Priya Anand: ಬೆಂಗಳೂರು ಅಪ್ಪು ಸಿಟಿ, ಕನ್ನಡಿಗರಿಗಾಗಿ ಜೀವ ಕೊಡಲೂ ಸಿದ್ಧ: ನಟಿ ಪ್ರಿಯಾ ಆನಂದ್ ಭಾವುಕ
ಸಿಲಿಕಾನ್ ಸಿಟಿ, ಗಾರ್ಡನ್ ಸಿಟಿ ಎಂದೇ ಜಗತ್ಪ್ರಸಿದ್ಧವಾಗಿರುವ ನಮ್ಮ ಹೆಮ್ಮೆಯ ರಾಜಧಾನಿ ಬೆಂಗಳೂರಿಗೆ ಈಗ 'ಅಪ್ಪು ಸಿಟಿ' (Appu City) ಎಂಬ ಮತ್ತೊಂದು ಸುಂದರ ನಾಮಕರಣ ಸೇರ್ಪಡೆಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರೊಂದಿಗೆ 'ರಾಜಕುಮಾರ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಪ್ರಿಯಾ ಆನಂದ್ ಅವರು ಬೆಂಗಳೂರನ್ನು ಕೊಂಡಾಡುತ್ತಾ, ಇದು ಕೇವಲ ಬೆಂಗಳೂರು ಅಲ್ಲ, ಬದಲಿಗೆ 'ಅಪ್ಪು ಸಿಟಿ' ಹಾಗೂ 'ಅಪ್ಪು ಟೌನ್' ಎಂದು ಕರೆದು ಭಾವುಕರಾಗಿದ್ದಾರೆ. ನಟಿಯ ಈ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿಗೆ ಬಂದಾಗ ಮೊದಲು ಅಪ್ಪು ನೆನೆಪಾಗ್ತಾರೆ
ನಟಿ ಪ್ರಿಯಾ ಆನಂದ್ ಅವರು ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ಭಾವುಕರಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅಪ್ಪು ಅವರ ಕುರಿತು ಮಾತನಾಡಿರುವ ನಟಿ, ಕರ್ನಾಟಕ ಹಾಗೂ ಬೆಂಗಳೂರಿನೊಂದಿಗಿನ ತಮ್ಮ ಅವಿನಾಭಾವ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ. ತಾವು ಸಿಲಿಕಾನ್ ಸಿಟಿಗೆ ಕಾಲಿಟ್ಟಾಗಲೆಲ್ಲ ತಮಗೆ ಅಪ್ಪು ಅವರ ನೆನಪುಗಳೇ ಮರುಕಳಿಸುತ್ತವೆ ಎಂದು ಹೇಳಿರುವ ನಟಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಪ್ಪು ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ.

ಸಂದರ್ಶನದಲ್ಲಿ ಬೆಂಗಳೂರಿನ ಬಗ್ಗೆ ವಿಶೇಷವಾಗಿ ಮಾತನಾಡಿದ ಪ್ರಿಯಾ ಆನಂದ್, "ನನಗೆ ಈಗ ಬೆಂಗಳೂರಿಗೆ ಬಂದಾಗಲೆಲ್ಲಾ ಕೇವಲ ಅಪ್ಪು ಅವರ ಮುಖವೇ ಕಣ್ಣಮುಂದೆ ಬರುತ್ತದೆ. ಅವರು ಎಲ್ಲೂ ಹೋಗಿಲ್ಲ, ಇಂದಿಗೂ ಎಲ್ಲರ ಹೃದಯದಲ್ಲಿ ಜೀವಂತವಾಗಿದ್ದಾರೆ. ನಗರದ ಪ್ರತಿಯೊಂದು ರಸ್ತೆ, ಗಲ್ಲಿ ಮತ್ತು ಮೂಲೆ ಮೂಲೆಗಳಲ್ಲೂ ಅಪ್ಪು ಅವರ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳು ರಾರಾಜಿಸುತ್ತಿರುವುದನ್ನು ನೋಡಬಹುದು. ಇದನ್ನು ಗಮನಿಸಿದರೆ ಇದು ಕೇವಲ ಬೆಂಗಳೂರು ಅಲ್ಲ, ಬದಲಿಗೆ 'ಅಪ್ಪು ಸಿಟಿ' ಅಥವಾ 'ಅಪ್ಪು ಟೌನ್' ಎಂದು ಕರೆಯಲು ನಾನು ಇಷ್ಟಪಡುತ್ತೇನೆ" ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಅಪ್ಪು ಅವರ ಅಗಲಿಕೆಯ ನೋವಿನ ಬಗ್ಗೆ ಮಾತನಾಡಿದ ಅವರು, ತಾನು ಪ್ರತಿದಿನವೂ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತೇನೆ ಮತ್ತು ಅವರ ಅನುಪಸ್ಥಿತಿಯನ್ನು ತೀವ್ರವಾಗಿ ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇಡೀ ಭಾರತೀಯ ಚಿತ್ರರಂಗವೇ ಕೊಂಡಾಡುವಂತಹ ಒಬ್ಬ ಅಪ್ರತಿಮ ನಟ ಹಾಗೂ ಅದ್ಭುತ ವ್ಯಕ್ತಿತ್ವದ ರಾಜಕುಮಾರನ ಸಿನಿಮಾದಲ್ಲಿ ತಮಗೊಂದು ಸಣ್ಣ ಪಾತ್ರ ಮಾಡುವ ಅಥವಾ ಅವರ ಜೊತೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದು ಸ್ಮರಿಸಿದ್ದಾರೆ.
ಕರ್ನಾಟಕದ ಇದೆಲ್ಲ ನನಗೆ ಇಷ್ಟ
ಇದೇ ವೇಳೆ ಕನ್ನಡಿಗರು ತಮ್ಮ ಮೇಲೆ ತೋರಿಸುತ್ತಿರುವ ಅಪಾರವಾದ ಪ್ರೀತಿ ಮತ್ತು ಅಭಿಮಾನಕ್ಕೆ ನಟಿ ಪ್ರಿಯಾ ಆನಂದ್ ಮನಸಾರೆ ಕೃತಜ್ಞತೆ ಸಲ್ಲಿಸಿದ್ದಾರೆ. "ಕನ್ನಡ ಪ್ರೇಕ್ಷಕರು ನನಗೆ ನೀಡಿರುವ ಸ್ಥಾನ ಮತ್ತು ಪ್ರೀತಿ ಬೆಲೆಕಟ್ಟಲಾಗದ್ದು. ಕನ್ನಡಿಗರಿಗಾಗಿ ನಾನು ಕೇವಲ ಒಂದು ಹಾಡಿಗೆ ಹೆಜ್ಜೆ ಹಾಕುವುದು ಮಾತ್ರವಲ್ಲ, ಅಗತ್ಯ ಬಿದ್ದರೆ ನನ್ನ ಜೀವವನ್ನೇ ಮುಡಿಪಾಗಿಡಲು ಸಿದ್ಧಳಿದ್ದೇನೆ" ಎಂದು ಹೇಳುವ ಮೂಲಕ ಕನ್ನಡಿಗರ ಮೇಲಿರುವ ಭಕ್ತಿ ಮತ್ತು ಗೌರವವನ್ನು ತೋರ್ಪಡಿಸಿದ್ದಾರೆ. ತಮಗೆ ಕನ್ನಡ ಭಾಷೆ ಎಂದರೆ ಪಂಚಪ್ರಾಣವಾಗಿದ್ದು, ಸ್ಯಾಂಡಲ್‌ವುಡ್ ಚಿತ್ರರಂಗದ ವಾತಾವರಣ, ಕರ್ನಾಟಕದ ಸಾಂಪ್ರದಾಯಿಕ ಶೈಲಿಯ ಊಟ ಮತ್ತು ಜಗತ್ಪ್ರಸಿದ್ಧ ಮೈಸೂರು ರೇಷ್ಮೆ ಸೀರೆ ಎಂದರೆ ತಮಗೆ ಅತಿಯಾದ ಇಷ್ಟ ಎಂದು ಹೇಳಿದ್ದಾರೆ. ನಟಿಯ ಈ ಮನದಾಳದ ಮಾತುಗಳಿಗೆ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.













Click it and Unblock the Notifications