IND vs ENG: ರೋಹಿತ್, ಕೊಹ್ಲಿ ಜೊತೆ ಬುಮ್ರಾ ಭರ್ಜರಿ ಕಮ್‌ಬ್ಯಾಕ್, ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಪ್ಲೇಯಿಂಗ್ 11
India vs England 2026 1st ODI: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಮಂಗಳವಾರ(ಜುಲೈ 14)ರಿಂದ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಹಾಗಾದ್ರೆ ಇಂದಿನ ಮೊದಲ ಹಣಾಹಣಿ ನಡೆಯುವುದು ಎಲ್ಲಿ ಹಾಗೂ ಪ್ಲೇಯಿಂಗ್ 11 ಹೇಗಿರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮಂಗಳವಾರ (ಜುಲೈ 14) ಇಂಗ್ಲೆಂಡ್-ಭಾರತ ತಂಡಗಳ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದೆ. 'ರೋಕೊ' ಅಂದರೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಯು ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ ಅಖಾಡಕ್ಕೆ ಮರಳುತ್ತಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.

ಟೀಮ್ ಇಂಡಿಯಾಗೆ ತ್ರಿಮೂರ್ತಿಗಳ ಬಲ
ಮತ್ತೊಂದೆಡೆ 2023ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ ಜಸ್ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೊನೆಯ ಬಾರಿ ಜೊತೆಯಾಗಿ ಏಕದಿನ ಪಂದ್ಯವಾಡಿದ್ದರು. ಇದಾದ ನಂತರ ಇದೇ ಮೊದಲ ಬಾರಿಗೆ ಅವರು ಏಕದಿನ ಕ್ರಿಕೆಟ್‌ಗೆ ಮರಳುತ್ತಿರುವುದು ಕೂಡ ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದೆ.
ಪ್ಲೇಯಿಂಗ್ 11ರಿಂದ ಯಾರೆಲ್ಲಾ ಔಟ್?
ಶುಭ್‌ಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ ಪ್ಲೇಯಿಂಗ್ 11ಗೆ ಕೊಹ್ಲಿ ಮತ್ತು ಬುಮ್ರಾ ಅವರ ಸೇರ್ಪಡೆಯಾಗಿದ್ದು, ಈ ಹಿನ್ನೆಲೆ ಯಶಸ್ವಿ ಜೈಸ್ವಾಲ್, ಇಶಾನ್ ಕಿಶನ್ ಮತ್ತು ಗುರ್ನೂರ್ ಬ್ರಾರ್ ಹೊರಗುಳಿಯುವ ಸಾಧ್ಯತೆಯಿದೆ. ಒಂದು ವೇಳೆ ಕಿಶನ್ ತಂಡದಿಂದ ಹೊರಗುಳಿಯುವುದರೆ, ಕನ್ನಡಿಗ ಕೆ.ಎಲ್.ರಾಹುಲ್ ಅವರೇ ಮತ್ತೆ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡಿಗ ಪ್ರಸಿದ್ಧ್ ಕೃಷ್ಣ..
ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಹಾಗೂ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗಳಿಂದ ವಿಶ್ರಾಂತಿ ಪಡೆದಿದ್ದ ಬುಮ್ರಾ ಸುಮಾರು 950ಕ್ಕೂ ಹೆಚ್ಚು ದಿನಗಳ ನಂತರ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಲಿದ್ದಾರೆ. ಅವರು ಅರ್ಷದೀಪ್ ಸಿಂಗ್ ಮತ್ತು ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರೊಂದಿಗೆ ಬೌಲಿಂಗ್ ಜೋಡಿ ಆಗಲಿದ್ದಾರೆ. ಪ್ರಸಿದ್ಧ್ ಕೃಷ್ಣ ಅವರು ಕಳೆದ ತಿಂಗಳು ಅಫ್ಘಾನಿಸ್ತಾನ ವಿರುದ್ಧ ನಡೆದ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳನ್ನು ಕಿತ್ತು ಮಿಂಚಿದ್ದರು.
ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಬಿದ್ದಿರುವ ಹಾರ್ದಿಕ್ ಪಾಂಡ್ಯ ಅವರ ಸೇವೆಯೂ ಲಭ್ಯ ಇರುವುದಿಲ್ಲ. ಪ್ಲೇಯಿಂಗ್ 11ನಲ್ಲಿ ಅವರ ಬದಲಿಗೆ ಸ್ಪಿನ್ ಬೌಲಿಂಗ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅಥವಾ ಶಿವಂ ದುಬೆ ಇಬ್ಬರಲ್ಲಿ ಯಾರನ್ನು ಆಡಿಸಬೇಕು ಎಂಬುದು ತಂಡದ ಮ್ಯಾನೇಜ್‌ಮೆಂಟ್ ಮುಂದಿರುವ ದೊಡ್ಡ ಸಲಾಗಿದೆ.
ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕ..
ಭಾರತದ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಕೂಡ ಮಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ಭಾರತ 4-0 ಅಂತರದಿಂದ ಸೋತಿದ್ದರೂ ಸಹ ಅಯ್ಯರ್ ಅವರು 5 ಇನ್ನಿಂಗ್ಸ್‌ಗಳಲ್ಲಿ 54.5ರ ಸರಾಸರಿಯಲ್ಲಿ 218 ರನ್ ಗಳಿಸುವ ಮೂಲಕ ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ಇಂಗ್ಲೆಂಡ್‌ಗೆ ಬಲ ಯಾರು?
ಅಯ್ಯರ್ ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್ ನಂತರ ಈ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರನಾಗಿದ್ದರು. ಬ್ರೂಕ್ 4 ಇನ್ನಿಂಗ್ಸ್‌ಗಳಲ್ಲಿ 114.5ರ ಸರಾಸರಿಯಲ್ಲಿ 229 ರನ್ ಗಳಿಸಿದ್ದರು. ಇನ್ನು ಇಂಗ್ಲೆಂಡ್ ತಂಡವು ಏಕದಿನ ಪಂದ್ಯಗಳಲ್ಲಿ ಬೆನ್ ಡಕೆಟ್‌ಗೆ ಹೊಸ ಆರಂಭಿಕ ಜೋಡಿಯಾಗಿ ಆರ್‌ಸಿಬಿ ಸ್ಟಾರ್ ಜೇಕಬ್ ಬೆಥೆಲ್ ಅವರನ್ನು ಕಣಕ್ಕಿಳಿಸಲಿದೆ ಎಂದು ತಿಳಿದುಬಂದಿದೆ.
ಕಳೆದ ವಾರ ನಡೆದ 5ನೇ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ಜೋಸ್ ಬಟ್ಲರ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಜೊತೆಗೆ ತಮ್ಮ ಬ್ಯಾಟಿಂಗ್ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಅನುಭವಿ ಬ್ಯಾಟರ್ ಜೋ ರೂಟ್ ಮಧ್ಯಮ ಕ್ರಮಾಂಕಕ್ಕೆ ಸೇರ್ಪಡೆ ಆಗುತ್ತಿರುವುದು ಇಂಗ್ಲೆಂಡ್ ತಂಡಕ್ಕೆ ಮತ್ತಷ್ಟು ಆನೆಬಲ ಬಂದಂತಾಗಿದೆ.
ಭಾರತ ಮತ್ತು ಇಂಗ್ಲೆಂಡ್ ಸಂಭಾವ್ಯ ಪ್ಲೇಯಿಂಗ್ 11
ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ 11: ಶುಭ್‌ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ/ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ/ಗುರ್ನೂರ್ ಬ್ರಾರ್.
ಇಂಗ್ಲೆಂಡ್ ತಂಡದ ಸಂಭಾವ್ಯ ಪ್ಲೇಯಿಂಗ್ 11: ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಸ್ಯಾಮ್ ಕರನ್, ವಿಲ್ ಜಾಕ್ಸ್, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಆದಿಲ್ ರಶೀದ್.
ಭಾರತ-ಇಂಗ್ಲೆಂಡ್ ಏಕದಿನ ಸರಣಿಯ ಮೂರು ಪಂದ್ಯಗಳ ವಿವರ
* ಮೊದಲ ಏಕದಿನ ಪಂದ್ಯ: ಜುಲೈ 14, 2026 - ಎಡ್ಜ್‌ಬಾಸ್ಟನ್ (ಬರ್ಮಿಂಗ್ಹ್ಯಾಮ್)
* ಎರಡನೇ ಏಕದಿನ ಪಂದ್ಯ: ಜುಲೈ 16, 2026 - ಸೋಫಿಯಾ ಗಾರ್ಡನ್ಸ್ (ಕಾರ್ಡಿಫ್)
* ಮೂರನೇ ಏಕದಿನ ಪಂದ್ಯ: ಜುಲೈ 19, 2026 - ಲಾರ್ಡ್ಸ್ ಕ್ರಿಕೆಟ್ ಮೈದಾನ (ಲಂಡನ್)












Click it and Unblock the Notifications