Professor Recruimnet: ರಾಜ್ಯದ 32 ವಿಶ್ವವಿದ್ಯಾಲಗಳಲ್ಲಿ 3008 ಬೋಧಕ ಹುದ್ದೆಗಳು ಖಾಲಿ: ವಿಪಕ್ಷ ಆಕ್ರೋಶ
ಬೆಂಗಳೂರು: ಮುಂಗಾರು ಶುರುವಾಗಿ, ಬರಗಾಲ ಪರಿಸ್ಥಿತಿ ಎದುರಾದರೂ ರಾಜ್ಯದಲ್ಲಿ ಕೃಷಿ ಸಚಿವರು ಇಲ್ಲದಂತಾಗಿದೆ. ಅದೇ ರೀತಿ ಶಾಲಾ, ಕಾಲೇಜುಗಳು ಶುರುವಾದರೂ ಶಿಕ್ಷಣ ಸಚಿವರು, ಉನ್ನತ ಶಿಕ್ಷಣ ಸಚಿವರೇ ಇಲ್ಲದಂತಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 3,008 ಬೋಧಕ ಉದ್ಯೋಗಗಳು ಖಾಲಿ ಇದೆ. ಸರ್ಕಾರವು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ ಎಂಬುದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.
ಎಕ್ಸ್ ಪೋಸ್ಟ್ ಮಾಡಿರುವ ಅವರು, ಉನ್ನತ ಶಿಕ್ಷಣ ಸಚಿವರು ಎಲ್ಲಿದ್ದಾರೆ? ಸರ್ಕಾರದ ಆದ್ಯತೆಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸ್ಥಾನವೇ ಇಲ್ಲವೇ? ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆ ಇಂದು ಸಂಪೂರ್ಣವಾಗಿ ದಿಕ್ಕು ತಪ್ಪಿ ಕತ್ತಲಿಗೆ ತಳ್ಳಲ್ಪಟ್ಟಿದೆ. ಅದಕ್ಕೆ ಕಾರಣ ಡಿಕೆ ಶಿವಕುಮಾರ್ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಉನ್ನತ ಶಿಕ್ಷಣವೇ ಆದ್ಯತೆಯಾಗಿಲ್ಲ. ಹೊಸ ಮುಖ್ಯಮಂತ್ರಿಗಳು ಬಂದು ತಿಂಗಳು ಕಳೆಯುತ್ತಾ ಬಂದರೂ, ಇಡೀ ರಾಜ್ಯದ ಮಕ್ಕಳ ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಧರಿಸುವ ಈ ಇಲಾಖೆಗೆ ಒಬ್ಬ ಪೂರ್ಣಾವಧಿಯ ಉನ್ನತ ಶಿಕ್ಷಣ ಸಚಿವರೇ ಇಲ್ಲ ಎಂದು ದೂರಿದರು.

ವಿಶ್ವವಿದ್ಯಾಲಯಗಳಲ್ಲಿ ಶೇ 64 ರಷ್ಟು ಹುದ್ದೆಗಳು ಖಾಲಿ!
ರಾಜ್ಯದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಸಚಿವರಿಲ್ಲ, ಹುದ್ದೆಗಳ ನೇಮಕಾತಿ ಆಗಿಲ್ಲ. ವ್ಯವಸ್ಥೆಗೊಂದು ದಿಕ್ಕಿಲ್ಲ. ಸರ್ಕಾರ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ನಿರಂತರವಾಗಿ ಚೆಲ್ಲಾಟ ಆಡಲಾಗುತ್ತಿದೆ. ರಾಜ್ಯದಲ್ಲಿ ವಿಶ್ವ ವಿದ್ಯಾಲಯಗಳಲ್ಲಿ ಶೇಕಡಾ 64 ರಷ್ಟು ಬೋಧಕ ಹುದ್ದೆಗಳು ಖಾಲಿ ಇರುವದೇ ಸರ್ಕಾರದ ಬೇಜವಾಬ್ದಾರಿತನಕ್ಕೆ ಸಾಕ್ಷಿ ಎಂದು ಹೇಳಿದರು.
ರಾಜ್ಯದ 32 ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಮಂಜೂರಾಗಿರುವ 4,709 ಬೋಧಕ ಹುದ್ದೆಗಳ ಪೈಕಿ ಬರೋಬ್ಬರಿ 3,008 ಹುದ್ದೆಗಳು ಖಾಲಿ ಇವೆ. ಅಂದರೆ ಶೇ. 64 ರಷ್ಟು ಪ್ರೊಫೆಸರ್‌ಗಳೇ ಇಲ್ಲದ ಮೇಲೆ ಉನ್ನತ ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡುವುದು ಕೇವಲ ಮಾತಿನ ರಾಜಕಾರಣವಲ್ಲದೇ ಮತ್ತೇನು? ಎಂದು ತರಾಟೆಗೆ ತೆಗೆದುಕೊಂಡರು.
ಪ್ರಮುಖ ವಿಶ್ವವಿದ್ಯಾಲಯಗಳಲ್ಲೇ ಖಾಲಿ ಇರುವ ಹುದ್ದೆಗಳ ಸಂಖ್ಯೆ
* ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ: 272ಕ್ಕೆ 272 ಹುದ್ದೆಗಳೂ ಖಾಲಿ!
* ನೃಪತುಂಗ ವಿಶ್ವವಿದ್ಯಾಲಯ: 100ಕ್ಕೆ 100 ಹುದ್ದೆಗಳೂ ಖಾಲಿ!
* ಕರ್ನಾಟಕ ವಿಶ್ವವಿದ್ಯಾಲಯ: 422 ಹುದ್ದೆಗಳು
* ಮೈಸೂರು ವಿಶ್ವವಿದ್ಯಾಲಯ: 391 ಹುದ್ದೆಗಳು
* ಬೆಂಗಳೂರು ವಿಶ್ವವಿದ್ಯಾಲಯ: 245 ಹುದ್ದೆಗಳು
* ಗುಲ್ಬರ್ಗಾ ವಿಶ್ವವಿದ್ಯಾಲಯ: 171 ಹುದ್ದೆಗಳು ಖಾಲಿ.
* ಬೆಂಗಳೂರು ನಗರ ವಿಶ್ವವಿದ್ಯಾಲಯ: 151 ಹುದ್ದೆಗಳು ಖಾಲಿ ಇವೆ.
ಹುದ್ದೆಗಳ ನೇಮಕಾತಿ ಬರೀ ಭರವಸೆಗೆ ಸೀಮಿತ
ಕಳೆದ ಬಜೆಟ್‌ನಲ್ಲಿ 1,000 ಬೋಧಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವುದಾಗಿ ಸರ್ಕಾರ ದೊಡ್ಡದಾಗಿ ಜಾಹೀರಾತು ಮಾಡಿತ್ತು. ಆದರೆ ಇಂದಿಗೂ ನೇಮಕಾತಿ ಪ್ರಕ್ರಿಯೆಯ ಸಣ್ಣ ಸುಳಿವೇ ಇಲ್ಲ. ಕಾಂಗ್ರೆಸ್‌ನಿಂದ ಕೇವಲ ಸುಳ್ಳು ಘೋಷಣೆಗಳು ಬಂದವು, ಆದರೆ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿಲ್ಲ.
ರಾಜ್ಯ ಕಾಂಗ್ರೆಸ್ ಸರ್ಕಾರದ ನೀಡುವ ಆದ್ಯತೆಗಳು ಜನ, ರಾಜ್ಯದ ಅಭಿವೃದ್ಧಿಗೆ ಅಲ್ಲ. ಬದಲಾಗಿ ಪ್ರಚಾರಕ್ಕೆ ಇವರ ಹತ್ತಿರ ಸಮಯ ಇದೆ, ರಾಜಕೀಯ ಮೇಲಾಟ ಹಾಗೂ ಉತ್ಸವ-ಸಮಾರಂಭಗಳಿಗೆ ಬೇಕಾದಷ್ಟು ಸಮಯ ಇದ್ದು, ಅವುಗಳಿಗಷ್ಟೇ ಸರ್ಕಾರ ಆದ್ಯತೆ ನೀಡುತ್ತದೆ ಎಂದು ಅವರು ಆರೋಪಿಸಿದರು.
ನಾಡಿನ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಉನ್ನತ ಶಿಕ್ಷಣಕ್ಕೆ ಮಾತ್ರ ಇವರ ಬಳಿ ಸಚಿವರೂ ಇಲ್ಲ, ಇಚ್ಛಾಶಕ್ತಿಯೂ ಇಲ್ಲ. ಕಾಯಂ ಪ್ರಾಧ್ಯಾಪಕರಿಲ್ಲದೆ ಇಡೀ ವಿಶ್ವವಿದ್ಯಾಲಯಗಳನ್ನು ಕೇವಲ ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗುವಂತೆ ಮಾಡಿರುವುದು ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲೇ ಅತಿ ದೊಡ್ಡ ದುರಂತ ಎಂದು ಲೇವಡಿ ಮಾಡಿದರು.
ಬಿಜೆಪಿಯ ಹಕ್ಕೋತ್ತಾಯಗಳು
ಸರ್ಕಾರ ಕೂಡಲೇ ಉನ್ನತ ಶಿಕ್ಷಣ ಇಲಾಖೆಗೆ ಪೂರ್ಣಾವಧಿಯ ಸಚಿವರನ್ನು ನೇಮಿಸಬೇಕು. ಖಾಲಿ ಇರುವ ಎಲ್ಲಾ 3,008 ಬೋಧಕ ಹುದ್ದೆಗಳ ಭರ್ತಿಗೆ ತಕ್ಷಣವೇ ಸಮಯಬದ್ಧ ನೇಮಕಾತಿ ವೇಳಾಪಟ್ಟಿಯನ್ನು ಪ್ರಕಟಿಸಬೇಕೆಂದು ಆರ್.ಅಶೋಕ್ ಒತ್ತಾಯಿಸಿದರು.
ವಿದ್ಯಾರ್ಥಿಗಳಿಗೆ ಸರ್ಕಾರದ ಟೊಳ್ಳು ಭರವಸೆಗಳು ಬೇಡ. ಪಾಠ ಮಾಡಲು ಬೋಧಕರು ಬೇಕು. ನಮ್ಮ ವಿಶ್ವವಿದ್ಯಾಲಯಗಳಿಗೆ ನಿಮ್ಮ ರಾಜಕೀಯ ಭಾಷಣಗಳಲ್ಲ. ತಕ್ಷಣದ ನೇಮಕಾತಿಗಳು ಬೇಕು. ಉನ್ನತ ಶಿಕ್ಷಣದ ನಿರ್ಲಕ್ಷ್ಯ ನಿಲ್ಲಿಸಿ, ಇಲ್ಲದಿದ್ದರೆ ಯುವಶಕ್ತಿಯ ಉಗ್ರ ಹೋರಾಟವನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.













Click it and Unblock the Notifications