Bengaluru Clinics: ಬೀದಿಬದಿ ವ್ಯಾಪಾರಿ, ವಾಹನ, ಕಸದ ನಂತರ ಕ್ಲಿನಿಕ್‌ಗಳ ಆಪರೇಷನ್‌ಗೆ ಮುಂದಾದ ಜಿಬಿಎ!
Bengaluru Clinics: ಬೆಂಗಳೂರು ನಗರದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕಳೆದ ಒಂದು ತಿಂಗಳಿನಿಂದ ವಿವಿಧ ಕಾರ್ಯಾಚರಣೆ ಹಾಗೂ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. ಮೊದಲು ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ, ಸುದೀರ್ಘ ಅವಧಿಯಿಂದ ಬೆಂಗಳೂರಿನಲ್ಲಿ ಬೀದಿಬದಿ ನಿಲ್ಲಿಸಿರುವ ವಾಹನಗಳ ತೆರವು ಕಾರ್ಯಾಚರಣೆಯನ್ನು ಸಹ ನಡೆಸಲಾಗಿತ್ತು. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸ್ವಚ್ಛತೆಗೆ ಆದ್ಯತೆ ನೀಡಲು ಮುಂದಾಗಿದೆ. ಅನಧಿಕೃತವಾಗಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ ಮಾಡಿದ್ದ ಕ್ಲಿನಿಕ್‌ಗಳಿಗೆ 50,000 ಸಾವಿರ ದಂಡ ವಿಧಿಸಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆ ಹಾಗೂ ನಗರದ ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದ, ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ಗುರಪ್ಪನಪಾಳ್ಯದಲ್ಲಿ ರಸ್ತೆ ಪಕ್ಕದಲ್ಲಿ ನಿಯಮಬಾಹಿರವಾಗಿ ಅವೈಜ್ಞಾನಿಕವಾಗಿ ವೈದ್ಯಕೀಯ ತ್ಯಾಜ್ಯ ಸುರಿದಿದ್ದ ಕ್ಲಿನಿಕ್‌ವೊಂದಕ್ಕೆ ಪಾಲಿಕೆಯು ಭಾರೀ ದಂಡ ವಿಧಿಸಿದೆ.

ಪಾಲಿ ಕ್ಲಿನಿಕ್‌ನ ಪ್ರಿಸ್ಕ್ರಿಪ್ಷನ್ ಮೂಲಕ ಸುಳಿವು
ಜಯನಗರ ವಿಭಾಗದ ಗುರಪ್ಪನಪಾಳ್ಯ ವಾರ್ಡ್‌ನಲ್ಲಿ ಐ.ಬಿ.ಎಂ ಕಚೇರಿ ಬಳಿ ಜುಲೈ 16ರ ಗುರುವಾರ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ವೈದ್ಯಕೀಯ ತ್ಯಾಜ್ಯಗಳಾದ ಸೂಜಿಗಳು, ಸಿರಿಂಜ್, ಪ್ಲಾಸ್ಟರ್‌ಗಳು, ಇಂಜೆಕ್ಷನ್‌ಗೆ ಬಳಸುವ ಪೈಪುಗಳು ಮಾತ್ರೆ ಡಬ್ಬಗಳು ಹಾಗೂ ಇನ್ನಿತರ ಅಪಾಯಕಾರಿ ವೈದ್ಯಕೀಯ ತ್ಯಾಜ್ಯಗಳನ್ನು ಸುರಿದಿರುವುದನ್ನ ಗಮನಿಸಿದ ಪೌರಕಾರ್ಮಿಕರು ಮಾರ್ಷಲ್‌ಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಮಾರ್ಷಲ್‌ಗಳು ತ್ಯಾಜ್ಯಗಳನ್ನು ಪರಿಶೀಲಿಸಿದಾಗ ವೈದ್ಯಕೀಯ ತ್ಯಾಜ್ಯಗಳೊಡನೆ ಪಲ್ಸ್ ಪಾಲಿ ಕ್ಲಿನಿಕ್ ಹೆಸರಿನ ಪ್ರಿಸ್ಕ್ರಿಪ್ಷನ್ ಪತ್ರಗಳು ಕಂಡುಬಂದಿದ್ದ ಮೇರೆಗೆ ವೈದ್ಯಕೀಯ ತ್ಯಾಜ್ಯ ಸುರಿದಿರುವವರ ಮಾಹಿತಿ ಪತ್ತೆಯಾಗಿರುತ್ತದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 50,000 ರೂ. ದಂಡ
ಇನ್ನು ಇಲ್ಲಿನ ಗುರಪ್ಪನಪಾಳ್ಯದಲ್ಲಿರುವ ಈ ಪಲ್ಸ್‌ಪಾಲಿ ಕ್ಲಿನಿಕ್‌ನಲ್ಲಿ ಉತ್ಪತಿಯಾಗುವ ವೈದ್ಯಕೀಯ ತ್ಯಾಜ್ಯವನ್ನು ನಿಗದಿತ ತ್ಯಾಜ್ಯ ವಿಲೇವಾರಿ ಸಂಸ್ಥೆ ಮೂಲಕ ವಿಲೇವಾರಿ ಮಾಡದೆ ಬೇಜವಾಬ್ದಾರಿತನದಿಂದ ಸಾರ್ವಜನಿಕ ಜಾಗದಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದಿರುವ ಹಿನ್ನೆಲೆಯಲ್ಲಿ ಪಲ್ಸ್ ಪಾಲಿ ಕ್ಲಿನಿಕ್‌ಗೆ ಪಾಲಿಕೆಯ ಘನತ್ಯಾಜ್ಯ ವಿಭಾಗದ ತಂಡವು 50,000 ರೂಪಾಯಿಗಳ ದಂಡವನ್ನು ವಿಧಿಸಿದೆ. ಬಿಎಸ್‌ಡಬ್ಲ್ಯೂಎಂಎಲ್ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ವೇತ ಹಾಗೂ ಮಾರ್ಷಲ್‌ಗಳ ತಂಡವು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಬೆಂಗಳೂರಿನ ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಅಡೆತಡೆಯಿಲ್ಲದ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದೆ. ಬೆಂಗಳೂರು ಉತ್ತರ ನಗರ ಪಾಲಿಕೆಯಿಂದ ವಿದ್ಯಾರಣ್ಯಪುರ ವಿಭಾಗದಲ್ಲಿ ಎಎಂಸಿಒ ಲೇಔಟ್ ಮುಖ್ಯರಸ್ತೆಯಲ್ಲಿ ಗಣೇಶ ದೇವಸ್ಥಾನದಿಂದ ಮುತ್ತುರಾಸ್ವಾಮಿ ದೇವಸ್ಥಾನದವರೆಗೆ ಸುಮಾರು 0.60 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಲಾಗಿದೆ. ದಾಸರಹಳ್ಳಿ ವಿಭಾಗದಲ್ಲಿ ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ (ಎಂವಿಟಿ ಕಾಲೇಜಿನಿಂದ ಅಬ್ಬಿಗೆರೆ ಮುಖ್ಯರಸ್ತೆಯವರೆಗೆ) ಸುಮಾರು 2.00 ಕಿ.ಮೀ. ವ್ಯಾಪ್ತಿಯ ವರೆಗೆ ನಡೆದಿದೆ. ಈ ಮೂಲಕ ಒಟ್ಟಾರೆ 2.60 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮುಕ್ತಗೊಳಿಸಲಾಗಿದೆ.
ಇಂದಿನ ಕಾರ್ಯಾಚರಣೆಯ ಪ್ರಮುಖಾಂಶಗಳು
* 2.60 ಕಿ.ಮೀ. ಪಾದಚಾರಿ ಮಾರ್ಗ ಅತಿಕ್ರಮಣ ಮುಕ್ತ
* 11 ಅಂಗಡಿಗಳು/ಪೆಟ್ಟಿ ಅಂಗಡಿಗಳ ತೆರವು
* 8 ತಳ್ಳುವ ಗಾಡಿಗಳ ತೆರವು
* 19 ಶೀಟ್‌ಗಳು/ಕೆನೋಪಿಗಳು/ಮೇಲ್ಛಾವಣಿಗಳ ತೆರವು
* 32 ಮೆಟ್ಟಿಲುಗಳು ಹಾಗೂ ರ್ಯಾಂಪ್‌ಗಳ ತೆರವು
* 60 ಜಾಹೀರಾತು ಫಲಕಗಳ ತೆರವು
* 21 ಟನ್ ತ್ಯಾಜ್ಯ, ಮಣ್ಣು ಹಾಗೂ ಧೂಳಿನ ತೆರವು ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ಉತ್ತರ ನಗರ ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Click it and Unblock the Notifications
