ಕತಾರ್ ರಾಜ್ಯೋತ್ಸವದಲ್ಲಿ ಬಿ ಜಯಶ್ರೀ, ದುಂಡಿರಾಜ್

Posted By: ಎಚ್.ಕೆ. ಮಧು, ಕತಾರ್
Subscribe to Oneindia Kannada

ಕತಾರ್ ಕರ್ನಾಟಕ ಸಂಘದ ವತಿಯಿಂದ ಇತ್ತೀಚಿಗೆ ರಾಜಧಾನಿ ದೋಹಾದಲ್ಲಿರುವ ದೆಹಲಿ ಸಾರ್ವಜನಿಕ ಶಾಲೆಯ ಸಭಾಂಗಣದಲ್ಲಿ ಅತ್ಯಂತ ವೈಭವಯುತವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಿಕ್ಕಿರಿದು ನೆರದ ಕನ್ನಡದ ಅಭಿಮಾನಿಗಳಿಗೆ ಸಾಂಸ್ಕೃತಿಕ ಹಾಗೂ ಮನರಂಜನಾತ್ಮಕ ಕಾರ್ಯಕ್ರಮಗಳು ಮನತಣಿಸಿದವು.

ಅಬುಧಾಬಿಯಲ್ಲಿ ವಿಜೃಂಭಿಸಿದ ಕನ್ನಡ ರಾಜ್ಯೋತ್ಸವ

ಸಮಾರಂಭಕ್ಕೆ ವಿಶೇಷ ಗೌರವಾನ್ವಿತ ಅತಿಥಿಗಳಾಗಿ ಖ್ಯಾತ ರಂಗಕಲಾವಿದೆ, ಪದ್ಮಶ್ರೀ ಪುರಸ್ಕೃತ ಬಿ. ಜಯಶ್ರೀಯವರು ಆಗಮಿಸಿದ್ದರು. 2017ರ ಕತಾರ್ ಕನ್ನಡ ಸಮ್ಮಾನ್ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಬಿ.ಜಯಶ್ರೀಯವರಿಗೆ ಪ್ರದಾನ ಮಾಡಲಾಯಿತು.

B Jayashree, Dundiraj in Kannada Rajyotsava, Qatar

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಜಯಶ್ರೀಯವರು, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು. ವಿಶೇಷವಾಗಿ ಮಕ್ಕಳಿಗೆ ಕನ್ನಡ ಕಲಿಕೆಯ ತರಗತಿ ನಡೆಸುತ್ತಿರುವುದನ್ನು ಶ್ಲಾಘಿಸಿದರು. ಜಯಶ್ರೀಯವರು ಖ್ಯಾತ ರಂಗ ಕಲಾವಿದ ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಕೂಡ.

ಕುವೈತ್ ನಲ್ಲಿ ಬಂಟರ ಸಂಘದಿಂದ ಸಾಧಕರ ಸನ್ಮಾನ

ಕೋರಿಕೆಯ ಮೇರೆಗೆ ಯಾವುದೇ ವಾದ್ಯಗಳಿಲ್ಲದೆ ನೇರವಾಗಿ ತಮ್ಮ ಘನಸಿರಿ ಕಂಠದಲ್ಲಿ ಹಾಡಿದ ಗಣಪನ ಸ್ತುತಿ, ಕಂದ ಪದ್ಯ ಮತ್ತು ಕರಿಮಾಯಿ ನಾಟಕದ ಗೀತೆಗಳು ಸಭಿಕರಿಂದ ಕರತಾಡನದ ಜೊತೆಗೆ ನಿಂತು ನಮನ ಸಲ್ಲಿಕೆಯಾಯಿತು. ಪ್ರತಿಯಾಗಿ ಈ ಮಹಾನ್ ಕಲಾವಿದೆ ವೇದಿಕೆಯಿಂದಲೇ ಅಭಿಮಾನಿ ದೇವರುಗಳಿಗೆ ಶಿರಬಾಗಿ ನಮಸ್ಕರಿಸಿದರು.

B Jayashree, Dundiraj in Kannada Rajyotsava, Qatar

ಜನಪ್ರಿಯ ಹನಿಗವನ ಕವಿ ಮತ್ತು ಸಾಹಿತಿ ಎಚ್. ಡುಂಡಿರಾಜ್ ತಮ್ಮ ವಿನೋದಭರಿತ ಪುಡಿಗವನ, ನೀಳ್ಗವನ ಮತ್ತು ಹಾಸ್ಯ ಲೇಪನದ ಮಾತುಗಳಿಂದ ಸಮಾರಂಭದಲ್ಲಿ ನಗೆಗಡಲನ್ನು ಸೃಷ್ಟಿಮಾಡಿದರು. ಡುಂಡಿರಾಜ್ ರವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಪ್ರಮುಖ ಆಕರ್ಷಣೆಯಾಗಿ ಚಂದನವನದ ಮೇರುನಟ ವಿಜಯ್ ರಾಘವೇಂದ್ರ ಮತ್ತು ಮೂಗುತಿ ಸುಂದರಿ, ಯು ಟರ್ನ್ ಸಿನಿಮಾ ಖ್ಯಾತಿಯ ಶ್ರದ್ಧಾ ಶ್ರೀನಾಥ್ ಆಗಮಿಸಿದ್ದರು. ಇಬ್ಬರನ್ನೂ ಕೂಡ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವಿಜಯ ರಾಘವೇಂದ್ರರಿಗೆ 'ರಾಜ ಮಾಣಿಕ್ಯ' ಎಂಬ ಬಿರುದು ನೀಡಿ ಗೌರವಿಸಲಾಯಿತು.

B Jayashree, Dundiraj in Kannada Rajyotsava, Qatar

ಪ್ರಸಿದ್ಧ ಹಿನ್ನೆಲೆ ಗಾಯಕರಾದ ಜೋಗಿ ಸುನೀತಾ, ಎಚ್.ಎಸ್. ಶ್ರೀನಿವಾಸಮೂರ್ತಿ ಮತ್ತು ನಕುಲ್ ಅಭ್ಯಂಕರ್ ರವರ ಗಾನವಿಹಾರ ಸುಮಧುರ ಗೀತೆಗಳ ಗಾಯನಕ್ಕೆ ಮೀಸಲಾಗಿದ್ದವು. ನಾಡಗೀತೆ ಜಯ ಭಾರತ ಜನನಿಯ ತನುಜಾತೆ ಗಾಯನದಿಂದ ಪ್ರಾರಂಭವಾದ ಗಾನ ರಸಮಂಜರಿ, ಕೊನೆಯಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಕುಲದಲ್ಲಿ ಮೇಲ್ಯಾವುದೋ ಹಾಡುಗಳಿಗೆ ಅತಿಥಿ ಕಲಾವಿದರಿಂದ ಹಾಗೂ ಸಂಘದ ಸದಸ್ಯರುಗಳು ಹೆಜ್ಜೆ ಹಾಕಿದರು.

ಮೊದಲಿಗೆ ಕಹಳೆ, ಕೊಂಬು ವಾದ್ಯ, ಪೂರ್ಣಕುಂಭಗಳೊಂದಿಗೆ ಅತಿಥಿಗಳನ್ನು ಸ್ವಾಗತ ಮಾಡಲಾಯಿತು. ಸಾಂಪ್ರದಾಯಿಕ ಜ್ಯೋತಿ ಬೆಳಗಿಸಿ, ಕನ್ನಡ ಧ್ವಜಸ್ತಂಭಕ್ಕೆ ನಮನ ಸಲ್ಲಿಸಲಾಯಿತು.

B Jayashree, Dundiraj in Kannada Rajyotsava, Qatar

ಎಂ.ಸಿ.ಸಿ.ಯವರ ಮೊಬೈಲ್ ಫೋನ್ ಅತಿಬಳಕೆಯ ದುಷ್ಪರಿಣಾಮದ ಮೂಕಾಭಿನಯದ ಪ್ರಸ್ತುತಿ, ನಮ್ಮ ಸಂಘದ ವಿದ್ಯೆಯ ಮಹತ್ವ ಸಾರುವ ವಯಸ್ಕರ ಶಿಕ್ಷಣದ ಹಾಸ್ಯ ಕಿರು ಪ್ರಹಸನ, ಜೊತೆಗೆ ಕನ್ನಡ ಕಲಿಯುವ ಮಕ್ಕಳ ಪದ್ಯ ಪಠನ, ಜನಪ್ರಿಯ ಪಾತ್ರಗಳ ಪ್ರತಿಬಿಂಬಿಸುವಿಕೆ ಊಟದೆಲೆಯಲ್ಲಿನ ವಿಶೇಷ ಭಕ್ಷ್ಯಗಳಾಗಿ ಮೆಲ್ಲಲ್ಪಟ್ಟವು.

ಶ್ರೀಗಂಧ ವಾರ್ಷಿಕ ಸ್ಮರಣ ಸಂಚಿಕೆಯನ್ನು ಈ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಕನ್ನಡ ಕಲಿಕಾ ತರಗತಿಯ ಜವಾಬ್ದಾರಿ ವಹಿಸಿರುವ ಸುಧಾ ಪ್ರಭಾಕರ್, ರೂಪಾ ಪ್ರಮೋದ್ ಮತ್ತು ಪ್ರಭಾಕರ್ ರವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಕುಮಾರಿ ಅದಿತ್ರಿಯನ್ನು ಸನ್ಮಾನಿಸಲಾಯಿತು.

B Jayashree, Dundiraj in Kannada Rajyotsava, Qatar

ಸಂಘದ ಅಧ್ಯಕ್ಷ ಎಚ್.ಕೆ. ಮಧು ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಸಂದೇಶ್ ಆನಂದ್ ವಾರ್ಷಿಕ ವರದಿಯ ವಿವರ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷೆ ಮಿಲನ್ ಅರುಣ್ ವಹಿಸಿದ್ದರು. ಡಾ. ದೊರೆ ಮತ್ತು ಸುಷ್ಮಾ ಸಂದೇಶ್ ಕಾರ್ಯಕ್ರಮವನ್ನು ಮಂಜುನಾಥ್, ತುಫೈಲ್ ಮತೀನ್ ರವರ ನೆರವಿನೊಂದಿಗೆ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮಕ್ಕೆ ಮಂಗಳ ಹಾಡಿದಾಗ ಈ ಕನ್ನಡದ ಹಬ್ಬದಲ್ಲಿ ಪಾಲ್ಗೊಂಡ ಎಲ್ಲ ಗಣ್ಯಾತಿಗಣ್ಯ ಅತಿಥಿಗಳ, ಸಭಿಕರ ಮತ್ತು ಸದಸ್ಯರ ಮನಸ್ಸು ಮಾಗಿತ್ತು, ಬಾಗಿತ್ತು ಮತ್ತು ತಾಗಿತ್ತು!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada threatre artist B Jayashree, poet Dundiraj, actors Vijay Raghavendra, Shraddha Srinath participate in Kannada Rajyotsava celebrations in Doha by Qatar Kannada Sangha.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ