ಮಹಿಳೆಯರಿಗೆ ಬೆಂಗಳೂರು ಸೇಫ್: ರಾತ್ರಿ 2ಕ್ಕೆ ಓಡಾಡಿದ್ರು ತೊಂದ್ರೆ ಇಲ್ಲ: ನೊಯ್ಡಾ ಬಿಟ್ಟು ಇಲ್ಲಿಗೇ ಬರ್ತಿನಿ: ವಿಡಿಯೋ ವೈರಲ್
ಬೆಂಗಳೂರು: ಸಂಚಾರ ದಟ್ಟಣೆ, ಕಾನೂನು ಸುವ್ಯವಸ್ಥೆ ಸೇರಿದಂತೆ ಇನ್ನಿತರ ನಕಾರಾತ್ಮಕ ವಿಚಾರಗಳಿಂದ ಸುದ್ದಿಯಾಗುವ ಬೆಂಗಳೂರು ಮಹಿಳೆಯರಿಗೆ ಹೆಚ್ಚು ಸುರಕ್ಷಿತ ಎಂದು ಯವತಿಯರು ಮಹಿಳೆಯರು ಹೇಳಿದ್ದಾರೆ. ಈ ಮೂಲಕ ನೊಯ್ಡಾಗಿಂತ ಬೆಂಗಳೂರು ಹೆಚ್ಚು ಸುರಕ್ಷಿತವಾಗಿ, ಆದರೆ ಸಂಚಾರ ದಟ್ಟಣೆ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಉತ್ತರ ಪ್ರದೇಶದ ನೊಯ್ಡಾ ಯುವತಿಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬೆಂಗಳೂರಿನ ವಿಧಾನಸೌಧ ಮುಂದೆ ತಡರಾತ್ರಿ 2.30 ಗಂಟೆಗೆ ಸ್ನೇಹಿತೆಯೊಂದಿಗೆ ನೊಯ್ಡಾದ ಯುವತಿ ನಡೆದುಕೊಂಡು ಹೋಗುವಾಗ ಬೆಂಗಳೂರನ್ನು ಹೊಗಳಿದ್ದಾಳೆ. ಬೆಂಗಳೂರಿನಲ್ಲಿ ತಡರಾತ್ರಿಯಲ್ಲೂ ಮಹಿಳೆಯರಿಗೆ ಸುರಕ್ಷತೆ ಇದೆ. ಇಂತಹ ಪರಿಸ್ಥಿತಿ ನೊಯ್ಡಾದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಮಹಿಳೆಯೊಬ್ಬರು ವಿಡಿಯೋ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಷಯ ಹೆಚ್ಚು ಚರ್ಚೆಯಾಗುತ್ತಿದೆ.

ಶಾಲಿನಿ ಎಂಬ ಯುವತಿ ತನ್ನ ಸ್ನೇಹಿತೆಯೊಂದಿಗೆ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿದ್ಯುತ್ ದೀಪಗಳಿಂದ ಕಂಗೊಳಿಸುವ ವಿಧಾನಸೌಧದ ಮುಂದಿನ ನಿರ್ಜನ ರಸ್ತೆಯಲ್ಲಿ ಈ ಮಹಿಳೆಯರು ನಡೆದು ಹೋಗುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ವಿಡಿಯೋದಲ್ಲಿ ಮಹಿಳೆ ಹೇಳಿದ್ದೇನು?
ನೋಯ್ಡಾಗೆ ಹೋಲಿಕೆ ಮಾಡಿದರೆ ಬೆಂಗಳೂರು ಮಹಿಳೆಯರಿಗೆ ಹೆಚ್ಚು ಸುರಕ್ಷಿತವಾಗಿದೆ. ಇಲ್ಲಿ ರಾತ್ರಿ ರಸ್ತೆಗಳಲ್ಲಿ ಮಹಿಳೆಯರು ಓಡಾಡಿದರೂ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ನೋಯ್ಡಾದಲ್ಲಿ ಈ ರೀತಿ ಸಂಚಾರ ಮಾಡಲು ಸಾಧ್ಯವಿಲ್ಲ ಎಂದು ಅವರು ಎರಡು ನಗರಗಳಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಇಲ್ಲಿ ರಾತ್ರಿ 2 ಗಂಟೆಗೆ ತಿರುಗಾಡಿದರೂ ಯಾವುದೇ ಸಮಸ್ಯೆ ಇಲ್ಲ. ಸಂಜೆ 6 ಗಂಟೆಯಂತೆ ಭಾಸವಾಗುತ್ತದೆ. ಇಂತಹ ವಾತಾವರಣ ಬೆಂಗಳೂರಿನಲ್ಲಿದೆ ಎಂದರೆ ಆ ಬಗ್ಗೆ ನೀವೆ ಯೋಚಿಸಿ. ಇಡೀ ರಸ್ತೆ ಖಾಲಿ ಹೊಡೆಯುತ್ತಿದೆ. ರಾತ್ರಿ ನಿರ್ಜನ ಪ್ರದೇಶವಿದೆ. ಇಂತಹ ಸಮಯದಲ್ಲಿ ನಾವು ಧೈರ್ಯದಿಂದ ಓಡಾಡುತ್ತಿದ್ದೇವೆ ಎಂದು ಅವರು ರಾಜಧಾನಿ ಬೆಂಗಳೂರು ಕುರಿತು ಕೊಂಡಾಡಿದ್ದಾರೆ.
ವಿಶೇಷವೆಂದರೆ ಬೆಂಗಳೂರಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿರುತ್ತದೆ. ಅದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಬದಲಾಗಿ ನೊಯ್ಡಾದಲ್ಲಿ ಟ್ರಾಫಿಕ್ ಸಮಸ್ಯೆ ಅಷ್ಟಾಗಿಲ್ಲ. ಅಲ್ಲಿ ದಟ್ಟಣೆಯಿಂದ ತಪ್ಪಿಸಿಕೊಳ್ಳಬಹುದು ಅಂತಲೂ ಶಾಲಿನಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ಬೇರೆ ಬೇರೆ ನಗರದ ಜನರು ಅನುಭವಿಸುತ್ತಿದ್ದಾರೆ. ಈ ಮೂಲಕ ನಗರವು ಟ್ರಾಫಿಕ್ ವಿಚಾರದಲ್ಲಿ ಸದಾ ಮುಂದಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಮಹಿಳೆಯರು ಹೆಚ್ಚಾಗಿ ಭದ್ರತೆ, ಸುರಕ್ಷತೆ ಬಯಸುತ್ತಾರೆ. ಇದೆಲ್ಲ ಇಲ್ಲದ ನೊಯ್ಡಾ ನಗರದಲ್ಲಿರಲು ನನಗೆ ಮನಸಿಲ್ಲ. ಸುರಕ್ಷತೆ ಇಲ್ಲದ ಕಡೆ ಯಾರೂ ಇರುವುದಿಲ್ಲ. ಅಲ್ಲಿಂದ ನಾನು ಬೆಂಗಳೂರಿಗೆ ಸ್ಥಳಾಂತರಗೊಳ್ಳಲು ಯೋಚಿಸುತ್ತಿದ್ದಾರೆ. ನನಗೆ ಈ ನಗರ ಹಿಡಿದೆ ಎಂದು ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.
ಧ್ವನಿಗೂಡಿಸಿದ ನೆಟ್ಟಿಗರು ಹೇಳಿದ್ದೇನು?
ಶಾಲಿನಿಯವರ ವಿಡಿಯೋಗೆ ಅನೇಕ ಪ್ರತಿಕ್ರಿಯೆಗಳು ಬಂದಿವೆ. ಕಾಮೆಂಟ್ ಮೂಲಕ ಅನೇಕರು ಬೆಂಗಳೂರಿನ ಪರ ಮಾನತಾಡಿದ್ದಾರೆ. 'ಬೆಂಗಳೂರು ಸುರಕ್ಷತೆಗೆ ಹೆಸರುವಾಸಿ' ಎಂದಿದ್ದಾರೆ. ಇನ್ನೊಬ್ಬರು 'ಸುರಕ್ಷತೆ, ಭದ್ರತೆ ಕಾರಣಕ್ಕಾಗಿಯೇ ಬೆಂಗಳೂರು ನನ್ನ ಇಷ್ಟದ ನಗರ' ಎಂದು ತಿಳಿಸಿದ್ದಾರೆ. ಹೀಗೆ ಅನೇಕರು ನಗರದ ಕುರಿತು ಮಹಿಳೆಯ ಹೇಳಿಕೆಗಳನ್ನು ಒಪ್ಪಿದ್ದಾರೆ.


Click it and Unblock the Notifications
