IPL 2027: ಆರ್‌ಸಿಬಿ ಹ್ಯಾಟ್ರಿಕ್ ಐಪಿಎಲ್ ಟ್ರೋಫಿ ಎತ್ತುವುದು ಖಚಿತ: ಭವಿಷ್ಯ ಭಾರಿ ವೈರಲ್
IPL 2027 RCB: ಐಪಿಎಲ್ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2027ರ ಆವೃತ್ತಿಯಲ್ಲೂ ಟ್ರೋಫಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಲು ಸಕಲ ತಯಾರಿ ಮಾಡಿಕೊಂಡಿದೆ. ಈ ಕುರಿತು ಈಗಲೇ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಮಹತ್ವದ ಭವಿಷ್ಯವನ್ನು ನುಡಿದಿದ್ದಾರೆ.
ಸತತ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮುಂಬರುವ ಋತುವಿನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಮೂಲಕ ಐತಿಹಾಸಿಕ ದಾಖಲೆ ಬರೆಯುವ ಗುರಿ ಹೊಂದಿದೆ. ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಆರ್‌ಸಿಬಿ ಬಳಿ ಕಡಿಮೆ ಮೊತ್ತದ ಪರ್ಸ್ ಇದ್ದರೂ, ತಂಡದ ಬಲಿಷ್ಠ ಆಟಗಾರರ ಬಲದ ಮೇಲೆ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅಪಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೀಮಿತ ಪರ್ಸ್‌ನಲ್ಲೂ ಆರ್‌ಸಿಬಿ ಆತ್ಮವಿಶ್ವಾಸ
ಅಹಮದಾಬಾದ್‌ನಲ್ಲಿ ನಡೆದ 2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಪ್ರಶಸ್ತಿ ಉಳಿಸಿಕೊಂಡಿದ್ದ ಆರ್‌ಸಿಬಿ, ತನ್ನ ವಿಜೇತ ತಂಡದ ಬಹುತೇಕ ಆಟಗಾರರನ್ನು ಉಳಿಸಿಕೊಂಡಿದೆ. ವಿರಾಟ್ ಕೊಹ್ಲಿ, ಜೋಶ್ ಹ್ಯಾಜಲ್‌ವುಡ್, ಫಿಲ್ ಸಾಲ್ಟ್ ಮತ್ತು ನಾಯಕ ರಜತ್ ಪಾಟಿದಾರ್ ಸೇರಿದಂತೆ ಪ್ರಮುಖರನ್ನು ತಂಡದಲ್ಲೇ ಉಳಿಸಿಕೊಂಡಿದೆ.
ಇನ್ನೂ ಗಾಯಗೊಂಡಿರುವ ಇಂಗ್ಲೆಂಡ್ ಯುವ ಆಲ್‌ರೌಂಡರ್ ಜೇಕಬ್ ಬೆಥೆಲ್ ಸೇರಿದಂತೆ ಕೇವಲ 5 ಆಟಗಾರರನ್ನು ಮಾತ್ರ ಬಿಡುಗಡೆ ಮಾಡಿದೆ. ಇದರಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ ಒಂದು ವಿದೇಶಿ ಸ್ಥಾನವೂ ಸೇರಿದಂತೆ ಒಟ್ಟು 5 ಸ್ಥಾನಗಳನ್ನು ತುಂಬಲು 14.15 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ.
ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಹೇಳಿದ್ದೇನು?
ಜಿಯೋಸ್ಟಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್‌ಸಿಬಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್, 'ಕಳೆದ ಎರಡು ವರ್ಷಗಳಿಂದ ನಾವು ಅತ್ಯುತ್ತಮ ಪ್ರದರ್ಶನ ನೀಡಿದ್ದೇವೆ. ಮುಂಬರುವ ಆವೃತ್ತಿಗೂ ನಮ್ಮ ತಂಡದ ಸಂಯೋಜನೆಯ ಬಗ್ಗೆ ನಮಗೆ ಸಂಪೂರ್ಣ ತೃಪ್ತಿ ಮತ್ತು ಆತ್ಮವಿಶ್ವಾಸವಿದೆ. ಹರಾಜಿನಲ್ಲಿ ಇತರ ತಂಡಗಳಿಗೆ ಹೋಲಿಸಿದರೆ ನಮ್ಮ ಬಳಿ ಖರ್ಚು ಮಾಡಲು ಕಡಿಮೆ ಹಣವಿರಬಹುದು. ಆದರೆ, ಕಳೆದ ಎರಡು ವರ್ಷಗಳಿಂದ ತಂಡಕ್ಕೆ ಜಯ ತಂದುಕೊಟ್ಟ ಬಲಿಷ್ಠ ಆಟಗಾರರನ್ನು ಉಳಿಸಿಕೊಂಡಿರುವುದರಿಂದ 2027ರಲ್ಲಿ ಸತತ ಮೂರನೇ ಟ್ರೋಫಿ ಗೆದ್ದು ಇತಿಹಾಸ ಸೃಷ್ಟಿಸುವ ವಿಶ್ವಾಸವಿದೆ,' ಎಂದು ಹೇಳಿದ್ದಾರೆ.
ಹರ್ಷಲ್ ಜಿಟಿಗೆ ಸೇರ್ಪಡೆ ಬಗ್ಗೆ ಪಾರ್ಥಿವ್ ಪಟೇಲ್ ಹೇಳಿದ್ದೇನು?
ಮತ್ತೊಂದೆಡೆ ಗುಜರಾತ್ ಟೈಟನ್ಸ್ ಸಹಾಯಕ ಕೋಚ್ ಪಾರ್ಥಿವ್ ಪಟೇಲ್ ಅವರು ಹಿರಿಯ ವೇಗಿ ಇಶಾಂತ್ ಶರ್ಮಾ ಅವರನ್ನು ಬಿಡುಗಡೆ ಮಾಡಿದ್ದಕ್ಕೆ ಕಾರಣ ನೀಡಿದ್ದಾರೆ. 'ಕಳೆದ ಎರಡು ಆವೃತ್ತಿಗಳಿಂದ ನಮ್ಮೊಂದಿಗಿದ್ದ ಇಶಾಂತ್ ಯುವ ಆಟಗಾರರಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಆದರೆ ಭಾರತದ ಪರ 100 ಟೆಸ್ಟ್ ಪಂದ್ಯಗಳನ್ನು ಆಡಿದ ಆಟಗಾರನಿಗೆ ಐಪಿಎಲ್‌ನಲ್ಲಿ ಒಂದೂ ಪಂದ್ಯ ಆಡಲು ಅವಕಾಶ ಸಿಗದಿರುವುದು ಕಷ್ಟಕರ ಸಂಗತಿ. ಲ್ಯೂಕ್ ವುಡ್ ಮತ್ತು ಕಾನರ್ ಎಸ್ಟರ್‌ಹುಯಿಜೆನ್ ವಿಚಾರದಲ್ಲೂ ಇದೇ ಕಾರಣಕ್ಕೆ ಬಿಡುಗಡೆ ಮಾಡಬೇಕಾಯಿತು,' ಎಂದು ಹೇಳಿದ್ದಾರೆ.
ಇಶಾಂತ್ ನಿರ್ಗಮನದಿಂದ ತೆರವಾದ ಅನುಭವಿ ವೇಗಿಯ ಸ್ಥಾನವನ್ನು ತುಂಬಲು ಸನ್‌ರೈಸರ್ಸ್ ಹೈದರಾಬಾದ್‌ನಿಂದ ಟ್ರೇಡ್ ಮೂಲಕ ಹರ್ಷಲ್ ಪಟೇಲ್ ಅವರನ್ನು ಗುಜರಾತ್ ತಂಡಕ್ಕೆ ಕರೆತರಲಾಗಿದೆ. ಸ್ಥಳೀಯ ಆಟಗಾರನಾಗಿರುವ ಹರ್ಷಲ್‌ಗೆ ಗುಜರಾತ್ ಪಿಚ್‌ಗಳ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಡೆತ್ ಓವರ್‌ಗಳಲ್ಲಿ ಯಾರ್ಕರ್ ಹಾಗೂ ಸ್ಲೋ ಬಾಲ್‌ಗಳ ಮೂಲಕ ಪಂದ್ಯ ಗೆಲ್ಲಿಸಿಕೊಡುವ ಅವರ ಸಾಮರ್ಥ್ಯ ತಂಡಕ್ಕೆ ದೊಡ್ಡ ಶಕ್ತಿ ನೀಡಲಿದೆ ಎಂದು ಪಾರ್ಥಿವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ಯಾಟಿಂಗ್ ಬಲಪಡಿಸುವತ್ತ ಕೆಕೆಆರ್ ಚಿತ್ತ
ಇದೇ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ಮುಖ್ಯ ಕೋಚ್ ಅಭಿಷೇಕ್ ನಾಯರ್ ಮಾತನಾಡಿ, ತಮ್ಮ ಬೌಲಿಂಗ್ ವಿಭಾಗ ಅತ್ಯುತ್ತಮವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಟ್ರೇಡ್ ಮೂಲಕ ಬ್ಯಾಟರ್‌ಗಳನ್ನು ಕರೆತರುವ ಪ್ರಯತ್ನ ಫಲ ನೀಡದ ಕಾರಣ, ಮುಂಬರುವ ಹರಾಜಿನಲ್ಲಿ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸುವತ್ತ ಹೆಚ್ಚಿನ ಗಮನ ಹರಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ಆರ್‌ಸಿಬಿ ಹ್ಯಾಟ್ರಿಕ್ ಐಪಿಎಲ್ ಟ್ರೋಫಿ ಎತ್ತುವ ಬಗ್ಗೆ ಹ್ಯಾಂಡಿ ಫ್ಲವರ್ ನೀಡಿರುವ ಭರವಸೆ ಇದೀಗ ಸಖತ್ ಸದ್ದು ಮಾಡುತ್ತಿದೆ.


Click it and Unblock the Notifications
