Puneeth Rajkumar: ಅಪ್ಪು ಎಲ್ಲೂ ಹೋಗಿಲ್ಲ, ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಮನದಾಳ
ಅದು 2021 ಅಕ್ಟೋಬರ್ 29, ಕನ್ನಡಿಗರು ಈ ದಿನವನ್ನು ಎಂದಿಗೂ ಮರೆಯಲು ಸಾಧ್ಯ ಇಲ್ಲ. ಯಾಕಂದ್ರೆ ಆ ದಿನ ಕನ್ನಡಿಗರು ಕನಸಿನಲ್ಲೂ ಊಹಿಸದ ಘಟನೆಯೊಂದು ನಡೆದೇ ಹೋಗಿತ್ತು. ಕೋಟಿ ಕೋಟಿ ಜನ ಆರಾಧಿಸುವ, ಅಭಿಮಾನದಿಂದ ಅಪ್ಪು ಎಂದು ಕರೆಯುತ್ತಿದ್ದ ನಟ ಎಲ್ಲರನ್ನೂ ಬಿಟ್ಟು ಹೊರಟಿದ್ದ ದಿನ. ಹೌದು, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಕನ್ನಡಿಗರ ಪ್ರೀತಿಯ ಕೋಟೆಯನ್ನು ಬಿಟ್ಟು ಹೋಗಿ ಇಂದಿಗೆ ಸರಿಯಾಗಿ 4 ವರ್ಷ ಕಳೆದು ಹೋಗಿದೆ.
ಪುನೀತ್ ರಾಜ್‌ಕುಮಾರ್ ಅನ್ನೋ ಹೆಸರು ಬರೀ ಕನ್ನಡಿಗರ ನೆಲದಲ್ಲಿ ಮಾತ್ರವಲ್ಲ, ಇಡೀ ಜಗತ್ತಿಗೇ ಹಬ್ಬಿಹೋಗಿದೆ. ಕಳೆದ 4 ವರ್ಷದಲ್ಲಿ ಕನ್ನಡಿಗರ ಗುಣ & ಕೀರ್ತಿಯ ಸಿರಿಯನ್ನು ಜಗತ್ತಿಗೆ ಪಸರಿಸಲು ಪುನೀತ್ ರಾಜ್‌ಕುಮಾರ್ ಕೊಡುಗೆ ದೊಡ್ಡದಾಗಿದೆ. ತಮ್ಮ ಜೀವನದ ಹಾದಿ ಮುಗಿಸಿ ಹೋಗಿದ್ದರೂ, ಪುನೀತ್ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಜರಾಮರ. ಇದೇ ಕಾರಣಕ್ಕೆ ಪ್ರತಿ ವರ್ಷ ಕೂಡ ಕೋಟಿ ಕೋಟಿ ಜನರು ಅಪ್ಪು ಅಗಲಿದ ದಿನ ಕಂಬನಿ ಮಿಡಿಯುತ್ತಾರೆ. ಅಲ್ಲದೆ ಪ್ರತಿದಿನ ಕೂಡ ಪುನೀತ್ ರಾಜ್‌ಕುಮಾರ್ ಅವರಿಗೆ ನಮಿಸುತ್ತಾರೆ & ದೇವರ ಫೋಟೋ ಜೊತೆಗೆ ಇಟ್ಟು ಪೂಜೆ ಮಾಡುತ್ತಾರೆ. ಹಾಗಾದರೆ ಆ ದಿನ ಏನಾಗಿತ್ತು?

2021 ಅಕ್ಟೋಬರ್ 29 ಶುಕ್ರವಾರ...
ಅಂದು ಕನ್ನಡಿಗರು ಎಂದಿನಂತೆ ತಮ್ಮ ಕೆಲಸ & ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಆದರೆ ಆ ದಿನ ಭಾರಿ ದೊಡ್ಡ ಅನಾಹುತ ಸಂಭವಿಸಲಿದೆ ಎನ್ನುವ ಸಣ್ಣ ಸುಳಿವು ಕೂಡ ಯಾರಿಗೂ ಇರಲೇ ಇಲ್ಲ. ಹೀಗಿದ್ದಾಗ 2021ರ ಅಕ್ಟೋಬರ್ 29 ಶುಕ್ರವಾರ ಬೆಳಗ್ಗೆ ಕಳೆದು ಇನ್ನೇನು ಮಧ್ಯಾಹ್ನಕ್ಕೆ ಎಂಟ್ರಿ ಕೊಡಬೇಕು ಎನ್ನುವಷ್ಟರಲ್ಲಿ ಘೋರವಾದ ಸುದ್ದಿಯೊಂದು ಕಿವಿಗೆ ಬಿದ್ದಿತ್ತು. ಅಪ್ಪು ಅಭಿಮಾನಿಗಳು ಕಣ್ಣೀರು ಹಾಕುತ್ತಾ, ನೋವಿನಲ್ಲಿ ನರಳುತ್ತಿದ್ದರೆ. ಇನ್ನೊಂದು ಕಡೆ ಶತಕೋಟಿ ಭಾರತೀಯರಿಗೂ ಈ ಸುದ್ದಿ ಆಘಾತವನ್ನೇ ನೀಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ... ಎನ್ನುವ ಆ ಸುದ್ದಿಯನ್ನು ಕೇಳಿ ಎಲ್ಲರೂ ನಲುಗಿ ಹೋಗಿದ್ದರು...
ದಿಢೀರ್ ಅಸ್ವಸ್ಥರಾಗಿ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆಯೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು, ಅಪ್ಪು ಪುನೀತ್ ರಾಜ್‌ಕುಮಾರ್ ಅವರ ಆರೋಗ್ಯ ಪರಿಸ್ಥಿತಿ ಕಂಡು ಕೂಡಲೇ ಅಲರ್ಟ್ ಆಗಿದ್ದ ಕುಟಂಬಸ್ಥರು ಹಾಗೂ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿದ್ಧರಾಗಿದ್ದರು. ಸಾಕಷ್ಟು ವೇಗವಾಗಿ ಆಸ್ಪತ್ರೆ ತಲುಪಲು ಪ್ರಯತ್ನ ಮಾಡಿದ್ದರು. 2021 ಅಕ್ಟೋಬರ್ 29 ಶುಕ್ರವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿತ್ತು, ಇಷ್ಟೆಲ್ಲಾ ಪ್ರಯತ್ನದ ಹೊರತಾಗಿಯೂ ನಟ ಪುನೀತ್ ರಾಜ್‌ಕುಮಾರ್ ಕೋಟಿ ಕೋಟಿ ಅಭಿಮಾನಿಗಳನ್ನು ಅಗಲಿದ್ದರು. ವೈದ್ಯಕೀಯ ಪರಿಭಾಷೆಯಲ್ಲಿ ಸಡನ್ ಡೆತ್ ಎಂದು ಕರೆಯಲಾಗುವ ಹೃದಯ ಸ್ತಂಭನದಿಂದ ಪುನೀತ್ ರಾಜ್‌ಕುಮಾರ್ ನಮ್ಮನ್ನೆಲ್ಲ ಅಗಲಿದ್ದರು.
ಅಪ್ಪು ನೀವು ಅಜರಾಮರ...
ವೈದ್ಯರು ಕೂಡ ಹೇಳುವಂತೆ ಸಡನ್ ಡೆತ್ ಎಂದು ಕರೆಯಲಾಗುವ ಹೃದಯ ಸ್ತಂಭನದಿಂದ ಜೀವ ಉಳಿಸುವುದು ಸಾಹಸದ ಕೆಲಸ. ಕೆಲ ಸಮಯದಲ್ಲಿ ಆಸ್ಪತ್ರೆ ಐಸಿಯು ಬೆಡ್ ಮೇಲೆ ಇದ್ದಾಗ ಕೂಡ ಹೃದಯ ಸ್ತಂಭನವಾದರೆ ರೋಗಿಯನ್ನು ಉಳಿಸುವುದು ಕಷ್ಟ ಎಂಬುದು ವೈದ್ಯರ ಮಾತು. ಹೀಗೆ ಎಲ್ಲವನ್ನೂ ಮೀರಿ ಪುನೀತ್ ರಾಜ್‌ಕುಮಾರ್ ಅವರು ಕೋಟಿ ಕೋಟಿ ಜನರನ್ನು ಬಿಟ್ಟು ಹೋದ ವಿಚಾರ ಇಂದಿಗೂ ಮರೆಯಲು ಆಗುತ್ತಿಲ್ಲ. ಅವರು ಎಲ್ಲೂ ಹೋಗಿಲ್ಲ, ನಮ್ಮ ನಡುವೆ ಇದ್ದಾರೆ ಅನ್ನೋದು ಅಭಿಮಾನಿಗಳ ಮಾತು. ಅಲ್ಲದೆ ಪುನೀತ್ ಅವರು ಮಾಡಿರುವ ಸಮಾಜಮುಖಿ ಕಾರ್ಯ ಇಂದಿಗೂ ಜೀವಂತವಾಗಿ ಅವರ ಹೆಸರನ್ನು ಮುಗಿಲೆತ್ತರಕ್ಕೆ ರಾರಾಜಿಸುವಂತೆ ಮಾಡುತ್ತಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ಹೇಳುತ್ತಿದ್ದಾರೆ, ಅಪ್ಪು ನೀವು ಅಜರಾಮರ...












Click it and Unblock the Notifications