ಕರ್ನಾಟಕದ ಈ ಜಿಲ್ಲೆಯ 100 ಎಕ್ರೆಯಲ್ಲಿ ಮೊದಲ PCB ಘಟಕ: ಎಲೆಕ್ಟ್ರಾನಿಕ್ಸ್ ವಯಲಕ್ಕೆ ಹೊಸ ಶಕ್ತಿ
ಬೆಂಗಳೂರು: ಭಾರತದ ಎಲೆಕ್ಟ್ರಾನಿಕ್ಸ್ ಭವಿಷ್ಯಕ್ಕೆ ರಾಜ್ಯದ ಬಸವನಾಡು ಕೊಡುಗೆ ನೀಡುವ ದಿನಗಳು ಎದುರಾಗಿವೆ. ಅಂದರೆ ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆ ಕೈಗಾರಿಕಾ ಬೆಳವಣಿಗೆಯ ಕೇಂದ್ರವಾಗಿ ರೂಪಿಸಲಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಉತ್ತರ ಕರ್ನಾಟಕದ ಮೊದಲ ಪ್ರಥಮ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (PCB) ಎಲೆಕ್ಟ್ರಾನಿಕ್ಸ್ ಉತ್ಪಾದನಾ ಘಟಕವು ವಿಶಾಲ ಪ್ರದೇಶದಲ್ಲಿ ಸ್ಥಾಪನೆಯಾಗಲಿದ್ದು, ಈ ನಿರ್ಧಾರವನ್ನು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಹೊಸ ಕೈಗಾರಿಕೆ ಕುರಿತು ಎಕ್ಸ್ ಪೋಸ್ಟ್ ಮೂಲಕ ಮಾಹಿತಿ ನೀಡಿರುವ ಸಚಿವರು ನಮ್ಮ ಜಿಲ್ಲೆಗೆ ಪಿಸಿಬಿ ಘಟಕ ಸ್ಥಾಪನೆ ನಿರ್ಧಾರವನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಉತ್ಪಾದನಾ ಘಟಕ 100 ಎಕರೆ ವಿಸ್ತೀರ್ಣದಲ್ಲಿ ಸ್ಥಾಪನೆಯಾಗುತ್ತಿದೆ. ನವೀಕರಿಸಬಹುದಾದ ಇಂಧನ, ಪಾನೀಯ ಉದ್ಯಮ, ಸುಧಾರಿತ ಉತ್ಪಾದನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಹೂಡಿಕೆಗಳನ್ನು ಆಕರ್ಷಿಸಿರುವ ವಿಜಯಪುರ, ಇದೀಗ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿಯೂ ತನ್ನ ಬಲವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕದ ಮೊದಲ ಪಿಸಿಬಿ ಘಟಕ
ಉತ್ತರ ಕರ್ನಾಟಕದ ಪ್ರಥಮ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (PCB) ಘಟಕ ಇದಾಗಿದ್ದು, ವಿಜಯಪುರದಲ್ಲಿ ಎಲೆಕ್ಟ್ರಾನಿಕ್ಸ್ ಕ್ರಾಂತಿಯ ಹೊಸ ಅಧ್ಯಾಯ ಆರಂಭವಾಗಲಿದೆ. ಯೋಜನೆ ಉದ್ದಕ್ಕೂ ಲಯನ್ಸ್ ಸರ್ಕ್ಯುಟ್ ಸಂಸ್ಥೆ (LionCircuits) ಜೊತೆಯಾಗಿರಲಿದೆ ಎಂದು ಸಚಿವರು ಯೋಜನೆ ಕೈಗೆತ್ತಿಕೊಂಡ ಸಂಸ್ಥೆಯನ್ನು ತಿಳಿಸಿದ್ದಾರೆ.
ದಶಕದ ಹಿಂದೆ ಬರದ ಸಂಕಷ್ಟಕ್ಕೆ ಹೆಸರಾಗಿದ್ದ ವಿಜಯಪುರ ಜಿಲ್ಲೆ, ನಂತರದಲ್ಲಿ ಜಲ ಕ್ರಾಂತಿ, ಹಸಿರು ಕ್ರಾಂತಿ, ಶಿಕ್ಷಣ ಕ್ರಾಂತಿ ಮತ್ತು ಈಗ ಉದ್ಯೋಗ ಕ್ರಾಂತಿಯ ಮೂಲಕ ಹೊಸ ಇತಿಹಾಸ ನಿರ್ಮಿಸುತ್ತಿದೆ. ಅತ್ಯಲ್ಪ ಅವಧಿಯಲ್ಲಿ ಕೃಷಿ, ಕೈಗಾರಿಕೆ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಇಂತಹ ಸಮಗ್ರ ಪರಿವರ್ತನೆ ಸಾಧಿಸಿದ ದೇಶದ ಕೆಲವೇ ಕೆಲವು ಜಿಲ್ಲೆಗಳಲ್ಲಿ ವಿಜಯಪುರವೂ ಒಂದು ಎಂಬುದು ಹೆಮ್ಮೆಯ ಸಂಗತಿ.
ಕರ್ನಾಟಕದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯ
100 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಈ ಸಮಗ್ರ ಪಿಸಿಬಿ ಮೆಗಾ ಕ್ಯಾಂಪಸ್ ಕರ್ನಾಟಕದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ವೈಯುಕ್ತಿಕವಾಗಿ ಹಾಗೂ ನನ್ನ ಇಲಾಖೆಯ ಸಂಪೂರ್ಣ ಬೆಂಬಲ ಸದಾ ಇರಲಿದೆ. ಯೋಜನೆಯು ತ್ವರಿತವಾಗಿ, ಸುಗಮವಾಗಿ ಮತ್ತು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಅಗತ್ಯವಿರುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರದ ವತಿಯಿಂದ ಒದಗಿಸಲಾಗುವುದು. ಮುಂದೆ ಇದು ದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರಕ್ಕೆ ಹೊಸ ಮಾನದಂಡ ರೂಪಿಸಲಿದೆ ಎಂದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ಸಮಗ್ರ ಅಭಿವೃದ್ಧಿಯ ಮೂಲಕ ಉಜ್ವಲ ಭವಿಷ್ಯವನ್ನು ಒಟ್ಟಾಗಿ ನಿರ್ಮಿಸೋಣ ಎಂದು ಕರೆ ನೀಡಿದರು. ಸಚಿವರ ಬೆನ್ನಲ್ಲೆ ಲಯನ್ಸ್ ಸರ್ಕ್ಯುಟ್ ಸಂಸ್ಥೆ ಮುಖ್ಯಸ್ಥರ ಮುರಳಿ ಶ್ರೀನಿವಾಸ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ವಲಯದ ಕೊರತೆ ನೀಗಿಸಲು ಕ್ಯಾಂಪಸ್
ದೇಶದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯದಲ್ಲಿನ ಇರುವ ಒಂದಷ್ಟು ಕೊರತೆ ನೀಗಿಸಲು 100 ಎಕರೆ ವಿಸ್ತೀರ್ಣದ 'ಇಂಟಿಗ್ರೇಟೆಡ್ ಪಿಸಿಬಿ ಮೆಗಾ ಕ್ಯಾಂಪಸ್' ಅನ್ನು ನಿರ್ಮಿಸಲಾಗುತ್ತಿದೆ. ಡಲ್ಲಾಸ್‌ನ ಟಿಐ ಸೆಮಿಕಾನ್ ಮಾದರಿಯಿಂದ ಪ್ರೇರಿತವಾದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬಹು ಫ್ಯಾಬ್ ಘಟಕಗಳು (PCB Fabs), ಸುಧಾರಿತ ಪಿಸಿಬಿಎ (PCBA) ಸಾಲುಗಳು ಮತ್ತು ಗ್ರಾಹಕರಿಗೆ ತಕ್ಷಣವೇ ಉತ್ಪನ್ನಗಳನ್ನು ಸಾಗಿಸಲು ಸಂಪೂರ್ಣ ಸ್ವಯಂಚಾಲಿತ ಗೋದಾಮುಗಳು ಇಲ್ಲಿ ತಲೆ ಎತ್ತಲಿವೆ ಎಂದು ಅವರು ವಿವರಿಸಿದರು.
ಆರ್ ಅಂಡ್ ಡಿ ಕೇಂದ್ರ
ಇದರೊಂದಿಗೆ ಸೆಮಿಕಾನ್ ಹಾಗೂ ಸುಧಾರಿತ ತಂತ್ರಜ್ಞಾನಗಳ ಸಂಶೋಧನೆಗಾಗಿ ವಿಶೇಷ ಆರ್ ಅಂಡ್ ಡಿ (R&D) ಕೇಂದ್ರ ಸಹ ಇಲ್ಲಿ ನಿರ್ಮಿಸಲಿದ್ದೇವೆ. ಮೂಲಭೂತ ಸೌಲಭ್ಯಗಳ ಸಮಸ್ಯೆಗಳನ್ನು ಬುಡಸಹಿತ ಸರಿಪಡಿಸಲು 'ಟೆರ್ರಾ ಸರ್ಕ್ಯೂಟ್ಸ್' ಶ್ರಮಿಸಲಿದೆ. ದೇಶದಲ್ಲೇ ಎಲೆಕ್ಟ್ರಾನಿಕ್ಸ್ ತಯಾರಿಕಾ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸುವ ಈ ಮಹತ್ವಾಕಾಂಕ್ಷಿ ಕ್ಯಾಂಪಸ್‌ಗಾಗಿ ಮುಂದಿನ 10 ವರ್ಷಗಳನ್ನು ಮುಡಿಪಾಗಿಡಲಾಗುತ್ತಿದೆ ಎಂದು ಯೋಜನೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.













Click it and Unblock the Notifications