್ದರಲ್ಲಿ ಒಂದು ಸಣ್ಣ ಭಾಗವನ್ನಾದರೂ ಅವರಿಗೆ ಮರಳಿ ನೀಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ" ಎಂದು ಅನುಸ್ಮಿತಾ ಹೇಳಿದ್ದಾರೆ.
ಈ ಭಾವುಕ ಪೋಸ್ಟ್‌ಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ," "ನಿಮ್ಮ ಮುಂದಿನ ಜೀವನಕ್ಕೆ ಶುಭವಾಗಲಿ," ಎಂದು ಅನೇಕರು ಕಾಮೆಂಟ್ ಮಾಡುವ ಮೂಲಕ ಈ ಯಶೋಗಾಥೆಯನ್ನು ಕೊಂಡಾಡಿದ್ದಾರೆ.












Click it and Unblock the Notifications