ಮ್ಯಾನೇಜರ್ ಮೆಚ್ಚಿಸಲು ಓವರ್ ಟೈಮ್ ಮಾಡಲ್ಲ! ಆಫೀಸ್ 'ಟಾಕ್ಸಿಕ್' ಸಂಸ್ಕೃತಿಗೆ ಬ್ರೇಕ್ ಹಾಕುತ್ತಿದ್ದಾರಾ Gen Z ಉದ್ಯೋಗಿಗಳು?
ಕಾರ್ಪೊರೇಟ್ ಜಗತ್ತಿನಲ್ಲಿ ಒಂದಿಷ್ಟು ಉದ್ಯೋಗಿಗಳು ಮ್ಯಾನೇಜರ್‌ಗಳನ್ನು ಮೆಚ್ಚಿಸಲು ತಡರಾತ್ರಿಯವರೆಗೆ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದು, ಮತ್ತೆ ರಜೆಯ ದಿನಗಳಲ್ಲೂ ಬರುವ ಆಫೀಸ್ ಕಾಲ್‌ಗಳನ್ನು ಸ್ವೀಕರಿಸುವುದು ಬಹುತೇಕರಿಗೆ ಸಾಮಾನ್ಯ ಎಂಬಂತಾಗಿದೆ. ಆದರೆ, ಈಗ ಉದ್ಯೋಗಕ್ಕೆ ಹೊಸದಾಗಿ ಕಾಲಿಡುತ್ತಿರುವ ಇಂದಿನ ತಲೆಮಾರಿನ ಯುವಕರು, ಅಂದರೆ 'ಜನ್ ಜಿ' ಉದ್ಯೋಗಿಗಳು ಈ ಹಳೆಯ ಕಾರ್ಪೊರೇಟ್ ಸಂಪ್ರದಾಯವನ್ನು ಸಂಪೂರ್ಣವಾಗಿ ಬದಲಾಯಿಸುತ್ತಿದ್ದಾರೆ.
ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ನಡುವೆ ಸ್ಪಷ್ಟವಾದ ಗಡಿರೇಖೆ ಎಳೆಯುತ್ತಿರುವ ಇವರು, ಕಚೇರಿಯ 'ಟಾಕ್ಸಿಕ್ ವಾತಾವರಣಕ್ಕೆ ದಿಟ್ಟ ಉತ್ತರ ನೀಡುತ್ತಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ಒಂದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?
ಶೀತಲ್ ರಿಜ್ವಾನಿ ಎಂಬುವವರು ಎಕ್ಸ್ ಖಾತೆಯಲ್ಲಿ ತಮ್ಮ ಕಸಿನ್ (ಸಂಬಂಧಿ) ಆಫೀಸ್‌ನಲ್ಲಿ ನಡೆಯುವ ವಿಚಾರವನ್ನು ವಿಸ್ತೃತವಾಗಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್ ಪ್ರಕಾರ, ಜನ್ ಜಿ ಉದ್ಯೋಗಿಗಳು ಮಾತ್ರ ಇರುವ ಒಂದು ಪ್ರತ್ಯೇಕ ಗುಂಪು ಆ ಕಚೇರಿಯಲ್ಲಿದೆ. ಈ ಗುಂಪಿನ ಯಾರು ಕೂಡ ಮ್ಯಾನೇಜರ್ ಅನ್ನು ಮೆಚ್ಚಿಸಲು ಕಚೇರಿಯ ಸಮಯ ಮುಗಿದ ನಂತರ ಒಂದು ನಿಮಿಷವೂ ಹೆಚ್ಚುವರಿಯಾಗಿ ಉಳಿಯುವುದಿಲ್ಲ. ಎಲ್ಲರೂ ಒಟ್ಟಿಗೆ ಸರಿಯಾದ ಸಮಯಕ್ಕೆ ಲಾಗ್ ಔಟ್ ಆಗಿ ಮನೆಗೆ ತೆರಳುತ್ತಾರೆ. ವೀಕೆಂಡ್‌ಗಳಲ್ಲಿ ಕಚೇರಿಯಿಂದ ಬರುವ ಯಾವುದೇ ಕೆಲಸದ ಕರೆಗಳನ್ನು ಅವರು ಸ್ವೀಕರಿಸುವುದಿಲ್ಲ. ಕೆಲಸದ ಸಮಯದ ವಿಚಾರದಲ್ಲಿ ಅವರು ಅತ್ಯಂತ ಕಟ್ಟುನಿಟ್ಟಾಗಿದ್ದಾರೆ.
ಟಾಕ್ಸಿಕ್ ವರ್ಕ್ ಕಲ್ಚರ್ ವಿರುದ್ಧ ನೇರ ಕ್ರಮ
ಒಂದು ವೇಳೆ ಮ್ಯಾನೇಜರ್ ಅಥವಾ ಮೇಲಧಿಕಾರಿಗಳು ಉದ್ಯೋಗಿಗಳೊಂದಿಗೆ ಅನುಚಿತವಾಗಿ ವರ್ತಿಸಿದರೆ, ಈ ಯುವ ಉದ್ಯೋಗಿಗಳು ಸುಮ್ಮನೆ ಕೂರುವುದಿಲ್ಲ. ನೇರವಾಗಿ ಮಾನವ ಸಂಪನ್ಮೂಲ ವಿಭಾಗಕ್ಕೆ (HR) ದೂರು ನೀಡುತ್ತಾರೆ ಮತ್ತು ಎಚ್‌ಆರ್ ಕೂಡ ಮ್ಯಾನೇಜರ್ ವಿರುದ್ಧವೇ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳುತ್ತಾರೆ.
ಕಚೇರಿಯ ಮೂಲಸೌಕರ್ಯಗಳ ಕೊರತೆಯ ಬಗ್ಗೆಯೂ ಇವರ ನಿಲುವು ಸ್ಪಷ್ಟವಾಗಿದೆ. ಒಮ್ಮೆ ಕಚೇರಿಯಲ್ಲಿ ಎಸಿ ಕೆಟ್ಟಾಗ, ಈ ಇಡೀ ಗುಂಪು ಕೆಲಸ ಬಿಟ್ಟು ಪಕ್ಕದ ಕೆಫೆಗೆ ಹೋಗಿ ಕುಳಿತುಕೊಂಡಿತ್ತು. "ಎಸಿ ಸರಿಹೋದ ಮೇಲಷ್ಟೇ ನಾವು ವಾಪಸ್ ಕಚೇರಿಗೆ ಬರುತ್ತೇವೆ" ಎಂದು ಎಚ್‌ಆರ್‌ಗೆ ನೇರವಾಗಿ ಸಂದೇಶ ಕಳುಹಿಸಿದ್ದರು.
ಮಿಲೆನಿಯಲ್ಸ್ ಮತ್ತು ಜನ್ ಜಿ ನಡುವಿನ ವ್ಯತ್ಯಾಸ
ಈ ಕುರಿತು ಪ್ರಶ್ನಿಸಿದಾಗ ಶೀತಲ್ ಅವರ ಕಸಿನ್ ಹೇಳಿದ ಮಾತು ಮಿಲೆನಿಯಲ್ಸ್ ತಲೆಮಾರಿನವರ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ. "ಹಿಂದಿನ ತಲೆಮಾರಿನವರಿಗೆ (ಮಿಲೆನಿಯಲ್ಸ್) ಈ ರೀತಿ ಪ್ರಶ್ನಿಸುವ ಧೈರ್ಯವಿಲ್ಲ. ಅವರು ಎಲ್ಲವನ್ನೂ ಸಹಿಸಿಕೊಂಡು, ಎಷ್ಟೇ ಕಷ್ಟವಾದರೂ ಮೌನವಾಗಿರುವುದನ್ನು ರೂಢಿಸಿಕೊಂಡಿದ್ದಾರೆ" ಎಂದು ಆಕೆ ಹೇಳಿದ್ದಾಳೆ. ಕಾರ್ಪೊರೇಟ್ ವಲಯದಲ್ಲಿ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಕೆಲಸದ ಸ್ಥಳದಲ್ಲಿ ಆಗುತ್ತಿರುವ ಬಹುದೊಡ್ಡ ಬದಲಾವಣೆಯನ್ನು ಈ ಘಟನೆ ಸ್ಪಷ್ಟವಾಗಿ ಸೂಚಿಸುತ್ತದೆ.
ಕಚೇರಿ ಸಂಸ್ಕೃತಿ ಬಗ್ಗೆ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಫೀಸ್ ಸಂಸ್ಕೃತಿ ಕುರಿತು ಪರ-ವಿರೋಧ ಚರ್ಚೆಗಳನ್ನು ಶುರುಮಾಡಿದ್ದಾರೆ. "ಮಿಲೆನಿಯಲ್ಸ್‌ಗೆ ಧೈರ್ಯವಿಲ್ಲ ಅಂತಲ್ಲ, ಅವರಿಗೆ ಗೃಹ ಸಾಲ, ಕಾರು ಸಾಲ ಮತ್ತು ಕುಟುಂಬದ ದೊಡ್ಡ ಜವಾಬ್ದಾರಿಗಳಿರುತ್ತವೆ. ಹಾಗಾಗಿ ಅವರು ಕೆಲಸ ಕಳೆದುಕೊಳ್ಳುವ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಹಲವರು ಮಿಲೆನಿಯಲ್ಸ್ ಬೆಂಬಲಕ್ಕೆ ನಿಂತಿದ್ದಾರೆ.
Gen Z might actually be the generation that changes toxic work culture.
— Sheetal Rijhwani (@RijhwaniSheetal) June 26, 2026
My Gen Z cousin told me they have a group at work with only Gen Z employees.
They all leave the office together, on time. Nobody stays late just to impress the manager. Nobody answers work calls on…
ಇನ್ನು ಕೆಲವರು, "ಈಗ ಉದ್ಯೋಗ ಮಾರುಕಟ್ಟೆ ಚೆನ್ನಾಗಿದೆ, ಆದರೆ ಕೃತಕ ಬುದ್ಧಿಮತ್ತೆ ಮತ್ತು ಉದ್ಯೋಗ ಕಡಿತದಂತಹ ಸಂಕಷ್ಟದ ಸಮಯದಲ್ಲಿ ಇಂತಹ ನಡವಳಿಕೆಗಳನ್ನು ಕಂಪನಿಗಳು ಸಹಿಸುವುದಿಲ್ಲ. ದಿನದ 8 ಗಂಟೆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಮಾತ್ರ ಬೆಲೆ ಸಿಗುತ್ತದೆ" ಎಂದು ಎಚ್ಚರಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸುತ್ತಾ, "ಹಿಂದಿನ ಕಾಲದಲ್ಲಿ ಕಾರ್ಮಿಕ ಸಂಘಟನೆಗಳು ಹುಟ್ಟಿಕೊಂಡಿದ್ದು ಇದೇ ರೀತಿಯಲ್ಲಿ ಅಲ್ಲವೇ?" ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ, ಉತ್ಪಾದಕತೆ, ಉದ್ಯೋಗ ಭದ್ರತೆ ಮತ್ತು ವೈಯಕ್ತಿಕ ಗಡಿಗಳ ಬಗ್ಗೆ ಹೊಸ ತಲೆಮಾರಿನ ದೃಷ್ಟಿಕೋನವು ಪ್ರಸ್ತುತ ಕಾರ್ಪೊರೇಟ್ ವಲಯದಲ್ಲಿ ಹೊಸ ಸಂಚಲನ ಮೂಡಿಸುತ್ತಿರುವುದಂತೂ ಸತ್ಯ.












Click it and Unblock the Notifications