''ರಾಜ್ಯದ ಶೇ.70 ಪ್ರದೇಶಗಳಲ್ಲಿ ಬಿತ್ತನೆಯೇ ಆಗಿಲ್ಲ: ಕೃಷಿ ಸಚಿವರಿಲ್ಲ, ಕುಡಿಯುವ ನೀರಿಗೆ ಭಾರೀ ಸಂಕಷ್ಟ''
ಹುಬ್ಬಳ್ಳಿ: ಕರ್ನಾಟಕದಲ್ಲಿ ಈ ವರ್ಷ ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಇದರಿಂದ ಬರದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಇನ್ನೊಂದು ವಾರದೊಳಗೆ ಸಮರ್ಪಕ ಮಳೆಯಾಗದಿದ್ದರೆ ಕರ್ನಾಟಕ ಸಂಪೂರ್ಣ ಬರಗಾಲದತ್ತ ಸಾಗಲಿದೆ. ಅನೇಕ ಸಮಸ್ಯೆಗಳು ಎದುರಾಗಲಿವೆ, ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ಬರಗಾಲ ಘೋಷಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ರಾಜ್ಯದಲ್ಲಿ ಈವರೆಗೆ ಕೇವಲ ಶೇ.30ರಷ್ಟು ಮಾತ್ರ ಬಿತ್ತನೆಯಾಗಿದ್ದು, ಶೇ.70ರಷ್ಟು ಪ್ರದೇಶಗಳಲ್ಲಿ ಇನ್ನೂ ಬಿತ್ತನೆಯೇ ಪ್ರಾರಂಭವಾಗಿಲ್ಲ. ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಮುಂದಿನ ಒಂದು ವಾರದಲ್ಲಿಯೂ ಮಳೆ ಬಾರದಿದ್ದರೆ ಕುಡಿಯುವ ನೀರಿನ ಸಮಸ್ಯೆಯೂ ಗಂಭೀರ ಸ್ವರೂಪ ಪಡೆಯಲಿದೆ ಎಂದು ಹೇಳಿದರು.

ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕಿದ್ದು, ಎಲ್ಲ ಜಿಲ್ಲಾಧಿಕಾರಿಗಳ ಸಭೆ ನಡೆಸಿ ವಾಸ್ತವ ಸ್ಥಿತಿಯ ವರದಿ ಪಡೆಯಬೇಕು. ಬರ ಪರಿಹಾರ ಕ್ರಮಗಳನ್ನು ತುರ್ತಾಗಿ ಜಾರಿಗೊಳಿಸಬೇಕು. ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಹಣ ಲಭ್ಯವಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡಿದರೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವು ಪಡೆಯಲು ಸಾಧ್ಯವಾಗುತ್ತದೆ ಎಂದರು.
ರಾಜ್ಯಕ್ಕೆ ಕೃಷಿ ಸಚಿವರೇ ಇಲ್ಲದ್ದು ದುರಂತ
ರಾಜ್ಯದಲ್ಲಿ ಮಳೆ ಇಲ್ಲದೆ ಕೆರೆಗಳು ಹಾಗೂ ಜಲಾಶಯಗಳಲ್ಲಿನ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಸಮರ್ಪಕ ಕೃಷಿ ಸಚಿವರೇ ಇಲ್ಲದಿರುವುದು ದುರದೃಷ್ಟಕರ. ಎರಡು ಅಥವಾ ಮೂರು ಜಿಲ್ಲೆಗಳಿಗೆ ಒಬ್ಬ ಸಚಿವರನ್ನು ನೇಮಿಸಿರುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ವಿವರಿಸಿದರು.
ಈ ಭಾರಿ ವಾತಾವರಣದ ಮೇಲೆ 'ಎಲ್ ನೀನೋ' ಪರಿಣಾಮ ಬೀರಲಿದೆ. ಅದರಿಂದಲೇ ಸಂಭವನೀಯ ಬರ ಪರಿಸ್ಥಿತಿಯ ಕುರಿತು ರಾಷ್ಟ್ರೀಯ ವರದಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದರೂ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ತಕ್ಷಣ ಬರ ಪರಿಸ್ಥಿತಿ ನಿರ್ವಹಣೆಯತ್ತ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದರು.
ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಪ್ರತಿಷ್ಠೆ ಬಿಡಲಿ
ಬಿಡದಿ ಟೌನ್ಶಿಪ್ ಅನ್ನು ರಾಜ್ಯ ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಸರ್ಕಾರದ ಜಮೀನು ಇದ್ದಲ್ಲಿ ಟೌನ್ ಮಾಡಲಿ, ಅದು ಬಿಟ್ಟು ರೈತರಿಂದ ಜಮೀನು ಪಡೆಯುವುದು ಎಷ್ಟು ಸರಿ? ಅವರಿಗೆ ಪರಿಹಾರ ಎಕರೆಗೆ 2 ಕೋಟಿ ರೂ. ಕೊಟ್ಟಂತೆ ಕೃಷ್ಣ ಮೇಲ್ದಂಡೆ ಯೋಜನೆಗೆ ರೈತರು ಕೊಟ್ಟ ಲಕ್ಷಾಂತರ ಎಕರೆ ಜಮೀನಿಗೂ ಪ್ರತಿ ಎಕರೆಗೆ 2 ಕೋಟಿ ರೂ. ಕೊಡುತ್ತಾರೆಯೇ? ಸರ್ಕಾರದ ಬೊಕ್ಕಸವನ್ನು ಬೇಕಾಬಿಟ್ಟಿ ಬಳಕೆ ಮಾಡುತ್ತಿದೆ ಎಂದು ದೂರಿದರು.
ಕೊಪ್ಪಳದಲ್ಲಿ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳು ಸೇರಿದ್ದರು. ಅಧಿಸೂಚನೆ ಕುರಿತು ಸುಪ್ರೀಂಕೋರ್ಟ್ನಲ್ಲಿ ಕೇಸ್ ಆಗಿರುವುದರ ಕುರಿತು ಸಿಎಂ ಡಿ.ಕೆ. ಶಿವಕುಮಾರ ಚಕಾರ ಎತ್ತಲಿಲ್ಲ. ವಿಷಾಯಾಧಾರಿತ ಚರ್ಚೆಗಳು ಆಗಲಿಲ್ಲ. ಸುಪ್ರೀಂಕೋರ್ಟ್ನಲ್ಲಿರುವ ಕೇಸ್ ವಜಾಗೊಳಿಸುವ ಸಂಬಂಧ ಮಾತನಾಡಬಹುದಿತ್ತಲವೇ? ಮುಖ್ಯಮಂತ್ರಿಗಳಿಗೆ ರಾಜಕಾರಣವೇ ಮುಖ್ಯವಾಗಿದೆ ಹೊರತು, ಜನಹಿತವಲ್ಲ ಎಂದು ಟೀಕಾಪ್ರಹಾರ ನಡೆಸಿದರು.













Click it and Unblock the Notifications