ಬೆಂಗಳೂರುಗೆ 1000 ಕಿಮೀ ಹೊಸ ರೂಪದ ಪಾದಚಾರಿ ಮಾರ್ಗ; ಮೊದಲ ಹಂತದಲ್ಲಿ 100 ಕಿಮೀ ಅಭಿವೃದ್ಧಿ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ 1000 ಕಿಲೋ ಮೀಟರ್ ಪಾದಚಾರಿ ಮಾರ್ಗ ನಿರ್ವಹಣೆ ಮಾಡಲಾಗುತ್ತಿದೆ. ಇತ್ತೀಚೆಗೆ ಈ ಬಗ್ಗೆ ಜಿಬಿಎ ಅಧಿಕಾರಿಗಳು ಘೋಷಿಸಿದ್ದರು. ಪ್ರಸಕ್ತ 2026-27ನೇ ಸಾಲಿನ ಆಯವ್ಯಯದಲ್ಲಿ ಅನುದಾನ ಮೀಸಲಿಡಲಾಗಿದೆ. ಪಾಲಿಕೆ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಕಾರ್ಯಾದೇಶ ನೀಡುವ ಹಂತದಲ್ಲಿದೆ.
ಭಾನುವಾರ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ ಪಾದಚಾರಿ ಮಾರ್ಗಗಳ (Footpath) ಒತ್ತುವರಿ ತೆರವು ಹಾಗೂ ನಿರ್ವಹಣೆ ಕುರಿತು ಸಭೆ ನಡೆಸಿದರು. ಪ್ರತಿ ವಿಭಾಗದಿಂದ ನಿರ್ವಹಣೆ ಹಾಗೂ ಸುಧಾರಣೆ ಅಗತ್ಯವಿರುವ ಪಾದಚಾರಿ ಮಾರ್ಗಗಳ ಪಟ್ಟಿಯನ್ನು ನೀಡುವಂತೆ ಕಾರ್ಯನಿರ್ವಾಹಕ ಅಭಿಯಂತರರಿಗೆ ನಿರ್ದೇಶನ ನೀಡಲಾಯಿತು.

100 ಕಿ.ಮೀ ಪಾದಾಚಾರಿ ಮಾರ್ಗ ಅಭಿವೃದ್ಧಿ
ಇದೇ ವೇಳೆ ಮಾತನಾಡಿದ ಅವರು, 1000 ಕಿಲೋ ಮೀಟರ್ ಪಾದಚಾರಿ ನಿರ್ವಹಣೆ ಯೋಜನೆ ಅಪ್ಡೇಟ್ ನಿಡಿದರು. ಪ್ರಾರಂಭಿಕ ಹಂತದಲ್ಲಿ ಪ್ರತಿ ವಿಭಾಗವಾರು 15 ಕಿಲೋ ನಂತೆ ಒಟ್ಟು ನಗರ ಪಾಲಿಕೆಯಾದ್ಯಂತ 100 ಕಿ.ಮೀ ಉದ್ದದ ಪಾದಚಾರಿ ಮಾರ್ಗಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ರವರ ನಿರ್ದೇಶನದಂತೆ ಜುಲೈ 1ರಿಂದ ನಗರದ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರು ಸುಗಮವಾಗಿ ಬಳಸುವಂತಾಗಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಕಾರ್ಯಕ್ಕೆ ಸಂಬಂಧಿಸಿದಂತೆ ಎಲ್ಲ ಅಧಿಕಾರಿಗಳು ಸಜ್ಜಾಗಿರಬೇಕು ಎಂದರು.
ಒತ್ತುವರಿ: ರಾತ್ರಿ ಗಸ್ತು ಹೆಚ್ಚಿಸಲು ಸೂಚನೆ
ನಗರದ ಹಲವೆಡೆ ಪಾದಚಾರಿ ಮಾರ್ಗಗಳು ಒತ್ತುವರಿ, ವಿವಿಧ ಅವಶೇಷಗಳು ಹಾಗೂ ಇತರ ಅಡೆತಡೆಗಳಿಂದ ಸಾರ್ವಜನಿಕರ ಬಳಕೆಗೆ ಅಸೌಕರ್ಯ ಉಂಟಾಗಿದೆ. ಇಂತಹ ಸ್ಥಳಗಳನ್ನು ಗುರುತಿಸಿ ಪಾದಚಾರಿಗಳಿಗೆ ಯಾವುದೇ ಅಡಚಣೆಯಾಗದ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಪಾದಚಾರಿ ಮಾರ್ಗ ಮರು ಒತ್ತುವರಿಯಾಗದಂತೆ ಹಗಲು ರಾತ್ರಿ ಗಸ್ತು ವ್ಯವಸ್ಥೆ ಬಲಪಡಿಸುವಂತೆ ಸೂಚಿಸಿದರು.
ಪಾದಚಾರಿ ಮಾರ್ಗಗಳಲ್ಲಿ ಮರು ಒತ್ತುವರಿ ನಡೆಯದಂತೆ ತಡೆಗಟ್ಟಲು ಮಾರ್ಷಲ್‌ಗಳು ಹಾಗೂ ಹಾಲಿ ಇರುವ 2 ಹೊಸದಾಗಿ ಖರೀದಿಸಲಾಗುತ್ತಿರುವ 2 'ಪ್ರಹರಿ' ವಾಹನಗಳನ್ನು ಬಳಸಿಕೊಂಡು ಹಗಲು-ರಾತ್ರಿ ಗಸ್ತು ವ್ಯವಸ್ಥೆಯನ್ನು ಬಲಪಡಿಸಲು ಸೂಚನೆ ನೀಡಲಾಯಿತು. ಪ್ರತಿ ವಾಹನಕ್ಕೆ ಇಬ್ಬರು ಮಾರ್ಷಲ್‌ಗಳನ್ನು ನಿಯೋಜಿಸಿ ನಿರಂತರ ನಿಗಾ ವಹಿಸಬೇಕೆಂದು ಹೇಳಿದರು.
ನಗರದ ಆರ್ಟೀರಿಯಲ್, ಸಬ್-ಆರ್ಟೀರಿಯಲ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಸಮಗ್ರ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಪಾಲಿಕೆ ಬದ್ಧವಾಗಿದ್ದು, ಸಾರ್ವಜನಿಕರಿಗೆ ಸುರಕ್ಷಿತ ಮತ್ತು ಸುಗಮ ಸಂಚಾರ ವಾತಾವರಣ ಕಲ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.














Click it and Unblock the Notifications