ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ!
ಬೆಂಗಳೂರು, ಮಾರ್ಚ್ 12: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುಎಸ್-ಇಸ್ರೇಲ್-ಇರಾನ್ ಸಂಘರ್ಷದ ಹಿನ್ನೆಲೆ ಎಲ್‌ಎನ್‌ಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮ ಕೇಂದ್ರ ಸರ್ಕಾರವು ನೈಸರ್ಗಿಕ ಅನಿಲ ಸರಬರಾಜು ನೀತಿ 2026 ಅನ್ನು ಜಾರಿಗೊಳಿಸಿದೆ. ಈ ಆದೇಶದಡಿ ದೇಶದಲ್ಲಿ ಲಭ್ಯವಿರುವ ನೈಸರ್ಗಿಕ ಅನಿಲವನ್ನು ಪ್ರಮುಖ ಕ್ಷೇತ್ರಗಳಿಗೆ ಆದ್ಯತೆ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತಿದೆ.
ಈ ಹೊಸ ನಿಯಮಗಳ ಪರಿಣಾಮವಾಗಿ ಕರ್ನಾಟಕದಲ್ಲಿನ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಅನಿಲ ಪೂರೈಕೆ ಕಡಿಮೆಯಾಗುವ ಸಾಧ್ಯತೆ ಇದೆ. ಏಕೆಂದರೆ ಸರ್ಕಾರವು ಮೊದಲು ಗೃಹ ಬಳಕೆಯ ಅನಿಲ, ವಾಹನಗಳಿಗೆ ಬಳಸುವ ಸಿಎನ್‌ಜಿ ಮತ್ತು ಎಲ್‌ಪಿಜಿ ಉತ್ಪಾದನೆಗೆ ಅನಿಲ ಪೂರೈಕೆಗೆ ಮೊದಲ ಆದ್ಯತೆ ನೀಡಿದೆ.

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ನೈಸರ್ಗಿಕ ಅನಿಲದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದರಿಂದ ಕರ್ನಾಟಕದ ವಿದ್ಯುತ್ ಉತ್ಪಾದನೆಯ ಮೇಲೆ ನೇರ ಪರಿಣಾಮ ಬೀರಿದೆ. ಬೆಂಗಳೂರಿನ ಯಲಹಂಕದಲ್ಲಿರುವ 370 ಮೆಗಾವ್ಯಾಟ್ ಸಾಮರ್ಥ್ಯದ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL)ನ ಏಕೈಕ ಗ್ಯಾಸ್ ಆಧಾರಿತ ವಿದ್ಯುತ್ ಸ್ಥಾವರಕ್ಕೆ ಅನಿಲ ಪೂರೈಕೆಯನ್ನು ಮಾರ್ಚ್ 12ರ ಬೆಳಿಗ್ಗೆ 6 ಗಂಟೆಯಿಂದ ಸ್ಥಗಿತಗೊಳಿಸಲಾಗಿದೆ.
ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ
ಕೇಂದ್ರ ಸರ್ಕಾರವು 'ನೈಸರ್ಗಿಕ ಅನಿಲ (ಪೂರೈಕೆ ನಿಯಂತ್ರಣ) ಆದೇಶ, 2026'ರ ಅಡಿಯಲ್ಲಿ ಆದ್ಯತೆಯ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ವಿದ್ಯುತ್ ಸ್ಥಾವರಗಳಿಗೆ ಅತಿ ಕಡಿಮೆ ಆದ್ಯತೆ ನೀಡಲಾಗಿದೆ. ಹೊಸ ನಿಯಮದ ಪ್ರಕಾರ, ಅನಿಲ ಪೂರೈಕೆಯಲ್ಲಿ ಮೊದಲ ಆದ್ಯತೆಯನ್ನು ಗೃಹಬಳಕೆಯ ಪಿಎನ್‌ಜಿ (PNG), ಎಲ್‌ಪಿಜಿ (LPG) ಉತ್ಪಾದನೆ, ಸಿಎನ್‌ಜಿ (CNG) ಸಾರಿಗೆ ಮತ್ತು ಪೈಪ್‌ಲೈನ್ ಕಾರ್ಯಾಚರಣೆಗಳಿಗೆ ನೀಡಲಾಗಿದೆ. ನಂತರದ ಸ್ಥಾನದಲ್ಲಿ ರಸಗೊಬ್ಬರ ಕಾರ್ಖಾನೆಗಳು ಮತ್ತು ಕೈಗಾರಿಕಾ ಬಳಕೆದಾರರಿದ್ದಾರೆ. ಅನಿಲ ಲಭ್ಯವಿದ್ದರೆ ಮಾತ್ರ ವಿದ್ಯುತ್ ಸ್ಥಾವರಗಳಿಗೆ ಪೂರೈಕೆ ಮಾಡಲಾಗುತ್ತದೆ.
ರಾಜ್ಯದಲ್ಲಿನ ವಿದ್ಯುತ್ ಸ್ಥಿತಿ
ಕರ್ನಾಟಕದ ದೈನಂದಿನ ವಿದ್ಯುತ್ ಬೇಡಿಕೆಯು ಸುಮಾರು 355 ಮಿಲಿಯನ್ ಯೂನಿಟ್‌ಗಳಷ್ಟಿದೆ. ಪ್ರಸ್ತುತ ಈ ಬೇಡಿಕೆಯನ್ನು ಉಷ್ಣ ವಿದ್ಯುತ್ (Thermal), ಜಲವಿದ್ಯುತ್ (Hydel), ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸುವ ಮೂಲಕ ಪೂರೈಸಲಾಗುತ್ತಿದೆ. ಅನಿಲದ ಕೊರತೆಯು ಹೀಗೆಯೇ ಮುಂದುವರಿದರೆ, ರಾಜ್ಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಣ್ಣಪುಟ್ಟ ವ್ಯತ್ಯಯಗಳು ಉಂಟಾಗುವ ಸಾಧ್ಯತೆ ಇದೆ ಎಂದು ಇಂಧನ ಇಲಾಖೆಯ ಮೂಲಗಳು ತಿಳಿಸಿವೆ.












Click it and Unblock the Notifications