ಚಲಿಸುತ್ತಿದ್ದ ಕಾರಿನಿಂದ ಜಿಗಿದ ಯುವತಿ, ಲಾಕ್‌ ಮಾಡಿಕೊಂಡು ಸುಟ್ಟು ಬೂದಿಯಾದ ಯುವಕ, ತುಮಕೂರು ಹೆದ್ದಾರಿಯಲ್ಲಿ ಆಗಿದ್ದೇನು?

ತುಮಕೂರು: ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ಭೀಕರ ಘಟನೆಯೊಂದು ಸಂಭವಿಸಿದೆ. ಚಲಿಸುವ ಕಾರಿನಲ್ಲೇ ಯುವತಿಯೊಬ್ಬಳಿಗೆ ಚಾಕುವಿನಿಂದ ಇರಿದು, ಬಳಿಕ ಅದೇ ಕಾರಿನೊಳಗೆ ಮುಂಚಿತವಾಗಿಯೇ ಸಿದ್ಧಪಡಿಸಿಕೊಂಡಿದ್ದ ಪೆಟ್ರೋಲ್ ಬಾಂಬ್ ಸ್ಫೋಟಿಸಿಕೊಂಡು ಯುವಕನೊಬ್ಬ ಜೀವಂತವಾಗಿ ದಹನವಾಗಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಚಲಿಸುವ ಕಾರಿನಿಂದಲೇ ಹೊರಕ್ಕೆ ಜಿಗಿದ ಯುವತಿ ತೀವ್ರ ರಕ್ತಸ್ರಾವದಿಂದ ಬದುಕುಳಿದಿದ್ದು, ಪ್ರಸ್ತುತ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಬೆಂಗಳೂರು ಮೂಲದ ನಾಗೇಂದ್ರ (30) ಎಂಬಾತ ಕಾರಿನೊಳಗೆ ಸುಟ್ಟು ಕರಕಲಾದ ಯುವಕ. ಇನ್ನು ಯುವತಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಗಸೂರು ಮೂಲದ ರಮ್ಯಾ ಉಲ್ಲಾಸ್ (23) ಎಂದು ತಿಳಿದುಬಂದಿದ್ದು, ಈಕೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

Tumakuru Highway

ಬೆಂಗಳೂರಿನಿಂದ ಅಂಕೋಲಾಗೆ ಹೊರಟಿದ್ದಾಗ ನಡೆದಿದ್ದೇನು?

ಪೊಲೀಸ್ ಮೂಲಗಳ ಪ್ರಕಾರ, ನಾಗೇಂದ್ರ ಮತ್ತು ರಮ್ಯಾ ಇಬ್ಬರೂ ಬೆಂಗಳೂರಿನಿಂದ ಅಂಕೋಲಾಗೆ ಪ್ರಯಾಣಿಸಲು ಖಾಸಗಿ ಕಾರೊಂದನ್ನು ಬುಕ್ ಮಾಡಿದ್ದರು. ಕಾರು ತುಮಕೂರು ದಾಟುತ್ತಿದ್ದಂತೆ ಇಬ್ಬರ ನಡುವೆ ವೈಯಕ್ತಿಕ ವಿಚಾರವಾಗಿ ತೀವ್ರ ವಾಗ್ವಾದ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ನಾಗೇಂದ್ರ ತಾನು ಮೊದಲೇ ತಂದಿದ್ದ ಚಾಕುವನ್ನು ತೆಗೆದು ರಮ್ಯಾ ಅವರ ತಲೆ ಹಾಗೂ ದೇಹದ ಭಾಗಗಳಿಗೆ ಮನಬಂದಂತೆ ಇರಿದಿದ್ದಾನೆ. ನಾಗೇಂದ್ರನ ರೌದ್ರಾವತಾರ ಕಂಡು ಪ್ರಾಣಭಯದಿಂದ ತತ್ತರಿಸಿದ ರಮ್ಯಾ, ಜೀವ ಉಳಿಸಿಕೊಳ್ಳಲು ಚಲಿಸುವ ಕಾರಿನಿಂದಲೇ ಹೆದ್ದಾರಿಗೆ ಜಿಗಿದಿದ್ದಾರೆ. ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿವೆ.

ಕಾರಿನೊಳಗೆ ನಡೆಯುತ್ತಿದ್ದ ಈ ಭೀಕರ ದೃಶ್ಯವನ್ನು ಕಂಡು ಗಾಬರಿಯಾದ ಚಾಲಕ ತಕ್ಷಣವೇ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ ಕೆಳಗಿಳಿದಿದ್ದಾನೆ. ಡ್ರೈವರ್ ಹೊರಬರುತ್ತಿದ್ದಂತೆ ಕಾರಿನೊಳಗಿದ್ದ ನಾಗೇಂದ್ರ ಸೆಂಟ್ರಲ್ ಲಾಕಿಂಗ್ ಸಿಸ್ಟಮ್ ಬಳಸಿ ಒಳಗಿನಿಂದ ಎಲ್ಲ ಬಾಗಿಲುಗಳನ್ನು ಬಂದ್ ಮಾಡಿಕೊಂಡಿದ್ದಾನೆ. ಮರುಕ್ಷಣವೇ ಕಾರಿನೊಳಗೆ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಇಡೀ ವಾಹನ ಕ್ಷಣಾರ್ಧದಲ್ಲಿ ಹೊತ್ತಿಕೊಂಡಿದೆ. ನಾಗೇಂದ್ರ ತಾನು ಮುಂಚಿತವಾಗಿಯೇ ರೆಡಿ ಮಾಡಿಕೊಂಡು ತಂದಿದ್ದ 'ಪೆಟ್ರೋಲ್ ಬಾಂಬ್' ಅನ್ನು ಸ್ಫೋಟಿಸಿಕೊಂಡಿದ್ದು, ಹೊರಬರಲಾರದೆ ಕಾರಿನೊಳಗೇ ಜೀವಂತವಾಗಿ ಸುಟ್ಟು ಕರಕಲಾಗಿದ್ದಾನೆ.

ಐಸಿಯುನಲ್ಲಿ ಯುವತಿ

ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶೋಕ್ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರಮ್ಯಾ ಅವರನ್ನು ತಕ್ಷಣವೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಭೀಕರ ಘಟನೆ ಕಲ್ಲಂಬೆಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸುಟ್ಟು ಕರಕಲಾಗಿರುವ ಕಾರನ್ನು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರ ನಡುವೆ ಇದ್ದ ಸಂಬಂಧವೇನು? ಜಗಳಕ್ಕೆ ಅಸಲಿ ಕಾರಣವೇನು? ನಾಗೇಂದ್ರ ಮುಂಚಿತವಾಗಿಯೇ ಕೊಲೆ ಮತ್ತು ಆತ್ಮಹತ್ಯೆಗೆ ಸ್ಕೆಚ್ ಹಾಕಿದ್ದನೇ? ಎಂಬ ಎಲ್ಲ ಆಯಾಮಗಳಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+