Bidadi Township: ಅನ್ನದಾತರ ವಿರುದ್ಧ ಸೇಡಿನ ರಾಜಕಾರಣ! 11 ರೈತರ ವಿರುದ್ಧ FIR: ಆರ್.ಅಶೋಕ್
ಬೆಂಗಳೂರು: ರೈತರಿಂದ ಅದೆಷ್ಟೋ ವಿರೋಧಗಳು, ನೂರಾರು ದಿನಗಳ ಕಾಲ ಪ್ರತಿಭಟನೆ ನಡೆಸಿದರೂ ಹಿಂದೆ ಸರಿಯದ ರಾಜ್ಯ ಸರ್ಕಾರ ಬಿಡದಿ ಟೌನ್‌ಶಿಫ್ ಯೋಜನೆಗಾಗಿ ಸರ್ವೇ ನಡೆಸಲು ಮುಂದಾಗಿತ್ತು. ಅಧಿಕಾರಿಗಳೊಂದಿಗೆ ಮಾಜಿ ಸಂಸದ ಡಿಕೆ ಸುರೇಶ್ ಸಹ ಇದ್ದರು. ಸರ್ವೇ ವಿರೋಧಿಸಿದ ಮಂಡಲಹಳ್ಳಿಯ ರೈತರ ಮೇಲೆ ಪೊಲೀಸರು FIR ದಾಖಲಿಸಿ ಬಂಧಿಸಿದ್ದಾರೆ. ಅನ್ನದಾತರ ಕೃಷಿ ಜಮೀನು ಕಿತ್ತುಕೊಳ್ಳಲು ಮುಂದಾಗಿಲ್ಲದೇ, ಅವರ ಮೇಲೆ ಎಫ್‌ಐಆರ್ ಹಾಕುವ ಮೂಲಕ ಸರ್ಕಾರ ದಬ್ಬಾಳಿಕೆ ರಾಜಕಾರಣ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಾಪ್ರಹಾರ ನಡೆಸಿದ್ದಾರೆ.
ಸರ್ವೇ ನಡೆಸಲು ಹೋದ ಅಧಿಕಾರಿಗಳ ಮೇಲಿನ ದಾಳಿ, ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ಮಂಡಲಹಳ್ಳಿ ಮೂವರು ರೈತ ಮಹಿಳೆಯರು ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ರಾಮನಗರ ಪೊಲೀಸರು FIR ದಾಖಲಿಸಿದ್ದಾರೆ. ಭಾರತೀಯ ನೀತಿ ಸಂಹಿತೆ (BNS) ಅಡಿಯಲ್ಲಿ 2023, (U/S
189(2),126(2),352,351(2),109(1), 115(2),118(1), 132, 133,74,190) ಸೆಕ್ಷನ್‌ಗಳಿಡ ರೈತರ ಮೇಲೆ ಪ್ರಕರಣ ದಾಖಲಾಗಿದೆ. ಪೊಲೀಸರ ಈ ನಡೆಯನ್ನು ರೈತರು, ರೈತರ ಸಂಘಟನೆಗಳು ಹಾಗೂ ವಿಪಕ್ಷ ನಾಯಕರು ವಿರೋಧಿಸಿದ್ದಾರೆ.

ಈ ಕುರಿತು ಎಕ್ಸ್ ಪೋಸ್ಟ್ ಮಾಡಿರುವ ಆರ್.ಅಶೋಕ್ ಅವರು, ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರೈತರ ಜಮೀನಿನ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ನಿಜ ಮುಖ ಮತ್ತೊಮ್ಮೆ ಬಯಲಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರೈತರಿಗೆ ಯಾವುದೇ ಪೂರ್ವ ಮಾಹಿತಿ ನೀಡದೆಯೇ ಜಮೀನಿಗೆ ನುಗ್ಗಿ ಜಂಟಿ ಮಾಪನ (JMC) ನಡೆಸಲು ಅಧಿಕಾರಿಗಳು ಮುಂದಾಗಿದ್ದರು. ಮಾತ್ರವಲ್ಲದೇ ಅದನ್ನು ಪ್ರಶ್ನಿಸಿದ ಅನ್ನದಾತರ ಮೇಲೆಯೇ ಸುಳ್ಳು FIR ದಾಖಲಿಸಿ ಬೆದರಿಕೆ ಹಾಕಲಾಗಿದೆ. ರೈತರ ಪರವಾಗಿ ನಿಲ್ಲಬೇಕಾದ ಸರ್ಕಾರವೇ ಪೊಲೀಸರನ್ನು ಬಳಸಿಕೊಂಡು ಹೋರಾಟವನ್ನು ಹತ್ತಿಕ್ಕಲು ಹೊರಟಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
ಅನ್ನದಾತರ ವಿರುದ್ಧ ಸೇಡಿನ ರಾಜಕಾರಣ
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಅನ್ನದಾತರ ವಿರುದ್ಧ ಸೇಡಿನ ರಾಜಕಾರಣ ಮಾಡುವುದನ್ನು ತಕ್ಷಣ ನಿಲ್ಲಿಸಿ. 48 ಗಂಟೆಗಳ ಒಳಗೆ ರೈತರ ಮೇಲಿನ ಎಲ್ಲಾ ಸುಳ್ಳು ಎಫ್‌ಐಆರ್ ಗಳನ್ನು ಹಿಂಪಡೆಯಬೇಕು. ವಶಕ್ಕೆ ಪಡೆದಿರುವ ಅಮಾಯಕ ರೈತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪ್ರಕರಣ ಹಿಂಪಡೆಯದಿದ್ದರೆ ರೈತರೊಂದಿಗೆ ಬಿಜೆಪಿ ಬೀದಿಗಿಳಿದು ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ. ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ, ದಬ್ಬಾಳಿಕೆಯ ರಾಜಕಾರಣಕ್ಕೆ ಕರ್ನಾಟಕದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಬಿಡದಿ ಗಲಾಟೆ ರಾಜಕೀಯ ಪ್ರೇರಿತ: ಎಚ್‌ಡಿಕೆಗೆ ಖಂಡ್ರೆ ಟಾಂಗ್
ಬಿಡದಿ ಟೌನ್‌ಶಿಪ್‌ಗೆ ಸಂಬಂಧಿಸಿದಂತೆ ಮಂಡಲಹಳ್ಳಿಯಲ್ಲಿ ನೆನ್ನೆ ನಡೆದ ಗಲಾಟೆ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಅವರು ಪ್ರತಿಕ್ರಿಯಿಸಿ ಎಚ್‌ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ನಿಂದ ಪರಿಹಾರಕ್ಕೆ ಹಾನಿ ಎಂದು ಹೇಳುತ್ತಾರೆ. ಮತ್ತೊಂದೆಡೆ ಎಚ್‌ಎಂಟಿ ಅರಣ್ಯ ಜಾಗದ ಕುರಿತು ಮಾತನಾಡುತ್ತಾರೆ. ಇವರಲ್ಲಿ ಯಾಕೆ ಇಂಥದ್ದೊಂದು ದ್ವಂದ್ವ ನಿಲುವು ಎಂದು ಪ್ರಶ್ನಿಸಿದ ಅವರು, ಈ ಗಲಾಟೆಯು ರಾಜಕೀಯ ಪ್ರೇರಿತ. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದರು. ಇನ್ನೊಂದೆಡೆ ಶಾಸಲಕ ಬಾಲಕೃಷ್ಣ ಅವರು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೆಸರು ಹಾಳು ಮಾಡಲು ಇದೆಲ್ಲ ಮಾಡಲಾಗುತ್ತಿದೆ ಎಂದು ಗಲಾಟೆ ಕುರಿತು ಮಾತನಾಡಿದ್ದಾರೆ.
ಸರ್ವೇ ವೇಳೆ ಆಗಿದ್ದೇನು?
ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಂಡಲಹಳ್ಳಿಗೆ ಜಂಟಿ ಮಾಪನ (JMC) ಸರ್ವೇಗೆಂದು ಭೇಟಿ ನೀಡಿದ್ದಾರೆ. ಸರ್ವೇಯ ನೋಟಿಸ್ ಕೆಲವರಿಗೆ ಬಂದಿದ್ದು, ಹಲವರ ಮನೆ ತಲುಪಿಲ್ಲ ಎನ್ನಲಾಗಿದೆ. ಸರ್ವೇಯನ್ನು ಸ್ಥಳೀಯ ರೈತ ಕುಟುಂಬದವರುವ ವಿರೋಧಿಸಿದ್ದಾರೆ. ಅನ್ನದಾತ ಆಕ್ಷೇಪಣೆ ನಡುವೆಯು ಅಧಿಕಾರಿಗಳು ಬೇರೊಂದು ಜಾಗದಲ್ಲಿ ಕಣ್ತಪ್ಪಿಸಿ ಸರ್ವೇಗೆ ಮುಂದಾಗಿದ್ದರು. ಈ ವೇಳೆ ರೈತರ ಪೊರಕೆ, ಕಲ್ಲು, ದೊಣ್ಣೆ ಹಿಡಿದು ಅಧಿಕಾರಿಗಳು ಮತ್ತವರ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಮಹಿಳಾ ರೈತರು ಅಧಿಕಾರಿಗಳಿಗೆ ಪೊರಕೆ ಸೇವೆ ಮಾಡಿದ್ದಾರೆ.
ಈ ಘಟನೆಯ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಸರ್ಕಾರಿ ಅಧಿಕಾರಿಗಳನ್ನು ತಡೆದ ಸಂಬಂಧ, ಅವರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಗ್ರಾಮದ ರೈತರ ಮೇಲೆ ಪ್ರಕರಣ ದಾಖಲಿಸಿ ವಶಕ್ಕೆ ಪಡೆಯಲಾಗಿದೆ.


Click it and Unblock the Notifications
