Road Survey: ಬೆಂಗಳೂರು ರಸ್ತೆಗುಂಡಿ, ಸಮಸ್ಯೆಗಳ ಪತ್ತೆಗೆ GBA ಹೊಸ ಪ್ಲ್ಯಾನ್: ಇನ್ನಾದರೂ ಸಂಚಾರ ಸುಧಾರಿಸುತ್ತಾ?
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿರುವ ರಸ್ತೆಗಳ ಪರಿಸ್ಥಿತಿ ಅರಿಯಲು ಮಹತ್ವದ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಪಾಲಿಕೆಗಳ ವ್ಯಾಪ್ತಿಯಲ್ಲಿ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳ ಸಮೀಕ್ಷೆಯನ್ನು ಡ್ಯಾಶ್ ಕ್ಯಾಮ್‌ಗಳ ಮೂಲಕ ನಡೆಸಬೇಕು. ಕೂಡಲೇ ವರದಿ ಸಲ್ಲಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿರುವ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಇಂದು ಗುರುವಾರ ಸಭೆ ನಡೆಯಿತು. ಈ ವೇಳೆ ಇಂಜಿನಿಯರ್‌ಗಳ ವಾಹನಗಳಿಗೆ ಡ್ಯಾಶ್ ಕ್ಯಾಮ್‌ಗಳನ್ನು ಅಳವಡಿಸಿ, ವಿಡಿಯೋ ದಾಖಲಾತಿಗಳ ಆಧಾರದ ಮೇಲೆ ರಸ್ತೆಗಳ ಗುಣಮಟ್ಟದ ಕುರಿತು ಸಮಗ್ರ ವರದಿಯನ್ನು ಶೀಘ್ರದಲ್ಲೇ ಸಲ್ಲಿಸಬೇಕೆಂದು ಹೇಳಿದರು.

ಬೆಳಗ್ಗೆ 7-9ವರೆಗೆ ಬೆಂಗಳೂರು ರಸ್ತೆಗಳ ಸಮೀಕ್ಷೆ
ಅಧಿಕಾರಿಗಳ ವಾಹನಗಳಿಗೆ ಅಳವಡಿಸಲಾಗಿರುವ ಡ್ಯಾಶ್ ಕ್ಯಾಮ್‌ಗಳ ಮೂಲಕ ಪ್ರತಿದಿನ ಬೆಳಗ್ಗೆ 7.00 ರಿಂದ 9.00 ಗಂಟೆಯವರೆಗೆ ರಸ್ತೆ ಸಮೀಕ್ಷೆ ನಡೆಸಬೇಕು. ಈ ಅವಧಿಯಲ್ಲಿ ವಾಹನಗಳ ಸಂಚಾರ ಕಡಿಮೆ ಇರುವುದರಿಂದ ಹೆಚ್ಚಿನ ರಸ್ತೆಗಳನ್ನು ಸಮೀಕ್ಷೆ ಮಾಡಲು ಅನುಕೂಲವಾಗಲಿದೆ. ಡ್ಯಾಶ್ ಕ್ಯಾಮ್‌ಗಳ ಮೂಲಕ ಸೆರೆಹಿಡಿಯಲಾದ ರಸ್ತೆಗಳ ದೃಶ್ಯಾವಳಿಗಳನ್ನು ಸಂಬಂಧಿತ ಪಾಲಿಕೆಗಳ ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ಸಲ್ಲಿಸಬೇಕು. ದೃಶ್ಯಾವಳಿಗಳ ದತ್ತಾಂಶ ಕೂಲಂಕಷವಾಗಿ ಪರಿಶೀಲಿಸಿ, ವರದಿ ಸಿದ್ಧಪಡಿಸಿ ಕೂಡಲೇ ನೀಡಬೇಕು ಎಂದರು.
ಮೊದಲ ಹಂತದಲ್ಲಿ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳ ಸಮೀಕ್ಷೆಯನ್ನು ಡ್ಯಾಶ್ ಕ್ಯಾಮ್‌ಗಳ ಮೂಲಕ ನಡೆಸಬೇಕು. ನಂತರ ಹಂತ ಹಂತವಾಗಿ ವಾರ್ಡ್ ರಸ್ತೆಗಳನ್ನು ಸಹ ಇದೇ ವಿಧಾನದಲ್ಲಿ ಪರಿಶೀಲಿಸಬೇಕು.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿರುವ ದೋಷ ಹೊಣೆಗಾರಿಕೆ ಅವಧಿ(Defect Liability Period - DLP) ಯಲ್ಲಿರುವ ಹಾಗೂ ಡಿಎಲ್‌ಪಿ ಅವಧಿ ಮುಕ್ತಾಯಗೊಂಡಿರುವ ರಸ್ತೆಗಳ ಪ್ರತ್ಯೇಕ ಪಟ್ಟಿಯನ್ನು ಸಿದ್ಧಪಡಿಸಬೇಕು. ಡಿಎಲ್‌ಪಿ ಅವಧಿಯಲ್ಲಿರುವ ರಸ್ತೆಗಳಲ್ಲಿ ಕಂಡುಬರುವ ದೋಷಗಳನ್ನು ಸಂಬಂಧಿತ ಗುತ್ತಿಗೆದಾರರಿಂದಲೇ ದುರಸ್ತಿಪಡಿಸಬೇಕು ಎಂದು ತಾಕೀತು ಮಾಡಿದರು.
ಡ್ಯಾಶ್ ಕ್ಯಾಮ್ ಬಳಕೆಯ ಉದ್ದೇಶ
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿರುವ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳು, ಪಾದಚಾರಿ ಮಾರ್ಗಗಳು ಹಾಗೂ ಇತರೆ ರಸ್ತೆ ಮೂಲಸೌಕರ್ಯಗಳ ಪ್ರಸ್ತುತ ಸ್ಥಿತಿಯನ್ನು ವಿಡಿಯೋ ದಾಖಲಾತಿಗಳ ಮೂಲಕ ಸಂಗ್ರಹಿಸಿ, ಸಮಗ್ರ ರಸ್ತೆ ಮೂಲಸೌಕರ್ಯ ಸಂಗ್ರಹ (Road Asset Inventory) ಸಿದ್ಧಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಸಲ್ಲಿಕೆ ಆಗುವ ವರದಿಯಲ್ಲಿ ಮಾಹಿತಿ ಆಧರಿಸಿ ರಸ್ತೆ ನಿರ್ವಹಣೆ, ಭವಿಷ್ಯದ ಅಭಿವೃದ್ಧಿ ಯೋಜನೆಗಳ ರೂಪಿಸುವಿಕೆ ಹಾಗೂ ರಸ್ತೆ ಮೂಲ ಸೌಕರ್ಯಗಳ ಪರಿಣಾಮಕಾರಿ ಮೇಲ್ವಿಚಾರಣೆಗೆ ಸಹಕಾರಿಯಾಗಲಿದೆ. ಈ ಉದ್ದೇಶಕ್ಕಾಗಿ ಅಧಿಕಾರಿಗಳ ವಾಹನಗಳಲ್ಲಿ ಡ್ಯಾಶ್ ಕ್ಯಾಮ್‌ಗಳನ್ನು ಅಳವಡಿಸಿ ರಸ್ತೆ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಆಯುಕ್ತರು ಮಾಹಿತಿ ನೀಡಿದರು.
ವರದಿ ಜಿಬಿಎ ಕೈಸೇರಿದ ಬಳಿಕ ಅದರನ್ವಯ ಸಮಸ್ಯೆಗಳ ಪರಿಹಾರಕ್ಕೆ ಇನ್ನಷ್ಟು ಸಮಯ ಹಿಡಿಯಬಹುದು. ಅದಾದ ಬಳಿಕವಾದರೂ ಬೆಂಗಳೂರಿನ ಕಿಲೋ ಮೀಟರ್ ಗಟ್ಟಲೆ ಇರುವ ರಸ್ತೆಗಳ ಸಂಚಾರ ಸುಗಮವಾಗುತ್ತಾ?. ನಗರದ ಅನೇಕ ಕಡೆಗಳಲ್ಲಿ ಒಂದು ಮಳೆಗೆ ತಗ್ಗುಗುಂಡಿ ಬೀಳುತ್ತವೆ. ಅದಕ್ಕೆಲ್ಲ ಕೊನೆಗೆ ಉತ್ತಮ ಮೂಲಸೌಕರ್ಯ ನಗರದ ಸವಾರರಿಗೆ ಸಿಗುತ್ತಾ ಎಂದು ಕಾದು ನೋಡಬೇಕಿದೆ.













Click it and Unblock the Notifications