ಅಡುಗೆ ಮಾಡಲು ಕೊತ್ತಂಬರಿ ಖಾಲಿಯಾಯ್ತು ಅಂತ ಚಿಂತೆನಾ? ಚಳಿಗಾಲದಲ್ಲಿ ಪಾಟ್‌ನಲ್ಲೇ ತಾಜಾ ಸೊಪ್ಪು ಬೆಳೆಯುವ ಸುಲಭ ಟಿಪ್ಸ್ ಇಲ್ಲಿದೆ
ಅಡುಗೆಮನೆಗಳಲ್ಲಿ ಕೊತ್ತಂಬರಿ ಸೊಪ್ಪಿಲ್ಲದೆ ಮಹಿಳೆಯರಿಗೆ ಕೈ ಕಾಲೇ ಆಡುವುದಿಲ್ಲ. ಅಲ್ಲದೇ ಈ ಸೊಪ್ಪಿದ್ದರೇ ಮಾತ್ರ ಅಡುಗೆ ಪರಿಪೂರ್ಣವಾಗುವುದಲ್ಲವೇ?. ದಾಲ್, ಚಟ್ನಿ, ರಾಯಿತ, ಅವಲಕ್ಕಿ (ಪೋಹಾ), ಅಥವಾ ಸಾಮಾನ್ಯ ಪಲ್ಯವೇ ಆಗಿರಲಿ, ಅದರ ಮೇಲೆ ಒಂದು ಹಿಡಿ ತಾಜಾ ಕೊತ್ತಂಬರಿ ಸೊಪ್ಪು ಉದುರಿಸಿದರೆ ಮಾತ್ರ ಆ ಅಡುಗೆಗೆ ನಿಜವಾದ ರುಚಿ ಮತ್ತು ಸುವಾಸನೆ ಬರುತ್ತದೆ.
ಆದರೆ ಪ್ರತಿ ಬಾರಿ ಅಡುಗೆ ಮಾಡುವಾಗ ಕೊತ್ತಂಬರಿ ಖಾಲಿಯಾಗಿದೆ ಎಂದು ತಿಳಿದು ಮತ್ತೆ ಮಾರುಕಟ್ಟೆಗೆ ಓಡುವುದು ಅನೇಕರಿಗೆ ದೊಡ್ಡ ತಲೆನೋವಾಗಿರುತ್ತದೆ. ಇದಕ್ಕೆ ಸುಲಭ ಪರಿಹಾರವೆಂದರೆ ಮನೆಯ ಬಾಲ್ಕನಿಯಲ್ಲೇ ಸಣ್ಣ ಪಾಟ್‌ಗಳಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯುವುದು.

ಹೌದು ನೋಡಿ, ಚಳಿಗಾಲವು ಕೊತ್ತಂಬರಿ ಬೆಳೆಯಲು ಅತ್ಯಂತ ಸೂಕ್ತವಾದ ಸಮಯವಾಗಿದ್ದು, ಬೀಜ ಆರಿಸುವುದರಿಂದ ಹಿಡಿದು ಕೊಯ್ಲಿನವರೆಗಿನ ಹಂತ-ಹಂತದ ಮಾಹಿತಿ ಇಲ್ಲಿದೆ.
ಉತ್ತಮ ಕೊತ್ತಂಬರಿ ಬೀಜ ಆಯ್ಕೆ
ಒಳ್ಳೆಯ ಸೊಪ್ಪು ಪಡೆಯಲು ಮೊದಲ ಹೆಜ್ಜೆಯೇ ಗುಣಮಟ್ಟದ ಕೊತ್ತಂಬರಿ ಬೀಜ ಆಯ್ಕೆ ಮಾಡುವುದು. ಕೊತ್ತಂಬರಿ ಬೀಜಗಳು ಆ ಸಸ್ಯದ ಒಣಗಿದ ಹಣ್ಣಾಗಿರುವುದರಿಂದ, ತಾಜಾ ಪ್ಯಾಕೆಟ್‌ನಲ್ಲಿರುವ ಇಡೀ ಧನಿಯಾ ಕಾಳುಗಳನ್ನ ಬಳಸಬಹುದು. ಆದರೆ, ಬಿತ್ತನೆಗಾಗಿಯೇ ಮಾರುಕಟ್ಟೆಯಲ್ಲಿ ಸಿಗುವ ಬೀಜಗಳು ಬೇಗನೆ ಮೊಳಕೆಯೊಡೆಯುವುದರಿಂದ ಅವುಗಳನ್ನ ಬಳಸುವುದು ಹೆಚ್ಚು ಸೂಕ್ತ.
ಹಳೆಯ ಬೀಜಗಳು ಮೊಳಕೆಯೊಡೆಯುವ ಶಕ್ತಿಯನ್ನ ಕಳೆದುಕೊಂಡಿರುತ್ತವೆ. ಬಿತ್ತನೆ ಮಾಡುವ ಮುನ್ನ ಬೀಜಗಳನ್ನ ಸ್ವಲ್ಪ ಒತ್ತಿ ಎರಡು ಭಾಗಗಳಾಗಿ ಒಡೆಯುವುದರಿಂದ (ಹೊರಕವಚ ಬಿರುಕು ಬಿಡುವಂತೆ) ಬೇಗನೆ ಮೊಳಕೆ ಬರುತ್ತದೆ. ಎಲ್ಲಾ ಬೀಜಗಳೂ ಮೊಳಕೆಯೊಡೆಯುವುದಿಲ್ಲ. ಹಾಗಾಗಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲೇ ಬೀಜಗಳನ್ನ ಬಿತ್ತುವುದು ಒಳ್ಳೆಯದು.
ಆಳವಾದ ಪಾಟ್ ಬೇಕು
ಕೊತ್ತಂಬರಿ ಗಿಡಕ್ಕೆ ಉದ್ದವಾದ ತಾಯಿಬೇರು ಇರುವುದರಿಂದ, ಪಾಟ್‌ನ ಅಗಲಕ್ಕಿಂತ ಅದರ ಆಳ ಅತ್ಯಂತ ಮುಖ್ಯವಾಗುತ್ತದೆ. ಆದ್ದರಿಂದ ಕನಿಷ್ಠ 8 ರಿಂದ 12 ಇಂಚು (ಸುಮಾರು 30 ಸೆಂ.ಮೀ) ಆಳವಿರುವ ಪಾಟ್ ಆಯ್ಕೆ ಮಾಡಿ. ಹೆಚ್ಚುವರಿ ನೀರು ಹೊರಹೋಗಲು ಪಾಟ್‌ನ ಕೆಳಭಾಗದಲ್ಲಿ ರಂಧ್ರಗಳಿರುವುದು ಕಡ್ಡಾಯ. ಇಲ್ಲದಿದ್ದರೆ ನೀರು ನಿಂತು ಬೇರುಗಳು ಕೊಳೆಯಬಹುದು.
ಪಾಟ್‌ಗೆ ತೋಟದ ಮಣ್ಣು ಮತ್ತು ಕಾಂಪೋಸ್ಟ್ ಗೊಬ್ಬರ ಬೆರೆಸಿದ ಹಗುರವಾದ ಮಣ್ಣಿನ ಮಿಶ್ರಣ ತುಂಬಿಸಿ. ಕೊತ್ತಂಬರಿ ಗಿಡದ ಬೇರು ಸೂಕ್ಷ್ಮವಾಗಿರುವುದರಿಂದ ಒಮ್ಮೆ ಬಿತ್ತಿದ ಮೇಲೆ ಅದನ್ನ ಬೇರೆ ಪಾಟ್‌ಗೆ ಸ್ಥಳಾಂತರಿಸುವ ಪ್ರಯತ್ನವೆಲ್ಲಾ ಮಾಡಬೇಡಿ.
ಬಿತ್ತನೆ ವಿಧಾನ, ಬಿಸಿಲು ಮತ್ತು ನೀರು ನಿರ್ವಹಣೆ
ಮೊದಲು ಮಣ್ಣಿಗೆ ಲಘುವಾಗಿ ನೀರು ಚಿಮುಕಿಸಿ, ನಂತರ 1 ರಿಂದ 2 ಇಂಚು ಅಂತರದಲ್ಲಿ ಬೀಜಗಳನ್ನ ಹರಡಿ, ಅವುಗಳ ಮೇಲೆ ಕಾಲು ಇಂಚಿನಷ್ಟು ತೆಳುವಾದ ಮಣ್ಣನ್ನ ಮುಚ್ಚಿ. ಬೀಜಗಳನ್ನ ತೀರಾ ಆಳವಾಗಿ ಬಿತ್ತಿದರೆ ಮೊಳಕೆ ಬರುವುದು ತಡವಾಗುತ್ತದೆ.
ಸಾಮಾನ್ಯವಾಗಿ 7 ರಿಂದ 10 ದಿನಗಳಲ್ಲಿ ಮೊಳಕೆ ಒಡೆಯುತ್ತದೆ. ಆದರೆ ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ 2 ರಿಂದ 3 ವಾರಗಳೂ ಆಗಬಹುದು. ಸಸಿಗಳು ಬೆಳೆದ ನಂತರ ಅವುಗಳ ನಡುವೆ 6 ಇಂಚು ಅಂತರವಿರುವಂತೆ ನೋಡಿಕೊಂಡು, ಹೆಚ್ಚುವರಿ ಸಸಿಗಳನ್ನು ಬೇರು ಸಮೇತ ಕೀಳುವ ಬದಲು ಕತ್ತರಿಯಿಂದ ಕತ್ತರಿಸಿ ತೆಗೆಯಿರಿ.
ಇನ್ನು ಬಿಸಿಲು ಮತ್ತು ನೀರು ನಿರ್ವಹಣೆಯೂ ಅಷ್ಟೇ ಮುಖ್ಯ. ಕೊತ್ತಂಬರಿ ಗಿಡಕ್ಕೆ ಪ್ರತಿದಿನ ಕನಿಷ್ಠ 5 ರಿಂದ 6 ಗಂಟೆಗಳ ಕಾಲ ನೇರ ಬಿಸಿಲು ಬೇಕಾಗುತ್ತದೆ. ಹೀಗಾಗಿ ಬಿಸಿಲು ಚೆನ್ನಾಗಿ ಬೀಳುವ ಬಾಲ್ಕನಿ ಅಥವಾ ದಕ್ಷಿಣಾಭಿಮುಖವಾಗಿರುವ ಕಿಟಕಿಯ ಬಳಿ ಪಾಟ್ ಇಡಿ.
ಮಣ್ಣಿನ ಮೇಲ್ಭಾಗ ಒಣಗಿದಂತೆ ಅನಿಸಿದಾಗ ಮಾತ್ರ ನೀರು ಹಾಕಿ. ಮಣ್ಣು ಸದಾ ಹದವಾಗಿ ತೇವಾಂಶದಿಂದಿರಲಿ, ಆದರೆ ಕೆಸರಾಗಬಾರದು. ನೀರಿನ ಕೊರತೆ ಇದ್ದರೆ ಗಿಡದಲ್ಲಿ ಬೇಗನೆ ಹೂವು ಬಿಡುವ ಸಾಧ್ಯತೆ ಇರುತ್ತದೆ.
40 ದಿನಗಳಲ್ಲಿ ಕೊತ್ತಂಬರಿ ಕೊಯ್ಲು ಮಾಡುವ ಸ್ಮಾರ್ಟ್ ವಿಧಾನ
ಹವಾಮಾನಕ್ಕೆ ಅನುಗುಣವಾಗಿ ಬಿತ್ತನೆ ಮಾಡಿದ 40 ರಿಂದ 55 ದಿನಗಳಲ್ಲಿ ಸೊಪ್ಪು ಬಳಕೆಗೆ ಸಿದ್ಧವಾಗುತ್ತದೆ. ಕೊತ್ತಂಬರಿ ಕೊಯ್ಲು ಮಾಡುವಾಗ ಒಮ್ಮೆಲೇ ಇಡೀ ಗಿಡವನ್ನ ಕೀಳಬೇಡಿ. ಸ್ವಚ್ಛವಾದ ಕತ್ತರಿಯಿಂದ ಕಾಂಡದ ಕೆಳಭಾಗದಲ್ಲಿ ಕತ್ತರಿಸಿ, ಒಂದು ಬಾರಿಗೆ ಗಿಡದ ಮೂರನೇ ಒಂದು ಭಾಗಕ್ಕಿಂತ (1/3) ಹೆಚ್ಚು ಸೊಪ್ಪನ್ನು ತೆಗೆಯಬೇಡಿ. ಹೀಗೆ ಮಾಡುವುದರಿಂದ ಗಿಡ ಮತ್ತೆ ಚಿಗುರಿ ನಿರಂತರವಾಗಿ ಸೊಪ್ಪು ನೀಡುತ್ತದೆ.
ಗಿಡದಲ್ಲಿ ಹೂವಿನ ದಂಟು ಬರುವ ಮುನ್ನವೇ ಸೊಪ್ಪನ್ನ ಕತ್ತರಿಸಿ ಬಳಸಿ. ಒಂದು ವೇಳೆ ಹೂವು ಬಿಟ್ಟರೆ, ಅದರ ಬೀಜಗಳು ಒಣಗುವವರೆಗೆ ಬಿಟ್ಟು, ಮುಂದಿನ ಬಾರಿಯ ಬಿತ್ತನೆಗೆ ಅದೇ ಬೀಜಗಳನ್ನ ಸಂಗ್ರಹಿಸಿಟ್ಟುಕೊಳ್ಳಬಹುದು. ಈ ಸರಳ ವಿಧಾನವನ್ನ ಅನುಸರಿಸಿದರೆ ಚಳಿಗಾಲವಿಡೀ ನಿಮ್ಮ ಮನೆಯ ಬಾಲ್ಕನಿಯಲ್ಲೇ ಸುವಾಸನೆಯುಕ್ತ ತಾಜಾ ಕೊತ್ತಂಬರಿ ಸೊಪ್ಪನ್ನ ಪಡೆಯಬಹುದು.




Click it and Unblock the Notifications
