ಪೋಕ್ಸೊ ಕಾಯ್ದೆ ದುರ್ಬಳಕೆಗೆ ತಡೆ: ಇನ್ಮುಂದೆ ದೇಶದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ಕಡ್ಡಾಯ
ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹದಿಹರೆಯರ ಕ್ರಿಮಿನಲ್ ಪ್ರಕರಣ ಮತ್ತು ಪೋಕ್ಸೊ ಪ್ರಕರಣಗಳಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ.ಸುಪ್ರೀಂ ಕೋರ್ಟ್‌ನಿಂದ ಅಂತಿಮ ಅನುಮೋದನೆ ಸಿಕ್ಕ ತಕ್ಷಣ ದೇಶದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣವನ್ನ ಕಡ್ಡಾಯವಾಗಿ ಪಠ್ಯಪುಸ್ತಕದ ಭಾಗವಾಗಿಸಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದೆ. ಹಾಗೆಯೇ ತಜ್ಞರ ಸಮಿತಿಯ ಶಿಫಾರಸುಗಳನ್ನ ಜಾರಿಗೊಳಿಸಲು ಸರ್ಕಾರ ಒಪ್ಪಿಕೊಂಡಿದೆ.
ಸುಪ್ರೀಂ ಕೋರ್ಟ್‌ನಿಂದ ಒಪ್ಪಿಗೆ ಸಿಕ್ಕ ಕೂಡಲೇ ದೇಶಾದ್ಯಂತ ಇರುವ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಈ ಪಠ್ಯಕ್ರಮವನ್ನ ಪರಿಚಯಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಹದಿಹರೆಯದವರ ಸಂಬಂಧಗಳು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಅಪರಾಧವಾಗಿ ದಾಖಲಾಗುತ್ತಿರುವ ಸುಮೊಟೊ ಪ್ರಕರಣದ ವಿಚಾರಣೆ ನಡೆಸುತ್ತಿರುವ ವೇಳೆ ಕೇಂದ್ರ ಈ ನಿರ್ಧಾರವನ್ನು ನ್ಯಾಯಾಲಯದ ಮುಂದಿಟ್ಟಿದೆ.

ತಜ್ಞರ ಸಮಿತಿ ರಚನೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೇತೃತ್ವದಲ್ಲಿ 26 ಸದಸ್ಯರ ರಾಷ್ಟ್ರೀಯ ತಜ್ಞರ ಸಮಿತಿವೊಂದನ್ನು ರಚಿಸಲಾಗಿತ್ತು. ಹದಿಹರೆಯದವರ ಗೌಪ್ಯತೆಯ ಹಕ್ಕು, ಸಹಮತ ಸಂಬಂಧಗಳು ಮತ್ತು ವಿಶೇಷವಾಗಿ ಪೋಕ್ಸೊ ಕಾಯ್ದೆಯಡಿ ಎದುರಾಗುವ ಸಮಸ್ಯೆಗಳನ್ನು ಸರಿಯಾಗಿ ಪರಿಶೀಲಿಸುವುದು ಈ ಸಮಿತಿಯ ಪ್ರಮುಖ ಉದ್ದೇಶ. ಸದ್ಯ ಈ ಸಮಿತಿಯು ಶಾಲಾ ಮತ್ತು ಕಾಲೇಜುಗಳ ಪಠ್ಯಕ್ರಮದಲ್ಲಿ ಈ ಲೈಂಗಿಕ ಶಿಕ್ಷಣವನ್ನ ಪರಿಚಯಿಸಲು ಶಿಫಾರಸು ಮಾಡಿದೆ.
ಹೊಸದಾಗಿ ಜಾರಿಗೆ ತರಲು ಸಿದ್ದತೆ ಮಾಡುತ್ತಿರುವ ಈ ಪಠ್ಯದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಜಾಗೃತಿ, ರಕ್ಷಣೆ, ಒಪ್ಪಿಗೆ ಮತ್ತು ವಯಸ್ಸಿಗೆ ಸೂಕ್ತವಾದ ಲೈಂಗಿಕ ಆರೋಗ್ಯ ಶಿಕ್ಷಣದ ಮಾಡ್ಯೂಲ್‌ಗಳನ್ನು ಸೇರಿಸಲು ತಿರ್ಮಾನಿಸಿದೆ. ಈ ಮಾಡ್ಯೂಲ್‌ಗಳು ಮಕ್ಕಳು ಮತ್ತು ಹದಿಹರೆಯದವರಿಗೆ ಸೈಂಟಿಫಿಕ್ ಮಾಹಿತಿ ನೀಡುತ್ತದೆ. ಅಲ್ಲದೆ, ಮಕ್ಕಳಿಗೆ ತಮ್ಮ ಮೇಲಾಗುತ್ತಿರುವ ದೌರ್ಜನ್ಯ ಗುರುತಿಸಿ ಅದರಿಂದ ಹೇಗೆ ರಕ್ಷಣೆ ಪಡೆಯಬೇಕು ಎಂದು ಅವರಿಗೆ ಮಾರ್ಗದರ್ಶನ ನೀಡುತ್ತದೆ.
ಹದಿಹರೆಯದ ಪ್ರೇಮ, ಸುಪ್ರೀಂ ಕೋರ್ಟ್ ಆತಂಕ
ಹದಿಹರೆಯದವರ ನಡುವಿನ ಸಹಮತ ಸಂಬಂಧಗಳ ಪ್ರಕರಣಗಳಲ್ಲಿ ಪೋಕ್ಸೊ ಕಾಯ್ದೆಯನ್ನು ಯಾಂತ್ರಿಕವಾಗಿ ಹಾಕಲಾಗುತ್ತಿದೆಯೇ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತ ಪಡಿಸಿದೆ. 15 ರಿಂದ 18 ವರ್ಷದೊಳಗಿನ ಹದಿಹರೆಯವು ಭಾವನಾತ್ಮಕವಾಗಿ ಒಂದು ರೀತಿಯಲ್ಲಿ ಪ್ರಯೋಗದ ಅವಧಿಯಾಗಿರುತ್ತದೆ. ಅಂತಹ ಪ್ರತಿಯೊಂದು ಸಹಮತದ ಪ್ರಕರಣವನ್ನೂ ಪೋಕ್ಸೊ ಕಾಯ್ದೆಯಡಿ ಗಂಭೀರ ಅಪರಾಧವೆಂದು ಪರಿಗಣಿಸಬೇಕೇ ಎಂದು ನ್ಯಾಯಾಲಯ ಪ್ರಶ್ನಿಸಿತ್ತು.
ಹದಿಹರೆಯ ವಯಸ್ಸಿನಲ್ಲಿ ಪ್ರೀತಿಸಿ, ಮಕ್ಕಳು ಮನೆ ಬಿಟ್ಟು ಓಡಿಹೋದಾಗ ಪೋಷಕರು ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ಹಾಕುತ್ತಾರೆ. ಅಂದರೆ, ಎಷ್ಟೋ ಬಾರಿ ಲೈಂಗಿಕ ಶೋಷಣೆ ಆಗದಿದ್ದರೂ ಕೂಡ ಕಾನೂನನ್ನು ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಹದಿಹರೆಯದ ಪ್ರೇಮ ಪ್ರಕರಣದಲ್ಲಿ ಪೋಕ್ಸೊ ಕಾಯ್ದೆಯನ್ನು ಜಾರಿಗೊಳಿಸುವುದನ್ನ ತಪ್ಪಿಸಬೇಕು. ಎಲ್ಲಾ ಹದಿಹರೆಯದ ಸಂಬಂಧಗಳನ್ನ ಕ್ರಿಮಿನಲ್ ಅಪರಾಧಗಳೆಂದು ಪರಿಗಣಿಸುವ ಬದಲು, ಪೊಲೀಸರು ತಮ್ಮ ವಿವೇಚನೆ ಬಳಸಿ ಪ್ರತಿಯೊಂದು ಪ್ರಕರಣವನ್ನು ಅದರ ನೈಜತೆಯ ಆಧಾರದ ಮೇಲೆ ತಿರ್ಮಾನಿಸಬೇಕು ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಸಲಹೆ ನೀಡಿದ್ದಾರೆ.














Click it and Unblock the Notifications