Bidadi: ಬಿಡದಿಯಲ್ಲಿ ಡಿಕೆಶಿಗಾಗಿ ಕಾದು ಕುಳಿತ ಕುಮಾರಸ್ವಾಮಿ; ಸಿಎಂ ಗೈರು ರೈತರ ಸಮಸ್ಯೆಗೆ ಉತ್ತರವಲ್ಲ ಎಂದು ಆಕ್ರೋಶ
ಬಿಡದಿ ಟೌನ್‌ಶಿಪ್ ಯೋಜನೆಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ನೊಂದ ರೈತರು ಹಮ್ಮಿಕೊಂಡಿದ್ದ ಚರ್ಚಾ ಸಭೆಯಲ್ಲಿ ಇಂದು ಭಾರಿ ರಾಜಕೀಯ ಹೈಡ್ರಾಮ ನಡೆದಿದೆ. ಬಿಡದಿಯ ಭೈರಮಂಗಲ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಈ ನೊಂದ ರೈತರ ಮಹಾಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಪಾಲ್ಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭೇಟಿಗಾಗಿ ಭೈರಮಂಗಲದ ಮುಖ್ಯ ವೃತ್ತದಲ್ಲೇ ಕಾಯ್ದು ಕುಳಿತ ಅಪರೂಪದ ಬೆಳವಣಿಗೆ ನಡೆಯಿತು.
ರೈತರ ಸಮ್ಮುಖದಲ್ಲೇ ಈ ಭೂಸ್ವಾಧೀನದ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲು ಕಾಯುತ್ತಿದ್ದ ಕುಮಾರಸ್ವಾಮಿ ಅವರಿಗೆ ಕೊನೆಗೂ ಸಿಎಂ ಗೈರುಹಾಜರಿಯಿಂದಾಗಿ ನಿರಾಸೆಯಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಅವರು ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಹೆಚ್.ಡಿ. ಕುಮಾರಸ್ವಾಮಿ, "ಬಿಡದಿ ಉಪನಗರ ಯೋಜನೆಗಾಗಿ ಸರ್ಕಾರ ಅನ್ಯಾಯವಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕಸಿದುಕೊಳ್ಳುತ್ತಿದೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಜೊತೆ ನೇರವಾಗಿ ಚರ್ಚಿಸಲು ನಾನು ಭೈರಮಂಗಲದ ರೈತರ ವೇದಿಕೆಯಲ್ಲಿ ಪಾಲ್ಗೊಂಡು ಅವರಿಗಾಗಿ ನಿರೀಕ್ಷಿಸಿದೆ. ಆದರೆ, ಈ ಸಭೆಗೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳು ಇನ್ನೂ ಬಂದಿಲ್ಲ. ಅವರಿಗಾಗಿ ನಾನು ಭೈರಮಂಗಲದ ಮುಖ್ಯ ವೃತ್ತದಲ್ಲೇ ಕಾಯುತ್ತಾ ಕೂತಿದ್ದೇನೆ" ಎಂದು ಸಿಎಂ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಧಾನಸೌಧ ಬೇಡ, ಬಿಡದಿಗೆ ಬನ್ನಿ ಎಂದಿದ್ದೆ
ಭೂಸ್ವಾಧೀನ ಪ್ರಕ್ರಿಯೆಯ ಚರ್ಚೆಯ ಹಿನ್ನೆಲೆಯನ್ನು ಬಿಚ್ಚಿಟ್ಟ ಕುಮಾರಸ್ವಾಮಿ, "ಈ ಹಿಂದೆ ಈ ವಿಷಯವಾಗಿ ವಿಧಾನಸೌಧಕ್ಕೆ ಚರ್ಚೆಗೆ ಬರುವಂತೆ ಮುಖ್ಯಮಂತ್ರಿಗಳು ಕರೆದಿದ್ದರು. ಆದರೆ, ಅದಕ್ಕೆ ಪ್ರತಿಯಾಗಿ ಬಿಡದಿಗೆ ಬರಬೇಕೆಂದು ಪತ್ರ ಬರೆಯಲಾಗಿತ್ತು. ನೊಂದ ರೈತರ ಸಮ್ಮುಖದಲ್ಲೇ ಈ ಮಹತ್ವದ ಚರ್ಚೆ ನಡೆಯಬೇಕು ಎಂಬುದು ನನ್ನ ವಿನಂತಿಯಾಗಿತ್ತು. ಆದರೆ ಮುಖ್ಯಮಂತ್ರಿಗಳಿಗೆ 'ಬಿಡುವಿಲ್ಲದ' ಕಾರಣದಿಂದಾಗಿ ಅವರು ಈ ಸಭೆಗೆ ಬರಲಿಲ್ಲ. ಹೀಗಾಗಿ ನಾನೊಬ್ಬನೇ ರೈತರೊಂದಿಗೆ ಸಂವಾದ ನಡೆಸಬೇಕಾಯಿತು. ಮುಖ್ಯಮಂತ್ರಿಗಳ ಈ ಗೈರುಹಾಜರಿ ರೈತರ ಕಣ್ಣೀರಿಗೆ ಮತ್ತು ಸಮಸ್ಯೆಗಳಿಗೆ ಉತ್ತರವಲ್ಲ ಹಾಗೂ ಪರಿಹಾರವೂ ಅಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ. ಯಾವುದೇ ಕಾರಣಕ್ಕೂ ರೈತರು ತಮ್ಮ ಜೀವನಾಧಾರವಾದ ಭೂಮಿಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬಿಡದಿ ಹೋರಾಟದಲ್ಲಿ ಗೆದ್ರೆ ನೇರವಾದ ಕ್ರೆಡಿಟ್ ಕುಮಾರಸ್ವಾಮಿಗೆ! ಬಿಜೆಪಿಗೆ ಏನು ಸಿಗಲ್ಲ ಅನ್ನೋದು ಸತ್ಯಾನಾ?
ಜೆಡಿಎಸ್ ದಂಡು ಮತ್ತು ರೈತ ಕುಟುಂಬಗಳ ಭಾಗಿ
ಭೈರಮಂಗಲದಲ್ಲಿ ನಡೆದ ಈ ರೈತರ ಬೃಹತ್ ಜಾಗೃತಿ ಮತ್ತು ಚರ್ಚಾ ಸಭೆಯಲ್ಲಿ ಜೆಡಿಎಸ್ ಪಕ್ಷದ ಪ್ರಮುಖ ನಾಯಕರ ದಂಡೇ ಪಾಲ್ಗೊಂಡಿತ್ತು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸುರೇಶ್ ಬಾಬು, ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ. ಮಂಜುನಾಥ್, ಶಾಸಕರುಗಳಾದ ಹೆಚ್.ಟಿ. ಮಂಜುನಾಥ್, ಸಿ.ಎನ್. ಮಂಜೇಗೌಡ ಹಾಗೂ ಮಾಜಿ ಶಾಸಕ ಡಾ. ಕೆ. ಅನ್ನದಾನಿ ಭಾಗವಹಿಸಿದ್ದರು.
ಇವರೊಂದಿಗೆ ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ರಾಮನಗರ ಜಿಲ್ಲಾಧ್ಯಕ್ಷ ಜಯಮುತ್ತು ಸೇರಿದಂತೆ ನೂರಾರು ಮುಖಂಡರು ಹಾಗೂ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ಅಸಂಖ್ಯಾತ ನೊಂದ ರೈತ ಕುಟುಂಬಗಳ ಮಹಿಳೆಯರು, ಯುವಕರು ಮತ್ತು ಹಿರಿಯರು ಸಭೆಯಲ್ಲಿ ಪಾಲ್ಗೊಂಡು ಸರ್ಕಾರದ ವಿರುದ್ಧ ಧ್ವನಿ ಎತ್ತಿದರು.
ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಭೂಸ್ವಾಧೀನ ಮಾಡಿಕೊಳ್ಳುವ ಸರ್ಕಾರದ ಹಠ ಮತ್ತು ಅದಕ್ಕೆ ಹೆಚ್‌ಡಿಕೆ ನೇತೃತ್ವದಲ್ಲಿ ರೈತರು ಒಡ್ಡುತ್ತಿರುವ ಪ್ರತಿರೋಧ, ಮುಂಬರುವ ದಿನಗಳಲ್ಲಿ ರಾಮನಗರ ಜಿಲ್ಲಾ ರಾಜಕಾರಣದಲ್ಲಿ ಮತ್ತೊಂದು ದೊಡ್ಡ ಹೋರಾಟಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.
ಏನಿದು ಜಿದ್ದಾಜಿದ್ದಿ?
ಬಿಡದಿ ಟೌನ್‌ಶಿಪ್ ವಿಚಾರವಾಗಿ ಕೆಲ ದಿನಗಳ ಹಿಂದೆಯಷ್ಟೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಭೇಟಿಯಾಗಲು ಆಹ್ವಾನ ನೀಡಿದ್ದರು. ಅಷ್ಟೇ ಅಲ್ಲದೆ, ಈ ಕುರಿತು ವಿಸ್ತೃತವಾಗಿ ಚರ್ಚಿಸಲು ವಿಧಾನಸೌಧಕ್ಕೆ ಬರುವಂತೆ ಸಮಯ ಮತ್ತು ದಿನಾಂಕವನ್ನು ನಿಗದಿಪಡಿಸಿ ಅಧಿಕೃತವಾಗಿ ಪತ್ರವನ್ನೂ ಬರೆದಿದ್ದರು. ಆದರೆ, ಡಿಕೆಶಿ ಪತ್ರಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, "ಇದು ಕೇವಲ ಎಸಿ ರೂಮಿನಲ್ಲಿ ಕುಳಿತು ಮಾತನಾಡುವ ವಿಚಾರವಲ್ಲ, ಇದು ನೂರಾರು ರೈತರ ಬದುಕಿನ ಸಮಸ್ಯೆ. ಈ ಕುರಿತು ಏನಿದ್ದರೂ ರೈತರ ಸಮ್ಮುಖದಲ್ಲೇ ಚರ್ಚೆಯಾಗಬೇಕು. ಹಾಗಾಗಿ ನಾವು ವಿಧಾನಸೌಧದಲ್ಲಿ ಭೇಟಿಯಾಗುವುದು ಬೇಡ, ಸಮಸ್ಯೆ ಎದುರಿಸುತ್ತಿರುವ ಬಿಡದಿಯ ನೆಲದಲ್ಲೇ ಮುಖಾಮುಖಿ ಸಭೆ ನಡೆಸೋಣ, ಅಲ್ಲಿಗೇ ಬನ್ನಿ" ಎಂದು ಬಹಿರಂಗ ಸವಾಲು ಹಾಕಿದ್ದರು.
ತಮ್ಮ ಸವಾಲಿನಂತೆಯೇ ಇಂದು ಬಿಡದಿಯ ಭೈರಮಂಗಲದ ರೈತರ ವೇದಿಕೆಗೆ ಜೆಡಿಎಸ್ ನಾಯಕರ ದಂಡಿನೊಂದಿಗೆ ಆಗಮಿಸಿದ ಹೆಚ್.ಡಿ. ಕುಮಾರಸ್ವಾಮಿ, ಸರ್ಕಾರದ ಪ್ರತಿನಿಧಿಗಳಿಗಾಗಿ ನಿರೀಕ್ಷಿಸಿದರು. ಆದರೆ ಮುಖ್ಯಮಂತ್ರಿಗಳಾಗಲಿ ಅಥವಾ ಉಪಮುಖ್ಯಮಂತ್ರಿಗಳಾಗಲಿ ಸಭೆಗೆ ಬಾರದಿರುವುದನ್ನು ಕಂಡು ಅಸಮಾಧಾನಗೊಂಡ ಅವರು, ಭೈರಮಂಗಲ ವೃತ್ತದಲ್ಲೇ ಕಾಯುತ್ತಾ ಕೂತ ಫೋಟೋಗಳನ್ನು ಹಂಚಿಕೊಂಡಿದ್ದಾರೆ.












Click it and Unblock the Notifications