ತಮಿಳುನಾಡು ಸರ್ಕಾರದಲ್ಲಿ ಕರ್ನಾಟಕದ ನಿರ್ಮಾಪಕನಿಗೆ ಒಲಿದ ರಾಜಯೋಗ: ದೊಡ್ಡ ಹುದ್ದೆ ಕೊಟ್ಟ ಸಿಎಂ ವಿಜಯ್
ತಮಿಳು ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ (Vijay) ಅವರು ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ಜನ ನಾಯಗನ್' (Jana Nayagan) ಸಿನಿಮಾದ ನಿರ್ಮಾಪಕ, ಬೆಂಗಳೂರು ಮೂಲದ ಉದ್ಯಮಿ ಕೆ. ವೆಂಕಟ್ ನಾರಾಯಣ್ ಅವರಿಗೆ ತನ್ನ ಸರ್ಕಾರದಲ್ಲಿ ದೊಡ್ಡ ಹುದ್ದೆ ನೀಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವೆಂಕಟ್ ಅವರನ್ನು ಹೊಸ ದೆಹಲಿಯಲ್ಲಿ ತಮಿಳುನಾಡು ಸರ್ಕಾರದ ವಿಶೇಷ ಪ್ರತಿನಿಧಿಯಾಗಿ ನೇಮಕ ಮಾಡಲಾಗಿದೆ. ಒಂದು ವರ್ಷದ ಅವಧಿಗೆ ಈ ತಾತ್ಕಾಲಿಕ ನೇಮಕಾತಿ ನಡೆದಿದ್ದು, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಹೊಂದಿರುವ ಈ ಪ್ರತಿಷ್ಠಿತ ಹುದ್ದೆಗೆ ಕರ್ನಾಟಕ ಮೂಲದ ಸಿನಿಮಾ ನಿರ್ಮಾಪಕರನ್ನು ಆಯ್ಕೆ ಮಾಡಿರುವುದು ತಮಿಳುನಾಡು ರಾಜಕಾರಣದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.

ಯಾರು ಈ ವೆಂಕಟ್ ಕೆ. ನಾರಾಯಣ್?
ಮೂಲತಃ ಕರ್ನಾಟಕದವರಾದ ವೆಂಕಟ್ ಕೆ. ನಾರಾಯಣ್ ಅವರು ಭಾರತೀಯ ಉದ್ಯಮ ರಂಗದಲ್ಲಿ ಅತ್ಯಂತ ಪರಿಚಿತ ಹೆಸರು. ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಅವರು ಭಾರತದ ಮುಂಚೂಣಿ ರಿಯಲ್ ಎಸ್ಟೇಟ್ ದೈತ್ಯ ಸಂಸ್ಥೆಯಾದ 'ಪ್ರೆಸ್ಟಿಜ್ ಗ್ರೂಪ್'ನ (Prestige Group) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ದೀರ್ಘಕಾಲ ಸೇವೆ ಸಲ್ಲಿಸಿದ್ದರು.
ಅವರ ಅಧಿಕಾರಾವಧಿಯಲ್ಲಿ ಪ್ರೆಸ್ಟಿಜ್ ಗ್ರೂಪ್ ಬೆಂಗಳೂರಿನ ಗಡಿ ದಾಟಿ ಮುಂಬೈ ಹಾಗೂ ದೆಹಲಿ-ಎನ್‌ಸಿಆರ್‌ನಂತಹ ಬೃಹತ್ ಮಾರುಕಟ್ಟೆಗಳಲ್ಲಿ ಭದ್ರವಾಗಿ ಕಾಲೂರಿತು. ದೇಶದ ಹಲವು ಅತ್ಯಾಧುನಿಕ ಇಂಟಿಗ್ರೇಟೆಡ್ ಟೌನ್‌ಶಿಪ್ ಹಾಗೂ ಐಷಾರಾಮಿ ವಸತಿ ಯೋಜನೆಗಳ ರೂವಾರಿಯಾಗಿ ಅವರು ಗುರುತಿಸಿಕೊಂಡಿದ್ದರು. ನಂತರ 2020ರಲ್ಲಿ ವೆಂಕಟ್ ನಾರಾಯಣ್ ಮತ್ತು ನಿಶಾ ವೆಂಕಟ್ ಕೋನಂಕಿ ಒಟ್ಟಾಗಿ 'ಕೆವಿನ್ ಪ್ರೊಡಕ್ಷನ್ಸ್' (KVN Productions) ಬ್ಯಾನರ್ ಆರಂಭಿಸಿದರು.
ತಮಿಳುನಾಡು ರಾಜಕೀಯದಲ್ಲಿ ವಿಜಯ್ ಗೆಲುವಿಗೆ ಮ್ಯಾಜಿಕ್ ಮಾಡಿದ್ದು ಸ್ಟಾಲಿನ್ ಅಂಕಲ್ ಎಂಬ ಮಾತು
ಸೌತ್ ಚಿತ್ರರಂಗದಲ್ಲೇ 'ಕೆವಿಎನ್ ಪ್ರೊಡಕ್ಷನ್ಸ್' ಸೌಂಡ್
ಬೆಂಗಳೂರು ಮೂಲದ ಕೆವಿಎನ್ ಪ್ರೊಡಕ್ಷನ್ಸ್ ಅತ್ಯಲ್ಪ ಅವಧಿಯಲ್ಲೇ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆದ ಪ್ರಮುಖ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿದೆ. ಸಣ್ಣ ಬಜೆಟ್ ಸಿನಿಮಾಗಳಿಂದ ಆರಂಭವಾದ ಈ ಸಂಸ್ಥೆ ಇಂದು ನೂರಾರು ಕೋಟಿ ಬಜೆಟ್‌ನ ಸಿನಿಮಾಗಳನ್ನು ನಿರ್ಮಿಸುತ್ತಿದೆ. ಸಿಂಪಲ್ ಸುನಿ ನಿರ್ದೇಶನದ, ಶರಣ್ ಅಭಿನಯದ 'ಸಕತ್' (ನವೆಂಬರ್ 2021) ಕೆವಿಎನ್ ಬ್ಯಾನರ್‌ನ ಮೊದಲ ಚಿತ್ರ. ನಂತರ 2022ರಲ್ಲಿ 'ಬೈಟು ಲವ್' ಚಿತ್ರವನ್ನು ನಿರ್ಮಿಸಿತು.

ಸದ್ಯ ಸ್ಯಾಂಡಲ್‌ವುಡ್‌ನ ಅದ್ದೂರಿ ಚಿತ್ರಗಳಾದ ಧ್ರುವ ಸರ್ಜಾ ನಟನೆಯ 'ಕೆಡಿ: ದಿ ಡೆವಿಲ್', ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' (Toxic) ಮತ್ತು ತಮಿಳು ನಟ ವಿಜಯ್ ಅವರ ಕೊನೆಯ ಚಿತ್ರ ಎನ್ನಲಾದ 'ಜನ ನಾಯಗನ್' ಚಿತ್ರಗಳನ್ನು ಇದೇ ಸಂಸ್ಥೆ ಮುನ್ನಡೆಸುತ್ತಿದೆ. ಕೇವಲ ನಿರ್ಮಾಣ ಮಾತ್ರವಲ್ಲದೆ 'RRR', 'ಅನಿಮಲ್', 'ಕಲ್ಕಿ 2898 AD', 'ತಂಗಲಾನ್' ಮತ್ತು 'ಕಂಗುವ' ಅಂತಹ ಭಾರತೀಯ ಚಿತ್ರರಂಗದ ಬಿಗ್ ಬ್ಲಾಕ್‌ಬಸ್ಟರ್ ಸಿನಿಮಾಗಳ ಕರ್ನಾಟಕದ ವಿತರಣಾ ಹಕ್ಕನ್ನು ಕೆವಿಎನ್ ಸಂಸ್ಥೆಯೇ ಯಶಸ್ವಿಯಾಗಿ ನಿಭಾಯಿಸಿದೆ.
ಎಚ್.ವಿನೋತ್ ನಿರ್ದೇಶನದಲ್ಲಿ ಸಿಎಂ ವಿಜಯ್ ನಟಿಸುತ್ತಿರುವ 'ಜನ ನಾಯಗನ್' ರಾಜಕೀಯ ಆಕ್ಷನ್ ಡ್ರಾಮಾ ಚಿತ್ರದ ಬಜೆಟ್ ಬರೋಬ್ಬರಿ ₹500 ಕೋಟಿ ಎಂದು ಅಂದಾಜಿಸಲಾಗಿದೆ. ಈ ಚಿತ್ರದ ಸೆನ್ಸಾರ್ ಮಂಡಳಿ (CBFC) ಸರ್ಟಿಫಿಕೇಟ್ ವಿಳಂಬ ಹಾಗೂ ಇತ್ತೀಚಿನ ಆನ್‌ಲೈನ್ ಲೀಕ್ ವಿವಾದಗಳ ಕಾರಣದಿಂದ ಸಿನಿಮಾ ಭಾರಿ ಸುದ್ದಿಯಲ್ಲಿದೆ.
ಕಳೆದ ಮೇ ತಿಂಗಳಲ್ಲಿ ನಟ ವಿಜಯ್ ಅವರು ತಮಿಳುನಾಡಿನಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜಭವನಕ್ಕೆ ಭೇಟಿ ನೀಡಿದ್ದಾಗಲೂ ವೆಂಕಟ್ ನಾರಾಯಣ್ ಅವರು ವಿಜಯ್ ಜೊತೆ ಕಾಣಿಸಿಕೊಂಡಿದ್ದರು. ಇದೀಗ ಸಿಎಂ ವಿಜಯ್ ಅವರು ನೇರವಾಗಿ ವೆಂಕಟ್ ಅವರನ್ನು ದೆಹಲಿಯ ವಿಶೇಷ ಪ್ರತಿನಿಧಿಯಾಗಿ ನೇಮಿಸಿರುವುದು ಡಿಎಂಕೆ (DMK) ಮತ್ತು ಬಿಜೆಪಿ (BJP) ಸೇರಿದಂತೆ ತಮಿಳುನಾಡಿನ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಕರ್ನಾಟಕ ಮೂಲದ ಸಿನಿಮಾ ನಿರ್ಮಾಪಕರಿಗೆ ತಮಿಳುನಾಡಿನ ಹಿತಾಸಕ್ತಿ ಕಾಯುವ ಇಂತಹ ಪ್ರಮುಖ ಆಡಳಿತಾತ್ಮಕ ಹುದ್ದೆ ನೀಡಿರುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಆಕ್ಷೇಪ ಎತ್ತಿವೆ.












Click it and Unblock the Notifications