SIR: ಬಿಜೆಪಿಗೆ ಲಾಭವಾಗುವಂತೆ ಮತದಾರರ ಪಟ್ಟಿ ಪರಿಷ್ಕರಣೆ: ಯತೀಂದ್ರ ಸಿದ್ದರಾಮಯ್ಯ ಗಂಭೀರ ಆರೋಪ
ಮೈಸೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (SIR) ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶಾದ್ಯಂತ ವಿಪಕ್ಷ ನಾಯಕರು ವಿರೋಧಿಸುತ್ತಿದ್ದಾರೆ. ಇದೀಗ ಇದೇ ಜೂನ್ 30ರಿಂದ ಕರ್ನಾಟಕದಲ್ಲಿ SIR ನಡೆಸಲು ಚುನಾವಣೆ ಆಯೋಗ ಮುಂದಾಗಿದೆ. ಬಿಜೆಪಿಗೆ ಅನುಕೂಲವಾಗುವಂತೆ ಚುನಾವಣೆ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮಾಡುತ್ತಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದರು.
ಮೈಸೂರಿನ ಜಿಕೆ ಮೈದಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಆಯೋಜಿಸಿದ್ದ ವಿಭಾಗೀಯ ಮಟ್ಟದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಜಾಗೃತಿ ಸಮಾವೇಶದಲ್ಲಿ ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿದರು.

ಈ ವೇಳೇ ಅವರು, 'ಚುನಾವಣಾ ಆಯೋಗವು ಯಾವುದೇ ಪಕ್ಷಪಾತ ಇಲ್ಲದೆ ಕಾರ್ಯನಿರ್ವಹಿಸಬೇಕು, ಆಗ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಈ ಹಿಂದೆ ಮತದಾರರ ಪರಿಷ್ಕರಣೆ ನಡೆದಾಗ ಚುನಾವಣಾ ಆಯೋಗವು ಹೊಸದಾಗಿ ಮತದಾರರನ್ನು ಸೇರಿಸುತ್ತಿದ್ದರೇ ಹೊರತು, ಪಟ್ಟಿಯಿಂದ ತೆಗೆದು ಹಾಕುತ್ತಿರಲಿಲ್ಲ. ಅಲ್ಲದೇ ಮತದಾರರ ದಾಖಲೆಗಳನ್ನು ಕೇಳುತ್ತಿರಲಿಲ್ಲ. ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ತಮಿಳುನಾಡು ಮತ್ತು ಬಿಹಾರದಲ್ಲಿ ಬಿಜೆಪಿಗೆ ಹೆಚ್ಚು ಲಾಭವಾಗುವಂತೆ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಿಳಿಸಿದರು.
ಎಸ್.ಐ.ಆರ್ ಪ್ರಕ್ರಿಯೆ ನಡೆಯುವಾಗ ಅರ್ಜಿಯಲ್ಲಿ ತಪ್ಪು ಮಾಹಿತಿ ಕೊಟ್ಟರೆ ಅವರ ಹೆಸರು ಅಂತಿಮ ಪಟ್ಟಿಯಲ್ಲಿ ಬರುವುದೇ ಇಲ್ಲ. ಹಾಗಾಗಿ ನಮ್ಮ ಬಿ.ಎಲ್.ಒ.ಗಳು ಪ್ರತಿ ಮತದಾರರು ಅರ್ಜಿ ಸಲ್ಲಿಸುವಾಗ ಸಹಾಯ ಮಾಡಬೇಕು, ಮಾಹಿತಿ ಸರಿ ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಸ್ವಲ್ಪ ಎಚ್ಚರ ತಪ್ಪಿದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯದಲ್ಲಿ ಹಾನಿಯಾಗುವುದು ನಿಶ್ಚಿತ ಎಂದು ತಿಳಿಸಿದರು.
ಮತದಾರರಲ್ಲಿ ಜಾಗೃತಿ ಮೂಡಿಸಿ
ಮತದಾರರಿಗೆ ಆಯೋಗ ಕೇಳಿರುವ 11 ದಾಖಲೆಗಳು ಸುಲಭವಾಗಿ ಸಿಗಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಗ್ರಾಮ ಪಂಚಾಯತ್ ಹಾಗೂ ನಗರ ಪಾಲಿಕೆ ಮಟ್ಟದಲ್ಲಿ ದಾಖಲೆಗಳು ಸಿಗಲಿವೆ. ಈ ದಾಖಲೆಗಳ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಎಸ್.ಐ.ಆರ್ ಪ್ರಕ್ರಿಯೆಯಲ್ಲಿ ಸರಿಯಾದ ಮಾಹಿತಿ ಒದಗಿಸದಿದ್ದರೆ ಪೌರತ್ವವೇ ರದ್ದಾಗಬಹುದು. ಸರ್ಕಾರಿ ಸೌಲಭ್ಯಗಳು ಸಿಗದೇ ಹೋಗಬಹುದು. ಹಾಗಾಗಿ ಪ್ರತಿಯೊಬ್ಬರೂ ಅಗತ್ಯ ದಾಖಲೆಗಳನ್ನು ಒದಗಿಸಬೇಕು. ನಮ್ಮ ಪಕ್ಷದ ಬಿ.ಎಲ್.ಒ.ಗಳು ಆ ದಾಖಲೆಗಳು ಹಾಗೂ ಸಮಗ್ರ ಪ್ರಕ್ರಿಯೆ ಕುರಿತು ಜನರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸಬೇಕಾಗುತ್ತದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಉದ್ದೇಶವೇನು?
ಯಾವುದೇ ಅಕ್ರಮಗಳು ಇಲ್ಲದೇ, ಚುನಾವಣೆ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ನಡೆಯಬೇಕು. ಈ ಸಂಬಂಧ ಮೃತಪಟ್ಟವರು, ಬೇರೆ ಊರುಗಳಿಗೆ ತೆರಳಿದವರು ಹಾಗೂ ನಕಲಿ ಮತದಾರರನ್ನು ಗುರುತಿಸಿ ಅವರನ್ನು ಪಟ್ಟಿಯಿಂದ ಕೈ ಬಿಡುವುದು ಹಾಗೂ ಹೊಸ ಮತದಾರರನ್ನು ಅಧಿಕೃತವಾಗಿ ಪಟ್ಟಿಗೆ ಸೇರಿಸುವ ಉದ್ದೇಶವನ್ನು ಚುನಾವಣೆ ಆಯೋಗ ಹೊಂದಿದೆ. ಈ ಸಂಬಂಧ 'ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಕರ್ನಾಟಕದಲ್ಲಿ ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿದೆ.













Click it and Unblock the Notifications