Rekha Vedavyas: ನಾನಿನ್ನೂ ಸಿಂಗಲ್, ನನ್ನ ಮದುವೆ ಆಗಲು ಇಷ್ಟವಿದ್ರೆ ಡೈರೆಕ್ಟ್ ಮೆಸೇಜ್ ಮಾಡಿ: ಆಫರ್ ಕೊಟ್ಟ 'ಹುಡುಗಾಟ' ನಟಿ
ಸ್ಯಾಂಡಲ್‌ವುಡ್ ಹಾಗೂ ಟಾಲಿವುಡ್‌ನಲ್ಲಿ ಒಂದು ಕಾಲದ ಕ್ರಶ್, 'ಹುಚ್ಚ' ಚಿತ್ರದ ಜಿಂಕೆಮರಿ ಖ್ಯಾತಿಯ ನಟಿ ರೇಖಾ ವೇದವ್ಯಾಸ್ (Rekha Vedavyas) ಈಗ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಸುದೀರ್ಘ ಕಾಲದಿಂದ ಬೆಳ್ಳಿಪರದೆಯಿಂದ ದೂರ ಉಳಿದಿರುವ ಈ ನಟಿ, ಇತ್ತೀಚಿನ ಟಾಕ್ ಶೋ ಒಂದರಲ್ಲಿ ತಮ್ಮ ಮದುವೆ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಆಡಿರುವ ಮಾತುಗಳು ವೈರಲ್ ಆಗಿವೆ. "ನನ್ನನ್ನು ನಿಜವಾಗಿಯೂ ಇಷ್ಟಪಟ್ಟು ಮದುವೆಯಾಗಲು ಬಯಸುವವರು ಇನ್‌ಸ್ಟಾಗ್ರಾಂನಲ್ಲಿ ನೇರವಾಗಿ ಮೆಸೇಜ್ (DM) ಮಾಡಿ" ಎಂದು ರೇಖಾ ಕೊಟ್ಟಿರುವ ಕ್ರೇಜಿ ಆಫರ್ ಈಗ ಭಾರೀ ಸಂಚಲನ ಸೃಷ್ಟಿಸಿದೆ.
ನಾನು ಇನ್ನೂ ಸಿಂಗಲ್
ಖ್ಯಾತ ಟಾಕ್ ಶೋ ಒಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ರೇಖಾ ವೇದವ್ಯಾಸ್ ತಮ್ಮ ಮದುವೆಯ ಸುತ್ತ ಹರಿದಾಡುತ್ತಿರುವ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಸಾಕಷ್ಟು ಜನ ನನಗೆ ಈಗಾಗಲೇ ಮದುವೆಯಾಗಿದೆ ಅಥವಾ ಲೈಫ್‌ನಲ್ಲಿ ಯಾರೋ ಇದ್ದಾರೆ ಅಂದುಕೊಂಡಿದ್ದಾರೆ. ಆದರೆ ಅದೆಲ್ಲ ಸುಳ್ಳು, ನಾನು ಇನ್ನೂ ಕಂಪ್ಲೀಟ್ ಸಿಂಗಲ್ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟು ವಯಸ್ಸಾದರೂ ಯಾಕೆ ಮದುವೆಯಾಗಿಲ್ಲ? ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರೇಖಾ, "ಬಹುಶಃ ಇಡೀ ದೇಶದಲ್ಲಿ ಸಲ್ಮಾನ್ ಖಾನ್ ಬಿಟ್ಟರೆ ಮದುವೆಯಾಗದೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ಉಳಿಯುತ್ತಿರುವುದು ನಾನೇ ಅನ್ಸುತ್ತೆ" ಎಂದು ಜೋಕ್ ಮಾಡಿದ್ದಾರೆ.

ಒಬ್ಬನನ್ನು ಇಷ್ಟಪಟ್ಟಿದ್ದೆ
"ಹಿಂದೆ ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದೆ. ಆದರೆ ಆ ವಿಷಯವನ್ನು ಅವನಿಗೆ ಹೇಳಲು ಧೈರ್ಯ ಬರಲಿಲ್ಲ. ನನ್ನ ಹಾಗೆ ಯಾರೂ ಸುಮ್ಮನಿರಬೇಡಿ, ಇಷ್ಟವಾದರೆ ತಕ್ಷಣ ಪ್ರಪೋಸ್ ಮಾಡಿ" ಎಂದೂ ರೇಖಾ ಸಲಹೆ ನೀಡಿದ್ದಾರೆ. ನಿರೂಪಕಿ ಫನ್ನಿಯಾಗಿ 'ನೀವು ಸಿಂಗಲ್ ಅಂತ ಗೊತ್ತಾದರೆ ಈಗ ಸಾಲು ಸಾಲು ಪ್ರಪೋಸಲ್ಸ್ ಬರುತ್ತವಲ್ಲ' ಎಂದಾಗ ರೇಖಾ ಬೋಲ್ಡ್ ಆಗಿ ರಿಯಾಕ್ಟ್ ಮಾಡಿದ್ದಾರೆ. "ನಿಮ್ಮಲ್ಲಿ ಯಾರಾದರೂ ನನ್ನನ್ನು ನಿಯತ್ತಿನಿಂದ ಪ್ರೀತಿಸಿ, ಮದುವೆಯಾಗಲು ಬಯಸಿದರೆ, ಹಿಂಜರಿಕೆಯಿಲ್ಲದೆ ನನ್ನ ಇನ್‌ಸ್ಟಾಗ್ರಾಂ ಖಾತೆಗೆ ನೇರವಾಗಿ ಡಿಎಂ ಮಾಡಿ. ನನಗೆ ಜೆನ್ಯೂನ್ ಅನ್ನಿಸುವ ಮೆಸೇಜ್‌ಗಳಿಗೆ ನಾನು ಖಂಡಿತ ರಿಪ್ಲೈ ಮಾಡುತ್ತೇನೆ, ಅಲ್ಲಿಯವರೆಗೂ ಸ್ವಲ್ಪ ಕಾಯಿರಿ" ಎಂದು ನಗುತ್ತಾ ಹೇಳಿದ್ದಾರೆ.
ಪತಿ ಹೇಗಿರಬೇಕು?
"ಈ ಭೂಮಿ ಮೇಲೆ ಯಾರೂ ಪರ್ಫೆಕ್ಟ್ ಅಲ್ಲ, ನಾನು ಕೂಡ ಅಲ್ಲ. ಹಾಗಾಗಿ ನನಗೆ ಹುಡುಗನ ಲುಕ್ಸ್, ಬಣ್ಣ ಮುಖ್ಯವಲ್ಲ. ನನ್ನನ್ನು ನನ್ನಂತೆಯೇ ಪ್ರೀತಿಸುವ, ಒಂದು ಒಳ್ಳೆಯ ಮನಸ್ಸಿರುವ ಹುಡುಗ ಸಿಕ್ಕರೆ ಸಾಕು. ನಾನು 5.6 ಹೈಟ್ ಇದ್ದೇನೆ, ನನಗಿಂತ ಸ್ವಲ್ಪ ಎತ್ತರವಿದ್ದರೆ ಸಾಕು, ಇಲ್ಲದಿದ್ದರೆ ನಾನು ರೀ ಅಂತ ಕರೆಯಲು ಚೆನ್ನಾಗಿರಲ್ಲ" ಎಂದು ತಮಾಷೆ ಮಾಡಿದ್ದಾರೆ.
ಚಿತ್ರರಂಗದಿಂದ ದೂರಾಗಿದ್ದು ಏಕೆ?
ಕಿಚ್ಚ ಸುದೀಪ್ ಜೊತೆ 'ಹುಚ್ಚ', ಚಾಲೆಂಜಿಂಗ್ ಸ್ಟಾರ್ ದರ್ಶನ್, ಗಣೇಶ್ ಜೊತೆ ಹುಡುಗಾಟ ಸೇರಿದಂತೆ ಹಲವು ಸ್ಟಾರ್‌ಗಳ ಜೊತೆ ಮಿಂಚಿದ್ದ ರೇಖಾ, 2014ರ ನಂತರ ಸಿನಿಮಾಗಳಿಂದ ಸಂಪೂರ್ಣ ಮಾಯವಾಗಿದ್ದರು. ಇದಕ್ಕೆ ಕಾರಣ ಬಿಚ್ಚಿಟ್ಟ ಅವರು, "ನಾನು ಬೇಕು ಅಂತ ಗ್ಯಾಪ್ ತಗೊಂಡಿಲ್ಲ. ಅದು ದೇವರು ಸೃಷ್ಟಿಸಿದ ಗ್ಯಾಪ್. ಕೆಲವು ತೀವ್ರವಾದ ಆರೋಗ್ಯ ಸಮಸ್ಯೆಗಳಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ತುಂಬಾ ನರಕಯಾತನೆ ಅನುಭವಿಸಿದೆ. ಅದರಿಂದ ಚೇತರಿಸಿಕೊಳ್ಳಲು 3 ವರ್ಷ ಬೇಕಾಯಿತು. ಹಾಗಾಗಿ ಗುರುತಿಸಲಾಗದಷ್ಟು ತೂಕ ಇಳಿಸಿಕೊಂಡಿದ್ದೆ. ಈಗ ಕಂಪ್ಲೀಟ್ ಆಗಿ ಗುಣಮುಖಳಾಗಿದ್ದು, ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಸಿದ್ಧವಾಗಿದ್ದೇನೆ. ಇದಕ್ಕೆ ಚಿತ್ರರಂಗದ ಬೆಂಬಲ ಬೇಕು" ಎಂದಿದ್ದಾರೆ.













Click it and Unblock the Notifications