ಗಾರ್ಡನ್ ಸಿಟಿಯಿಂದ ಕಾಂಕ್ರೀಟ್ ಜಂಗಲ್: ನಾವು ಕಟ್ಟಿದ್ದೇನು-ಕಟ್ಟಬೇಕಾಗಿದ್ದೇನು?, ಉದ್ಯಮಿ ಪೊಸ್ಟ್‌ಗೆ ಭಾರೀ ಬೆಂಬಲ
ಬೆಂಗಳೂರು: ಸಿಲಿಕಾನ್ ಸಿಟಿ, ಉದ್ಯಾನ ನಗರಿ ಬೆಂಗಳೂರಿನಲ್ಲಿ ಟ್ರಾಫಿಕ್ ಕಡಿವಾಣಕ್ಕಾಗಿ ಮುಖ್ಯಮಂತ್ರಿಗಳು ಶಾರ್ಟ್ ಟನಲ್ ರಸ್ತೆಗೆ (Bengaluru Tunnel Road) ಕಾಮಗಾರಿ ಆರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬೆನ್ನಲ್ಲೇ ರಸ್ತೆ ಮೂಲಸೌಕರ್ಯ ಕುರಿತು ಖ್ಯಾತ ಉದ್ಯಮಿ ಪ್ರಶ್ನಿಸಿದ್ದಾರೆ. ಹದಗೆಡುತ್ತಿರುವ ನಗರಾಭಿವೃದ್ದಿ ಬಗ್ಗೆ ಉದ್ಯಮಿ, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ.
ಬೆಂಗಳೂರಿನ ಮೂಲಸೌಕರ್ಯ ಯೋಜನೆಗಳು, ರಸ್ತೆ, ಹದಗೆಡುತ್ತಿರುವ ನಗರಾಭಿವೃದ್ಧಿಯನ್ನು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ಕಾಲದಲ್ಲಿ 'ಉದ್ಯಾನ ನಗರಿ' ಎಂದು ಹೆಮ್ಮೆಯಿಂದ ಗುರುತಿಸಲ್ಪಡುತ್ತಿದ್ದ ಬೆಂಗಳೂರು ಇಂದು ಕಾಂಕ್ರೀಟ್ ಜಂಗಲ್ ಆಗಿ ಮಾರ್ಪಡುತ್ತಿದೆ. ಪ್ರಯಾಣಿಕರು, ಸವಾರರು, ಪಾದಾಚಾರಿಗಳು ಮೂಲಸೌಕರ್ಯಗಳ ಕೊರತೆಯಿಂದ ಪರದಾಡುವಂತಾಗಿದೆ ಎಂದು ಭಾನುವಾರ ಎಕ್ಸ್ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ನಲ್ಲಿ ಅವರು 'ಅಭಿವೃದ್ಧಿ ಮಾಡಿದ್ದೇನು? ನಾವು ಅಭಿವೃದ್ಧಿ ಮಾಡಬೇಕಾಗಿದ್ದೇನು' ಎಂಬುದನ್ನು ವಿವರಿಸುವ ವಿಶೇಷ ಗ್ರಾಫಿಕ್ಸ್ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಪ್ರಸ್ತುತ ರಸ್ತೆ ಯೋಜನೆಗಳ ಬಗ್ಗೆ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವ್ಯವಸ್ಥಿತ ನಗರಾಭಿವೃದ್ಧಿಯ ಕೊರತೆ ಇದ್ದು, ಯೋಜನೆಗಳಿಂದಾಗಿ ಬೆಂಗಳೂರಿನ ಹಸಿರು ಹೊಸಿಕೆ ಮಾಯವಾಗುತ್ತಿದೆ. ತಾಜ್ಯ ಸಮಸ್ಯೆ ಉಲ್ಬಣಿಸುತ್ತಿದ್ದು, 'ಕಸದ ನಗರಿ'ಯಾಗಿ ಬದಲಾಗುತ್ತಿದೆ ಎಂದು ಅವರು ವಿಷಾದಿಸಿದ್ದಾರೆ. ಹಸಿರು ಮತ್ತು ವ್ಯವಸ್ಥಿತ ರಸ್ತೆ ಯೋಜನೆಗಳು ನಗರದ ಸೌಂದರ್ಯದ ಜೊತೆಗೆ ಪರಿಸರವನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ಅವರು ವಿವರಿಸಿದ್ದಾರೆ.
ಬೆಂಗಳೂರಿನ ರಸ್ತೆ ಅಭಿವೃದ್ಧಿಯ ಎರಡು ಮುಖಗಳು
ಮಜುಂದಾರ್ ಶಾ ಅವರ ಪ್ರಕಾರ, ನಗರದ ರಸ್ತೆ ಮತ್ತು ಮೇಲ್ಸೇತುವೆಯ ಎರಡು ಭಿನ್ನ ಯೋಜನೆಗಳ ಹೋಲಿಕೆ ಮಾಡಲಾಗಿದೆ. 'ನಾವು ನಿರ್ಮಿಸಿರುವುದು' ಎಂಬ ಶೀರ್ಷಿಕೆಯಡಿ ಮರಗಳಿಲ್ಲದ, ಪಾದಚಾರಿ ಮಾರ್ಗಗಳು ಹಾಗೂ ಸೈಕ್ಲಿಂಗ್ ಟ್ರ್ಯಾಕ್‌ಗಳಿಲ್ಲದ ಕೇವಲ ಕಾಂಕ್ರೀಟ್‌ನಿಂದ ಕೂಡಿದ ರಸ್ತೆ ಅಭಿವೃದ್ಧಿಪಡಿಸಿದ್ದನ್ನು ತೋರಿಸಲಾಗಿದೆ. ಇನ್ನೊಂದು ಬಲ ಬದಿಯ ಹಸಿರು ಗಿಡಮರಗಳು, ವಿಶಾಲವಾದ ಫುಟ್‌ಪಾತ್, ಸಾರ್ವಜನಿಕ ಸೌಲಭ್ಯಗಳು, ಬೀದಿ ದೀಪಗಳು ಮತ್ತು ಕಸದ ಬುಟ್ಟಿಗಳಿರುವ ವ್ಯವಸ್ಥಿತ ರಸ್ತೆ ಯೋಜನೆ ಚಿತ್ರವಿದ್ದು, ನಾವು ಇದನ್ನು ಅಭಿವೃದ್ಧಿಪಡಿಸಬೇಕಾಗಿರುವುದು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಪೋಸ್ಟ್‌ಗೆ ನೆಟ್ಟಿಗರ ವ್ಯಾಪಕ ಬೆಂಬಲ
ಬೆಂಗಳೂರಿನ ಕಾಳಜಿ ಕುರಿತ ಮಜುಂದಾರ್ ಶಾ ಅವರ ಪೋಸ್ಟ್‌ಗೆ ಬೆಂಗಳೂರಿನ ನಾಗರಿಕರು ಹಾಗೂ ಜಾಲತಾಣಿಗರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಕಳಪೆ ನಗರಾಭಿವೃದ್ಧಿಯ ವಿರುದ್ಧ ಜನರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ರಾಜಕಾರಣಿಗಳು ಮತ್ತು ಅಧಿಕಾರಿಗಳ ಭ್ರಷ್ಟಾಚಾರ ಹಾಗೂ ಕಮಿಷನ್ ದಂಧೆಯಿಂದಾಗಿ ನಗರದ ನೈಸರ್ಗಿಕ ಸೌಂದರ್ಯ ಹಾಳಾಗಿದೆ ಎಂದು ಕೆಲವರು ಸರ್ಕಾರವನ್ನು ಟೀಕಿಸಿದ್ದಾರೆ. ವೈಟ್ ಟಾಪಿಂಗ್ ಯೋಜನೆಗಳ ನಡುವೆ ಸರ್ಕಾರಗಳು, ಅಧಿಕಾರಿಗಳು ಪರಿಸರದ ಬಗ್ಗೆ ಯೋಚಿಸುತ್ತಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ನಗರವಾಗಿ ಗುರುತಿಸಿಕೊಂಡಿದೆ. ಸುಸ್ಥಿರ ಮತ್ತು ಪರಿಸರಸ್ನೇಹಿ ನಗರಾಭಿವೃದ್ಧಿಯ ಅತ್ಯವಶ್ಯಕವಾಗಿದೆ. ಹಣ ಗಳಿಕೆಯ ಆಲೋಚನೆ ಬಿಟ್ಟು ನಿಸರ್ಗವನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ನಗರದ ವಾತಾವರಣ ಮತ್ತು ನೀರಿನ ಸೆಲೆಗಳು ಸಂಪೂರ್ಣವಾಗಿ ಬತ್ತಿ ಹೋಗಲಿವೆ. ಹಸಿರನ್ನು ಉಳಿಸಿಕೊಂಡು ಜನಸ್ನೇಹಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಬೆಕಿದೆ. ಆಡಳಿತ ನಡೆಸುವ ಸರ್ಕಾರಗಳು ಈ ಹಾದಿಯಲ್ಲಿ ಯೋಚಿಸಬೇಕು.
This is how we need to design & plan our roads that reflects our garden city image. Unfortunately it’s now a garbage city with shrinking greenery pic.twitter.com/EG29LPZd2j
— Kiran Mazumdar-Shaw (@kiranshaw) June 27, 2026













Click it and Unblock the Notifications