ಒಂದೇ ದಿನ 4 ರಾಷ್ಟ್ರಗಳಲ್ಲಿ ಪ್ರಬಲ ಭೂಕಂಪ; ಜಗತ್ತಿನಲ್ಲಿ ಏನಾಗುತ್ತಿದೆ, ಭಾರತಕ್ಕೂ ಕಾದಿದೆಯೇ ಗಂಡಾಂತರ?
ವಾಷಿಂಗ್ಟನ್: ವಿಶ್ವದಾದ್ಯಂತ ಪ್ರಕೃತಿ ವಿಕೋಪಗಳು ಏಕಾಏಕಿ ಹೆಚ್ಚಾಗುತ್ತಿದೆ. ಕಳೆದ ವಾರ ಒಂದೇ ದಿನ ನಾಲ್ಕು ರಾಷ್ಟ್ರಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜರ್ಮನ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಬಿಸಿಲ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿ ಜನರು ಮನೆಯಿಂದ ಹೊರಗೆ ಬರುವುದಕ್ಕೇ ಆಗುತ್ತಿಲ್ಲ. ಕಳೆದ ವಾರದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಪ್ರಬಲ ಭೂಕಂಪಗಳ ಸರಣಿ ಸಂಭವಿಸಿದೆ. ವೆನೆಜುವೆಲಾದಲ್ಲಿ ಅವಳಿ ಭೂಕಂಪಗಳು, ನಂತರ ಪಾಕಿಸ್ತಾನ, ಅಫ್ಘಾನಿಸ್ತಾನ, ಜಪಾನ್ ಮತ್ತು ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಸರಣಿ ಭೂಕಂಪಗಳು ಸಂಭವಿಸಿವೆ. ಈಗ ಸಂಭವಿಸಿರುವ ಭೂಕಂಪಗಳು ಪರಸ್ಪರ ಸಂಬಂಧ ಹೊಂದಿವೆಯೇ ಅಥವಾ ಕೇವಲ ಕಾಕತಾಳೀಯವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಜೂನ್ 25ರ ಬುಧವಾರ ವೆನೆಜುವೆಲಾದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5 ರ ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸೆಕೆಂಡುಗಳಲ್ಲಿ ಸಂಭವಿಸಿ ಕಟ್ಟಡಗಳು ಕುಸಿದವು. ಅನೇಕ ಜನರು ಸಾವನ್ನಪ್ಪಿದರು ಮತ್ತು ಇತರರು ಗಾಯಗೊಂಡರು. ಇದು ಈ ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ದೊಡ್ಡ ಭೂಕಂಪವಾಗಿದೆ. ಇನ್ನು ಮೊದಲ 72 ಗಂಟೆಗಳನ್ನು ಬದುಕುಳಿದವರನ್ನು ರಕ್ಷಿಸಲು ಅತ್ಯಂತ ನಿರ್ಣಾಯಕ ಅವಧಿ ಎಂದು ಪರಿಗಣಿಸಲಾಗಿದೆ. ಅದರ ನಂತರ, ಮುಖ್ಯ ಗಮನವು ಶವಗಳನ್ನು ಹುಡುಕುವುದು ಹಾಗೂ ಅಂತ್ಯಸಂಸ್ಕಾರ ಪ್ರಕ್ರಿಯೆ ಸಂಬಂಧಿಸಿದಿದೆ. ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆ 1,430 ಕ್ಕೆ ಏರಿದೆ. ಕನಿಷ್ಠ 50,000 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಅದೇ ದಿನ ಉತ್ತರ ಕ್ಯಾಲಿಫೋರ್ನಿಯಾದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿದೆ. ಕೆಲವು ಗಂಟೆಗಳ ನಂತರ, ಜಪಾನ್‌ನ ಉತ್ತರ ಕರಾವಳಿ ಭಾಗದಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ. ದೇಶಾದ್ಯಂತ ಕಂಪನದ ತೀವ್ರತೆ ಜನರ ಅನುಭವಕ್ಕೆ ಬಂದಿದೆ. ವೆನೆಜುವೆಲಾ, ಉತ್ತರ ಅಮೆರಿಕಾ ಮತ್ತು ಜಪಾನ್‌ನಲ್ಲಿ ಸಂಭವಿಸಿದ ವಿನಾಶಕರಿ ಭೂಕಂಪನ ಬೇರೆ ರಾಷ್ಟ್ರಗಳಲ್ಲೂ ಮುಂದುವರಿದಿರುವುದು ಈಗ ಎದುರಾಗಿರುವ ಆತಂಕ. ಈ ಮೂರು ರಾಷ್ಟ್ರಗಳ ನಂತರ ದಕ್ಷಿಣ ಏಷ್ಯಾದಲ್ಲೂ ಸಹ ಭಾರೀ ದೊಡ್ಡ ಮಟ್ಟದ ಭೂಕಂಪ ಸಂಭವಿಸಿದೆ.
ಶನಿವಾರ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ 5.5 ತೀವ್ರತೆಯ ಭೂಕಂಪ ಸಂಭವಿಸಿದ್ದು, 100 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಈ ರಾಷ್ಟ್ರದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 20 ಜನರು ಗಾಯಗೊಂಡಿದ್ದಾರೆ. ಕೆಲವು ಗಂಟೆಗಳ ನಂತರ, ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಉತ್ತರ ಭಾರತದಲ್ಲಿಯೂ ಕಂಪನಗಳು ಕಂಡುಬಂದಿವೆ. ಆದರೆ ಅದೃಷ್ಟವಶಾತ್, ಈ ಭೂಕಂಪದಲ್ಲಿ ಯಾವುದೇ ಸಾವು -ನೋವುಗಳು ಸಂಭವಿಸಿರುವುದು ವರದಿಯಾಗಿಲ್ಲ.
ಇತ್ತೀಚೆಗೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ವೆನೆಜುವೆಲಾದಲ್ಲಿ ಭೂಕಂಪಗಳು ಸಂಭವಿಸಿದ್ದರೂ, ಇವೆಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪಗಳು ಭಾರತೀಯ ಪ್ಲೇಟ್ (ಭೂಮಿಯ ಮೇಲ್ಭಾಗದಲ್ಲಿರುವ ದೊಡ್ಡ ಕಲ್ಲಿನ ಭಾಗಗಳನ್ನೇ ಟೆಕ್ಟೋನಿಕ್ ಪ್ಲೇಟ್‌ಗಳು ಎನ್ನುತ್ತಾರೆ). ಯುರೇಷಿಯನ್ ಪ್ಲೇಟ್‌ಗಳು ಒಂದಕ್ಕೊಂದು ಡಿಕ್ಕಿಯಾಗುವ ಪ್ರದೇಶದಲ್ಲಿ ಸಂಭವಿಸಿವೆ. ಈ ಕಾರಣದಿಂದಲೇ ಹಿಮಾಲಯ ಮತ್ತು ಹಿಂದೂ ಕುಶ್ ಭಾಗಗಳಲ್ಲಿ ಆಗಾಗ ಭೂಕಂಪಗಳು ಉಂಟಾಗುತ್ತಿರುತ್ತವೆ.
ಇನ್ನು ವೆನೆಜುವೆಲಾದ ಭೂಕಂಪವು ಕೆರಿಬಿಯನ್ ಪ್ಲೇಟ್ ಮತ್ತು ದಕ್ಷಿಣ ಅಮೆರಿಕಾದ ಪ್ಲೇಟ್‌ಗಳು ಸೇರುವ ಪ್ರದೇಶದಲ್ಲಿ ಸಂಭವಿಸಿದೆ. ಹೀಗಾಗಿ, ಈ ಮೂರು ಭೂಕಂಪಗಳು ಒಂದೇ ಕಾರಣದಿಂದ ಅಥವಾ ಒಂದೇ ಸರಣಿಯಾಗಿ ಸಂಭವಿಸಿಲ್ಲ. ಅವು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಬೇರೆ ಬೇರೆ ಪ್ರದೇಶಗಳಲ್ಲಿ, ಬೇರೆ ಬೇರೆ ಟೆಕ್ಟೋನಿಕ್ ಪ್ಲೇಟ್‌ಗಳ ಚಲನೆಯಿಂದ ಪ್ರತ್ಯೇಕವಾಗಿ ಸಂಭವಿಸಿದ ಘಟನೆಗಳಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಬೇರೆ ದೇಶಗಳಲ್ಲಿ ಸಂಭವಿಸುತ್ತಿರುವ ಭೂಕಂಪನವು ಭಾರತದ ಮೇಲೆಯೂ ಪರಿಣಾಮ ಬೀರಬಹುದೇ ಅಥವಾ ಬೇರೆ ಬೇರೆ ರಾಷ್ಟ್ರಗಳಲ್ಲಿ ಸಂಭವಿಸುತ್ತಿರುವ ಪ್ರಕೃತಿ ವಿಕೋಪವು ಭಾರತಕ್ಕೂ ಪ್ರಕೃತಿಯನ್ನು ಕಾಪಾಡಿಕೊಳ್ಳಬೇಕು ಎನ್ನುವ ಮುನ್ಸೂಚನೆಯೇ ಎನ್ನುವ ಚರ್ಚೆ ಶುರುವಾಗಿದೆ.
ಸಂಶೋಧಕರು ಈ ಭೂಕಂಪದ ಬಗ್ಗೆ ಹೇಳುತ್ತಿರುವುದೇನು
ಈ ಭೂಕಂಪಗಳು ಒಂದಕ್ಕೊಂದು ಸಂಬಂಧಿಸಿಲ್ಲದಿದ್ದರೂ, ಭೂಮಿಯ ಟೆಕ್ಟೋನಿಕ್ ವ್ಯವಸ್ಥೆಗಳು ಯಾವಾಗಲೂ ಚಲನೆಯಲ್ಲಿರುವುದರಿಂದ ಅಂತಹ ಘಟನೆಗಳು ಯಾವಾಗಲೂ ಸಾಧ್ಯ. ಅವು ಜನನಿಬಿಡ ಪ್ರದೇಶಗಳಲ್ಲಿ ಸಂಭವಿಸಿದಾಗ ಮಾತ್ರ ನಮ್ಮ ಗಮನವನ್ನು ಸೆಳೆಯುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications