Shreyanka Patil: ಟೀಮ್ ಇಂಡಿಯಾದಿಂದ ಹೊರಬಿದ್ದ ಬಳಿಕ ಆರ್‌ಸಿಬಿ ಟಗರುಪುಟ್ಟಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಹೊಸ ವಿಡಿಯೋ
Shreyanka Patil: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಇತ್ತೀಚೆಗಷ್ಟೇ ಗಾಯದ ಸಮಸ್ಯೆಯಿಂದಾಗಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಹೊರಬಿದ್ದಿದ್ದರು. ಇದೀಗ ಅವರು ಚೇತರಿಸಿಕೊಳ್ಳುತ್ತಿದ್ದು, ಈ ನಡುವೆಯೇ ಸಾಮಾಜಿಕ ಜಾಲತಾಣ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳ ಗಮನ ಸೆಳೆದಿದ್ದು, ಸಖತ್ ಸದ್ದು ಮಾಡುತ್ತಿದೆ.
ಸದ್ಯ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಗಾಯಗೊಂಡು ಈ ಟೂರ್ನಿಯಿಂದಲೇ ಹೊರಬಿದ್ದ ಕನ್ನಡತಿ ಹಾಗೂ ಆರ್‌ಸಿಬಿ ಟಗರು ಪುಟ್ಟಿ ಶ್ರೇಯಾಂಕಾ ಪಾಟೀಲ್ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ತೀವ್ರ ನಿರಾಶೆಗೊಂಡಿರುವ ಅವರು, ಪ್ರಸ್ತುತ ತಾವು ಗುಣಮುಖರಾಗುತ್ತಿರುವ ಹಂತದ ಭಾವುಕ ಮತ್ತು ಧನಾತ್ಮಕ ವಿಡಿಯೋವೊಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಶ್ರೇಯಾಂಕಾ ಪಾಟೀಲ್ ವಿಡಿಯೋದಲ್ಲೇನಿದೆ?
ಶ್ರೇಯಾಂಕಾ ಪಾಟೀಲ್ ಅವರು ಗಾಯಗೊಂಡ ನಂತರದ ತಮ್ಮ ದಿನಚರಿ ಮತ್ತು ಚೇತರಿಕೆ ಆಗುತ್ತಿರುವುದು ಈ ವಿಡಿಯೋದಲ್ಲಿದೆ. ಆರಂಭದಲ್ಲಿ ಅವರು ವಿಮಾನ ನಿಲ್ದಾಣದಲ್ಲಿ ವೀಲ್‌ಚೇರ್‌ನಲ್ಲಿ ಕುಳಿತು ಬರುತ್ತಿರುವುದನ್ನು ಕಾಣಬಹುದು. ಅವರ ಕಾಲಿಗೆ ತೀವ್ರ ಗಾಯ ಆಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಮತ್ತೊಂದು ದೃಶ್ಯದಲ್ಲಿ ಅವರು ತಮ್ಮ ಆಪ್ತರೊಂದಿಗೆ ಕುಳಿತು ಗಿಟಾರ್ ನುಡಿಸುತ್ತಾ, ಹಿನ್ನೆಲೆಯಲ್ಲಿ ಕೇಳಿಸುವ ಮಧುರ ಗೀತೆಗೆ ಧ್ವನಿಯಾಗುವ ಮೂಲಕ ತಮ್ಮ ಮನಸ್ಸನ್ನು ಹಗುರಗೊಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಧೃತಿಗೆಡದ ಟಗರುಪುಟ್ಟಿ
ಕ್ರಿಕೆಟ್ ಮೈದಾನದಿಂದ ದೂರವಿದ್ದರೂ ಧೃತಿಗೆಡದ ಶ್ರೇಯಾಂಕಾ ಈ ಕಠಿಣ ಸಮಯದಲ್ಲಿ ತಮ್ಮ ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಕೈಗೆ ಹೊಸ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ಹಾಗೂ ತಾವೇ ಸ್ವತಃ ಇಲೆಕ್ಟ್ರಿಕ್ ವೀಲ್‌ಚೇರ್ ಚಲಾಯಿಸಿಕೊಂಡು ತಮ್ಮ ಅಪಾರ್ಟ್‌ಮೆಂಟ್ ಆವರಣದಲ್ಲಿ ಸುತ್ತಾಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ. ಅಷ್ಟೇ ಅಲ್ಲದೆ ಕ್ರಿಕೆಟ್ ಮೇಲಿನ ತಮ್ಮ ಅಪಾರ ಪ್ರೀತಿಯನ್ನು ತೋರ್ಪಡಿಸಿದ್ದು, ಮನೆಯಲ್ಲೇ ಕುಳಿತು ಟಿವಿಯಲ್ಲಿ ಮಹಿಳಾ ಟಿ20 ವಿಶ್ವಕಪ್ ಪಂದ್ಯವನ್ನು ವೀಕ್ಷಿಸುತ್ತಾ ತಮ್ಮ ಸಹ ಆಟಗಾರ್ತಿಯರನ್ನು ಮತ್ತು ನೆಚ್ಚಿನ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ.
ವಿಡಿಯೋದ ಕೊನೆಯಲ್ಲಿ ಕಾಲಿಗೆ ಬ್ಯಾಂಡೇಜ್ ಮತ್ತು ವೈದ್ಯಕೀಯ ಸಲಕರಣೆಗಳಿದ್ದರೂ ಮುಖದಲ್ಲಿ ಭರವಸೆಯ ಮಂದಹಾಸದೊಂದಿಗೆ 'ವಿಕ್ಟರಿ' ಸಿಂಬಲ್ ತೋರಿಸಿ ತಮ್ಮ ಧನಾತ್ಮಕ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ವಿಶ್ವಕಪ್‌ನಂತಹ ದೊಡ್ಡ ಟೂರ್ನಿಯಲ್ಲಿ ದೇಶವನ್ನು ಪ್ರತಿನಿಧಿಸುವ ಮತ್ತು ಅತ್ಯುತ್ತಮ ಪ್ರದರ್ಶನ ನೀಡುವ ದೊಡ್ಡ ಅವಕಾಶ ಕೈತಪ್ಪಿರುವುದು ಶ್ರೇಯಾಂಕಾ ಅವರಿಗೆ ತೀವ್ರ ಬೇಸರ ಮೂಡಿಸಿದೆ.
ಭರ್ಜರಿ ಕಮ್‌ಬ್ಯಾಕ್ ಮಾಡಿದ್ದ ಶ್ರೇಯಾಂಕಾ
ಇತ್ತೀಚಿನ ದಿನಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ಈ ಕನ್ನಡತಿ ಭಾರತ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದರು. ಆದರೂ ಅವರು ಈ ಹಿನ್ನಡೆಯನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ. ಶ್ರೇಯಾಂಕಾ ಅವರು ಶೀಘ್ರದಲ್ಲೇ ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತಷ್ಟು ಬಲಶಾಲಿಯಾಗಿ ಕ್ರಿಕೆಟ್ ಮೈದಾನಕ್ಕೆ ಮರಳಲಿದ್ದಾರೆ ಎಂಬ ಆಶಯದೊಂದಿಗೆ ಅಭಿಮಾನಿಗಳು ಹಾಗೂ ಕ್ರಿಕೆಟ್ ಪ್ರೇಮಿಗಳು ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಶ್ರೇಯಾಂಕಾ ಹಂಚಿಕೊಂಡಿರುವ ಈ ವಿಡಿಯೋ ಇದೀಗ ಸಖತ್ ಸದ್ದು ಮಾಡುತ್ತಿದೆ.












Click it and Unblock the Notifications