Land Acquisition: ರಾಜ್ಯದ ಈ ಜಿಲ್ಲೆಯಲ್ಲಿ 178 ಎಕ್ರೆ ರೈತರ ಜಮೀನು ಭೂಸ್ವಾಧೀನ: ಶೀಘ್ರವೇ 48ಕೋಟಿ ರೂ ಬಿಡುಗಡೆ
ಬೆಂಗಳೂರು: ಕೃಷ್ಣಾ ನದಿ ನೀರು ಬಳಸಿ ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಮದಾಪುರ ಕೆರೆಯಲ್ಲಿ ನೀರು ತುಂಬಿಸುವ ಯೋಜನೆ ಪೂರ್ಣಗೊಂಡಿದೆ. ಹೀಗೆ ನೀರು ತುಂಬಿಸುವಾಗ ಮುಳುಗಡೆ ಆಗುವ ಕೃಷಿ ಜಮೀನನ್ನು ಕೋರಿಕೆಯ ಮೇರೆಗೆ ಭೂಸ್ವಾಧೀನ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರೂ ಆದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಹೇಳಿದರು.
ಭೂಸ್ವಾಧೀನ, ಪರಿಹಾರ ಬಿಡುಗಡೆ ಸಂಬಂಧ ಇಂದು ಗುರುವಾರ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಮತ್ತು ಎಂ.ಬಿ. ಪಾಟೀಲ ಇಬ್ಬರೂ ವಿಧಾನಸೌಧದಲ್ಲಿ ಸಣ್ಣ ನೀರಾವರಿ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಿದರು.

ಮಮದಾಪುರ ಕೆರೆಗೆ ನೀರು ತುಂಬಿಸುವಾಗ ಮುಳುಗಡೆಯದ 178 ಎಕರೆ ಜಮೀನನ್ನು ರೈತರ ಕೋರಿಕೆಯ ಮೇರೆಗೆ ಭೂಸ್ವಾಧೀನಕ್ಕೆ ಸಕಾರಾತ್ಮಕ ತೀರ್ಮಾನವಾಗಿದೆ. ಈ ವಿಷಯವನ್ನು ಸಂಪುಟದ ಮುಂದೆ ತರಲು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಸಭೆಯಲ್ಲಿದ್ದ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಧಾನ ವ್ಯವಸ್ಥಾಪಕ ಬಿ ಎಂ ಕುಲಕರ್ಣಿ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಬಿ.ಕೆ.ಪವಿತ್ರಾ ಸೇರಿದಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಮುಳುಗಡೆ ಪ್ರದೇಶದ ರೈತರಿಗೆ ಆಗುತ್ತಿರುವ ಅನಾನುಕೂಲ ಮತ್ತು ನಷ್ಟ ತಪ್ಪಿಸಲು ಸ್ವಾಧೀನದ ಅಗತ್ಯ ಇದ್ದು, ಆದಷ್ಟು ಬೇಗ ಈ ಕುರಿತು ಸಂಪುಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಳಾಗುವುದು ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.
ಬೆಳೆ ಬೆಳೆಯದ ಕೃಷ್ಟಿ ಜಮೀನು ಸ್ವಾಧೀನ
ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಶಾಸಕರೂ ಆದ ಸಚಿವ ಪಾಟೀಲ ಅವರು ಮಾತನಾಡಿ, 16ನೇ ಶತಮಾನದಲ್ಲಿ ಆದಿಲ್ ಶಾಹಿಗಳು ಕಟ್ಟಿಸಿದ ಮಮದಾಪೂರ ಕೆರೆ 1,200 ಎಕರೆ ವಿಶಾಲವಾಗಿದೆ. 15 ಹಳ್ಳಿಗಳಿಗೆ ಆಸರೆಯಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಇದಕ್ಕೆ ನೀರು ತುಂಬಿಸಲಾಗುತ್ತದೆ. ಹೀಗಾದಾಗ 42 ರೈತರಿಗೆ ಸೇರಿರುವ 178 ಎಕರೆ ಮುಳುಗಡೆಯಾಗಿ ಅಲ್ಲಿ ಏನನ್ನೂ ಬೆಳೆಯಲು ಆಗುತ್ತಿಲ್ಲ. ಹೀಗಾಗಿ ರೈತರು ಇಷ್ಟು ಜಮೀನನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಕೋರುತ್ತಿದ್ದರು. ಇದಕ್ಕೆ 42 ಕೋಟಿ ರೂಪಾಯಿ ವೆಚ್ಚವಾಗಲಿದ್ದು ಅದಕ್ಕೆ ಹಣ ಬಿಡುಗಡೆ ಮಾಡುವಂತೆ ಸಭೆಯಲ್ಲಿ ಅವರು ಮನವಿ ಮಾಡಿಕೊಂಡರು.
197 ಕೋಟಿ ರೂ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆ
ಕೃಷ್ಣಾ ನದಿ ನೀರು ನಿಗಮ ವ್ಯಾಪ್ತಿಯ ನೀರಾವರಿ ಯೋಜನೆ ಕೈಗೆತ್ತಿಕೊಂಡು 2016ರಲ್ಲಿ ಪೂರ್ಣಗೊಳಿಸಲಾಯಿತು. ಆ ವರ್ಷ ಡಿಸೆಂಬರ್‍ನಲ್ಲಿ ಕೆರೆಗೆ ನೀರು ತುಂಬಿಸಲಾಯಿತು. ಈ ಮೂಲಕ ಜಿಲ್ಲೆ ವ್ಯಾಪ್ತಿಯ ಭೂತನಾಳ, ಬೇಗಂ ತಲಾಬ್, ಸಾರವಾಡ, ಬಬಲೇಶ್ವರ, ತಿಡಗುಂದಿ ಹಾಗೂ ಮಮದಾಪುರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ನೀರಿನ ಬವಣೆ ತಪ್ಪಿಸುವ ಉದ್ದೇಶದಿಂದ ಯೋಜನೆಗೆ ಬರೋಬ್ಬರಿ 197 ಕೋಟಿ ರೂಪಾಯಿ ವ್ಯಯಿಸಲಾಯಿತು. ಮಮದಾಪುರ ಕರೆ ಜೊತೆಗೆ ಇನ್ನಿತರ ಒಟ್ಟು ಏಳು ಕೆರೆಗಳನ್ನು ತುಂಬಿಸಲಾಗಿದೆ. ಎರಡು ತಿಂಗಳಲ್ಲಿ 0.852 ಟಿಎಂಸಿ ನೀರನ್ನು ಹರಿಸಿ ಕೆರೆಗಳನ್ನು ತುಂಬಿಸಲಾಗಿತ್ತು.
ಪ್ರಸಕ್ತ ವರ್ಷ ಬೇಸಿಗೆಯಲ್ಲೂ ಇದೇ ಕೆರೆಗಳ ನೀರು ಸುತ್ತಮುತ್ತಲಿನ ಜನರಿಗೆ ಆಸರೆಯಾಗಿದೆ. 2026ರ ಮುಂಗಾರು ಕೊರತೆ, ಬರಗಾಲ ಸಂಭವ ಹಿನ್ನೆಲೆಯಲ್ಲಿ ಮುಂದಿನ ವರ್ಷ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ.


Click it and Unblock the Notifications
