ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ
Red Chilli: ಕರ್ನಾಟಕದಲ್ಲಿ ಕಳೆದ ಬಾರಿ ಒಣ ಕೆಂಪು ಮೆಣಸಿನಕಾಯಿಗೆ ಉತ್ತಮ ದರ ಸಿಗದ ಹಿನ್ನೆಲೆಯಲ್ಲಿ ಈ ವರ್ಷ ಬಿತ್ತನೆ ಕಡಿಮೆ ಆಗಿದೆ. ಇದರಿಂದ ವಿಶ್ವ ಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಪೂರೈಕೆ, ಮಾರಾಟವು ಕೊಂಚ ತಗ್ಗಿದೆ. ಈ ಪ್ರಸಕ್ತ ವರ್ಷ ಕೆಂಪು ಮೆಣಸಿನಕಾಯಿ ದರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ವರ್ಷ ಪೂರ್ತಿ ಬಳಕೆಗೆ ಬರುವಂತೆ ಸಂಗ್ರಹಿಟ್ಟುಕೊಳ್ಳುತ್ತಿದ್ದಾರೆ. ಬೇಸಿಗೆ ಹಿನ್ನೆಲೆ ಮನೆಯಲ್ಲಿ ದಾಸ್ತಾನು ಮಾಡಿಟ್ಟಿದ್ದ ಮೆಣಸಿನಕಾಯಿಯನ್ನು ನೀರಲ್ಲಿ ತೊಳೆದು ಮತ್ತೆ ಒಣಗಿಸಿ ಬಳಕೆ ಮಾಡುವ ಪದ್ಧತಿ ಕೆಲವೆಡೆ ಇದೆ. ಈ ಬಗ್ಗೆ 'ರವಿಚಂದ್ರ ಹೆಗ್ಡೆ' ಎಂಬುವವರು ಫೆಸ್‌ಬುಕ್ ಪೋಸ್ಟ್ ಹಂಚಿಕೊಂಡಿದ್ದಾರೆ. ಅರೇ ಒಣ ಮೆಣಸಿನಕಾಯಿ ತೊಳೆದರೆ ಅದು ಹಾಲಾಗಲ್ಲವೇ! ತೊಳೆಯುವ ಉದ್ದೇಶವೇನು? ಕೆಂಪು ಒಣ ಮೆಣಸಿನಕಾಯಿ ವರ್ಷಪೂರ್ತಿ ಇಟ್ಟು ಬಳಸಬೇಕಾದರೆ ಇಲ್ಲಿ ತಿಳಿಸಿರುವ ವಿಧಾನ ಬಳಸಿನೋಡಿ..
'ಈ ಬಾರಿ ಈ ಒಣ ಕೆಂಪು ಮೆಣಸಿನಕಾಯಿ ದರ ತುಂಬಾ ದುಬಾರಿ! ನಾವು ಬಹುತೇಕ ಒಂದು ವರ್ಷದ ಉಪಯೋಗಕ್ಕಾಗಿ ಈ ಬೇಸಿಗೆ ಸಮಯದಲ್ಲಿ ಹೊಸ ಒಣಗಿದ ಮೆಣಸನ್ನು ಖರೀದಿಸಿ ತಂದು ತೊಟ್ಟು ಮುರಿದು ತೆಗೆದು ಈ ರೀತಿಯಲ್ಲಿ ನೀರಿನಲ್ಲಿ ನೆನೆಸಿ ತೊಳೆದು ಸ್ವಚ್ಛಗೊಳಿಸಿ ಒಣಗಿಸಿಯೇ ಶೇಖರಿಸುತ್ತೇವೆ.! ಇದು ಬಹುತೇಕರು ಪಾಲಿಸುವ ಉತ್ತಮ ಪದ್ಧತಿಯೂ ಹೌದು.!

ನಾವು ವರ್ಷವಿಡೀ ಬಳಸುವ ಈ ಒಣಮೆಣಸಿನಕಾಯಿ ಈ ಹಂತಕ್ಕೆ ತಯಾರಾಗುವ ವರೆಗೆ ಅದೆಷ್ಟು ಬಾರಿ ರಾಸಾಯನಿಕ ಔಷಧಗಳನ್ನು ಸಿಂಪಡಿಸುತ್ತಾರೆಂದು ಹೇಳಲು ಅಸಾಧ್ಯ! ಬಹುತೇಕವಾಗಿ ಮೆಣಸಿನ ಗಿಡಗಳಿಗೆ ಹೂವು ಬಿಡುವಲ್ಲಿಂದ ಹಿಡಿದು ಕಾಯಿ ಬೆಳವಣಿಗೆಯ ಹಂತ, ಕೊಯ್ಲಿನವರೆಗೂ ಬಹಳಷ್ಟು ಬಾರಿ ರಾಸಾಯನಿಕಗಳನ್ನು ಸಿಂಪಡಿಸುತ್ತಲೇ ಬರುತ್ತಾರೆ.
ಮಾಲಿನ್ಯ, ಕೆಂಪಾಗಿಸಲು ಬಣ್ಣ ಬಳಕೆ ಸಾಧ್ಯತೆ
ನಂತರದಲ್ಲಿ ಅದನ್ನು ಕೊಯ್ದು ತಂದು ರಾಶಿ ಹೊಡೆದು ತುಂಬಿ ಮಾರುಕಟ್ಟೆಯಲ್ಲಿ ಮಾರಾಟವಾಗುವವರೆಗೆ ಸಾಕಷ್ಟು ಕೆಲಸಕಾರ್ಯಗಳಿಂದ, ಧೂಳಿನಿಂದ ಮಾಲಿನ್ಯವಾಗುವುದೂ ಸಹ ಸಹಜ. ಹಾಗೆ ಕೆಲವರು ಈ ಮೆಣಸನ್ನು ಕೆಂಪಾಗಿಸಲು ಬಣ್ಣ ಬಳಸುವ ಸಾಧ್ಯತೆ ಇದೆ ಎಂದೂ ಹೇಳುತ್ತಾರೆ.
ಒಟ್ಟಿನಲ್ಲಿ ಈ ಮೇಲಿನ ಎಲ್ಲಾ ಅಂಶಗಳನ್ನು ಗಮನಿಸಿ ಮೆಣಸಿನಕಾಯಿಯನ್ನು ಮನೆಯ ಬಳಕೆಗಾಗಿ ಶೇಖರಿಸಿಟ್ಟುಕೊಳ್ಳುವ ಮೊದಲು ಈ ರೀತಿ ಸ್ವಚ್ಛವಾಗಿ ತೊಳೆಯುವುದು ಉತ್ತಮ. ಹಾಗೆ ತೊಳೆದ ಮೆಣಸನ್ನು ಶೇಖರಿಸುವ ಮೊದಲು ಕನಿಷ್ಠ ಮೂರು ದಿವಸವಾದರೂ ಸರಿಯಾದ ಬಿಸಿಲಿನಲ್ಲಿ ಗರಿಗರಿಯಾಗುವಂತೆ ಒಣಗಿಸಿಟ್ಟುಕೊಳ್ಳುವುದು ಸಹ ಅಷ್ಟೇ ಅವಶ್ಯ. ಇದು ನಾವು ಅನುಸರಿಸಿಕೊಂಡು ಬಂದ ಪದ್ಧತಿಯೂ ಹೌದು..
ಆದರೆ ಕೆಲವರಿಗೆ ಈ ರೀತಿ ಮೆಣಸಿನಕಾಯಿಗಳ ಸ್ವಚ್ಛಗೊಳಿಸಿ ಶೇಖರಿಸಿ ಇಟ್ಟುಕೊಳ್ಳುವ ವಿಧಾನ ಗೊತ್ತಿಲ್ಲದೆಯೂ ಇರಬಹುದು ಎನ್ನುವ ಕಾರಣಕ್ಕೆ ಈ ವಿಷಯವನ್ನು ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ' ಎಂದು ಅವರು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಹಲವರು ಕಾಮೆಂಟ್ ಮೂಲಕ ಒಂದಷ್ಟು ಮಾಹಿತಿ ತಿಳಿಸಿದ್ದಾರೆ.

ನೆನೆಸಿ ಒಣಗಿಸುವುದು ಗೊತ್ತಿರಲಿಲ್ಲ, ಥ್ಯಾಂಕ್ಸ್ ಎಂದ ನೆಟ್ಟಿಗರು
ಈ ಪೋಸ್ಟ್ ನೋಡಿದ ನೆಟ್ಟಿಗರಲ್ಲಿ ಕೆಲವರು ಕಾಮೆಂಟ್ ಮಾಡಿದ್ದಾರೆ. 'ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ನಾವು ಅಂಗಡಿಯಿಂದ ಮೆಣಸಿನಕಾಯಿ ತಂದು ಬಳಸುವುದು. ಬಿಸಿಲಿಗೆ ಇಟ್ಟು ಚೆನ್ನಾಗಿ ಒಣಗಿಸಿ ಪುಡಿಗಳನ್ನು ಇತ್ಯಾದಿಗಳನ್ನು ಮಾಡಲು ಬಳಸುವುದು ಇತ್ತು. ನೆನೆಸಿ ಒಣಗಿಸುವುದು ಅಷ್ಟಾಗಿ ಗೊತ್ತಿರಲಿಲ್ಲ' ಎಂದು ಒಬ್ಬರು ತಿಳಿಸಿದ್ದಾರೆ. ಮತ್ತೊಬ್ಬರು 'ತುಂಬಾ ಥ್ಯಾಂಕ್ಸ್..ಈ ಪದ್ಧತಿ ಗೊತ್ತಿರಲಿಲ್ಲ... ನಾವು ಬೆಂಗಳೂರಿನವರು ಹುರಿದು ಬಳಸುವುದೇ ಸಾಕು ಎಂದುಕೊಂಡಿದ್ದೆವು' ಎಂದಿದ್ದಾರೆ.
'ನನ್ನ ಅಮ್ಮ ತೊಳೆದು ಒಣಗಿಸಿ ಡಬ್ಬ ತುಂಬಿ ಒಂದ್ ವರ್ಷ ಇಡುತ್ತಿದ್ದರು' ಎಂದು ಮೂರನೇ ಬಳಕೆದಾರರು ಹಾಗೂ ನಾಲ್ಕನೇಯವರು 'ಮಾವಿನ ಹೂವು ಹೆಚ್ಚಾದ ವರ್ಷ ಮೆಣಸಿನಕಾಯಿ ಬೆಲೆಯೂ ಹೆಚ್ಚಾಗುತ್ತದೆ' ಎಂದು ತಿಳಿಸಿ ಕಾಮೆಂಟ್ ಹಾಕಿದ್ದಾರೆ. 'ನಾವು ತೊಳೆದು ಒಣಗಿಸಿ ಆದ್ಮೇಲೆ ತೊಟ್ಟು ತೆಗಿಯೋದು, ಕಾರಣ ನೀರು ಮೆಣಸಿನಕಾಯಿ ಒಳಗೆ ಹೋಗತ್ತೆ ಅಂತಾ' ಅಂತಲೂ ಇನ್ನೊಬ್ಬರು ತಿಳಿಸಿದ್ದಾರೆ. ಈ ಚರ್ಚೆಯಿಂದ ಒಣ ಮೆಣಸಿನಕಾಯಿ ಬಳಕೆ ಬಗ್ಗೆ ಒಂದಷ್ಟು ಮಾಹಿತಿಗಳು ಗೊತ್ತಿರದವರಿಗೆ ಸಿಕ್ಕಂತಾಗಿದೆ.












Click it and Unblock the Notifications