"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ
ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಫೆಬ್ರವರಿ 26 ರಂದು ಉದಯಪುರದಲ್ಲಿ ನಡೆದ ಅದ್ಧೂರಿ ವಿವಾಹದ ನಂತರ, ಈ ಜೋಡಿ ತಮ್ಮ ಅಭಿಮಾನಿಗಳೊಂದಿಗೆ ವಿಭಿನ್ನವಾಗಿ ಭೋಜನಕೂಟ ಆಯೋಜಿಸಿ ಗಮನ ಸೆಳೆದಿತ್ತು. ಇದರ ನಡುವೆ, ಪುಟಾಣಿ ಅಭಿಮಾನಿಯೊಬ್ಬಳು ನನ್ನನ್ನೇಕೆ ಮದುವೆಗೆ ಕರೆದಿಲ್ಲ? ಎಂದು ಪ್ರಶ್ನೆ ಮಾಡಿರುವ ವಿಡಿಯೋ ಮತ್ತು ಅದಕ್ಕೆ ವಿಜಯ್ ನೀಡಿದ ಉತ್ತರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಜಯ್ ಮೇಲೆ ಮಗುವಿನ ಮುನಿಸು
ನವವಿವಾಹಿತ ವಿಜಯ್ ದೇವರಕೊಂಡ ಅವರಿಗೆ ವಿಡಿಯೋ ಮೂಲಕ ಪ್ರಶ್ನೆ ಕೇಳಿದ ಪುಟ್ಟ ಬಾಲಕಿ, "ನಾನು ಕೂಡ ನಿಮ್ಮ ಅಭಿಮಾನಿಯಲ್ಲವೇ? ಮದುವೆಯ ರಿಸೆಪ್ಷನ್‌ಗೆ ನನ್ನನ್ನು ಯಾಕೆ ಆಹ್ವಾನಿಸಲಿಲ್ಲ? ನಮ್ಮ ಕಥೆಯೇನು?" ಎಂದು ಮುದ್ದಾಗಿ ದಬಾಯಿಸಿದ್ದಾಳೆ. ಈ ವಿಡಿಯೋ ವಿಜಯ್ ಗಮನಕ್ಕೆ ಬರುತ್ತಿದ್ದಂತೆಯೇ ಅವರು ಅತ್ಯಂತ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.

"ಪುಟ್ಟ ತಾಯಿ (ಬುಜ್ಜಿ ತಲ್ಲಿ)... ನಿನ್ನನ್ನು ಮನೆಗೆ ಊಟಕ್ಕೆ ಆಹ್ವಾನಿಸುತ್ತೇನೆ. ನಿನ್ನ ಇಷ್ಟದ ಆಹಾರ ಮತ್ತು ಸಿಹಿ ಪದಾರ್ಥಗಳು ಯಾವುದು ಎಂದು ಹೇಳು, ಎಲ್ಲವನ್ನೂ ಮನೆಯಲ್ಲಿಯೇ ಮಾಡಿಸಿ ಇಬ್ಬರೂ ಸೇರಿ ಹೊಟ್ಟೆ ತುಂಬಾ ತಿನ್ನೋಣ" ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಕೂಡ ಈ ವಿಡಿಯೋವನ್ನು ಹಂಚಿಕೊಂಡು ಪುಟಾಣಿಗೆ ವಿಶೇಷ ಉಡುಗೊರೆಯ ಭರವಸೆ ನೀಡಿದ್ದಾರೆ.
ಅಭಿಮಾನಿಗಳೊಂದಿಗೆ ಭರ್ಜರಿ ಔತಣ
ಮದುವೆ ಬಳಿಕ ವಿಜಯ್ ಮತ್ತು ರಶ್ಮಿಕಾ ಅಭಿಮಾನಿಗಳ ಜೊತೆ ವಿಶೇಷ ಔತಣಕೂಟದಲ್ಲಿ ಕುಳಿತು ಭೋಜನ ಸವಿದಿದ್ದರು. ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಈ 'ಮೀಟ್ ಅಂಡ್ ಗ್ರೀಟ್' ಕಾರ್ಯಕ್ರಮದಲ್ಲಿ ನವದಂಪತಿ ಅಭಿಮಾನಿಗಳೊಂದಿಗೆ ಆತ್ಮೀಯವಾಗಿ ಬೆರೆತಿದ್ದರು. ಕೇವಲ ಫೋಟೋಗಳಿಗೆ ಪೋಸ್ ನೀಡುವ ಬದಲು, ಪ್ರತಿಯೊಬ್ಬ ಅಭಿಮಾನಿಯನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಅವರೊಂದಿಗೆ ಹರಟೆ ಹೊಡೆಯುತ್ತಾ ಸಮಯ ಕಳೆದಿದ್ದು ವಿಶೇಷವಾಗಿತ್ತು.
ಈ ವಿಶೇಷ ಕಾರ್ಯಕ್ರಮಕ್ಕಾಗಿ ರಶ್ಮಿಕಾ ಮಂದಣ್ಣ ಅವರು ಸುಂದರವಾದ ಪ್ರಿಂಟೆಡ್ ಸೀರೆಯನ್ನು ಉಟ್ಟಿದ್ದರೆ, ವಿಜಯ್ ದೇವರಕೊಂಡ ಅವರು ನೀಲಿ ಬಣ್ಣದ ಫ್ಲೋರಲ್ ಪ್ರಿಂಟ್ ಕುರ್ತಾದಲ್ಲಿ ಮಿಂಚಿದರು. ಈ ಜೋಡಿ ಕೇವಲ ವೇದಿಕೆಯ ಮೇಲೆ ನಿಲ್ಲದೆ, ಅಲ್ಲಿಗೆ ಬಂದಿದ್ದ ಪ್ರತಿಯೊಬ್ಬ ಅಭಿಮಾನಿಯನ್ನೂ ವೈಯಕ್ತಿಕವಾಗಿ ಮಾತನಾಡಿಸಿ ಖುಷಿ ಪಟ್ಟರು. ಅಭಿಮಾನಿಗಳೊಂದಿಗೆ ಈ ಜೋಡಿ ಊಟ ಮಾಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು.
ರಶ್ಮಿಕಾ-ವಿಜಯ್ ಜೋಡಿ ಫೆಬ್ರವರಿ 26ರಂದು ಉದಯಪುರದಲ್ಲಿ ಆಪ್ತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದರು. ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಭವ್ಯವಾದ ಆರತಕ್ಷತೆ ಹಮ್ಮಿಕೊಳ್ಳಲಾಗಿತ್ತು. ಸಂಪ್ರದಾಯಬದ್ಧ ಉಡುಪಿನಲ್ಲಿ ಮಿಂಚಿದ ಈ ಜೋಡಿ ಎಲ್ಲರ ಗಮನ ಸೆಳೆಯಿತು.
ಇನ್ನು ತಮ್ಮ ಮದುವೆಯ ಸವಿನೆನಪಿಗಾಗಿ ಮಾರ್ಚ್ 1ರಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಸಿಹಿ ಹಂಚಲಾಗಿತ್ತು. ಅಲ್ಲದೆ, ಪ್ರಮುಖ ದೇವಸ್ಥಾನಗಳಲ್ಲಿ ಅನ್ನದಾನ ಸೇವೆಯನ್ನೂ ಆಯೋಜಿಸಲಾಗಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರೂ, ಮದುವೆಯವರೆಗೂ ತಮ್ಮ ಸಂಬಂಧವನ್ನು ಗುಟ್ಟಾಗಿರಿಸಿದ್ದ ಈ ಜೋಡಿ, ಇದೀಗ ಅಧಿಕೃತವಾಗಿ ದಾಂಪತ್ಯ ಜೀವನ ಆರಂಭಿಸಿದ್ದಾರೆ.












Click it and Unblock the Notifications